ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಸತ್ಯವೋ? ಸುಳ್ಳೋ??; ಅಂಕಿ ಅಂಶಗಳ ಸಮೇತ ವಿಶೇಷ ವರದಿ
ಬೆಂಗಳೂರು: ಹಾಸನ ಪ್ರಕರಣದ ಅಬ್ಬರದ ನಡುವೆ ಬರ ಪರಿಹಾರ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಅಬ್ಬರಿಸಿ ಬೊಬ್ಬಿರಿದ ರಾಜ್ಯ ಕಾಂಗ್ರೆಸ್ ಸರಕಾರ, ಈಗ ಕೇಂದ್ರದ ಹಣದ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಕೇಂದ್ರದಿಂದ ಬರ ಅನ್ಯಾಯ ಎನ್ನುವ ಮಾತು ಎಲ್ಲಿಯೂ ಕೇಳಿ ಬರುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪದೇಪದೆ ಹೇಳುತ್ತಿದ್ದ ಬರ ಪರಿಹಾರ ಹಣ ಅನ್ಯಾಯದ ಆರೋಪ ಚುನಾವಣಾ ಪ್ರಚಾರ ಭಾಷಣಗಳಲ್ಲಿ ದೊಡ್ಡದಾಗಿ ಸದ್ದಾಗುತ್ತಿತ್ತು. ಯಾವಾಗ ಹಾಸನದ ಪೆನ್ ಡ್ರೈವ್ ಪ್ರಕರಣ ಮುನ್ನಲೆಗೆ ಬಂದಿತೋ ಸಿಎಂ, ಡಿಸಿಎಂ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ನಾಯಕನ ಬಾಯಲ್ಲೂ ಬರದ ಬಗ್ಗೆ ಒಂದೇ ಒಂದು ಮಾತೂ ಹೊರಬರುತ್ತಿಲ್ಲ.
ಹಾಗಾದರೆ; ಬರ ಪರಿಹಾರ ನೀಡಿಕೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರದಿಂದ ರಾಜ್ಯಕ್ಕೆ ಘೋರ ಅನ್ಯಾಯ ಆಗಿದೆಯೇ? ಅಥವಾ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡಿದ್ದಾರೆಯೇ? ಆ ವಿವರಗಳನ್ನು ಅಂಕಿ ಅಂಶಗಳ ಸಮೇತ ಈ ಕೆಳಕಂಡಂತೆ ನೋಡೋಣ.
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಸರಕಾರ ಕಳೆದ ಏಪ್ರಿಲ್ ರಂದು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿತ್ತು. ಅದು ಸಾಲದು, ನಾವು ₹18,500 ಕೋಟಿ ಕೇಳಿದ್ದೆವು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು.
ಸತ್ಯ ಏನು?
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು ಸತ್ಯವಾ ಅಥವಾ ಸುಳ್ಳಾ ಎನ್ನುವುದನ್ನು ಅಂಕಿ ಅಂಶಗಳ ಸಮೇತ ನೋಡೋಣ.
2004ರಿಂದ 2014 ನಡುವಿನ ಹತ್ತು ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ UPA ಸರಕಾರಕ್ಕೆ ಕರ್ನಾಟಕದಲ್ಲಿದ್ದ ಸರಕಾರಗಳು ಬೇರೆ ಬೇರೆ ಸಂದರ್ಭಗಳಲ್ಲಿ ₹19,500 ಕೋಟಿ ಬರ ಮತ್ತು ನೆರೆ (ಪ್ರವಾಹ) ಪರಿಹಾರ ಕೊಡಬೇಕು ಎಂದು ಬೇಡಿಕೆ ಇಟ್ಟಿತ್ತು. ಆದರೆ, ಆ ಸರಕಾರ ರಾಜ್ಯಕ್ಕೆ ಕೊಟ್ಟಿದ್ದು ಕೇವಲ ₹1,500 ಕೋಟಿ ಮಾತ್ರ!! ಅಂದರೆ; ರಾಜ್ಯದ ಬೇಡಿಕೆ ಇಟ್ಟ ಪ್ರಮಾಣದಲ್ಲಿ ನಮಗೆ ಬಂದಿದ್ದು ಕೇವಲ 8% ಮಾತ್ರ!
2014-2022 ಈವರೆಗೆ ನರೇಂದ್ರ ಮೋದಿ ಅವರ ಸರಕಾರದ 8 ವರ್ಷಗಳ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ ಬರ ಮತ್ತು ನೆರೆ ಪರಿಹಾರಕ್ಕಾಗಿ ₹18,500 ಕೋಟಿ ಪರಿಹಾರ ನೀಡಿವಂತೆ ರಾಜ್ಯ ಸರಕಾರ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಪ್ರತಿಯಾಗಿ ಮೋದಿ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ ಪರಿಹಾರ ₹7,000 ಕೋಟಿ. ಅಂದರೆ; ರಾಜ್ಯ ಕೇಳಿದ್ದ ಒಟ್ಟಾರೆ ಪ್ರಮಾಣದಲ್ಲಿ 38% ಹಣ ಕೇಂದ್ರದಿಂದ ಬಂದ ಹಾಗಾಯಿತು.
ಈಗ, ಅಂದರೆ; 2023-2024ರಲ್ಲಿ; 26-4-2024ರಂದು ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ ಬರ ಪರಿಹಾರ ಹಣ ₹3454 ಕೋಟಿ! ಇತಿಹಾಸದಲ್ಲಿಯೇ ಕೇಂದ್ರ ಸರಕಾರ ರಾಜ್ಯಕ್ಕೆ ಕೊಟ್ಟಿರುವ ಅತಿ ಹೆಚ್ಚು ಬರ ಪರಿಹಾರದ ಮೊತ್ತ ಇದಾಗಿದೆ. ಅಂಕಿ-ಅಂಶಗಳ ಕಡೆ ಗಮನ ಕೊಡಬಹುದು. ಅಲ್ಲಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲಾ ಹೇಳಿದ್ದು ಸುಳ್ಳು ಎಂದಾಯಿತು.
ಸಿದ್ದರಾಮಯ್ಯ ಅವರು ಎಷ್ಟು ಕೇಳಿದ್ದರು?
ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ, ಕೇಂದ್ರ ಸರಕಾರ ರಾಜ್ಯಕ್ಕೆ NDRF ((ರಾಷ್ಟ್ರೀಯ ಬರ ಪರಿಹಾರ ನಿಧಿ) ) ನಿಯಮದ ಪ್ರಕಾರ ₹4860 ಕೋಟಿ ಬರ ಪರಿಹಾರ ಕೊಟ್ಟರೆ ಸಾಕು ಎಂದಿದ್ದರು. ಆ ಬೇಡಿಕೆಯ ಅನುಸಾರ ಕೇಂದ್ರವು ₹3454 ಕೋಟಿ ಬರ ಪರಿಹಾರ ನೀಡಿದೆ. ಆದರೆ ಈಗ ಅವರು ಮಾತು ಬದಲಿಸಿ, ನಾವು ₹18171 ಕೋಟಿ ಕೇಳಿದ್ದೆವು ಎಂದು ಹೇಳಿದ್ದರು.
ಸಿದ್ದರಾಮಯ್ಯ ಅವರ ಲೆಕ್ಕದ ಪ್ರಕಾರವೇ ಹೇಳಿದರೆ; ₹4860 ಕೋಟಿ ಸಾಕು ಎಂದ ಸಿದ್ದರಾಮಯ್ಯ ಅವರ ಮನವಿಯಂತೆ ₹3454 ಬಿಡುಗಡೆ ಆಗಿದೆ. ಅವರ ಪ್ರಕಾರ ಇನ್ನು ಬರಬೇಕಿರುವುದು ₹1,406 ಕೋಟಿ. ಕೇಂದ್ರಕ್ಕೆ, ಪ್ರಧಾನಿಗಳಿಗೆ ಮತ್ತೆ ಮನವಿ ಕೊಟ್ಟರೆ ಆ ಮೊತ್ತವೂ ಬರುವ ಸಾಧ್ಯತೆ ಇದೆ ಎಂದು ವಿಶ್ರಾಂತ ಹಿರಿಯ ಅಧಿಕಾರಿಯೊಬ್ಬರು ಹೇಳುವ ಮಾತು.
ಅದನ್ನು ಬಿಟ್ಟು ಎಲ್ಲವನ್ನೂ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. UPA ಸರಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂತು? NDA ಸರ್ಕಾರದಲ್ಲಿ ಎಷ್ಟು ಹಣ ಬಂದಿದೆ? ಜನರ ಮುಂದೆ ಲೆಕ್ಕ ಇಡಲಿ ಎಂದು ಅವರು ಹೇಳುತ್ತಾರೆ.
ರಾಜ್ಯ ಬರ ಪರಿಹಾರದಲ್ಲೂ ಕೇಂದ್ರದ ಪಾಲಿದೆ!
*SDRF (ರಾಜ್ಯ ಬರ ಪರಿಹಾರ ನಿಧಿ) ನಲ್ಲಿ ಕೇಂದ್ರದ ಪಾಲು 75%, ರಾಜ್ಯದ ಪಾಲು 25% ರಷ್ಟಿದೆ. ಈಗ ರೈತರಿಗೆ ತಲಾ ₹2,000 ಕೊಡುತ್ತೇವೆ ಎಂದು ರಾಜ್ಯ ಸರಕಾರ ಭರವಸೆ ನೀಡಿರುವ ಮೊತ್ತದಲ್ಲಿ ₹1500 ಕೇಂದ್ರದ್ದು, ರಾಜ್ಯದ್ದು ಕೇವಲ ₹500.
ಪ್ರತಿ ರೈತರಿಗೆ ಕೊಡಲಾಗುತ್ತಿರುವ ಈ ₹2,000 ಪರಿಹಾರದಲ್ಲಿ ರಾಜ್ಯ ಸರಕಾರ ಖರ್ಚು ಮಾಡಿರುವ ಮೊತ್ತ ₹600. ಇದರಲ್ಲಿ ₹400 ಕೋಟಿ ಕೇಂದ್ರದ್ದೇ ಇದೆ. ₹200 ಕೋಟಿಯನ್ನಷ್ಟೇ ರಾಜ್ಯ ಭರಿಸಿದೆ.
ಕೃಷಿಗೆ ಅನುದಾನ ಕಡಿತ
ಸಿದ್ದರಾಮಯ್ಯ ಸರಕಾರವು ಗ್ಯಾರಂಟಿಗಳ ನೆಪದಲ್ಲಿ ಕೃಷಿಗೆ ಮೀಸಲಿದ್ದ ಅನುದಾನವನ್ನು ದೊಡ್ಡ ಪ್ರಮಾಣದಲ್ಲಿ ಕಡಿತ ಮಾಡಿದೆ. ಒಂದೆಡೆ ಬರ, ಇನ್ನೊಂದೆಡೆ ಅಕಾಲ ನೆರೆಯಿಂದ ತತ್ತರಿಸಿರುವ ಕೃಷಿ ವಲಯಕ್ಕೆ ಹಿಂದಿನ ಬೊಮ್ಮಾಯಿ ಸರಕಾರ ಮೀಸಲಿಟ್ಟಿದ್ದ ಅನುದಾನದಲ್ಲಿ (ಒಟ್ಟು ₹39,031) ಭಾರೀ ಕಡಿತ ಮಾಡಿ ಕೃಷಿ ತೋಟಗಾರಿಕೆ ಇಲಾಖೆಗಳೆರಡಕ್ಕೂ ₹6,688 ಕೋಟಿಯನ್ನಷ್ಟೇ ಕೊಟ್ಟಿದ್ದಾರೆ.
ಪ್ರತಿಪಕ್ಷ ನಾಯಕರು ಈ ಅಂಶಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರ ಸರಕಾರದ ಮೇಲೆ ಮುಗಿಬೀಳುತ್ತಿದ್ದಾರೆ. ಆದರೆ, ಕೆಲ ದಿನ ಬರ ಪರಿಹಾರದ ಬೆನ್ಹತ್ತಿ ಭರ್ಜರಿ ಪ್ರಚಾರ ಗಿಟ್ಟಿಸಿದ್ದ ಸರಕಾರ ಕೊನೆಗೆ ಆ ವಿಷಯಕ್ಕೆ ಇತಿಶ್ರೀ ಹಾಡಿ ಹಾಸನ ಪೆನ್ ಡ್ರೈವ್ ಪ್ರಕರಣದತ್ತ ಹೊರಳಿದೆ. ಅಲ್ಲಿಗೆ ಕಾಂಗ್ರೆಸ್ ಪಕ್ಷದ ಮುಖವಾಡ ಈ ರೀತಿಯಾಗಿ ಕಳಚಿಬಿದ್ದಿದೆ ಎನ್ನುತ್ತಾರೆ ಪ್ರತಿಪಕ್ಷ ನಾಯಕ ಆರ್.ಅಶೋಕ್.