ಕಾಂಗ್ರೆಸ್ ಮೊದಲ ವಿಕೆಟ್ ಪತನ; ಸಿದ್ದರಾಮಯ್ಯ ಒತ್ತಡಕ್ಕೆ ಬೆದರಿದ ಹಸ್ತಪಡೆ
ವಿಚಾರಣೆ ಮುಖ ಕಣ್ಮರೆಯಾದ ಕೃಪಾ ಆಳ್ವ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ನಲ್ಲಿ.ನೇರವಾಗಿ ಭಾಗಿ ಆಗಿದ್ದಾರೆ ಎನ್ನಲಾದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪತ್ರಕರ್ತನೊಬ್ಬ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ ಕೃಪಾ ಆಳ್ವಾ ಕೂಡ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು.
ಅದರ ಪಾಕವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ ಅವರು ಸಹಿ ಮಾಡಿರುವ ಆದೇಶ ಪತ್ರದ ಅನುಸಾರ ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಇದರೊಂದಿಗೆ ಸ್ಟಿಂಗ್ ಆಪರೇಷನ್ ಇನ್ನೊಂದು ಮಜಲು ತಲುಪಿದ್ದು, ಸದ್ಯಕ್ಕೆ ಕೃಪಾ ಆಳ್ವಾ ದೇಶ ಬಿಟ್ಟು ಹೊರ ಹೋಗಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಅವರು ಅಮೆರಿಕಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಇದ್ದು, ಅವರ ಬಗ್ಗೆ ಈವರೆಗೆ ಸಿಸಿಬಿ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಸ್ಟಿಂಗ್ ಆಪರೇಷನ್ ಟಾರ್ಗೆಟ್ ಆಗಿದ್ದ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಅವರು ಈ ಕುತಂತ್ರದ ಪತ್ರಕರ್ತನ ಜತೆಗೆ ಕಾಂಗ್ರೆಸ್ ಪಕ್ಷದ ಕೆಲವರು ಶಾಮೀಲಾಗಿದ್ದಾರೆ ಎಂದು ದೂರಿದ್ದರು. ಇಬ್ಬರು ನಾಯಕರು ಕೂಡ ಕೃಪಾ ಆಳ್ವ ಮತ್ತು ಪತ್ರಕರ್ತನ ಹೆಸರುಗಳನ್ನು ಬಹಿರಂಗವಾಗಿಯೇ ಹೇಳಿದ್ದರು.
ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹರಿಪ್ರಸಾದ್ ಅವರ ಆದೇಶದ ಮೇರೆಗೆ ಕೃಪಾ ಆಳ್ವರನ್ನು ಅಮಾನತು ಮಾಡಲಾಗಿದೆ.
ಅಕ್ಟೋಬರ್ 24ರಂದು ಬೆಂಗಳೂರಿನ ಕೇಂದ್ರ ಸೈಬರ್ ಅಪರಾಧ ವಿಭಾಗದ ಪೊಲೀಸರ ಎದುರು ಹಾಜರಾಗಿದ್ದ ಕೃಪಾ ಆಳ್ವ ನಂತರ ವಿದೇಶಕ್ಕೆ ಹಾರಿದ್ದಾರೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.

















