ಸಸಿ ನೆಟ್ಟ ಪರಿಸರ ವೇದಿಕೆ; ಹುಲಿಗಳನ್ನು ರಕ್ಷಿಸಲು ಕಾಡು ಉಳಿಸಿ ಎಂದ ಡಾ.ಗುಂಪುಮರದ ಆನಂದ್
by GS Bharath Gudibande
ಗುಡಿಬಂಡೆ: ಇಡೀ ದೇಶದಲ್ಲಿ ಹುಲಿಗಳು ವಾಸವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಹುಲಿ ಸಂತತಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಶಿಕ್ಷಕ ಡಾ.ಗುಂಪುಮರದ ಆನಂದ್ ಪ್ರತಿಪಾದಿಸಿದರು.
ಪ್ರಾಣಿಗಳು ಹೆಚ್ಚಾಗಬೇಕು ಎಂದರೆ ಅದಕ್ಕೆ ಅರಣ್ಯ ಪ್ರದೇಶ ಬಹುಮುಖ್ಯ ಕಾರಣ. ಹಾಗಾಗಿ ಹೆಚ್ಚು ಅರಣ್ಯ ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಅವರು ಹೇಳಿದರು.
ಪಟ್ಟಣದ ಗ್ರಾಮವಿಕಾಸ ಸಂಸ್ಥೆಗೆ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತ ಮಾಲತಿಹೊಳ್ಳ ಅವರ ಜತೆಗೆ ಪರಿಸರ ವೇದಿಕೆಯಿಂದ ಗಿಡ ನೆಡುವ ಮೂಲಕ ರಾಷ್ಟ್ರೀಯ ಹುಲಿದಿನ ಆಚರಣೆ ಮಾಡಲಾಯಿತು.
ಈ ವೇಳೆ ಡಾ.ಗುಂಪುಮರದ ಆನಂದ್ ಮಾತನಾಡಿ, ಹುಲಿಗಣತಿ ಪ್ರಕಾರ ಕರ್ನಾಟಕದಲ್ಲಿ ಹೆಚ್ಚು ಹುಲಿಗಳು ಇವೆ. ಬಂಡೀಪುರ, ನಾಗರಹೊಳೆ, ಭದ್ರ ಇತರೆ ಅರಣ್ಯ ಪ್ರದೇಶದಲ್ಲಿ ಹುಲಿಗಳು ಇವೆ. ವನ್ಯಮೃಗಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ನಾವು ಮೊದಲು ಅರಣ್ಯವನ್ನು ಉಳಿಸಿಕೊಳ್ಳಬೇಕು. ಅರಣ್ಯ ಉಳಿಸಿಕೊಳ್ಳದಿದ್ದರೆ ಪರಿಸರ ಅಸಮತೋಲನ ಉಂಟಾಗಿ ದೊಡ್ಡ ಸಮಸ್ಯೆ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪರಿಸರವನ್ನು ಉಳಿಸುವತ್ತ ಎಲ್ಲರೂ ಗಮನ ಹರಿಸಬೇಕು. ಮಕ್ಕಳಿಗೆ ಶಾಲಾ ಹಂತದಿಂದ ಈ ಬಗ್ಗೆ ಅರಿವು ಮೂಡಿಸಲು ಸರ್ಕಾರ ಹೊಸ ಯೋಜನೆ ಮಾಡಬೇಕು ಎಂದು ಅವರು ಹೇಳಿದರು.
ಮಾಲತಿ ಹೊಳ್ಳ, ಕಸಪಾ ನಿಕಟ ಪೂರ್ವ ಅಧ್ಯಕ್ಷೆ ಅನುರಾಧ ಆನಂದ್, ಮುನಿರಾಜು, ವಾಹಿನಿ ಸುರೇಶ್, ಹರ್ಶಿತ ಸೇರಿದಂತೆ ಮುಂತಾದವರು ಹಾಜರಿದ್ದರು.