ತಜ್ಞರ ಶಿಫಾರಸು ಒಪ್ಪಿಕೊಂಡ ರಾಜ್ಯ ಸರಕಾರ
ಬೆಂಗಳೂರು: ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು (ಔಟ್ ಆಫ್ ಸಿಲೆಬಸ್ ಪ್ರಶ್ನೆ) ಕೇಳಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೊನೆಗೂ ವಿದ್ಯಾರ್ಥಿಗಳಿಗೆ ಸಮಾಧಾನ ಆಗುವಂತಹ ಸುದ್ದಿ ನೀಡಿದೆ.
ಸಿಇಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಕೈಬಿಟ್ಟು ಸಿಲೆಬಸ್ ನಲ್ಲಿದ್ದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನ ಮಾಡಿ ಅವುಗಳಿಗೆ ಅಂಕ ಕೊಡಲು ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ.
ಅಲ್ಲದೆ; ಮತ್ತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸದಿರಲು ಪ್ರಾಧಿಕಾರ ನಿರ್ಧಾರ ಕೈಗೊಂಡಿದ್ದು; ವಿದ್ಯಾರ್ಥಿಗಳ ಆಶಯವನ್ನು ಎತ್ತಿ ಹಿಡಿದಿದೆ.
ಇದೇ ಏಪ್ರಿಲ್ 18 ಹಾಗೂ 19ರಂದು ಸಿಇಟಿ ಪರೀಕ್ಷೆ ನಡೆದಿತ್ತು. 4 ವಿಷಯಗಳಲ್ಲಿ (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಿಶಾಸ್ತ್ರ) ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ವಿದ್ಯಾರ್ಥಿಗಳು ದೂರಿದ್ದರು. ಈ ನಾಲ್ಕು ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಹೀಗಾಗಿ ಈ ಗೊಂದಲ ಪರಿಶೀಲಿಸಿ ನಿವಾರಣೆ ಮಾಡಲು ರಾಜ್ಯ ಸರಕಾರ ನಾಲ್ವರು ತಜ್ಞ ಸದಸ್ಯರ ಸಮಿತಿ ರಚಿಸಿತ್ತು.
ಸಮಿತಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಈ ವರದಿ ಆಧಾರದ ಮೇಲೆ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದೆ, ಸಿಲೆಬಸ್ ನಲ್ಲಿದ್ದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನಕ್ಕೆ ಪರಿಗಣಿಸಲು ಸರಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.
ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಸಮಿತಿ ಗುರುತಿಸಿದ್ದು, ಈ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಸರಕಾರಕ್ಕೆ ಶಿಫಾರಸು ಮಾಡಿದೆ.
ಒಟ್ಟು ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು: 240ರಲ್ಲಿ 50
ಜೀವಿಶಾಸ್ತ್ರ: 60ಕ್ಕೆ 11
ಭೌತಶಾಸ್ತ್ರ: 60ಕ್ಕೆ 09
ಗಣಿತ: 60ಕ್ಕೆ 15
ರಸಾಯನಶಾಸ್ತ್ರ: 60ಕ್ಕೆ 15
ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್ ಅವರು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಅದು ಈ ಕೆಳಕಂಡಂತೆ ಇದೆ.