ಪವರ್ ಟಿವಿ ಮಾಲೀಕ, ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾದ ವಾಹಿನಿ ನೌಕರರ ವಿರುಧ್ಧ ಕ್ರಮಕ್ಕೆ ಸೂಚನೆ; ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ ಗೃಹ ಇಲಾಖೆ
Lead caricature by AI
ಬೆಂಗಳೂರು: ರಾಷ್ಟ್ರದ ಗಮನ ಸೆಳೆದಿದ್ದ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಬೇರೆ ತಿರುವು ಪಡೆದುಕೊಂಡಿದೆ.
ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಜನಪ್ರತಿನಿಧಿಗಳ ತೇಜೋವಧೆ ಮಾಡಿ ಅವರ ಗೌರವಕ್ಕೆ ಧಕ್ಕೆ ಬರುವಂತೆ ಬ್ಲಾಕ್ ಮೇಲ್ ಮಾಡುತ್ತಿರುವ ಖಾಸಗಿ ಮಾಧ್ಯಮ ಪವರ್ ಟಿವಿ ಮುಖ್ಯಸ್ಥರು ಹಾಗೂ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಸೂಚಿಸಿದೆ.
ಈ ವಿಷಯದ ಕುರಿತಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅವರು ದಿನಾಂಕ 3-11-2016ರಂದು ನೀಡಿದ್ದ ದೂರಿನ ಅನ್ವಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿ ಪವರ್ ಟಿವಿ ಮಾಲಿಕ ಹಾಗೂ ಅಲ್ಲಿನ ಉದ್ಯೋಗಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ಕೇಳಿದೆ.
ಮೇಲ್ಕಂಡ ವಿಷಯಕ್ಕೆ ಉಲ್ಲೇಖ ಮತ್ತು ಪತ್ರಗಳನ್ನು ಪೋಲಿಸ್ ಮಹಾ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಅಡಕಗೊಳಿಸಲಾಗಿದೆ. ಈ ಪತ್ರದಲ್ಲಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಆಡಳಿತ ಪಕ್ಷದ ಸಚಿವರು, ಶಾಸಕರು ಮತ್ತು ವಿರೋಧ ಪಕ್ಷದ ಶಾಸಕರಿಗೆ ಹಣದ ಆಮಿಷ ಒಡ್ಡಿ ಅಪರಾಧಗಳಿಗೆ ಪ್ರಚೋದಿಸಿ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರ ಗೌರವಕ್ಕೆ ಧಕ್ಕೆ ತರುತ್ತಿರುವ ಪವರ್ ಟಿವಿ, ಅದರ ಮುಖ್ಯಸ್ಥರು, ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಪ್ರಸ್ತಾಪಿಸಿರುವ ಅಂಶಗಳ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪತ್ರದಲ್ಲಿ ಬರೆದಿದ್ದಾರೆ.
ಅವರ ಇಲಾಖೆಯ ಅಧೀನ ಕಾರ್ಯದರ್ಶಿ ಅಂಬಿಕಾ ಅವರು ಸಹಿ ಮಾಡಿರುವ ಪತ್ರವು ದಿನಾಂಕ 20-11-2016ರಂದು ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪವರ್ ಟಿವಿ ಮಾಲೀಕರು, ಉದ್ಯೋಗಿಗಳ ವಿರುದ್ಧ ತನಿಖೆ ನಡೆಸಿ ಕ್ರಮ.ಜರುಗಿಸುವ ಅನಿವಾರ್ಯ ಪ್ರತಿಸ್ಥಿತಿಗೆ ಒಳಗಾಗಿದೆ

ಸುರೇಶ್ ಬಾಬು ಅವರು ನೀಡಿರುವ ದೂರಿನಲ್ಲಿ ಏನಿದೆ?
ವಿಧಾನಸಭೆಯಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ದಾಖಲೆಗಳ ಸಮೇತ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಯವರಿಗೆ ರಾಜ್ಯಪಾಲರು ಪತ್ರ ಬರೆದಿದ್ದರು.
ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಸುಳ್ಳು ಯೋಜನೆಗಳನ್ನು ಸೃಷ್ಠಿಸಿ, ಆಡಳಿತ ಪಕ್ಷದ ಸಚಿವರು, ಶಾಸಕರು ಹಾಗೂ ವಿರೋಧ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿ, ಕಾನೂನುಬಾಹಿರ ಕಾರ್ಯ ಎಸಗಲು ಪ್ರಚೋದಿಸಿ, ಜನಪ್ರತಿನಿಧಿಗಳ ತೇಜೇವಧೆ ಮಾಡಿ, ಗೌರವಕ್ಕೆ ಧಕ್ಕೆ ಬರುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪವರ್ ಟಿವಿ ಮುಖ್ಯಸ್ಥ ಹಾಗೂ ನೌಕರರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಬು ರಾಜ್ಯಪಾಲರನ್ನು ಕೋರಿದ್ದರು.
ಜನಪ್ರತಿನಿಧಿಗಳಾದ ಪುಟ್ಟರಂಗ ಶೆಟ್ಟಿ, ರಘುಮೂರ್ತಿ, ಶಿವಲಿಂಗೇಗೌಡ, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್, ಬಿ.ನಾಗೇಂದ್ರ, ಬಸವನಗೌಡ ದದ್ದಲ್, ಕೆ.ವೈ.ನಂಜೇಗೌಡ, ಬಸವನಗೌಡ ತುರುವಿಹಾಳ್, ಸಂಗಮೇಶ್, ಜೆ.ಎನ್.ಗಣೇಶ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ 28 ಶಾಸಕರ ವಿರುದ್ಧ ಹಣಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂದು ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದ್ದರು.
ಜನಪ್ರತಿನಿಧಿಗಳ ತೇಜೋವಧೆ
ಹಾಸನ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸ್ವರೂಪ್ ಪ್ರಕಾಶ್ ವಿರುದ್ಧವೂ ಇದೇ ತಂಡ ಇತ್ತೀಚೆಗೆ ಇಂತಹದ್ದೇ ಕಾರ್ಯಾಚರಣೆ ನಡೆಸಿ ಅವರ ತೇಜೋವಧೆ ಮಾಡಿದೆ.ಹದಿಮೂರು ಸದಸ್ಯರ ಹೆಸರನ್ನು ನಮೂದಿಸಿರುವ ಸುರೇಶ್, ಉಳಿದವರ ಹೆಸರುಗಳನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಇರಿಸಿದ್ದಾರೆ.
ಸಮಾಜಕ್ಕೆ ಮಾರಕವಾಗಿರುವ ಡ್ರಕ್ಸ್ ದಂಧೆ, ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಟ, ನಕಲಿ ನೋಟು ಚಲಾವಣೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಹಿರಂಗಪಡಿಸಲು ಮಾರುವೇಶದ ಕಾರ್ಯಾಚರಣೆ ನಡೆಸಲಾಗುತ್ತದೆ.
ಹಣ ವಸೂಲಿ ಉದ್ದೇಶ
ಆದರೆ, ಅಸ್ಥಿತ್ವದಲ್ಲೇ ಇಲ್ಲದ ಸುಳ್ಳು ಯೋಜನೆಗಳನ್ನು ಸೃಷ್ಠಿಸಿ, ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳನ್ನು ಬ್ಲಾಕ್‌ಮೇಲ್ ಮಾಡಿ, ಹಣ ವಸೂಲಿ ಮಾಡುವ ಉದ್ದೇಶದಿಂದಲೇ ಈ ಖಾಸಗಿ ಟಿವಿ ಸ್ಟಿಂಗ್ ಆಪರೇಷನ್ ಮಾಡುತ್ತಿದೆ.ಸರ್ಕಾರ ಮತ್ತು ಸಮಾಜದ ಹುಳುಕನ್ನು ಹೊರತೆಗೆಯುವ ಉದ್ದೇಶ ಇವರದ್ದಾಗಿರಲಿಲ್ಲ, ಎಲ್ಲವೂ ಬ್ಲಾಕ್‌ಮೇಲ್‌ಗಾಗಿ ತಮ್ಮ ಕಚೇರಿ ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂ. ವಸೂಲಿ ಮಾಡುತ್ತಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ, ದೇಶದ ಭದ್ರತೆ ಅಥವಾ ವ್ಯವಸ್ಥೆಯ ಸುಧಾರಣೆ ಆಗಬೇಕು, ಆದರೆ, ಯಾವುದೇ ಖಾಸಗಿ ವ್ಯಕ್ತಿಯ ವೈಯಕ್ತಿಕ ಲಾಭ ಅಥವಾ ಸುದ್ದಿವಾಹಿನಿಯ ಟಿಆರ್‌ಪಿಗಾಗಿ ಬಳಸುವಂತಿಲ್ಲ ಎಂಬುದಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ತನ್ನ ನಿಯಮಗಳಲ್ಲಿ ಉಲ್ಲೇಖಿಸಿದೆ.
ಬೆದರಿಸಿ ವಸೂಲಿ ತಂತ್ರ
ಪಿಸಿಐನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸ್ಟಿಂಗ್ ಆಪರೇಷನ್ ಮೂಲಕ ಬೆದರಿಸಿ, ವಸೂಲಿ ಮಾಡುವ ತಂತ್ರ ಇವರದ್ದಾಗಿದೆ ಎಂದು ರಾಜ್ಯಪಾಲರಿಗೆ ದಾಖಲೆ ಸಮೇತ ಸುರೇಶ್ ಬಾಬು ಮನವರಿಕೆ ಮಾಡಿಕೊಟ್ಟಿದ್ದರು.
ನವೆಂಬರ್ 3 ರಂದು ಸಲ್ಲಿಸಿದ್ದ ದೂರನ್ನು ರಾಜ್ಯಪಾಲರು ಪರಿಶೀಲಿಸಿದ ನಂತರ ನವೆಂಬರ್ 9 ರಂದು ಸರ್ಕಾರಕ್ಕೆ ಕಳುಹಿಸಿ ಈ ಬಗ್ಗೆ ತನಿಖೆ ಮಾಡಿ, ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.
ಜನಸೇವೆಯಲ್ಲಿ ತೊಡಗಿರುವ ಸಚಿವ, ಶಾಸಕರನ್ನು ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಕಾನೂನುಬಾಹಿರ ಕೃತ್ಯ ಎಸಗುವಂತೆ ಪ್ರಚೋದಿಸಿ, ಅವರುಗಳ ತೇಜ್ಯೋವಧೆ, ಗೌರವಕ್ಕೆ ಧಕ್ಕೆ ತರುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಖಾಸಗಿ ಮಾಧ್ಯಮದ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಂಸ್ಥೆ ನೌಕರರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಮಾಡಿದ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದರು.
ಸಿ.ಬಿ.ಸುರೇಶ್ ಬಾಬು ಅವರು ರಾಜ್ಯಪಾಲರಿಗೆ ಬರೆದ ಪತ್ರ.

















