ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ಶ್ರೀ ರಾಮ ಜಾನಕೀನಾಥ ತಾಟಕಾಸುರ ಮರ್ದನ |
ಇಕ್ಷ್ವಾಕುಕುಲಸಂಭೂತ ರಣಪಂಡಿತ ರಾಘವಃ ||
ರಾಮಕಾವ್ಯ
ರಾಮನವಮಿಗೆ….
ಅಂತರಂಗದ ತುಂಬಾ ರಾಮನಾಮದ ಒಲುಮೆ/
ಋತದ ಹಾದಿಯನು ಬಿಡದ
ತತ್ತ್ವನಿಷ್ಠೆಯ ಚಿಲುಮೆ//
ಅವನ ನೆನಪಲಿ ಉಂಟು
ಜಗವ ಕಾಯುವ ಶಕುತಿ/
ಯುಗಯುಗವನೂ ಕಾವ
ಅಮೃತವರುಷದ ಭಕುತಿ/
ಇಷ್ಟ ಕಷ್ಟಗಳಿಗೆಲ್ಲ ಕೈಯ ಚಾಚುವ ದೈವ;/
ಅವರಿವರು ಎನ್ನದೆಯೇ
ತನ್ನ ಬಲವನು ಈವ/
ಜನಕಜೆಗೆ ಮಿಡಿದಾತ, ಅನುಜರನು ಬಿಡದಾತ,/
ಪ್ರಜೆಗಳನು ಪೊರೆದಾತ
ನಮ್ಮ ಸಾಕೇತ ರಾಮ/
ಬಂದವರ ಬರಮಾಡಿ, ನಸುನಗುತ ಮಾತಾಡಿ,/
ನಡೆವ ಹಾದಿಯ ತೋರಿ
ಬಲು ಸ್ಥಿರವಾದ ರಾಮ/
ಕರ್ಮವನು ಮಾಡುತಲೇ ಧರ್ಮವನು ಹಿಡಿದವನು/
ಕಾಡುಮೇಡನು ಅಲೆದು
ಚಿರವಾಗಿ ನಿಂತವನು/
ತ್ರೇತೆಯಲಿ ಬಂದವನು,
ಕಲಿಯಲೂ ಉಳಿದಿಹನು/
ರಾಮರಾಮಾ ಎಂದವನ
ಬದುಕ ನಾಕ ಮಾಡುವನು/
ಚೈತ್ರದಲಿ ಬಂದವನು, ಚೈತ್ರವನೇ ತಂದವನು
ಮನದ ಸರಸಿನಲೆಲ್ಲ ಶುದ್ಧ/
ಒಳಗು ಹೊರಗುಗಳನೆಲ್ಲ
ತೆರೆದಿಡುತ ಶ್ರೀರಾಮ,
ಸುರಿಸುವನು ನಮಗೆಲ್ಲ ಶ್ರೀವಸಂತ//
-ಬಿ ಎಸ್ ಜಯಪ್ರಕಾಶ ನಾರಾಯಣ
ಎಲ್ಲರಿಗೂ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು