ಹಿಜಾಬ್ ವಾಪಸ್ ಹೇಳಿಕೆ ಕೊಟ್ಟ ಸಿಎಂ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದರೆ, ಬಿಜೆಪಿ ನಾಯಕರು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಪೈಕಿ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಸಿದ್ದರಾಮಯ್ಯ ಅವರು ಎರಡನೇ ಟಿಪ್ಪು ಸುಲ್ತಾನ್ ಆಗುತ್ತಿದ್ದಾರೆ. ಕಟುವಾಗಿ ಟೀಕಿಸಿದ್ದಾರೆ.
ಕೇಸರಿ ಶಾಲು ಧರಿಸುವಂತೆ ವಿದ್ಯಾರ್ಥಿಗಳಿಗೆ ಕರೆ
ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ಯತ್ಳಾಳ್ ಕರೆ ನೀಡಿದ್ದಾರೆ.
ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದು ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದ್ದರೂ, ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ! ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳೂ ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ, ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತಿದ್ದೇನೆ ಎಂದು ಯತ್ನಾಳ್ ಅವರು ಗುಡುಗಿದ್ದಾರೆ.
ಯಡಿಯೂರಪ್ಪ ಆಕ್ರೋಶ
ಹಿಜಾಬ್ ನಿಷೇಧ ವಾಪಸು ಪಡೆದು ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ತೆಗೆದುಕೊಂಡಿರೋ ಈ ನಿರ್ಧಾರವನ್ನ ಖಂಡಿಸುತ್ತೇನೆ,ಇದು ಸಿಎಂ ಗೆ ಶೋಭೆ ತರುವಂತಹದ್ದಲ್ಲ. ಅಧಿಕಾರ ಇದೆ ಅಂತ ರಾಜಕೀಯ ದೊಂಬರಾಟ ಮಾಡಲು ಹೊರಟಿದ್ದಾರೆ. ನೋಡೋಣ ಎಲ್ಲಿಯವರೆಗೆ ಇದೇ ರೀತಿ ಮಾಡ್ತಾರೆ ಎಂದು ಗರಂ ಆಗಿ ನುಡಿದರು.
ಬಿಜೆಪಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ವಿಚಾರ ಇಲ್ಲ, ಜನರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ, ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದ್ದಾರೆ, ಈಗಲೇ ಎಚ್ಚೆತ್ತು ಕೂಡಲೇ ಹಿಜಬ್ ನಿಷೇಧ ನಿರ್ಣಯ ಹಿಂದಕ್ಕೆ ಪಡಯಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಭಂಡ ಸರ್ಕಾರ, ಹಿಜಬ್ ವಾಪಸ್ ಪಡೆಯಿರಿ ಅಂತ ಯಾವ ಮುಸ್ಲಿಂ ನಾಯಕರು ಹೇಳಿದ್ದರು,ಅವರ ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡಲಾಗದೇ ಈರೀತಿ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬರಗಾಲವನ್ನು ಮರೆತೇ ಬಿಟ್ಟಿದೆ,ಇಲ್ಲದ್ದನ್ನೆಲ್ಲಾ ಮಾಡಹೊರಟಿದೆ ಎಂದು ಟೀಕಿಸಿದರು.
ಒಡೆದು ಆಳುವ ನೀತಿ
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಿಷಬೀಜ ಬಿತ್ತುವ ಕೆಲಸಕ್ಕೆ ಕೈ ಹಾಕಿದ್ದಾರೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಯಾವುದೇ ತಾರತಮ್ಯ ಬರಬಾರದು ಎಂಬ ದೃಷ್ಟಿಯಲ್ಲಿ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಿದ್ದರು. ನಮ್ಮ ಸರಕಾರದ ಅವಧಿಯಲೂ ಕೂಡ ಸಮವಸ್ತ್ರವನ್ನೇ ಕಡ್ಡಾಯಗೊಳಿಸಿದ್ದೆವು. ಹೈಕೋರ್ಟ್ ಕೂಡ ನಮ್ಮ ಆದೇಶವನ್ನು ಮಾನ್ಯ ಮಾಡಿತ್ತು. ಆದರೆ ಸಿದ್ದರಾಮಯ್ಯರವರು ಮತ್ತೆ ಹಿಜಾಬಿಗೆ ಅವಕಾಶ ನೀಡುವ ಮೂಲಕ ಒಡೆದು ಆಳುವ ನೀತಿಗೆ ಕೈ ಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ.
ಪಿಎಫ್ಐ ಗೂಂಡಾಗಳು, ಅಲ್ಪಸಂಖ್ಯಾತರ ಓಲೈಕೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇವೆ ಎನ್ನುವ ಸಂದೇಶವನ್ನು ಶಾಲೆಗಳಲ್ಲಿ ಹಿಜಾಬ್ ಜಾರಿಗೆ ತರುವುದರ ಮೂಲಕ ತುಷ್ಟೀಕರಣ ವಾದಿ ಸಿದ್ದರಾಮಯ್ಯ ಅವರು ತೋರಿಸಿಕೊಟ್ಟಿದ್ದಾರೆ. ಸ್ವಯಂಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯ ಸಾಹೇಬರು, ಶಾಲಾ ಸಮವಸ್ತ್ರದ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಹಿಜಾಬ್ ಜಾರಿಗೊಳಿಸುವುದನ್ನು ಯಾವ ಸಂವಿಧಾನದಲ್ಲಿದೆ ಎಂದು ತಿಳಿಸಬೇಕಿದೆ. ಅಂಬೇಡ್ಕರ್ ಸಂವಿಧಾನ ನಮಗೆ ಅನ್ವಯಿಸುವುದಿಲ್ಲವೆಂದು ಹೇಳುವವರ ಜತೆ ಸೇರಿ ಸಿದ್ದರಾಮಯ್ಯ ಅವರು ಸಂವಿಧಾನವನ್ನು ಲೆಕ್ಕಿಸದೆ ವೋಟ್ ಬ್ಯಾಂಕ್‌ಗಾಗಿ ಒಂದು ಸಮುದಾಯದ ಅಡಿಯಾಳಾಗಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಹಿಜಾಬ್ ವಿಚಾರವಾಗಿ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಶಾಲೆಗಳಲ್ಲಿ ಯಾವುದೇ ಜಾತಿ – ಧರ್ಮ, ಬೇಧ – ಭಾವಗಳಿಲ್ಲದೆ ಕಲಿಯುವ ವಾತಾವರಣವಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ಅದಕ್ಕೂ ಕಲ್ಲು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರದ್ದು ಒಂದು ರೀತಿಯ ಟಿಪ್ಪು ಮನಸ್ಥಿತಿ, ಅವರ ದೇಹವನ್ನು ಪೂರ್ತಿ ಟಿಪ್ಪು ಮನಸ್ಥಿತಿ ಆವರಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಆಶೋಕ್ ಕಟುವಾಗಿ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಿಜಾಬ್ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಿಜಾಬ್‍ಗೆ ಮತ್ತೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಕೈಹಾಕಿರುವುದು ದುರಾದೃಷ್ಟ. ಸಿಎಂ ಅವರಿಂದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಟ ಪಕ್ಷ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ಸಾರೆ.