ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್ ನೌ ನಲ್ಲಿ..
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯರೆಲ್ಲರ ಆಕಾಂಕ್ಷೆ ಈಡೇರಿದೆ. ಭಕ್ತರಿಗೆ ದರ್ಶನ ಭಾಗ್ಯವೊಂದೇ ಬಾಕಿ. ಆದರೆ, ಈ ಮಂದಿರಕ್ಕಾಗಿ ನಡೆದ ಹೋರಾಟ, ಅದರಲ್ಲೂ ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ನಡೆಸಿದ ರಾಮ ರಥಯಾತ್ರೆ ಅತಿದೊಡ್ಡ ಮೈಲುಗಲ್ಲು. ಈ ವಿಷಯದಲ್ಲಿ ಕೆಲ ಪ್ರಧಾನಮಂತ್ರಿಗಳು ಮಾಡಿದ್ದೇನು? ಮಂದಿರದ ಸುತ್ತ ನಡೆದ ರಾಜಕೀಯವೇನು? ಅದೆಲ್ಲವನ್ನು ಸ್ವತಃ ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ.ಕೆ.ವಿ.ರಾಧಾಕೃಷ್ಣ ಅವರ ಅಜರಾಮರ ಅಯೋಧ್ಯೆ ಕೃತಿಗಾಗಿ ಆ ಬರಹವನ್ನು ಕನ್ನಡದ ಬಹುಮುಖ್ಯ ಅನುವಾದಕರಲ್ಲಿ ಒಬ್ಬರಾದ ಬಿ.ಎಸ್.ಜಯಪ್ರಕಾಶ ನಾರಾಯಣ ಕನ್ನಡಕ್ಕೆ ಅನುವಾದಿಸಿದ್ದಾರೆ. ಸುಮಾರು ಆರು ಸಾವಿರ ಪದಗಳಷ್ಟು ಸುದೀರ್ಘವಾದ ಆ ಲೇಖನವನ್ನು ಓದುಗರ ಅನುಕೂಲಕ್ಕಾಗಿ ಹಲವು ಅಧ್ಯಾಯಗಳ ರೂಪದಲ್ಲಿ ಸಿಕೆನ್ಯೂಸ್ ನೌ.ಕಾಂ ಯಥಾವತ್ತಾಗಿ ಪ್ರಕಟಿಸಿದೆ. ರಾಮಮಂದಿರ ಸಾಕ್ಷಾತ್ಕಾರವಾಗುತ್ತಿರುವ ಈ ಹೊತ್ತಿನಲ್ಲಿ ಈ ಲೇಖನ ಅತ್ಯಂತ ಪ್ರಸ್ತುತ.
ಅಧ್ಯಾಯ 1
ಅಯೋಧ್ಯಾ ಆಂದೋಲನವು ನನ್ನ ರಾಜಕೀಯ ಜೀವನಕ್ಕೆ ಅತ್ಯಂತ ನಿರ್ಣಾಯಕ ತಿರುವನ್ನು ತಂದುಕೊಟ್ಟ ಘಟನೆಯಾಗಿದೆ ಎಂದು ನಾನು ನಂಬಿದ್ದೇನೆ. 1990ರಲ್ಲಿ ಗುಜರಾತಿನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆಯವರೆಗೆ ನಡೆದ ರಾಮ ರಥಯಾತ್ರೆಯಲ್ಲಿ ನಾನು ನಿರ್ದಿಷ್ಟವಾದ ಕರ್ತವ್ಯವನ್ನು ನೆರವೇರಿಸಬೇಕೆನ್ನುವುದು ವಿಧಿಯ ಸಂಕಲ್ಪವಾಗಿತ್ತು. ನಾನು ಇದನ್ನು ಬದ್ಧತೆ ಮತ್ತು ಪ್ರಾಮಾಣಿಕತೆಗಳಿಂದ ನನ್ನ ಕೈಲಾದಷ್ಟು ಮಟ್ಟಿಗೆ ನಿರ್ವಹಿಸಿದೆ. ಈ ಮೂಲಕ ನಾನು ಆಧುನಿಕ ಭಾರತವನ್ನು ಸಾಕ್ಷಾತ್ಕರಿಸಿಕೊಂಡೆ. ಅಯೋಧ್ಯಾ ಆಂದೋಲನವು ನನ್ನ ಪಾಲಿಗೆ ತೀವ್ರ ಚಟುವಟಿಕೆ ಮತ್ತು ಒಳತೋಟಿಗಳ ಕಾಲಘಟ್ಟವಾಗಿತ್ತು.
ಅಯೋಧ್ಯಾ ಆಂದೋಲನದ ಬಗ್ಗೆ ಹಲವು ಪ್ರಶ್ನೆಗಳಿವೆ. ಮುಖ್ಯವಾಗಿ, ಅಯೋಧ್ಯೆಯಲ್ಲಿ ಈಗಾಗಲೇ ಇದ್ದ ದೇವಸ್ಥಾನದ ಪುನಾ ನಿರ್ಮಾಣವನ್ನು ಮಾಡುವ ಬದಲು ಹೊಸದಾಗಿಯೇ ಮಂದಿರವನ್ನು ಕಟ್ಟಬೇಕೆಂಬ ಕೂಗಿಗೆ ಅದುವರೆಗೂ ಇಡೀ ಹಿಂದೂ ಸಮಾಜದಿಂದ ಯಾರೂ ಕಂಡೂ ಕೇಳರಿಯದಂತಹ ಬೆಂಬಲ ವ್ಯಕ್ತವಾಗಿದ್ದೇಕೆ? ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವವಾದ ಅಖಿಲ ಭಾರತೀಯ ವ್ಯಾಪ್ತಿಯ ಸಾಮೂಹಿಕ ಚಳವಳಿಯಾಗಿದ್ದೇಕೆ? ಶಾಂತಿಯುತವಾಗಿ, ಕಾನೂನುಬದ್ಧವಾಗಿ ಮತ್ತು ಸಂಬಂಧಿಸಿದ ಎಲ್ಲರಿಗೂ ಸಮಾಧಾನವಾಗುವಂತೆ ಬಗೆಹರಿಸಬಹುದಾಗಿದ್ದ ರಾಮ ಜನ್ಮಭೂಮಿ ವಿವಾದಕ್ಕೆ ಅನಗತ್ಯವಾಗಿ ಹಿಂದೂ ವರ್ಸಸ್ ಮುಸ್ಲಿಂ ಸಂಘರ್ಷ ಎಂದು ಬಣ್ಣ ಬಳಿದಿದ್ದೇಕೆ? 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ನೆಲಕ್ಕುರುಳಿಸಿದ ಘಟನೆಯ ಹಿಂದೆ ಕಾಂಗ್ರೆಸ್ಸಿನ ಕೈವಾಡವಿಲ್ಲವೇ? ಹಾಗೆಯೇ, ಅಯೋಧ್ಯೆಯಲ್ಲಿ ರಾಮನಿಗೊಂದು ತಾತ್ಕಾಲಿಕ ಮಂದಿರನವನ್ನು ನಿರ್ಮಿಸಿದ್ದರ ಹಿಂದೆಯೂ ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲವೇ? ಎನ್ನುವ ಪ್ರಶ್ನೆಗಳು ಇಲ್ಲಿ ಅಡಗಿವೆ.
ಸೋಮನಾಥದ ಸ್ಫೂರ್ತಿ
ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಆಗ್ರಹಿಸಿ ನಡೆದ ಚಳವಳಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ, ಭಾರತವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಹೊಸತರಲ್ಲೇ ನಡೆದ ಸೋಮನಾಥ ದೇಗುಲದ ಪುನಾ ನಿರ್ಮಾಣದ ಚಾರಿತ್ರಿಕ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಮಗೆ ಭಾರತದ ಸೋಲು-ಗೆಲುವುಗಳ ಮತ್ತು ನಮ್ಮ ದೇಶವು ಪ್ರದರ್ಶಿಸಿದ ರಾಷ್ಟ್ರೀಯ ಸಂಕಲ್ಪದ ಅಗಾಧತೆ ಎಂಥದ್ದೆನ್ನುವುದು ಗೊತ್ತಾಗುವುದಿಲ್ಲ. ಅಂದಂತೆ, ನನ್ನ ಪ್ರಾಯದ ದಿನಗಳಲ್ಲಿ ನಾನೊಂದು ಪುಸ್ತಕವನ್ನು ಓದಿದ್ದೆ. ಅದಾವುದೆಂದರೆ, ಭಾರತೀಯ ವಿದ್ಯಾಭವನದ ಸ್ಥಾಪಕರೂ ನೆಹರು ಸಂಪುಟದಲ್ಲಿ ಸಚಿವರೂ ಆಗಿದ್ದ ಕೆ.ಎಂ.ಮುನ್ಷಿ ಅವರ ಜೈ ಸೋಮನಾಥ್ ಎನ್ನುವ ಐತಿಹಾಸಿಕ ಕಾದಂಬರಿ. ಇದು ನನ್ನ ಮೇಲೆ ಬೀರಿದ ಪ್ರಭಾವ ಅಗಾಧ. ಅಪ್ಪಟ ಗಾಂಧೀವಾದಿಯೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಗುಜರಾತಿನ ಮುನ್ಷಿಯವರು ಬಹುದೊಡ್ಡ ವಿದ್ವಾಂಸರೂ ಆಗಿದ್ದರು. ದೇಶದ ಇಂಗ್ಲಿಷ್ ಓದುಗರ ವಲಯದಲ್ಲಿ ಅಪಾರ ಮನ್ನಣೆಗೆ ಪಾತ್ರವಾಗಿರುವ ರಮೇಶ್ ಮೆನನ್ ತಮ್ಮ ಶಿವ: ಶಿವಪುರಾಣ ರೀಟೋಲ್ಡ್ ಕೃತಿಯಲ್ಲಿ ಕೂಡ ಭಾರತದ ಉದ್ದಗಲಕ್ಕೂ ದೇವಸ್ಥಾನಗಳು ಬೀರಿಕೊಂಡು ಬರುತ್ತಿರುವ ಪ್ರಭಾವ-ಪರಿಣಾಮಗಳನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
ಇಂತಹ ಸಾವಿರಾರು ಪುಣ್ಯಸ್ಥಳಗಳು ನಮ್ಮಲ್ಲಿವೆ. ಆದರೆ, ಇವುಗಳ ಪೈಕಿ ಭಾರತದ ಚಿರಂತನತೆಯನ್ನು ಸೋಮನಾಥದಷ್ಟು ಅನನ್ಯವಾಗಿ, ಅದರ ಚಾರಿತ್ರಿಕತೆಯೊಂದಿಗೆ ಒಳಗೊಂಡಿರುವ ಕ್ಷೇತ್ರ ಇನ್ನೊಂದಿಲ್ಲ. ಟರ್ಕಿಯ ಸುಲ್ತಾನ ಮಹಮದ್ ಘಜ್ನಿಯು ಸೋಮನಾಥ ಮತ್ತು ಭಾರತದ ಇತರ ಸ್ಥಳಗಳಲ್ಲಿನ ಭವ್ಯ ಮಂದಿರಗಳ ಮೇಲೆ ನಡೆಸಿದ ಅವ್ಯಾಹತ ದಾಳಿಗಳ ಬಗ್ಗೆ ಬಿ.ಆರ್. ಅಂಬೇಡ್ಕರ್ ಕೂಡ ತಮ್ಮ ಮಹತ್ವದ ಕೃತಿಯಾದ ಪಾಕಿಸ್ತಾನ್ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. 1001ರಿಂದ 1026ರ ನಡುವೆ ಭಾರತದ ಮೇಲೆ ಒಟ್ಟು 17 ಬಾರಿ ಎರಗಿದ ಘಜ್ನಿಗೆ ಸೋಮನಾಥದ ಮೇಲೆ ನಿರ್ದಿಷ್ಟವಾಗಿ ಕಣ್ಣಿತ್ತು. ಆತನು 1024ರಲ್ಲಿ ಈ ದೇವಾಲಯದ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ, ಈ ದೇಗುಲವನ್ನು ರಕ್ಷಿಸಿಕೊಳ್ಳಲು 50 ಸಾವಿರ ಹಿಂದೂಗಳು ತಮ್ಮ ಪ್ರಾಣವನ್ನೇ ಸಮರ್ಪಿಸಿದರೆಂದು ಸ್ವತಃ ಮುಸ್ಲಿಂ ಇತಿಹಾಸಕಾರರ ದಾಖಲೆಗಳೇ ಹೇಳುತ್ತವೆ.
ಇಂತಹ ಸೋಮನಾಥದ ಮೇಲೆ ಮೊಘಲ್ ದೊರೆಗಳ ಕಟ್ಟಕಡೆಯ ಬರ್ಬರ ದಾಳಿ ನಡೆದಿದ್ದು 1706ರಲ್ಲಿ. ಸೋಮನಾಥದ ದೇವಾಲಯದ ಮೇಲೆ ಇನ್ನೆಂದಿಗೂ ಅದರ ಲವಲೇಶದಷ್ಟೂ ಗುರುತು ಸಿಕ್ಕದಂತೆ ದಾಳಿ ಮಾಡಿ, ಅದನ್ನು ನಾಮಾವಶೇಷ ಮಾಡಬೇಕು’ ಎಂದು ಔರಂಗಜೇಬ್ ಹೊರಡಿಸಿದ್ದ ಕಟ್ಟಪ್ಪಣೆಯಂತೆ, ಗುಜರಾತಿನಲ್ಲಿ ಅವನ ಪರವಾಗಿ ಆಳ್ವಿಕೆ ನಡೆಸುತ್ತಿದ್ದ ರಾಜಕುಮಾರ ಅಝಂ ಈ ಆಕ್ರಮಣವನ್ನು ನಡೆಸಿದ್ದ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸೋಮನಾಥ ದೇಗುಲವು ಹೇಗೆ ಮುಸ್ಲಿಂ ಆಕ್ರಮಣಕಾರರ ಧಾರ್ಮಿಕ ದ್ವೇಷ ಮತ್ತು ಹಿಂಸೆಗಳಿಗೆ ಸಂಕೇತವಾಗಿದೆಯೋ ಹಾಗೆಯೇ ಹೊರಗಿನ ದಾಳಿಕೋರರ ವಿರುದ್ಧ ದೇಶದ ಜನರು ಒಟ್ಟಾಗಿ ತೋರಿಸಿದ ಪ್ರತಿರೋಧದ ಸ್ಫೂರ್ತಿದಾಯಕ ಸಂಕೇತವೂ ಆಗಿದೆ. ಇಲ್ಲಿ ’ಹೊರಗಿನ ಆಕ್ರಮಣಕಾರರು’ ಎಂದರೆ ಮುಸ್ಲಿಮರೆಂದಲ್ಲ. ಹಾಗೆಯೇ, ಘಜ್ನಿ ಮತ್ತು ಔರಂಗಜೇಬ್ ಇಬ್ಬರೂ ಮುಸ್ಲಿಮರಾಗಿದ್ದರೆಂಬ ಕಾರಣಕ್ಕೆ ಮಾತ್ರವೇ ಅವರು ನಡೆಸಿದ ಕುಕೃತ್ಯಗಳು ನಮಗೆ ಹೊರಗಿನವರ ದುರಾಕ್ರಮಣವೆಂದು ಭಾರತ ಯಾವತ್ತೂ ಭಾವಿಸಿಲ್ಲ. ಏಕೆಂದರೆ, ಭಾರತದ ಮುಸ್ಲಿಮರ ಪೈಕಿ ಶೇಕಡ 90ರಷ್ಟು ಮಂದಿಯ ಪೂರ್ವಜರೆಲ್ಲ ಅಪ್ಪಟ ಭಾರತೀಯರೇ ಆಗಿದ್ದು, ಇವರೆಲ್ಲ ಆ ಧರ್ಮಕ್ಕೆ ಮತಾಂತರಗೊಂಡಿದ್ದಾರಷ್ಟೆ. ಘಜ್ನಿ ಮತ್ತು ಔರಂಗಜೇಬರ ಬರ್ಬರ ದಾಳಿಗಳು ನಮಗೆ ಅನ್ಯರ ಆಕ್ರಮಣವಾಗಿ ಕಾಣಲು ಕಾರಣವೇನೆಂದರೆ, ಅವೆಲ್ಲವೂ ಭಾರತದ ರಾಷ್ಟ್ರೀಯ ಧಾರೆಯಾದ ಸಹಿಷ್ಣುತೆ ಮತ್ತು ಸರ್ವಧರ್ಮ ಸಮಭಾವಗಳನ್ನು ಉಲ್ಲಂಘಿಸಿದ್ದವು. ಮುಖ್ಯವಾಗಿ, ಹೀಗೆ ದೇವಾಲಯಗಳನ್ನು ಧ್ವಂಸ ಮಾಡುವ ಮೂಲಕ ಇಲ್ಲಿಯ ಹಿಂದೂಗಳನ್ನು ಅವಮಾನಿಸುವುದು ಮತ್ತು ಈ ಮೂಲಕ ಭಾರತದಾದ್ಯಂತ ಇಸ್ಲಾಂನ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವುದು ಅವರ ಮೂಲೋದ್ದೇಶಗಳಾಗಿದ್ದವು.’
All photos courtesy: Wikipedia
ದೇಗುಲಗಳೆಂಬ ಜೀವನಾಡಿಗಳು
ಭಾರತದಲ್ಲಿನ ಸಾವಿರಾರು ದೇವಾಲಯಗಳು ಮತ್ತೆ ಮತ್ತೆ ಹೀಗೆ ಅನ್ಯರ ಆಕ್ರಮಣಕ್ಕೆ ಒಳಗಾದರೂ ಪುನಃ ಪುನಃ ಪುಟಿದೆದ್ದು ನಿಂತಿರುವುದರ ಹಿಂದಿರುವ ದೇಶದ ಆಳವಾದ ವಿವೇಕದ ಶಕ್ತಿ ಮತ್ತು ಸ್ವಾರಸ್ಯ ಏನೆಂಬುದನ್ನು ಸ್ವಾಮಿ ವಿವೇಕಾನಂದರು ಕೂಡ ಮುಕ್ತವಾಗಿ ಕೊಂಡಾಡಿದ್ದಾರೆ. “ಸೋಮನಾಥವೂ ಸೇರಿದಂತೆ ದಕ್ಷಿಣ ಭಾರತದ ಪುರಾತನ ದೇವಾಲಯಗಳು ವಿದೇಶಿ ದಾಳಿಕೋರರಿಂದ ಒಂದರ ಹಿಂದೊಂದರಂತೆ ದಾಳಿಗೊಳಗಾಗಿವೆ. ಆದರೆ, ಈ ಎಲ್ಲ ದೇವಸ್ಥಾನಗಳೂ ಅಷ್ಟೇ ಕ್ಷಿಪ್ರವಾಗಿ ಮತ್ತೆ ಭವ್ಯವಾಗಿ ತಲೆಯೆತ್ತಿ ನಿಂತಿವೆ. ಇವು ನಮ್ಮೆಲ್ಲರಿಗೂ ಅಪಾರವಾದ ತಿಳಿವಳಿಕೆಯನ್ನು ಸಾರುತ್ತಿದ್ದು, ಇತಿಹಾಸದ ಅಗಾಧ ಅರಿವನ್ನು ಮೂಡಿಸುತ್ತಿವೆ. ಈ ಜ್ಞಾನವು ಇತಿಹಾಸವನ್ನು ಕುರಿತ ಯಾವ ಪುಸ್ತಕಗಳಲ್ಲೂ ಇಷ್ಟೊಂದು ಸಮೃದ್ಧವಾಗಿ ಸಿಕ್ಕುವುದಿಲ್ಲ. ನೂರಾರು ದಾಳಿಗಳನ್ನು ಜೀರ್ಣಿಸಿಕೊಂಡು, ಮತ್ತೆ ಅನುಪಮವಾಗಿ ವಿರಾಜಿಸುತ್ತಿರುವ ಈ ದೇವಸ್ಥಾನಗಳು ನಮ್ಮ ದೇಶದ ಮನೋಬಲ ಮತ್ತು ಜೀವನಾಡಿಯಾಗಿವೆ. ನೀವು ಇವುಗಳಿಂದ ಪಾಠ ಕಲಿತು, ಮುಂದಡಿ ಇಡಿ. ಇವು ನಿಮ್ಮನ್ನು ವೈಭವದ ಶಿಖರಕ್ಕೆ ಕೊಂಡೊಯುತ್ತವೆ’’ ಎನ್ನುವುದು ಅವರ ಮಾತುಗಳಾಗಿವೆ.
ಅಂದಂತೆ, ಸೋಮನಾಥವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲಿಯೇ ವಿವಾದದ ಗೂಡಾಯಿತು. ಇದಕ್ಕೆ ಕಾರಣ ಗುಜರಾತಿನ ಜುನಾಗಢ ಪ್ರಾಂತ್ಯದ ಚುಕ್ಕಾಣಿ ಹಿಡಿದಿದ್ದ ಮುಸ್ಲಿಂ ನವಾಬ. ಏಕೆಂದರೆ, ಈತ ಜುನಾಗಢವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸುತ್ತೇನೆಂದು ಘೋಷಿಸಿದ. ವಾಸ್ತವವೆಂದರೆ, ಸೋಮನಾಥವನ್ನೂ ಒಳಗೊಂಡಿದ್ದ ಜುನಾಗಢ ಪ್ರಾಂತ್ಯದ ಆಗಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 80ರಷ್ಟು ಮಂದಿ ಹಿಂದೂಗಳೇ ಆಗಿದ್ದರು. ನವಾಬನ ಈ ನಿರ್ಧಾರ ಸಹಜವಾಗಿಯೇ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸಿತು. ಕೂಡಲೇ ನವಾಬನ ವಿರುದ್ಧ ದಂಗೆ ಎದ್ದ ಜುನಾಗಢದ ಹಿಂದೂಗಳು ಸ್ಥಳೀಯ ಕಾಂಗ್ರೆಸ್ ನಾಯಕ ಸಮಲ್‌ದಾಸ್ ಗಾಂಧಿಯ ನೇತೃತ್ವದಲ್ಲಿ ಪರ್ಯಾಯ ಸರಕಾರವನ್ನೇ ಸ್ಥಾಪಿಸಿದರು. ಇದರಿಂದ ಬೆಚ್ಚಿಬಿದ್ದ ನವಾಬ, ಕೊನೆಗೆ ಬೇರೆ ದಾರಿಯಿಲ್ಲದೆ ಪಾಕಿಸ್ತಾನಕ್ಕೆ ಕಾಲ್ಕಿತ್ತ. ಬಳಿಕ, ಸಮಲ್‌ದಾಸ್ ಗಾಂಧಿ ಮತ್ತು ಜುನಾಗಢದ ಆಗಿನ ದಿವಾನರಾಗಿದ್ದ ಸರ್ ಶಾ ನವಾಝ್ ಭುಟ್ಟೋ ಇಬ್ಬರೂ ತಮ್ಮ ಪ್ರಾಂತ್ಯವನ್ನು ಬಹುಜನರ ಇಚ್ಛೆಯಂತೆ ಭಾರತದಲ್ಲಿ ವಿಲೀನಗೊಳಿಸಿದರು. ಇದರ ಸ್ಫೂರ್ತಿದಾಯಕ ವೃತ್ತಾಂತವನ್ನು ತಿಳಿಯಲು ಆಸಕ್ತಿ ಹೊಂದಿರುವವರು ಕೆ.ಎಂ.ಮುನ್ಷಿಯವರ ಇನ್ನೊಂದು ಮಹತ್ಕೃತಿಯಾದ ಪಿಲಿಗ್ರಿಮೇಜ್ ಟು ಫ್ರೀಡಂ ಕೃತಿಯನ್ನು ಓದಬಹುದು.
ಜುನಾಗಢ ಪ್ರಾಂತ್ಯವು ಹೀಗೆ ಭಾರತದ ಭಾಗವಾದ ನಾಲ್ಕು ದಿನಗಳಿಗೆ ಸರಿಯಾಗಿ, ಅಂದರೆ 1947ರ ನವೆಂಬರ್ 9ರಂದು ಸರ್ದಾರ್ ವಲ್ಲಭಭಾಯಿ ಪಟೇಲರು ಸೋಮನಾಥವೂ ಒಂದು ಭಾಗವಾಗಿದ್ದ ಗುಜರಾತಿನ ಸೌರಾಷ್ಟ್ರ ಪ್ರಾಂತ್ಯಕ್ಕೆ ಭೇಟಿ ನೀಡಿದರು. ಆಗ ನೆಹರು ಸಂಪುಟದಲ್ಲಿ ಲೋಕೋಪಯೋಗಿ ಮತ್ತು ನಿರಾಶ್ರಿತರ ಪುನರ್ವಸತಿ ಖಾತೆಗಳ ಮಂತ್ರಿಯಾಗಿದ್ದ ಎನ್.ವಿ.ಗಾಡ್ಗೀಳರು ಕೂಡ ಪಟೇಲರ ಜತೆಗಿದ್ದರು. ಸೌರಾಷ್ಟ್ರಕ್ಕೆ ಬಂದಿಳಿದ ಈ ಇಬ್ಬರು ನಾಯಕರಿಗೂ ಅಲ್ಲಿಯ ಜನ ಅಭೂತಪೂರ್ವ ಸ್ವಾಗತ ಕೋರಿದರು. ಬಳಿಕ ತಮ್ಮ ಗೌರವಾರ್ಥವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪಟೇಲರು, ಸೋಮನಾಥ ದೇಗುಲವನ್ನು ಭಾರತ ಸರಕಾರವೇ ಪುನರ್ನಿರ್ಮಿಸಲಿದ್ದು, ಅಲ್ಲಿ ಜ್ಯೋತಿರ್ಲಿಂಗವನ್ನು ಮತ್ತೆ ಪ್ರತಿಷ್ಠಾಪಿಸಲಿದೆ ಎಂದು ಘೋಷಣೆ ಮಾಡಿದರು. ಆ ಸಂದರ್ಭದಲ್ಲಿ ನೆಹರು ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಸೋಮನಾಥ ದೇಗುಲವನ್ನು ಭಾರತೀಯ ಪುರಾತತ್ತ್ವ ಇಲಾಖೆಗೆ ಹಸ್ತಾಂತರಿಸಬೇಕು. ಇದರಿಂದ ನಾವು ಇದನ್ನು ಐತಿಹಾಸಿಕ ಸ್ಮಾರಕವಾಗಿ ಸಂರಕ್ಷಿಸಬಹುದು’’ ಎಂದು ಸಲಹೆ ನೀಡಿದರು. ಪಟೇಲರು ಇದನ್ನು ಬಿಲ್‌ಕುಲ್ ಒಪ್ಪದೆ, ಸೋಮನಾಥ ಮಂದಿರದೊಂದಿಗೆ ಹಿಂದೂಗಳಿಗೆ ಶತಶತಮಾನಗಳಿಂದಲೂ ಇರುವ ಗಾಢ ಸಂಬಂಧವನ್ನು ಪ್ರತಿಪಾದಿಸಿದರು.
ಮುಂದಿನ ಭಾಗದಲ್ಲಿ.. ತಪ್ಪದೇ ಓದಿ..
ಸರ್ದಾರ್ ಪಟೇಲರ ಮಹಾ ಸಂಕಲ್ಪ
ಬಿ.ಎಸ್. ಜಯಪ್ರಕಾಶ ನಾರಾಯಣ
ಕನ್ನಡ ಸಾಹಿತ್ಯಲೋಕದಲ್ಲಿ JP ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು. ಪತ್ರಕರ್ತರೂ ಹೌದು. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ನಾನು ಮಲಾಲ, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ಭಾರತದ ಬೆಸುಗೆ, ವಿಜಯ ಮಲ್ಯ ಕುರಿತ ಸೊಗಸುಗಾರನ ಏಳುಬೀಳು, ಓಂ ಸ್ವಾಮಿ ಅವರ ಆತ್ಮಕಥೆ ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ಕದಡಿದ ಕಣಿವೆ, ಓಶೋ ಅವರ ಶಿಕ್ಷಣ ಕ್ರಾಂತಿಗೆ ಆಹ್ವಾನ, ವೀರ ಸಾವರ್ಕರ್-ಹಿಂದುತ್ವದ ಜನಕನ ನಿಜಕಥೆ, ಶ್ಯಾಂ ಪ್ರಸಾದ್ ಮುಖರ್ಜಿ-ಸಮಗ್ರ ಜೀವನ ಚೆರಿತ್ರೆ ಸೇರಿ ಅನೇಕ ಮಹತ್ತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ THE INDIA WAY ಕೃತಿಯನ್ನು ಅವರು ಅನುವಾದಿಸಿದ್ದು ಇನ್ನೆನೂ ಬಿಡುಗಡೆ ಹಂತದಲ್ಲಿದೆ.