ಅನುಮೋದನೆ ನೀಡುವಂತೆ ಪ್ರಧಾನಿಗೆ ಮನವಿ
ಬೆಂಗಳೂರು: ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬೆಂಗಳೂರು ಮೆಟ್ರೊ ರೈಲು ಯೋಜನೆಯ ೩ನೇ ಹಂತದಲ್ಲಿ 45 ಕಿ.ಮೀ.ಗಳ ಉದ್ದದ ಮಾರ್ಗವನ್ನು ನಿರ್ಮಿಸಲು ಶೀಘ್ರವಾಗಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
3ನೇ ಹಂತದ ಯೋಜನೆಯ ಡಿಪಿಆರ್ನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಿದೆ. ಈ ಯೋಜನೆಗೆ ಅನುಮೋದನೆ ನೀಡುವಂತೆ ಪ್ರಧಾನ ಮಂತ್ರಿಯವರನ್ನು ಕೋರಿದ್ದಾರೆ.
ರಾಜಧಾನಿಯ ಮೆಟ್ರೋ ವಿಸ್ತೃತ ಯೋಜನೆ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಸಂಬಂಧಪಟ್ಟ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
ಸರ್ಜಾಪುರದಿಂದ ಹೆಬ್ಬಾಳದವರೆಗಿನ 37 ಕಿ.ಮೀ.ಗಳ ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಎಗೆ ಡಿಪಿಆರ್ ತಯಾರಿಸಲಾಗುತ್ತಿದೆ.
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಕರ್ನಾಟಕ ಸರ್ಕಾರವು 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್ನಲ್ಲಿ ಅನುಮೋದಿಸಿದೆ.
ಈಗಾಗಲೇ 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದೆ. ಇನ್ನುಳಿದ 90 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು.
ನಾಗಸಂದ್ರದಿಂದ ಮಾದವಾರದವರೆಗಿನ ಉತ್ತರ ವಿಸ್ತರಣೆ 3.14 ಕಿ.ಮೀ.ಗಳ ಉದ್ದದ ಮಾರ್ಗವು ಮತ್ತು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.ಗಳ ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, ಏಪ್ರಿಲ್ 2024ರ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ.ಗಳ ಉದ್ದದ ಹೊಸ ಮಾರ್ಗವನ್ನು ಮಾರ್ಚ್-2025ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗಗಳನ್ನು ಪೂರ್ಣಗೊಳಿಸುವುದರೊಂದಿಗೆ, ಕಾರ್ಯಾಚರಣೆಯ ಜಾಲವು 117 ಕಿ.ಮೀ.ಗಳಿಗೆ ವಿಸ್ತಾರಗೊಳ್ಳುತ್ತದೆ ಮತ್ತು 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ.
ಹಂತ-2 ಯೋಜನೆಗಾಗಿ, ಕರ್ನಾಟಕ ಸರ್ಕಾರವು ರೂ. 11583.08 ಕೋಟಿಗಳನ್ನು ಬಿಡುಗಡೆ ಮಾಡಿದೆ.
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಪ್ರಯತ್ನದಿಂದ ಪ್ರಮುಖ ಎರಡು ಮಾರ್ಗಗಳಾದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ನಡುವಿನ 2.10 ಕಿ.ಮೀ.ಗಳ ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟವರೆಗಿನ 2.05 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅ.9ರಂದು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಯಿತು.
ಈ ಎರಡು ಪ್ರಮುಖ ಮಾರ್ಗಗಳನ್ನು ತೆರೆಯುವುದರೊಂದಿಗೆ, ನಗರವು ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಹೊಂದಿದೆ ಮತ್ತು ಮೆಟ್ರೋ ಜಾಲವನ್ನು 74 ಕಿ.ಮೀ.ಗಳಿಗೆ ವಿಸ್ತರಿಸಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು ರೂ.14,133 ಕೋಟಿ ವೆಚ್ಚದಲ್ಲಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇತರ ಗಣ್ಯರೊಂದಿಗೆ ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಗಾಗಿ ಕರ್ನಾಟಕ ಸರ್ಕಾರವು ರೂ. 5630 ಕೋಟಿಗಳಷ್ಟು ವೆಚ್ಚ ಮಾಡಿದೆ ಎಂದರು.
ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-2ರಲ್ಲಿ 74.03 ಕಿ.ಮೀ.ಗಳ ಉದ್ದದ ಮಾರ್ಗ ಹೊಂದಿದ್ದು, ಸದರಿ ಯೋಜನೆಗೆ ರೂ. 30,695 ಕೋಟಿಗಳ ವೆಚ್ಚವಾಗಲಿದೆ. ಈಗಾಗಲೇ ಕಾಮಗಾರಿಗಳು ಭರದಿಂದ ನಿರ್ಮಾಣವಾಗುತ್ತಿದ್ದು, 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲದ ಕಾರ್ಯಾಚರಣೆಯು 74 ಕಿ.ಮೀ.ಗಳಿಗೆ ಏರಿಕೆಯಾಗಿದೆ. ಓಆರ್ಆರ್-ಏರ್ಪೋರ್ಟ್ ಮೆಟ್ರೋ ಎಂದು ಕರೆಯಲ್ಪಡುವ 58 ಕಿ.ಮೀ.ಗಳ ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2ಎ ಮತ್ತು 2ಬಿ ಯೋಜನೆಯನ್ನು ಅಂದಾಜು ರೂ.14788.1 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ರಾಜ್ಯ ಸರ್ಕಾರವು ಇದುವರೆಗೆ ರೂ. 4775.36 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಮೆಟ್ರೋ ಜಾಲವು 176 ಕಿ.ಮೀ.ಗಳು ಆಗಲಿದೆ ಮತ್ತು ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ವೇಗವಾದ, ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಗುರಿಗಳನ್ನು ಸಾಧಿಸುವ ಬಲವಾದ ಸಂಕಲ್ಪ ಹೊಂದಿರುವುದಾಗಿ ಅವರು ತಿಳಿಸಿದರು.