ಬಿರುಸಿನ ತಯಾರಿ ಮಾಡಿಕೊಳ್ಳುತ್ತಿದೆ ಚುನಾವಣೆ ಆಯೋಗ; ಫೆಬ್ರವರಿ 16ಕ್ಕೆ ರಾಜ್ಯ ಬಜೆಟ್
ಬೆಂಗಳೂರು: ಮುಂದಿನ ಮಾರ್ಚ್ ಮೊದಲ ವಾರ, ತಪ್ಪಿದರೆ ಎರಡನೇ ವಾರ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ದಟ್ಟವಾಗಿದೆ.
ಚುನಾವಣೆ ಆಯೋಗವು ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಬಿರುಸಿನ ತಯಾರಿ ಆರಂಭಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಏಳರಿಂದ ಹನ್ನೊಂದು ಹಂತಗಳಲ್ಲಿ ಮತದಾನ ನಡೆಸಲು ಉದ್ದೇಶಿಸಿದೆ ಎನ್ನಲಾಗಿದ್ದು; ಲೋಕಸಭೆಯ 543 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಂಪುಟ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮಾಹಿತಿ ನೀಡಿ, ಫೆಬ್ರವರಿ 23ರ ಒಳಗೆ 2024-25ನೇ ಸಾಲಿನ ಮುಂಗಡ ಪತ್ರಕ್ಕೆ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಎನ್ನಲಾಗಿದೆ.
ಫೆಬ್ರವರಿಯಲ್ಲೇ ಬಜೆಟ್
ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿ, ಫೆಬ್ರವರಿ ಮೂರನೇ ವಾರದ ವೇಳೆಗೆ ಮುಂಗಡ ಪತ್ರ ಮಂಡಿಸಿ ಅನುಮೋದನೆ ಪಡೆದುಕೊಳ್ಳುವಂತೆ ಮತ್ತು ಸರಕಾರದ ಯೋಜನೆಗಳ ಅನುಷ್ಟಾನಕ್ಕೆ ಗಡುವು ನೀಡಿದೆ.
ಆಯೋಗದ ಸಲಹೆಯಂತೆ ಸಂಪುಟ ಸಭೆಯಲ್ಲಿ ಫೆಬ್ರವರಿ 12ರಂದು ವಿಧಾನ ಮಂಡಲದ ಅಧಿವೇಶನ ಕರೆದು ಫೆಬ್ರವರಿ 16ರಂದು ಬಜೆಟ್ ಮಂಡನೆ ಮಾಡುವ ನಿರ್ಧಾರವನ್ನು ಸರಕಾರ ಕೈಗೊಂಡಿತು.
ಕರ್ನಾಟಕದಲ್ಲಿ 2 ಹಂತ
ಸರಕಾಕ್ಕೆ ಬಂದಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ; ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಈ ಬಾರಿಯೂ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ ಅಂತ್ಯದ ವೇಳೆಗೆ ನಮ್ಮಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ, ಮತ ಎಣಿಕೆ ಮೇ ಮೂರನೇ ವಾರದಲ್ಲಿ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಚುನಾವಣಾ ಆಯೋಗದ ಸಲಹೆಯಂತೆ ಜನವರಿ ಮೂರನೇ ವಾರದ ನಂತರ ಸರಕಾರ ಯಾವುದೇ ವರ್ಗಾವರ್ಗಿಗಳನ್ನು ಮಾಡುವಂತಿಲ್ಲ. ಆ ನಂತರ ಆಯೋಗ ತನಗೆ ಬೇಕಾದಂತೆ ಅಧಿಕಾರಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿಯೋಜಿಸಿಕೊಳ್ಳಬಹುದು. ಇದರಲ್ಲಿ ಸರಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ.
ಮಾರ್ಚ್ ಮೊದಲ ವಾರದಲ್ಲಿ ವೇಳಾಪಟ್ಟಿ ಪ್ರಕಟಗೊಂಡ ನಂತರ ಫಲಿತಾಂಶ ಹಾಗೂ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಕ್ಷೇತ್ರಾಭಿವೃದ್ಧಿ: ಶಾಸಕರಿಗೆ ತಲಾ 25 ಕೋಟಿ ರೂ.
ನೀತಿ ಸಂಹಿತೆ ಜಾರಿಗೆ ಮುನ್ನ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಅವರು ಪ್ರತಿ ಕ್ಷೇತ್ರಕ್ಕೆ ತಲಾ 25 ಕೋಟಿ ರೂ. ಬಿಡುಗಡೆಗೆ ಮುಂದಾಗಿದ್ದಾರೆ.
17ನೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ ಮೊದಲ ಬಾರಿಗೆ 25 ಸ್ಥಾನಗಳಲ್ಲೂ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ ಒಂದು ಸ್ಥಾನಗಳಲ್ಲಿ ಜಯ ಗಳಿಸಿದ್ದರು.