ಬೆಂಗಳೂರು: ದಿನೇದಿನೆ ಕೋವಿಡ್ ಸೋಂಕಿತರ ಸಂಖ್ಯೆ ಗಗನಮುಖಿ ಆಗುತ್ತಿರುವ ಬೆನ್ನಲ್ಲಿಯೇ, ಹಾಸಿಗೆಗಳ ಕೊರತೆಯನ್ನು ನೀಗಿಸಲು ಮೊಬೈಲ್ ಐಸಿಯುಗಳು ರೆಡಿಯಾಗಿವೆ. ಇವುಗಳನ್ನು ಮಡಿಕಲ್ ಪರಿಭಾಷೆಯಲ್ಲಿ ’ಮಾಡ್ಯೂಲರ್ ಐಸಿಯು’ಗಳೆಂದು ಕರೆಯಲಾಗುತ್ತದೆ.
ಇವುಗಳ ಅನುಕೂಲವೆಂದರೆ, ಎಲ್ಲಿಗೆ ಬೇಕಾದರೂ ಇವುಗಳನ್ನು ಸುಲಭವಾಗಿ ಸಾಗಿಸಬಹುದು. ಸುಲಭವಾಗಿ ಇಡಬಹುದು. ಜತೆಗೆ ನಿರ್ವಹಣೆಯೂ ಅತ್ಯಂತ ಸುಲಭ. ಪ್ರಾಯೋಗಿಕವಾಗಿ ಇವುಗಳನ್ನು ಮೊದಲು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ. ಅಲ್ಲಿ ಒಮ್ಮೆಲೆ ಇಂಥ ಐದು ಐಸಿಯುಗಳನ್ನು ಹಾಕಲಾಗುತ್ತಿದ್ದು, ಪ್ರತಿ ಐಸಿಯುನಲ್ಲಿ ಐದು ಸುಸಜ್ಜಿತ, ಅತ್ಯಾಧುನಿಕ ಹಾಸಿಗೆಗಳು ಇರುತ್ತವೆ.
ಹೇಗಿರುತ್ತವೆ?:
ಇದರ ಗಾತ್ರ 40’x 11’x 9’. ಸಾಮಾನ್ಯವಾಗಿ ಹಡಗುಗಳಲ್ಲಿ ಸರಕು ಸಾಗಾಣಿಕೆಗೆ ಬಳಸಲಾಗುವ ಬೃಹತ್ ಗಾತ್ರದ ಕಂಟೈನರುಗಳಲ್ಲಿಈ ಐಸಿಯುಗಳನ್ನು ಡೆವಲಪ್ ಮಾಡಲಾಗಿದೆ. ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ’ರಿನ್ಯಾಕ್’ ಎಂಬ ಕಂಪನಿ ಇವುಗಳನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸಾಗಿಸುವುದು ಅತ್ಯಂತ ಸುಲಭ. ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯವನ್ನು ಹೊಂದಿರುತ್ತವೆ. ಇವುಗಳನ್ನು ಜಾಗತಿಕ ಗುಣಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ.
ಏನೇನಿರುತ್ತದೆ?:
ಆಮ್ಲಜನಕ ವ್ಯವಸ್ಥೆ ಜತೆಗೆ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಕಂಪ್ಲೀಟ್ ಏರ್’ಟೈಟ್ ಆಗಿರುತ್ತದೆ. ಕ್ಯಾಮೆರಾ ಕೂಡ ಇದ್ದು, ಆನ್’ಲೈನ್ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನುಅಳವಡಿಸಲಾಗಿದೆ. ಎಲ್ಲ ಕಂಟೈನರುಗಳಲ್ಲಿ ಶುದ್ಧ ಗಾಳಿಯನ್ನು ತುಂಬಿಸಲಾಗಿದೆ. ಪ್ರತ್ಯೇಕವಾದ ಸಿವಿಯೇಜ್ ಮತ್ತು ನೀರಿನ ಸಂಪರ್ಕವೂ ಇರುತ್ತದೆ. ಪ್ರತಿ ಕಂಟೈನರ್’ಗೆ 5 ಬೆಡ್ ಇದ್ದು, ಅದಕ್ಕೆ ಇನ್ನೊಂದು ಕಂಟೈನರ್ ಸೇರಿದರೆ 10 ಬೆಡ್’ಗಳಾಗುತ್ತವೆ. ಆಗ ಅದನ್ನು ಪ್ರತ್ಯೇಕ ನರ್ಸಿಂಗ್ ಹಾಗೂ ಮಾನಿಟರಿಂಗ್ ಸ್ಟೇಷನ್ ಎಂದು ಪರಿಗಣಿಸಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಆ ವ್ಯವಸ್ಥೆಯೂ ಪ್ರತ್ಯೇಕವಾಗಿರುತ್ತದೆ. ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು ಎಂದು ’ರಿನ್ಯಾಕ್’ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು.
ವಿನೂತನ ಪ್ರಯೋಗ:
ಸರಕು ಸಾಗಣೆ ಮಾಡುವ ಕಂಟೈನರುಗಳಲ್ಲಿ ಐಸಿಯು ಮಾಡಬಹುದು ಎಂಬ ಆಲೋಚನೆಯೇ ವಿನೂತನ. ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ನಮ್ಮ ರಾಜ್ಯದಲ್ಲಿ ಸಿದ್ಧಪಡಿಸಲಾಗಿದೆ. ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ’ರಿನಾಕ್’ ಕಂಪನಿಯ ಹಿರಿಯ ಉಪಾಧ್ಯಕ್ಷ ಸೋಜಿ ಅಬ್ರಹಾಂ, “ಕೇವಲ 10ರಿಂದ 15ದಿನಗಳಲ್ಲಿಇಷ್ಟು ಬೆಡ್’ಗಳನ್ನು ಸಿದ್ಧಪಡಿಸಲಾಗಿದೆ. ಈ ಐಡಿಯಾ ಬಹಳ ಹೊಸತು, ಈಗಿನ ಪರಿಸ್ಥಿತಿಗೆ ಹೆಚ್ಚು ಅನುಕೂಲ. ಸರಕಾರಕ್ಕೆ ಅಗತ್ಯಬಿದ್ದಷ್ಟು ಮಾಡ್ಯೂಲರ್ ಐಸಿಯುಗಳನ್ನು ನಾವು ಒದಗಿಸಬಲ್ಲೆವು. ಜಾಗತಿಕ ಗುಣಮಟ್ಟಕ್ಕೆ ಯಾವುದೇ ರೀತಿಯಲ್ಲೂ ತೆಗೆದುಹೋಗದಂತೆ, ಅದಕ್ಕಾಗಿ ಉತ್ತಮವಾಗಿ ನಾವು ಇವುಗಳನ್ನು ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.
ಕೆಸಿಜೆಗೆ 10 ಕಂಟೈನರ್:
ಪ್ರಾಯೋಗಿಕವಾಗಿ ಮೊದಲಿಗೆ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಹತ್ತು ಕಂಟೈನರು ಗಳನ್ನುಒದಗಿಸಲಾಗುತ್ತಿದೆ. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ಪ್ರತಿ ಕಂಟೈನರಿಗೆ 5 ಹಾಸಿಗೆಗಳು ಇರುತ್ತವೆ. ಕೋವಿಡ್ ನಂತರವೂ ಇವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಸ್ಥಳಾಭಾವ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ, ಜಿಲ್ಲಾ ಮತ್ತು ಪಂಚಾಯಿತಿ ಮಟ್ಟದ ಆಸ್ಪತ್ರೆಗಳಲ್ಲೂ ಇವುಗಳನ್ನು ಇರಿಸಬಹುದಾಗಿದೆ.