ಮಾಜಿ ಪ್ರಧಾನಿ HD ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದ ಚಿಕ್ಕಬಳ್ಳಾಪುರ ಅಭ್ಯರ್ಥಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಆಗುವುದಕ್ಕೆ ಮುನ್ನವೇ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿದ್ದು, ಕಾಂಗ್ರೆಸ್ ಇಗೋ ಅಭ್ಯರ್ಥಿ ಆಗೋ ಅಭ್ಯರ್ಥಿ ಎಂದು ತಿಣುಕಾಡುತ್ತಿದೆ.
ಎಂ.ಎಸ್.ರಾಮಯ್ಯ ಅವರ ಮೊಮ್ಮಗ ರಕ್ಷಾ ರಾಮಯ್ಯ ಅವರ ಹೆಸರನ್ನು ಕಾಂಗ್ರೆಸ್ ಬಹುತೇಕ ಅಂತಿಮಗೊಳಿಸಿದ್ದು, ಆದರೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಹೈಕಮಾಂಡ್ ಮಟ್ಟದಲ್ಲಿ ಹೊಂದಿರುವ ಸಂಪರ್ಕಗಳು ರಕ್ಷಾ ರಾಮಯ್ಯ ಭಾರೀ ಅವರಿಗೆ ತೊಡಕಾಗಿ ಪರಿಣಮಿಸಿವೆ.
ಇನ್ನೊಂದೆಡೆ; ತೀವ್ರ ಪೈಪೋಟಿಯ ನಡುವೆ ಟಿಕೆಟ್ ಗಿಟ್ಟಿಸಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಬಿಜೆಪಿ ಹಾಗೂ ಮಿತ್ರಪಕ್ಷ ಜೆಡಿಎಸ್ ನಾಯಕರನ್ನು ಭೇಟಿ ತಮ್ಮ ಎದುರಿಗಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹೊರಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಚುನಾವಣೆ ಎದುರಿಸುವ ಸಂಬಂಧ ಮಾತುಕತೆ ನಡೆಸಿದರು.
ಅಲ್ಲದೆ; ಕ್ಷೇತ್ರದ ಉದ್ದಕ್ಕೂ ಜೆಡಿಎಸ್ ಪಕ್ಷದ ಬೆಂಬಲ ಯಾಚಿಸಿದರಲ್ಲದೆ ಅವರಿಗೆ ಮಾಜಿ ಮುಖ್ಯಮಂತ್ರಿ ಅವರಿಂದ ಅಭಯ ಸಿಕ್ಕಿದೆ.
ಹಾಗೆಯೇ; ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರನ್ನು ಸುಧಾಕರ್ ಅವರು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವುದು, ಎಲ್ಲಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ಸರಿ ಮಾಡುವುದು, ಚುನಾವಣೆ ತಂತ್ರಗಾರಿಕೆ ಹಾಗೂ ಪ್ರಚಾರ ಇತ್ಯಾದಿ ವಿಷಯಗಳ ಬಗ್ಗೆ ಸುಧಾಕರ್ ಅವರು ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸುಧಾಕರ್ ಅವರು; ಜೆಡಿಎಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಚುನಾವಣೆ ಮೈತ್ರಿ ಆಗಿದೆ. ಎರಡೂ ಪಕ್ಷಗಳು ಹಾಲು ಜೇನಿನಂತೆ ಕೆಲಸ ಮಾಡಬೇಕು. ಎರಡೂ ಪಕ್ಷಗಳು ಸೇರಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದರು.
ಬಿಜೆಪಿ ಪಕ್ಷವು ನನಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರುಗಳ ಆಶೀರ್ವಾದಿಂದ ಈ ಟಿಕೆಟ್ ಸಿಕ್ಕಿದೆ ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಶಾಸಕನಾಗಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳು ನನ್ನ ರಕ್ಷಣೆಗೆ ಇವೆ. ಜನರ ವಿಶ್ವಾಸ ನನ್ನ ಮೇಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭೆ ಚುನಾವಣೆ: JDS ಪಾಲಾದ ಕೋಲಾರ