ಕೆಆರ್‌ಎಸ್‌ನ ಒಳಹರಿವು ಸಂಪೂರ್ಣ ನಿಂತಿದೆ
ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕಾಗಿ ವಾರ್ಷಿಕವಾಗಿ 24 ಟಿಎಂಸಿ ಕಾವೇರಿ ನೀರನ್ನು ಮೀಸಲಾಗಿಡಲು ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅದನ್ನ ಬಳಸಿಕೊಳ್ಳಬೇಕು ಎಂದು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕೃಷ್ಣರಾಜ ಸಾಗರ ಜಲಾಶಯಕ್ಕೆ ಸಮಾನಾಂತರವಾಗಿ ಮೇಕೆ ದಾಟು ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ಈ ಆದೇಶ ಹೊರಬಿದ್ದಿದೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಬಹು ವರ್ಷಗಳ ನಂತರ ಪಾಲನೆ ಮಾಡಿದ್ದು, ಇನ್ನು ಮುಂದೆ ಬೆಂಗಳೂರು ನಗರಕ್ಕೆ 18 ಟಿಎಂಸಿ ಬದಲು 24 ಟಿಎಂಸಿ ನೀರು ಮೀಸಲಿಡಲಾಗಿದೆ.ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ಪ್ರತಿವರ್ಷ ಕರ್ನಾಟಕಕ್ಕೆ ನಿಗದಿ ಪಡಿಸಿದ ನೀರನ್ನು ಬಳಕೆ ಮಾಡಿಕೊಳ್ಳಬೇಕಿದ್ದು, ಅದರಲ್ಲಿ ಬೆಂಗಳೂರಿಗೆ 24 ಟಿಎಂಸಿ ಪ್ರಮಾಣದ ನೀರು ನಿಗದಿ ಆದೇಶ ಹೊರಡಿಸಿದೆ.
ಆದೇಶಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಲಸಂಪನ್ಮೂಲ ಇಲಾಖೆ ಹೊಣೆ ಹೊತ್ತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 2018ರಲ್ಲಿ ಸುಪ್ರೀಂ ಕೋರ್ಟ್ ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 24 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ನಿಗದಿ ಮಾಡಿತ್ತು ಎಂದರು.
ಆದರೆ ಇದುವರೆಗೂ ಯಾರೂ ಸಹ ಈ ವಿಚಾರವಾಗಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ, ಈ ಮೊದಲು ಕಡಿಮೆ ನೀರು ನಿಗದಿ ಮಾಡಲಾಗಿತ್ತು, ಈಗ ಉಳಿಕೆ 6 ಟಿಎಂಸಿ ನೀರನ್ನು ಬಳಸಿಕೊಂಡು, ಒಟ್ಟಾರೆ ಕುಡಿಯುವ ಉದ್ದೇಶಕ್ಕೆ 24 ಟಿಎಂಸಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ ಅವರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 89ನೇ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಮೇಕೆದಾಟು ಅಣೆಕಟ್ಟು ವಿಚಾರ ಪ್ರಸ್ತಾಪ ಮಾಡಿದ್ದಾರೆ, ಮುಂದಿನ ಸಭೆಯ ವೇಳೆಗೆ ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ, ವಿಚಾರ ಮಂಡಲಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.
ಮೇಕೆದಾಟು ಯೋಜನೆ ಪ್ರಾರಂಭ ಮಾಡಲು ಅನುಮತಿ ನೀಡಬೇಕು ಎಂದು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡುತ್ತೇವೆ. ಸಂಕಷ್ಟ ಸಂದರ್ಭದಲ್ಲಿ ನೀರು ಹರಿಸಲು ಈ ಯೋಜನೆ ಸಹಕಾರಿಯಾಗುತ್ತದೆ, ಅಲ್ಲದೇ ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಪ್ರಯೋಜನವಾಗಲಿದೆ.
ಕಾವೇರಿ ನೀರು ಎಷ್ಟು ಪ್ರಮಾಣ ಉಳಿದುಕೊಳ್ಳುತ್ತದೆ, ಎಷ್ಟು ಹರಿದು ಹೋಗುತ್ತದೆ, ಎಷ್ಟು ಬಳಕೆಯಾಗುತ್ತದೆ ಎನ್ನುವ ವಿಚಾರವನ್ನು ಪ್ರಾಧಿಕಾರದ ಮುಂದೆ ಪ್ರಾತ್ಯಕ್ಷಿಕೆ ನೀಡುವ ವೇಳೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಸಂಕಷ್ಟ ಕಾಲದಲ್ಲೂ 300 ರಿಂದ 400 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡಿನವರು ಕೇಳಿದ್ದರು, ಕೆಆರ್‌ಎಸ್‌ನ ಒಳಹರಿವು ಸಂಪೂರ್ಣವಾಗಿ ನಿಂತಿದೆ, ಇಂತಹ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಬೇಕು ಎಂದು ನಿರ್ಧಾರ ಮಾಡಿದ್ದೇವೆ.
ಕುಡಿಯುವ ನೀರಿಗೆ ಮೊದಲ ಆದ್ಯತೆ, ತಮಿಳುನಾಡು ಏನೇ ಆಕ್ಷೇಪ ವ್ಯಕ್ತಪಡಿಸಿದರೂ, ಕರ್ನಾಟಕದ ಹಕ್ಕನ್ನು ಬಿಟ್ಟು ಕೊಡುವುದಿಲ್ಲ, ಈ ಹಿಂದೆ ನೀಡಿರುವ ಆದೇಶವನ್ನೇ ಪಾಲಿಸುತ್ತಿದ್ದೇವೆ. ಕೆಆರ್‌ಎಸ್ ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಾದರೂ ನೀರನ್ನು ಮೀಸಲಿರಿಸುತ್ತೇವೆ.
ಬೆಂಗಳೂರು ಬೆಳೆಯುತ್ತಿದೆ, ಮುಂದಿನ 20 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕಿದೆ.ಆನೇಕಲ್, ಹಾರೋಹಳ್ಳಿ, ಬೆಂಗಳೂರು ಉತ್ತರ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ನೀರು ಕೊಡಲೇಬೇಕು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ಕೊಡುತ್ತಿದ್ದೇವೆ.
ತಮಿಳುನಾಡಿನವರು ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ, ಅವರ ರಾಜ್ಯದ ಒಂದಷ್ಟು ನದಿಗಳನ್ನು ಜೋಡಣೆ ಮಾಡುವ ಕುರಿತು ಪ್ರಸ್ತಾಪ ಇಟ್ಟಿದ್ದಾರೆ ಎಂದರು ಉಪ ಮುಖ್ಯಮಂತ್ರಿ.