ಇಂದು ಮಧ್ಯರಾತ್ರಿಯಿಂದಲೇ ಬರೆ ಏರಿಕೆ ಜಾರಿ
Lead photo: Decison joseph from pixels
ಬೆಂಗಳೂರು: ಹಾಲು ದರ ಏರಿಕೆ ಬೆನ್ನಲ್ಲೇ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರವನ್ನೂ ಶೇಕಡ 23ರಿಂದ 37ರಷ್ಟು ಹೆಚ್ಚಳ ಮಾಡಿದ್ದು, ಹೊಸ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಸಾರಿಗೆ ನಿಗಮಗಳ ನಷ್ಟ ಭರಿಸಲು ದರ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಡೀಸೆಲ್ ಬೆಲೆ ಏರಿಕೆ
ಸತತವಾಗಿ ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಮತ್ತು ಕಾರ್ಯಾಚರಣೆ ವೆಚ್ಚವೇ ದರ ಹೆಚ್ಚಳ ಮಾಡಲು ಕಾರಣ ಎಂದಿದ್ದಾರೆ. ಪ್ರಯಾಣಿಕರಿಗೆ ಹೊರೆ ಆಗದಂತೆ, ನಿಗಮಗಳನ್ನು ಉಳಿಸುವ ಉದ್ದೇಶದಿಂದ ಕಿಲೋ ಮೀಟರ್ ಮತ್ತು ಸ್ಟೇಜ್ ಆಧಾರದ ಮೇಲೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ನಗರ ಸಾರಿಗೆ ದರದಲ್ಲಿ ಅತಿಹೆಚ್ಚು ಅಂದರೆ 9 ರೂ., ಗ್ರಾಮೀಣ ಸಾರಿಗೆ ದರ ಸ್ಟೇಜ್ ಆಧಾರದ ಮೇಲೆ ಹೆಚ್ಚಳ ಮಾಡಿದ್ದೇವೆ.
ಕನಿಷ್ಠ ದರ ಪರಿಷ್ಕರಣೆ
ಹವಾನಿಯಂತ್ರಿತ ಬಸ್ಗಳಿಗೆ ಪ್ರಯಾಣಿಕರನ್ನು ಆಕರ್ಷಿಸಲು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ಅಂಕಿ-ಅಂಶ ನೀಡಿದರು.
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಮೇಲೆ ಯಾವುದೇ ಹೊರೆ ಆಗಿಲ್ಲ, ಯೋಜನೆಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ, ಆದರೆ, ಕಳೆದ 10 ವರ್ಷಗಳಲ್ಲಿ ಡೀಸೆಲ್ ಪ್ರತೀ ಲೀಟರ್ಗೆ 10 ರಿಂದ 11 ರೂ.ಏರಿಕೆ ಆಗಿರುವುದರಿಂದ ನಿಗಮಗಳಿಗೆ 10,200 ಕೋಟಿ ರೂ. ನಷ್ಟ ಉಂಟಾಗಿದೆ. ಅಲ್ಲದೆ, 9,900 ಕೋಟಿ ರೂ. ಬಾಕಿ ಹೊಣೆಯನ್ನೂ ಹೊತ್ತುಕೊಂಡಿದೆ, ಸಂಸ್ಥೆಗಳ ಒಟ್ಟು ವೆಚ್ಚದಲ್ಲಿ ಶೇಕಡ 80ರಷ್ಟು ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚಕ್ಕೆ ವಿನಿಯೋಗ ಆಗುತ್ತದೆ.
ಪ್ರತೀದಿನ 15.60 ಕೋಟಿ ರೂ. ವೆಚ್ಚ
ಡೀಸೆಲ್ಗಾಗಿ ಪ್ರತೀದಿನ 15.60 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಕಳೆದ 10 ವರ್ಷಗಳಲ್ಲಿ ಸಿಬ್ಬಂದಿ ವೇತನದಿಂದ 6,418 ಕೋಟಿ ರೂ., ಭವಿಷ್ಯ ನಿಧಿಯಿಂದ 7,916 ಕೋಟಿ ರೂ., ನಿವೃತ್ತ ನೌಕರರ ಬಾಕಿ 604 ಕೋಟಿ ರೂ. ಹೊರೆ ಬಿದ್ದಿದೆ.
ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ಶಿಫಾರಸು ಆಧರಿಸಿ, ನಿಗಮ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಪ್ರಯಾಣಿಕರಿಗೆ ಹೊರೆ ಆಗದಂತೆ ಅಲ್ಪ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ.ನಾವು ಶೇಕಡಾವಾರು ಮುಂದಿಟ್ಟುಕೊಂಡು ದರ ಹೆಚ್ಚಳ ಮಾಡಿಲ್ಲ, ಬಸ್ ಸಂಚರಿಸುವ ಕಿಲೋ ಮೀಟರ್ ಹಾಗೂ ನಿಗದಿತ ಸ್ಟೇಜ್ಗಳ ಲೆಕ್ಕಾಚಾರದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ.
ವೇಗದೂತ ದರ
ವೇಗದೂತ ಬಸ್ಗಳಲ್ಲಿ 10 ಹಂತದವರೆಗೆ ಕನಿಷ್ಠ 19 ರೂ.ನಿಂದ ಗರಿಷ್ಠ 68 ರೂ.ವರೆಗೆ ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು. ಐರಾವತ, ಡ್ರೀಂ ಕ್ಲಾಸ್, ಅಂಬಾರಿ ಬಸ್ಗಳ ಸೇವೆಯಲ್ಲಿ 6 ಕೀಲೋ ಮೀಟರ್ ಪ್ರಯಾಣದವರೆಗೆ 5 ರೂ., 6 ರಿಂದ 18 ಕಿಲೋ ಮೀಟರ್ ಪ್ರಯಾಣದವರೆಗೆ 10 ರೂ., ದೂರ ಪ್ರಯಾಣಕ್ಕೆ ಗರಿಷ್ಠ 15 ರೂ. ಏರಿಕೆ ಮಾಡಲಾಗಿದೆ. ಬಿಎಂಟಿಸಿಯಲ್ಲಿ ಕನಿಷ್ಠ ಶೇಕಡ 33 ರಿಂದ ಗರಿಷ್ಠ ಶೇಕಡ 50ರಷ್ಟು ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಮೈಸೂರಿಗೆ 160 ರಿಂದ 197 ರೂ.
ಬೆಂಗಳೂರಿನಿಂದ ಹೊರಡುವ ವೇಗದೂತ ಬಸ್ಗಳ ದರ ಪರಿಷ್ಕರಣೆ ನಂತರ ಮೈಸೂರಿಗೆ 160 ರಿಂದ 197 ರೂ., ಹಾಸನಕ್ಕೆ 219 ರಿಂದ 270 ರೂ., ಮಂಡ್ಯಕ್ಕೆ 110 ರಿಂದ 136 ರೂ., ಚಿಕ್ಕಮಗಳೂರಿಗೆ 295 ರಿಂದ 363 ರೂ., ಕೋಲಾರ ಹಾಗೂ ತುಮಕೂರಿಗೆ 81 ರಿಂದ 100 ರೂ. ಪ್ರಯಾಣ ದರ ಹೆಚ್ಚಳವಾಗಿದೆ. ದಾವಣಗೆರೆಗೆ 317 ರಿಂದ 390 ರೂ., ಶಿವಮೊಗ್ಗ 340 ರಿಂದ 419 ರೂ., ಮಂಗಳೂರಿಗೆ 423 ರಿಂದ 521 ರೂ. ಏರಿಕೆ ಆಗಿದೆ.

















