582 ಹುದ್ದೆಗಳಿಗೆ ಮುಂಬಡ್ತಿ; 100 ಕೃಷಿ & 650 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಭರ್ತಿ
ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 750 ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ನಿರ್ಧರಿಸಿದೆ.
ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ- #kpsc ) ಮೂಲಕ 100 ಕೃಷಿ ಹಾಗೂ 650 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
582 ಹುದ್ದೆಗಳಿಗೆ ಮುಂಬಡ್ತಿ
ನಾಲ್ಕು ಉಪ ಕೃಷಿ ನಿರ್ದೇಶಕರು, 292 ಸಹಾಯಕ ಕೃಷಿ ನಿರ್ದೇಶಕರು, 253 ಕೃಷಿ ಅಧಿಕಾರಿಗಳು, 33 ಸಿಬ್ಬಂದಿಗಳು ಸೇರಿ ಒಟ್ಟು 582 ಹುದ್ದೆಗಳಿಗೆ ಮುಂಬಡ್ತಿ ನೀಡಿ ಉತ್ತಮ ಕಾರ್ಯನಿರ್ವಹಣೆಗೆ ಪ್ರೋತ್ಸಾಹಿಸಲಾಗಿದೆ.
ಮಳೆಯಾಶ್ರಿತ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ 100 ಕೋಟಿ ರೂ.ಗಳ ಅನುದಾನದೊಂದಿಗೆ ಸುಮಾರು 10,000 ಕೃಷಿ ಹೊಂಡಗಳನ್ನು ನಿರ್ಮಿಸುವುದರ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ.
ಕೃಷಿಯಲ್ಲಿ ಯಾಂತ್ರೀಕರಣ ಪ್ರೋತ್ಸಾಹಿಸಲು 63,783 ಫಲಾನುಭವಿಗಳಿಗೆ (ಟ್ರ್ಯಾಕ್ಟರ್-370, ಪವರ್ ಟಿಲ್ಲರ್-5946, ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳು-12,060 ಹಾಗೂ ಟ್ರ್ಯಾಕ್ಟರ್/ಇಂಜಿನ್/ಮೋಟರ್ ಚಾಲಿತ ಯಂತ್ರೋಪಕರಣಗಳು-36,907) ಮತ್ತು 8,500 ಕೃಷಿ ಸಂಸ್ಕರಣಾ ಘಟಕಗಳಿಗೆ 284.92 ಕೋಟಿ ರೂ. ಸಹಾಯಧನ ನೀಡಲಾಗಿದೆ ಅವರು ತಿಳಿಸಿದ್ದಾರೆ.
ಹೈಟೆಕ್ ಹಾರ‍್ವೆಸ್ಟರ್ ಹಬ್
ನೂರು ಹೈಟೆಕ್ ಹಾರ‍್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, 50 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಸುಮಾರು 2.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ 2.34 ಲಕ್ಷ ಫಲಾನುಭವಿಗಳಿಗೆ 484 ಕೋಟಿ ರೂ. ಸಹಾಯಧನ ನೀಡಲಾಗಿದೆ. ವಿಶೇಷ ಘಟಕ ಉಪಯೋಜನೆಯಡಿ ಎಲ್ಲಾ ಪರಿಶಿಷ್ಟ ಜಾತಿ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನ ನೀಡಲಾಗುತ್ತದೆ ಹಾಗೂ ಅರ್ಜಿ ಹಾಕಿದ ಎಲ್ಲಾ ರೈತರಿಗೆ 48 ಗಂಟೆಯೊಳಗೆ ಕಾರ್ಯಾದೇಶ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರೈತ ಸಿರಿ ಯೋಜನೆಯಡಿ ಸಿರಿಧಾನ್ಯಗಳ ಉತ್ಪಾದನೆ, ಉತ್ಪಾದಕತೆ ಮತ್ತು ಬಳಕೆ ಹೆಚ್ಚಿಸಲು ಸಿರಿಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂ.ನಂತೆ ಗರಿಷ್ಠ 2 ಹೆಕ್ಟೇರ್‌ಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದುವರೆಗೆ 8,521 ರೈತರಿಗೆ 8.56 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲು 10 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, 48 ನವೋದ್ಯಮಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ರೈತ ಕರೆ ಕೇಂದ್ರ
ರೈತ ಸಮುದಾಯದ ಕಲ್ಯಾಣಕ್ಕಾಗಿ ಇಲಾಖೆ ವತಿಯಿಂದ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಗಳ ಕುರಿತು ರೈತರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ನೂತನ “ರೈತ ಕರೆ ಕೇಂದ್ರ”ವನ್ನು 1800-425-3553 ಏಕರೂಪ ಸಂಖ್ಯೆಯೊಂದಿಗೆ ಸ್ಥಾಪಿಸಲಾಗಿದೆ ಎಂದಿದ್ದಾರೆ ಅವರು.
ವಿವಿಧ ರೈತ ಪರ ಯೋಜನೆಗಳನ್ನು ಒಗ್ಗೂಡಿಸಿ ’ಕರ್ನಾಟಕ ರೈತ ಸಮೃದ್ಧಿ ಯೋಜನೆ’ ಜಾರಿ ಮಾಡಲಾಗುವುದು, ಇದರಡಿ ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆ ಒಳಗೊಂಡಂತೆ ಸಮಗ್ರ ಕೃಷಿ ಮೂಲಕ ಆದಾಯ ಸುಸ್ಥಿರತೆ ಕಂಡುಕೊಳ್ಳಲು ಬೆಂಬಲ ನೀಡಲಾಗುವುದು.
ಮಣ್ಣಿನ ಗುಣ ಹಾಗೂ ಮಾರುಕಟ್ಟೆ ಬೇಡಿಕೆ ಆಧರಿಸಿ ಯಾವ ಬೆಳೆ ಬೆಳೆಯಬೇಕೆಂಬುದರ ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಗುವುದು, ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿ ಸಂಗ್ರಹಣೆ ಹಾಗೂ ಸಂರಕ್ಷಣೆ ಉದ್ದೇಶದಿಂದ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು.
ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಗಳು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟ ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಉತ್ತಮ ದೇಸಿ ತಳಿಗಳ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.