ರಾಷ್ಟ್ರ ರಾಜಧಾನಿ ತಲುಪಿದ ಕೈ ಪಡೆ; ರಾಜ್ಯದಲ್ಲಿ ಇದೇ ಮೊದಲು ಇಂಥ ಪ್ರತಿಭಟನೆ
ಬೆಂಗಳೂರು: ಕೇಂದ್ರದ ಮಲತಾಯಿ ಧೋರಣೆ ಪ್ರತಿಭಟಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರಕಾರ, ನವದೆಹಲಿಯಲ್ಲಿ ಬುಧವಾರ ಇಡೀ ದಿನ ಧರಣಿ, ಪ್ರತಿಭಟನೆ ನಡೆಸುತ್ತಿದೆ.
ಸರಕಾರದ ಈ ನಿಲುವನ್ನು ಪ್ರತಿಪಕ್ಷಗಳು ʼರಾಜಕೀಯ ಪ್ರೇರಿತʼ ಎನ್ನುವುದರ ಜತೆಗೆ ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಯಶಸ್ಸು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಓಟಕ್ಕೆ ಕಡಿವಾಣ ಹಾಕಲು ಇಂಡಿಯಾ ಒಕ್ಕೂಟಕ್ಕೆ ಸೇರಿದ ರಾಜ್ಯಗಳ ಮುಖ್ಯಮಂತ್ರಿಗಳು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಮಾಡುತ್ತಿರುವ ಹೋರಾಟ ಇದಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಒಂದಲ್ಲಾ ಒಂದು ಕಾರಣಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಆ ರಾಜ್ಯದ ಸಂಸದರು ಪ್ರತಿಭಟನೆಗಳನ್ನು ಸಾಂಕೇತಿಕವಾಗಿ ನಡೆಸಿರುವ ಉದಾಹರಣೆಗಳಿವೆ. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಸರಕಾರವೊಂದು ತನ್ನೆಲ್ಲಾ ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಶಾಸಕರ ಜತೆ ಪ್ರತಿಭಟನೆಗೆ ಮುಂದಾಗಿರುವುದು ವಿರಳಾತಿ ವಿರಳ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಹಂತದ ಜನಪ್ರತಿನಿಧಿಗಳು ಬುಧವಾರ ಕೇಂದ್ರದ ವಿರುದ್ಧ ಜಂತರ್ ಮಂತರ್ನಲ್ಲಿ ಧರಣಿ ನಡೆಸಿ ರಾಷ್ಟ್ರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಪ್ರಸಕ್ತ ಸಾಲಿನ ಕೊನೆಯ ಮುಂಗಡ ಪತ್ರದಲ್ಲಿ ರಾಜ್ಯಕ್ಕೆ ನೀಡಬೇಕಾದ ಅನುದಾನದಲ್ಲಿ ಕೊರತೆ ಮತ್ತು ತಮ್ಮ ಪಾಲಿನ ಹಣವನ್ನು ನೀಡುತ್ತಿಲ್ಲ ಎಂಬುದನ್ನೇ ಮುಖ್ಯವಾಗಿಟ್ಟುಕೊಂಡು ಈ ಪ್ರತಿಭಟನೆ ಈ ನಡೆಯುತ್ತಿದೆ.
ಈಗಾಗಲೇ ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸರಕಾರಗಳು ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದು, ಅವುಗಳು ಸಹಾ ವಿನೂತನ ಪ್ರತಿಭಟನೆ ನಡೆಸಿವೆ. ಇದೇ ಕಾರಣ ನೀಡಿ ಕೇರಳ ಸರಕಾರವು ಗುರುವಾರ ಇದೇ ಜಾಗದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿದೆ. ಆದರೆ, ಕಮ್ಯುನಿಸ್ಟ್ ಪಕ್ಷದ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ಈ ಪ್ರತಿಭಟನೆಯನ್ನು ಬಹಿಷ್ಕರಿಸಿದೆ.
ರಾಜ್ಯಕ್ಕೆ ಆರ್ಥಿಕ ಮುಗ್ಗಟ್ಟು
ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುತ್ತಿರುವುದರಿಂದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರಕಾರ ತೀವ್ರವಾದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ.
ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಬರಬೇಕಿರುವ ತೆರಿಗೆ ಪಾಲು, ಅನುದಾನ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೆತ್ತಿಕೊಳ್ಳುವ ಯೋಜನೆಗಳ ಅನುದಾನದಲ್ಲಿ ಭಾರೀ ಕಡಿತ ಮಾಡಿರುವುದು ಅಭಿವೃದ್ಧಿಗೆ ಅಡ್ಡಗಾಲಾಗಿ ನಿಂತಿದೆ.
ಇದರ ನಡುವೆ ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದು ರೈತರು ಕೋಟ್ಯಂತರ ರೂ. ಮೌಲ್ಯದ ಬೆಳೆ ಕಳೆದುಕೊಂಡಿರುವುದರ ಜತೆಗೆ; ರಾಜ್ಯವು ಬರುವ ಬೇಸಿಗೆಯಲ್ಲಿ ಕುಡಿಯುವ ನೀರು, ಮೇವು ಹಾಗೂ ವಿದ್ಯುತ್ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಇದನ್ನು ಎದುರಿಸಲು ರಾಜ್ಯಕ್ಕೆ ಆರ್ಥಿಕ ಶಕ್ತಿಯ ಅಗತ್ಯವಿದೆ. ಆದರೆ, ಕೇಂದ್ರ ಸರಕಾರ ರಾಜ್ಯದ ಪಾಲನ್ನು ನೀಡದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಕಟ್ಟಿ ಹಾಕಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬರುವ ಬೇಸಿಗೆಯನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆ ಆಗುತ್ತದೆ. ಇದನ್ನು ಮನಗಂಡು ಮುಖ್ಯಮಂತ್ರಿ ಅವರು, ತಮ್ಮ ಮಂತ್ರಿಮಂಡಲದ ಸಚಿವರುಗಳಿಗೆ ಔತಣಕೂಟ ಏರ್ಪಡಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಿ ನಂತರ ಇಲಾಖಾವಾರು ಪ್ರಧಾನಕಾರ್ಯದರ್ಶಿಗಳ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಪೂರ್ಣ ಚಿತ್ರಣ ಪಡೆದು ಕೇಂದ್ರದ ವಿರುದ್ಧ ತಿರುಗಿಬೀಳಲು ತೀರ್ಮಾನಿಸಿದ್ದರು.
ಈ ತೀರ್ಮಾನದಂತೆ ದೆಹಲಿಯ ಜಂತರ್ ಮಂತರ್ನಲ್ಲಿ ರಾಜ್ಯ ಸರಕಾರ, ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಇತಿಹಾಸ ಸೃಷ್ಠಿಸುತ್ತಿದೆ.
ಖರ್ಗೆ ಮನೆಯಲ್ಲಿ ಔತಣಕೂಟ
ಪ್ರತಿಭಟನೆಯಲ್ಲಿ ಭಾಗಹಿಸಲು ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೂ ಮತ್ತು ಸಂಸದರಿಗೂ ಮುಖ್ಯಮಂತ್ರಿ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ಕೇಂದ್ರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ರಾಷ್ಟ್ರದ ಗಮನ ಸೆಳೆಯುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರವೇ ನವದೆಹಲಿಗೆ ತೆರಳಿದರೆ, ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸದಸ್ಯರು ಮತ್ತು ಶಾಸಕರು ಮಂಗಳವಾರ ರಾಷ್ಟ್ರ ರಾಜಧಾನಿ ತಲುಪಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾರ್ಗದರ್ಶನದಲ್ಲೇ ಈ ಪ್ರತಿಭಟನೆ ನಡೆಯುತ್ತಿದೆ. ಧರಣಿ ನಂತರ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಎಲ್ಲಾ ಸಚಿವ, ಶಾಸಕರು ಮತ್ತು ಸಂಸದರಿಗೆ ಖರ್ಗೆ ಅವರು ತಮ್ಮ ಮನೆಯಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ.