ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದು ಟೀಕಿಸಿದ್ದ ನಟ ಪ್ರಕಾಶ್ ರೈ ಅವರಿಗೆ ಜೆಡಿಎಸ್ ತಿರುಗೇಟು ಕೊಟ್ಟಿದೆ.
ರಂಗ ಚಟುವಟಿಕೆ ನಡೆಸಲು ಹೊಸದಾಗಿ ಅವರು ಸ್ಥಾಪನೆ ಮಾಡಿರುವ ನಿರ್ದಿಗಂತ ಸಂಸ್ಥೆಗೆ ಸರಕಾರ ಕೋಟ್ಯಂತರ ರೂಪಾಯಿ ಹಣ ನೀಡುತ್ತಿರುವುದನ್ನು ಉಲ್ಲೇಖಿಸಿ ಅವರಿಗೆ ಜೆಡಿಎಸ್ ಟಾಂಗ್ ನೀಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್ ರೈ ಉರುಫ್ ಪ್ರಕಾಶ್ ರಾಜ್ ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ.ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ.. ಎಂದು ಜೆಡಿಎಸ್ ಕಾಲೆಳೆದಿದೆ.
ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ, ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ, ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಈಚೆಗಷ್ಟೇ ನೀವು ಸ್ಥಾಪಿಸಿದ ‘ನಿರ್ದಿಗಂತʼಕ್ಕೆ ಹಣದ ಹೊಳೆ ಹರಿಸುತ್ತಿದೆ ಸರಕಾರ. ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ. Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ.. ಎಂದು ಪಕ್ಷವು ಟಾಂಗ್ ಕೊಟ್ಟಿದೆ.
ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿಫ್ರಂಟ್ ಎಂಬ ಮಟ್ಟು-ಪಟ್ಟಿನ ಕಳ್ಳಕಂಪನಿಗೆ ಕೋಟಿ ಕೋಟಿ ಸುರಿದಿರುವ ಕಾಂಗ್ರೆಸ್ ಸರಕಾರ, ನಿಮ್ಮ ನಿರ್ದಿಗಂತಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯೋರು ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವೋರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ!! ಹೆಂಗೆ? Just Asking.. ಅಷ್ಟೇ ಪ್ರಕಾಶ್ ರಾಜ್ ಅವರೇ.. ಎಂದು ನಟ ಪ್ರಕಾಶ್ ರೈ ಅವರಿಗೆ ಚಾಟಿ ಬೇಸಿದೆ ಜೆಡಿಎಸ್.
ಹಿಂದೂ ವಿರೋಧಿ ಎಂದ ಯತ್ನಾಳ್
ಪ್ರಕಾಶ್ ರೈ ಅವರ ನಿರ್ದಿಗಂತ ಸಂಸ್ಥೆಗೆ ಸರಕಾರ ಹಣ ಕೊಡುವ ಬಗ್ಗೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ರಾಜ್ಯದಲ್ಲಿ ರಂಗಾಯಣಗಳನ್ನು ಸ್ಥಾಪಿಸಿರುವಾಗ, ಕೇವಲ ಒಂದು ವರ್ಷದ ಹಿಂದೆ ಸ್ಥಾಪಿತವಾದ ‘ನಿರ್ದಿಂಗಿತ’ ಸಂಸ್ಥೆಗೆ ಈ ಚಟುವಟಿಕೆಗಳನ್ನು ನಡೆಸಲು ರತ್ನಗಂಬಳಿ ಹಾಸಿದ್ದೇಕೆ ? ಸರ್ಕಾರ ತಮ್ಮ ಸಂಸ್ಥೆಗಳನ್ನು ಬೆಳೆಸಲು, ಉತ್ತೇಜಿಸುವ ಬದಲಾಗಿ ತಮ್ಮ ಹೊಗಳುಭಟ್ಟರ ಸಂಸ್ಥೆಗೆ ನೀಡಿರುವುದು ಸರಿಯಾದ ಕ್ರಮವಲ್ಲ…ನೀನಾಸಂ, ಶಿವಸಂಚಾರ, ಎನ್ ಎಸ ಡಿ ಸೇರಿದಂತೆ ಅನೇಕ ರಂಗ ತಂಡಗಳು ಕ್ರಿಯಾಶೀಲರಾಗಿರುವಾಗ ಕೇವಲ ನಿರ್ದಿಂಗಿತ ಸಂಸ್ಥೆಗೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ ಅವರು.
ಹಿಂದುತ್ವ ವಿರೋಧಿ, ಧರ್ಮನಿಂದಕ ಪ್ರಕಾಶ್ ರಾಜ್ ಸಂಸ್ಥೆಗೆ ಈ ಜವಾಬ್ದಾರಿ ನೀಡಿರುವುದು ಹಾಗೂ ಸಾಂಸ್ಕೃತಿಕ ಚಟುವಟಿಕೆಗೆ ಮೀಸಲಾದ ಬಹುತೇಕ ಬಜೆಟ್ ಅನ್ನು ಇವರ ಸಂಸ್ಥೆಗೆ ಕಲ್ಪಿಸಿರುವುದು ಹಾಗೂ ಸರ್ಕಾರ ನಿಯಮಾವಳಿಗಳನ್ನು ಗಾಳಿಗೆದೂರಿರುವುದು ಸರ್ಕಾರ ಯಾರನ್ನು ಪೋಷಿಸುತ್ತಿದೆ ಎಂದು ತೋರಿಸುತ್ತದೆ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.