ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಹೊಸ ಸಂಕಟ
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಎಫ್ಐಆರ್ ದಾಖಲಾಗಿದೆ. ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಅವರುಗಳ ಹೆಸರು ಉಲ್ಲೇಖವಾಗಿದೆ.
ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆತ್ಮಹತ್ಯೆಗೆ ಶರಣಾದ ಪ್ರದೀಪ್ ಕೊನೆ ಬಾರಿಗೆ ಕರೆ ಮಾಡಿದ್ದು ಯಾರಿಗೆ,ಪ್ರದೀಪ್ ಜತೆಗೆ ಯಾರು ಯಾರಿಗೆ ಸಂಬಂಧ ಇದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೃತ ಪ್ರದೀಪ್ ಯಾರೊಂದಿಗೆ ವ್ಯವಹಾರ ಮಾಡಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವಾಗ ಬಳಸಿದ ಗನ್ ಯಾರದ್ದು ಮತ್ತಿತರ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮೃತ ವ್ಯಕ್ತಿಯು ಮೈಸೂರು ನಿವಾಸಿಯಾಗಿದ್ದು, ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಬಿಜೆಪಿಗೆ ತಳಮಳ
ನಾಲ್ಕು ತಿಂಗಳಲ್ಲಿ ವಿಧಾನಸಭೆ ಎದುರಾಗಲಿದ್ದು, ಲಿಂಬಾವಳಿ ವಿರುದ್ಧ ಎಫ್ ಐ ಆರ್ ದಾಖಲಾಗಿರುವುದು ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ತಳಮಳ ಉಂಟು ಮಾಡಿದೆ. ಈ ಹಿಂದೆಯೂ ಲಿಂಬಾವಳಿ ವಿರುದ್ಧ ಹಲವಾರು ದೂರುಗಳು ಕೇಳಿಬಂದಿದ್ದವು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಹಾಲಿ ಶಾಸಕರಲ್ಲಿ ಅನೇಕರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎನ್ನುವ ಸುದ್ದಿಗಳಿವೆ. ಆ ಪಟ್ಟಿಯಲ್ಲಿ ಲಿಂಬಾವಳಿ ಹೆಸರೂ ಇದೆ ಎನ್ನುವ ಗುಸುಗುಸು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.