- ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿಯನ್ನು ರೂಪಿಸಿದೆ. ಕರ್ನಾಟಕ ರಾಜ್ಯ ಆ ನೀತಿಯನ್ನು ತಾನೇ ಮೊದಲು ಜಾರಿಗೆ ತರಲು ಹೊರಟಿದೆ. ಇತರೆ ರಾಜ್ಯಗಳೂ ಅದೇ ದಿಕ್ಕಿನಲ್ಲಿ ನಾ ಮುಂದು, ತಾ ಮುಂದು ಎಂದು ರೇಸಿಗೆ ಬಿದ್ದಿವೆ. ಆದರೆ, 50 ವರ್ಷಗಳ ಹಿಂದೆಯೇ ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಪ್ರಖರವಾಗಿ ಮಾತನಾಡಿದ್ದ ಓಶೋ, ಯಾರಿಗೂ ಹೊಳೆಯದ ಶಿಕ್ಷಣದ ಹೊಸ ಹಾದಿಯತ್ತ ಬೆಳಕು ಚೆಲ್ಲಿದ್ದರು. ತಮ್ಮ ಉಪನ್ಯಾಸ ಮಾಲಿಕೆಯಲ್ಲಿ ‘ಶಿಕ್ಷಣ, ಶಿಕ್ಷಕ’ ಹೇಗಿರಬೇಕು? ನಿಜಾರ್ಥದಲ್ಲಿ ‘ಕ್ರಾಂತಿ’ ಎಂದರೆ ಏನು? ಅದು ಹೇಗಾಗುತ್ತದೆ ಎಂದು ಅವರು ಹೇಳಿದ್ದರು. ಅವರ ಪ್ರತಿಮಾತು ಸಾರ್ವಕಾಲಿಕ ಮತ್ತು ಸತ್ಯ. ಶಿಕ್ಷಣ ನೀತಿ ಚರ್ಚೆಯ ಹೊತ್ತಿನಲ್ಲಿ ಓಶೋ ಮಾತುಗಳನ್ನು ಮತ್ತೊಮ್ಮೆ ಕೇಳುವುದು ಅತ್ಯಂತ ಜರೂರು. ಈಗಂತೂ ಓಶೋ ಉಪನ್ಯಾಸಗಳು ಅತ್ಯಂತ ಪ್ರಸ್ತುತ.
- ಇದೇ ವೇಳೆ, ಶಿಕ್ಷಣ ಕುರಿತ ಓಶೋ ಉಪನ್ಯಾಸಗಳ ಗುಚ್ಛವನ್ನು ಜೇಪಿ (ಬಿ.ಎಸ್. ಜಯಪ್ರಕಾಶ ನಾರಾಯಣ) ಕನ್ನಡಕ್ಕೆ ತಂದಿದ್ದಾರೆ. ಕೃತಿಯ ಹೆಸರು ಶಿಕ್ಷಣ ಕ್ರಾಂತಿಗೆ ಆಹ್ವಾನ. ಸಮನ್ವಿತ ಬಳಗದ ಕೆ.ವಿ. ರಾಧಾಕೃಷ್ಣ ಈ ಕೃತಿಯನ್ನು ಪ್ರಕಾಶಿಸಿದ್ದಾರೆ. ಇತ್ತೀಚೆಗಷ್ಟೇ ಓದುಗರ ಕೈಸೇರಿ ಸಂಚಲನ ಸೃಷ್ಟಿಸಿದೆ. ಈ ಪುಸ್ತಕದಲ್ಲಿ ಒಟ್ಟು 9 ಉಪನ್ಯಾಸಗಳಿದ್ದು, ಆ ಪೈಕಿ ಒಂದು ಪ್ರಮುಖ ಅಧ್ಯಾಯವು (ಶಿಕ್ಷಕ, ಸಮಾಜ ಮತ್ತು ಕ್ರಾಂತಿ) ಸಿಕೆನ್ಯೂಸ್ ನೌ ಓದುಗರಿಗಾಗಿ..
- ಇದು ದೀರ್ಘ ಲೇಖನ. ಕೆಲ ಭಾಗಗಳಲ್ಲಿ ವಿಭಜಿಸಿ ಪ್ರಕಟಿಸಿದರೆ ಓಶೋರವರ ಪ್ರಖರ ನುಡಿಗಳ ಸ್ವಾದ ಮತ್ತು ಪ್ರಭಾವಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಒಮ್ಮೆಲೆ ಅಷ್ಟೂ ಲೇಖನವನ್ನು ಪ್ರಕಟಿಸಲಾಗಿದೆ. ಓದಿ ಮತ್ತು ಯೋಚಿಸಿ..
ಗೆಳೆಯರೇ,
ಈ ಸಮಾಜ ಮತ್ತು ಶಿಕ್ಷಕರಿಗೆ ಸಂಬಂಧಿಸಿದಂತೆ ನಾನು ಕಣ್ಣಾರೆ ಕಂಡಿರುವ ಕೆಲವು ವಿಚಾರಗಳನ್ನು ನಿಮಗೆ ಹೇಳಬಯಸುತ್ತೇನೆ. ಅಂದಂತೆ, ನಾನು ಯೋಚಿಸುವ ಕ್ರಮ ಮತ್ತು ನೀವು ಯೋಚಿಸುವ ಕ್ರಮ ಎರಡೂ ಒಂದೇ ಥರ ಇರಬೇಕೆಂಬ ಒಪ್ಪಂದವೇನೂ ನಮ್ಮ ನಡುವೆ ಇಲ್ಲ! ಇವತ್ತಿನ ಸಂದರ್ಭದಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ತೆಗೆದುಕೊಂಡಿರುವ ನಿಲುವುಗಳನ್ನು ನಾನು ವಿರೋಧಿಸಬಹುದು. ಮೂಲತಃ ನಾನು ಶಿಕ್ಷಣ ತಜ್ಞನೂ ಅಲ್ಲ; ಸಾಮಾಜಿಕ ಸುಧಾರಕನೂ ಅಲ್ಲ. ಆದರೂ ನಾನು ಶಿಕ್ಷಣ ಮತ್ತು ಸಮಾಜಕ್ಕೆ ಸಂಬಂಧಪಟ್ಟಂತಹ ಕೆಲವು ಮೂಲಭೂತ ಸಂಗತಿಗಳ ಬಗ್ಗೆ ಮಾತನಾಡಬಲ್ಲೆ. ಇದು ನನ್ನ ಅದೃಷ್ಟವೇ ಸರಿ!
ನಮ್ಮಲ್ಲಿ ಶಿಕ್ಷಣತಜ್ಞರೆಂದು ಹೇಳಿಕೊಳ್ಳುವವರ ತಲೆಯೊಳಗೆ ಶಿಕ್ಷಣದ ಬಗ್ಗೆ ಒಂದೇ ಒಂದು ಅಕ್ಕಿಕಾಳಿನಷ್ಟು ವಿಚಾರವೂ ಇಲ್ಲ. ಅಕಸ್ಮಾತ್ ಇದ್ದರೂ ಅದರಲ್ಲಿ ಲವಲೇಶದಷ್ಟೂ ಸತ್ಯವಿಲ್ಲ. ಈ ಮಂದಿ ಕಳೆದ ಐದು ಸಾವಿರ ವರ್ಷಗಳಿಂದಲೂ ಚಿಂತಿಸುತ್ತಲೇ ಇದ್ದಾರೆ, ನಿಜ. ಆದರೆ ಇವತ್ತು ಶಿಕ್ಷಣದ ಪರಿಸ್ಥಿತಿ, ಅದರ ಸಂರಚನೆ, ಅದು ಸೃಷ್ಟಿಸುತ್ತಿರುವ ಮನುಷ್ಯರ ಮಟ್ಟ ಎಲ್ಲವೂ ಹೀನಾಯವಾಗಿವೆ. ಇವೆಲ್ಲವುಗಳ ಫಲವಾಗಿ ನಮ್ಮಲ್ಲಿಂದು ಬರೀ ಅನಾರೋಗ್ಯಕರ ಮನಸ್ಸೇ ಇರುವ ಮತ್ತು ಗೊಂದಲಕ್ಕೆ ಈಡಾಗಿರುವ ನಾಯಕರೇ ಎಲ್ಲೆಡೆಯೂ ಕಂಡುಬರುತ್ತಿದ್ದಾರೆ. ಇದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಇನ್ನು ಸಮಾಜವಾದಿಗಳ ವಿಚಾರಕ್ಕೆ ಬಂದರೆ, ಅವರ ಹಣೆಬರಹವೂ ಅಷ್ಟೇ! ಅವರ ಚಿಂತನೆಯೂ ರೋಗಗ್ರಸ್ತವಾಗಿದೆ; ಅನಾರೋಗ್ಯಪೀಡಿತವಾಗಿದೆ. ಇಲ್ಲದೆ ಹೋಗಿದ್ದರೆ ಎಲ್ಲರ ಬದುಕು ಮತ್ತು ಚಿಂತನೆಗಳೆರಡೂ ನಿಜಕ್ಕೂ ಚೆನ್ನಾಗಿರುತ್ತಿದ್ದವು. ಮೊದಲೇ ಹೇಳಿದಂತೆ ನಾನು ಶಿಕ್ಷಣ ತಜ್ಞನೂ ಅಲ್ಲ, ಸಮಾಜಶಾಸ್ತ್ರಜ್ಞನೂ ಅಲ್ಲ. ಆದ್ದರಿಂದ, ಶಿಕ್ಷಣ ಮತ್ತು ಸಮಾಜ ಎರಡೂ ಕಡೆ ಇರುವ ಸಮಸ್ಯೆಗಳನ್ನು ನಾನು ನೇರವಾಗಿ ನೋಡಬಲ್ಲೆನೆಂದು ನಿಮಗೆ ಹೇಳಬಲ್ಲೆ. ಕೆಲವರಿಗೆ ಎಲ್ಲಕ್ಕಿಂತ ಕಾನೂನುಗಳೇ ಹೆಚ್ಚು ಮುಖ್ಯವಾಗಿರುತ್ತವೆ. ಇಂಥವರಿಗೆ ಸಮಸ್ಯೆಗಳಿಗಿಂತ ಹೆಚ್ಚಾಗಿ ಪರಿಹಾರಗಳು ಹೆಚ್ಚು ಮುಖ್ಯವಾಗುತ್ತವೆ. ಇಷ್ಟಕ್ಕೂ ನನಗೆ ಶಿಕ್ಷಣ ವ್ಯವಸ್ಥೆಯ ರೂಪುರೇಷೆಗಳ ಬಗ್ಗೆ ಗೊತ್ತಿಲ್ಲ. ಹೀಗಾಗಿ, ನಾನು ಇಲ್ಲಿರುವ ಸಮಸ್ಯೆಗಳ ಬಗ್ಗೆಯೇ ನೇರವಾಗಿ ಮಾತನಾಡಬಹುದು.
ಶಿಕ್ಷಕರಿಗೆ ಅಪಮಾನ
ಈ ಬಗ್ಗೆ ನಾನು ಎಲ್ಲಕ್ಕಿಂತ ಮೊದಲು ಒಂದು ಸಂಗತಿಯನ್ನು ಹೇಳಿಬಿಡುತ್ತೇನೆ. ಅದೇನೆಂದರೆ, ಈಗ ಶಿಕ್ಷಕ ಮತ್ತು ಸಮಾಜದ ನಡುವೆ ಇರುವ ಸಂಬಂಧದ ಸ್ವರೂಪವಿದೆಯಲ್ಲ, ಅದು ತುಂಬಾ ಅಪಾಯಕಾರಿ ಆಗಿದೆ. ಹಾಗಾದರೆ, ಈ ಸಂಬಂಧದ ಚಹರೆಗಳೇನೆಂಬ ಪ್ರಶ್ನೆ ಸಹಜ. ಇಲ್ಲಿ ಶಿಕ್ಷಕ ಗುಲಾಮನಾಗಿದ್ದು, ಸಮಾಜವೇ ಅವನನ್ನು ಆಳುತ್ತಿದೆ. ಈ ಸಮಾಜವು ಒಬ್ಬ ಶಿಕ್ಷಕ ಏನು ಮಾಡಬೇಕೆಂದು ಬಯಸುತ್ತಿದೆ ಗೊತ್ತೇ? ಅದೇ ಸಾವಿರಾರು ವರ್ಷಗಳ ಅಸಡ್ಡಾಳ ಚಿಂತನಾಕ್ರಮ, ಅದೇ ಹಳೆಯ ಹೊಟ್ಟೆಕಿಚ್ಚು, ಅದೇ ಪುರಾತನ ಶತ್ರುತ್ವ ಇವುಗಳನ್ನೇ ಎಳೆಯ ವಯಸ್ಸಿನ ವಿದ್ಯಾರ್ಥಿಗಳಿಗೆ ಕಲಿಸಬೇಕೆಂದು ಹೇಳುತ್ತಿದೆ! ಜೀವಂತಶವಗಳಂತಿರುವ ಮುಪ್ಪಾನುಮುದುಕರಂತೂ ಹೊಸ ತಲೆಮಾರಿನ ಮಕ್ಕಳಿಗೂ ಇದನ್ನೇ ವರ್ಗಾಯಿಸಬೇಕೆಂದು ಕಣಿ ಹೇಳುತ್ತಿದ್ದಾರೆ. ಒಬ್ಬ ಶಿಕ್ಷಕನಿಂದ ಒಂದು ಸಮಾಜವು ಇಂತಹ ಕೆಲಸವನ್ನು ಬಯಸುತ್ತಿರುವುದು ಮತ್ತು ಶಿಕ್ಷಕನಾದವನು ಈಗಲೂ ಇದನ್ನೇ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಶಿಕ್ಷಕರಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಏಕೆಂದರೆ, ಹಿಂದಿನ ಶತಮಾನಗಳೆಲ್ಲವೂ ಯಾವ್ಯಾವ ಬಗೆಯ ಕಾಯಿಲೆಗಳಿಂದ ನರಳಿದವೋ ಆ ಕಾಯಿಲೆಗಳನ್ನೆಲ್ಲ ಈ ಸಮಾಜಕ್ಕೆ ಅತ್ಯಗತ್ಯವೇನೋ ಎನ್ನುವಂತೆ ಈ ಶಿಕ್ಷಕರುಗಳ ಮೂಲಕ ಈ ಶತಮಾನದಲ್ಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ನಮ್ಮಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಹಳೆಯ ವ್ಯವಸ್ಥೆಯೇ ಬೇಕಾಗಿದೆ. ಇವರೆಲ್ಲರಿಗೂ ಈ ಹಳೆಯ ವ್ಯವಸ್ಥೆಯೊಂದಿಗೆ ಬಲವಾದ ನಂಟಿದೆ. ಇಷ್ಟಾಗಿಬಿಟ್ಟರೆ, ಈ ಗತಕಾಲದ ವ್ಯವಸ್ಥೆಯೊಂದಿಗೇ ತಳುಕು ಹಾಕಿಕೊಂಡಿರುವ ಕುರುಡು ನಂಬಿಕೆಗಳು ಸಾಯಲು ಇಷ್ಟಪಡುವುದಿಲ್ಲ! ಇವು ಯಾವತ್ತಿಗೂ ಈ ಸಮಾಜದ ಜೊತೆಯೇ ಇರಬಯಸುತ್ತವೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರಲ್ಲವೇ? ಈ ಕಾರಣಕ್ಕಾಗಿ ಅವರಿಗೆ ಎಲ್ಲರೂ ಮರ್ಯಾದೆ ಕೊಡುತ್ತಾರೆ. ಶಿಕ್ಷಕರನ್ನು ಹೊಗಳಿ ಹೊಗಳಿ ಮತ್ತು ಅವರಿಗೆ ಯದ್ವಾತದ್ವಾ ಮರ್ಯಾದೆ ಕೊಡುತ್ತಲೇ ಅವರಿಂದ ಇಂಥ ಅಪಮಾನಕರವಾದ ಕೆಲಸವನ್ನು ಮಾಡಿಸಲಾಗುತ್ತಿದೆ. ಇಲ್ಲದಿದ್ದರೆ, ಅವರು ಈಗ ಮಾಡುತ್ತಿರುವಂಥ ಕೆಲಸವನ್ನು ಮಾಡಬೇಕೆಂದು ಹೇಳಲು ಸಾಧ್ಯವೇ ಇಲ್ಲ. ಹೀಗೆ ಮಾಡುತ್ತಲೇ ಅವರಿಗೆ ’ಗುರು’ವಿನ ಪಟ್ಟದಲ್ಲಿ ಕೂರಿಸಲಾಗಿದೆ. ಇಷ್ಟೇ ಅಲ್ಲ, ಅವರು ಹೇಳಿದ್ದಕ್ಕೆಲ್ಲ ಕೋಲೆಬಸವನಂತೆ ತಲೆಯಾಡಿಸಬೇಕು ಎಂದು ಮಾಡಿಡಲಾಗಿದೆ. ಯಾಕೆ? ಇಡೀ ಸಮಾಜವು ತಾನು ಗತಕಾಲದಿಂದಲೂ ಪೋಷಿಸಿಕೊಂಡು ಬಂದಿರುವ ಹುರುಳಿಲ್ಲದ ನಂಬಿಕೆಗಳನ್ನೆಲ್ಲ ಮಕ್ಕಳಿಗೂ ದಾಟಿಸಬೇಕೆಂದು ಹಂಬಲಿಸುತ್ತಿರುತ್ತದೆ. ಇದಕ್ಕೆ ಶಿಕ್ಷಕ ಒಬ್ಬ ದಲ್ಲಾಳಿ ಅಷ್ಟೆ!
ಹಿಂದೂ ಆಗಿರುವ ಒಬ್ಬ ತಂದೆಯು ತನ್ನ ಮಗನನ್ನೂ ಹಿಂದೂವನ್ನಾಗಿ ಮಾಡಬೇಕೆಂದೇ ಬಯಸುತ್ತಾನೆ; ಹಾಗೆಯೇ, ಒಬ್ಬ ಮುಸ್ಲಿಂ ಕೂಡ ತಾನು ಸಾಯುವುದಕ್ಕೂ ಮೊದಲು ತನ್ನ ಮಗನನ್ನು ಮುಸ್ಲಿಮನನ್ನಾಗಿಯೇ ಮಾಡಬೇಕೆಂದು ಹಪಹಪಿಸುತ್ತಾನೆ. ಇಷ್ಟೇ ಅಲ್ಲ, ಈ ಹಿಂದೂ ತಂದೆಯು ತನಗೆ ತಲೆತಲಾಂತರದಿಂದಲೂ ಈ ಮುಸ್ಲಿಮರೊಂದಿಗಿರುವ ಕ್ಯಾತೆಗಳನ್ನೆಲ್ಲ ತನ್ನ ಮಗನೂ ಮುಂದುವರಿಸಿಕೊಂಡು ಹೋಗಬೇಕೆಂದು ಆಸೆಪಡುತ್ತಾನೆ. ಇದನ್ನೆಲ್ಲ ಮಾಡುವವರು ಯಾರು? ಶಿಕ್ಷಕ! ಹಳೆಯ ತಲೆಮಾರಿನ ಜನರು ತಮ್ಮ ಕುರುಡುನಂಬಿಕೆಗಳನ್ನೆಲ್ಲ ಹೊಸ ತಲೆಮಾರಿನ ಮೇಲೆ ಹೇರಬೇಕೆಂದು ಹಠಕ್ಕೆ ಬೀಳುತ್ತಾರೆ. ಹೀಗಾದಾಗ ಬರೀ ಕುರುಡುನಂಬಿಕೆಗಳನ್ನಷ್ಟೇ ಹೇರುವುದಿಲ್ಲ. ಜತೆಜತೆಯಲ್ಲೇ ಓಬೀರಾಯನ ಕಾಲದ ಕಾನೂನುಕಟ್ಟಳೆಗಳು, ಪುರೋಹಿತಶಾಹಿಗಳು ಮತ್ತು ಉಳಿದ ನೂರೆಂಟು ಸಂಗತಿಗಳನ್ನೂ ಹೇರಲಾಗುತ್ತದೆ. ಇದನ್ನೆಲ್ಲ ಶಿಕ್ಷಕರ ಮೂಲಕವೇ ಮಾಡಿಸಲಾಗುತ್ತದೆ. ಹೀಗಾದರೆ, ಇದರಿಂದ ಬರುವ ಫಲಿತಾಂಶವಾದರೂ ಏನು?
ಇದರಿಂದಾಗಿ, ಜಗತ್ತಿನಲ್ಲಿ ಲೌಕಿಕ ಸಂಪತ್ತೇನೋ ವೃದ್ಧಿಸಿದೆ. ಆದರೆ, ಮನುಷ್ಯನ ಮಿದುಳು ಮಾತ್ರ ಸ್ತಬದ್ಧವಾಗಿದೆ; ಅದು ಶತಶತಮಾನಗಳಿಂದ ವಿಕಸನವನ್ನೇ ಕಂಡಿಲ್ಲ. ಎಲ್ಲಿಯವರೆಗೆ ಮಕ್ಕಳ ಮೇಲೆ ಈ ಓಬೀರಾಯನ ಕಾಲದ ಸಂಗತಿಗಳ ಹೊರೆ ಇರುತ್ತದೋ ಅಲ್ಲಿಯವರೆಗೂ ಹಣೆಬರಹ ಇಷ್ಟೇ! ಅಂದರೆ, ಮಕ್ಕಳ ಮನಸ್ಸು ಬೆಳೆಯಲಾರದು. ಏಕೆಂದರೆ, ನಮ್ಮ ಎಳೆಯ ಮಕ್ಕಳ ಮೇಲೆ ಐದು ಸಾವಿರ ವರ್ಷಗಳ ಇಂತಹ ಹೊರೆ ಇದೆ. ಈ ಹೊರೆಯಡಿ ನಾವು ನಮ್ಮ ಪುಟ್ಟಪುಟ್ಟ ಮಕ್ಕಳನ್ನು ಹೊಸಕಿ ಹಾಕುತ್ತಿದ್ದೇವೆ. ಇದರಿಂದಾಗಿ, ನಮ್ಮ ಮಕ್ಕಳಲ್ಲಿ ಅರಿವಿನ ದೀಪವೇ ನಂದಿಹೋಗಿದ್ದು ಒಂದು ವ್ಯಕ್ತಿತ್ವವೇ ಇಲ್ಲದಂತಾಗಿದೆ. ಲೌಕಿಕ ಸಂಪತ್ತು ಹೆಚ್ಚಾಗಿದೆ ಎಂದೆನಲ್ಲವೇ? ಇದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಅಪ್ಪ-ಅಮ್ಮ ಉಳಿಸಿಹೋದ, ಬಿಟ್ಟುಹೋದ ಆಸ್ತಿಪಾಸ್ತಿಗೆ ಮಕ್ಕಳು ಇನ್ನಷ್ಟನ್ನು ಸೇರಿಸುತ್ತಾರೆ. ಆದರೆ, ಈ ಮಕ್ಕಳ ಮನಸ್ಸು ಕೂಡ ಒಂದು ಚೂರೂ ವಿಕಾಸವಾಗುವುದಿಲ್ಲ. ಏಕೆಂದರೆ, ಅವರ ಮನಸ್ಸು ಇದ್ದಲ್ಲೇ ಇರುವಂತೆಯೇ ಬೆಳೆಸಲಾಗಿರುತ್ತದೆ. ಅಪ್ಪ ಬಿಟ್ಟುಹೋದ ಮನೆಯ ಮೇಲೆ ಈ ಮಕ್ಕಳು ಯಾವ ಹಿಂಜರಿಕೆಯೂ ಇಲ್ಲದೆ ಇನ್ನೊಂದು ಮಹಡಿಯನ್ನು ಬೇಕಾದರೆ ಕಟ್ಟುತ್ತಾರೆ. ಇದನ್ನು ನೋಡಿ ಅಪ್ಪಂದಿರೂ ’ಆಹಾ, ನನ್ನ ಮಗ ಕೂಡ ಮನೆ ಕಟ್ಟಿದನಪ್ಪ!’ ಎಂದು ಆಕಾಶದಲ್ಲೇ ತೇಲಾಡುತ್ತಾರೆ. ಆದರೆ ಗೀತೆಯಲ್ಲಿ ಕೃಷ್ಣನು ಹೇಳಿದ ಆದರ್ಶಗಳನ್ನು ಇನ್ನಷ್ಟು ಪರಿಷ್ಕರಿಸಿಕೊಂಡು, ಮಹಾವೀರ, ಬುದ್ಧ, ರಾಮ ಮತ್ತು ಕೃಷ್ಣರ ತತ್ತ್ವಗಳಿಗೆ ಬೆಲೆ ಕೊಟ್ಟು ಬದುಕುತ್ತಿರುವವರಿಗೆ ಈ ಸಮಾಜದಲ್ಲಿ ಕಷ್ಟವಾಗುತ್ತದೆ. ಏಕೆಂದರೆ, ಇಂಥವರಿಗೆ ತಮಗೆ ಪರಂಪರೆಯಿಂದ ಒದಗಿಬಂದ ಒಂದು ಮನೋಕೋಶವನ್ನು ನೆಚ್ಚಿಕೊಂಡು ಬದುಕುವುದು ಅಗತ್ಯವಾಗಿರುತ್ತದೆ. ಆದರೆ, ಇಲ್ಲಿ ಹೊಸದನ್ನು ಸೃಷ್ಟಿಸುವುದು ಕಷ್ಟ. ಉದಾಹರಣೆಗೆ ನಮ್ಮ ಸುತ್ತಮುತ್ತಲೇ ನೋಡೋಣ. ಇಲ್ಲಿ ಮಕ್ಕಳು ತಮ್ಮ ಅಪ್ಪಂದಿರು ಹಾಕಿದ ಆಲದಮರಕ್ಕೆ ತಾವು ನೇತು ಹಾಕಿಕೊಳ್ಳಬಾರದೆಂದು ಸತತವಾಗಿ ಸಾವಿರಾರು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಇಲ್ಲಿ ನೂರೆಂಟು ಅಡಚಣೆಗಳಿವೆ.
ಮನೋದಾರಿದ್ರ್ಯ
ಈ ಜಗತ್ತಿನಲ್ಲಿ ಲೌಕಿಕ ಅನುಕೂಲಗಳು ಹೆಚ್ಚಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದರ ಜೊತೆಜೊತೆಯಲ್ಲೇ ಮನೋದಾರಿದ್ರ್ಯ ಕೂಡ ಅಷ್ಟೇ ಹೆಚ್ಚಾಗಿದೆ. ಯಾವಾಗ ಲೌಕಿಕ ಸಂಪತ್ತು ಮಾತ್ರ ಜಾಸ್ತಿಯಾಗುತ್ತ ಹೋಗಿ, ಮನೋವಿಕಾಸ ಸಂಕುಚಿತಗೊಳ್ಳುತ್ತದೋ ಆಗ ಅಪಾಯಗಳು ಕಟ್ಟಿಟ್ಟ ಬುತ್ತಿ! ಲೌಕಿಕ ಸಂಪತ್ತಿನ ವಿಚಾರದಲ್ಲಿ ನಾವು ನಮ್ಮ ಅಪ್ಪ-ಅಮ್ಮಂದಿರನ್ನು ಹಿಂದಿಕ್ಕುತ್ತೇವೆಲ್ಲವೇ? ಇದೇ ರೀತಿಯಲ್ಲಿ ಮನೋವಿಕಾಸ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ವಿಚಾರಗಳಲ್ಲೂ ಅವರನ್ನು ಮೀರಿಸಬೇಕು. ಇದರಿಂದ ನಮ್ಮ ತಂದೆ-ತಾಯಿಗೆ ಅವಮಾನವಾಗುವಂಥದ್ದೇನೂ ಇಲ್ಲ. ಸತ್ಯ ಹೇಳಬೇಕೆಂದರೆ, ಇದರಿಂದ ಅವರಿಗೆ ಇನ್ನೂ ಮರ್ಯಾದೆ, ಗೌರವಗಳು ಹೆಚ್ಚಾಗುತ್ತವೆ. ಯಾವ ತಂದೆ-ತಾಯಿಗಳು ತಮ್ಮ ಮಕ್ಕಳು ಪ್ರತಿಯೊಂದರಲ್ಲೂ ತಮ್ಮನ್ನು ಮೀರಿ, ಮುನ್ನಡೆಯಬೇಕೆಂದು ಇಷ್ಟಪಡುತ್ತಾರೋ ಅಂಥವರೇ ನಿಜವಾದ, ಮಕ್ಕಳ ಮೇಲೆ ಕಕ್ಕುಲತೆ ಇರುವಂತಹ ತಂದೆ-ತಾಯಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವೊಂದು ವಿಚಾರದಲ್ಲೂ ನಮ್ಮ ಮಕ್ಕಳು ನಾವು ಹಾಕಿದ ಗೆರೆಯನ್ನು ದಾಟಬಾರದೆಂದು ಹಠ ಹಿಡಿದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ. ಈಗ ಆಗುತ್ತಿರುವುದು ಇದೇ! ಇದಕ್ಕೆ ಶಿಕ್ಷಕರು ತುಪ್ಪ ಸುರಿಯುತ್ತಿದ್ದಾರೆ ಅಷ್ಟೆ!! ನಮ್ಮಲ್ಲೀಗ ಏನಾಗುತ್ತಿದೆಯೆಂದರೆ, ನಾವು ಕೃಷ್ಣ, ಮಹಾವೀರ ಅಥವಾ ಮಹಮದ್ ಪೈಗಂಬರ್ ಹೇಳಿರುವುದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದಿಡಲು ಆಲೋಚಿಸಿದರೆ ಸಾಕು, ’ಓಹೋ, ಇವನಿಗೆಲ್ಲೋ ಹುಚ್ಚು!’ ಎನ್ನುತ್ತಾರೆ. ಇಷ್ಟೊಂದು ಮಹತ್ತ್ವವಾದುದನ್ನು ಯೋಚಿಸುವುದೂ ಇಲ್ಲಿ ಅಸಂಭವವಾಗಿ ಬಿಟ್ಟಿದೆ. ಹೀಗಾಗಿ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯು ಭವಿಷ್ಯದ ಮೇಲೆ ಕೇಂದ್ರೀಕೃತವಾಗುವುದನ್ನು ಬಿಟ್ಟು ಗತಕಾಲ ಕೇಂದ್ರಿತವಾಗಿ ಬಿಟ್ಟಿದೆ. ಆದರೆ, ನಿಜವಾದ ಅಭಿವೃದ್ಧಿ ಅಥವಾ ವಿಕಸನವೆನ್ನುವುದು ಸದಾ ಭವಿಷ್ಯಕೇಂದ್ರಿತವಾಗಿಯೇ ಇರುತ್ತದೆ.
ಭೂತಕಾಲದೆಡೆಗೇ ನೋಟ
ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯು ಸದಾ ಭೂತಕಾಲದೆಡೆಗೇ ನೋಡುತ್ತಿದೆ. ನಮ್ಮ ಶಾಸನಗಳು, ಆಲೋಚನೆಗಳು ಮತ್ತು ಆದರ್ಶಗಳೆಲ್ಲವೂ ಗತಕಾಲದವೇ. ಇದು ಎಂತಹ ಗತಕಾಲವೆಂದರೆ ಅದು ಈಗಾಗಲೇ ನಾಮಾವಶೇಷವಾಗಿ ಹೋಗಿರುವಂಥದ್ದು! ನಾವು ಸಾವಿರಾರು ವರ್ಷಗಳಷ್ಟು ಪುರಾತನವಾದ ಸಂಗತಿಗಳನ್ನು ನಮ್ಮ ಮಕ್ಕಳ ಮೇಲೆ ಹೇರಲು ನೋಡುತ್ತಿದ್ದೇವೆ. ನಾವು ಬರೀ ಹೀಗೆ ಹಳೆಯದನ್ನೆಲ್ಲ ಹೇರುವ ಕೆಲಸವನ್ನಷ್ಟೇ ಮಾಡುತ್ತಿಲ್ಲ, ಬದಲಿಗೆ ಯಾವ ಮಗು ಈ ಗತಕಾಲದ ಸಂಗತಿಗಳನ್ನೆಲ್ಲ ಚಾಚೂ ತಪ್ಪದೆ ಪಾಲಿಸುತ್ತದೋ ಆ ಮಗುವನ್ನು ’ನೋಡಿ, ಮಕ್ಕಳೆಂದರೆ ಹೀಗಿರಬೇಕು,’ ಎಂದು ಅದನ್ನೊಂದು ಆದರ್ಶದ ಮಾದರಿಯನ್ನಾಗಿ ಕೂರಿಸುತ್ತಿದ್ದೇವೆ. ಇಂತಹ ಮಗುವನ್ನು ಹೀಗೆ ಹೊಗಳುತ್ತಿರುವವರು ಯಾರು? ಅದೇ ಶಿಕ್ಷಕ! ಶಿಕ್ಷಕನು ಇದನ್ನೇ ಮಾಡಬೇಕೆಂದು ಸಮಾಜದ ಧುರೀಣರು ಮತ್ತು ಧಾರ್ಮಿಕ ಮುಖಂಡರೆಲ್ಲ ನಿರೀಕ್ಷಿಸುತ್ತಾರೆ. ನಮ್ಮ ವ್ಯವಸ್ಥೆ ಕೂಡ ಇದಕ್ಕೆ ಹೊರತಲ್ಲ. ಅದೂ ಇದನ್ನೇ ಬಯಸುತ್ತದೆ.
ಅಡಚಣೆ ಯಾರಿಂದ?
ನಮ್ಮಲ್ಲಿ ಶಿಕ್ಷಕರೆಂದರೆ, ಜ್ಞಾನವನ್ನು ಪ್ರಸಾರ ಮಾಡುವ ವ್ಯಕ್ತಿ ಎಂದು ನಂಬಲಾಗಿದೆ. ಹಾಗೆಯೇ, ಶಿಕ್ಷಕರೂ ಇದನ್ನು ನಂಬುವಂತೆ ಮಾಡಿಡಲಾಗಿದೆ. ಆದರೆ, ಇದು ಶುದ್ಧಸುಳ್ಳು! ಏಕೆಂದರೆ, ಶಿಕ್ಷಕ ಏನಿದ್ದರೂ ಒಬ್ಬ ಯಥಾಸ್ಥಿತಿವಾದಿಯಷ್ಟೆ. ಅವರಿಗೆ ಈ ವ್ಯವಸ್ಥೆ, ಈ ಸಮಾಜ, ಈ ಆದರ್ಶಗಳು, ಈ ಚಿಂತನಾಕ್ರಮಗಳು ಒಂದು ಗುಲಗಂಜಿಯಷ್ಟೂ ಬದಲಾಗುವುದು ಇಷ್ಟವಿಲ್ಲ. ಹೀಗಾಗಿ, ನಮ್ಮನ್ನು ವಿಕಸನಗೊಳಿಸಬಲ್ಲಂತಹ ಜ್ಞಾನಕ್ಕೆ ಇವರೇ ದೊಡ್ಡ ಅಡಚಣೆಗಳಾಗಿ ಬಿಟ್ಟಿದ್ದಾರೆ. ಓಬೀರಾಯನ ಕಾಲದ ಮಾನದಂಡಗಳನ್ನು ಒಂದಿಷ್ಟು ಅಲುಗಾಡಿಸಲೂ ಈ ಶಿಕ್ಷಕರು ಆಸ್ಪದ ಕೊಡುವುದಿಲ್ಲ. ಇದರ ಫಲವಾಗಿ ನಾವೆಲ್ಲರೂ ಅನೇಕ ಮೂರ್ಖ ಕೆಲಸಗಳನ್ನು ಮಾಡುತ್ತಲೇ ಇದ್ದೇವೆ. ಈ ಹಳೆಯ ಸಂಗತಿಗಳ್ಯಾವುವೂ ಕಣ್ಮರೆಯಾಗಲು ಇಷ್ಟಪಡುವುದಿಲ್ಲ. ಖದೀಮ ರಾಜಕಾರಣಿಗಳು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬಿಟ್ಟಿದ್ದಾರೆ. ಹೀಗಾಗಿ, ಅವರೂ ಸಹ ಶಿಕ್ಷಕರನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸಮಾಜಸೇವೆಯ ಹೆಸರಿನಲ್ಲಿ ತಮ್ಮನ್ನು ಶೋಷಿಸಲಾಗುತ್ತಿದೆ ಎನ್ನುವುದೇ ಈ ಶಿಕ್ಷಕರಿಗೆ ಗೊತ್ತಿಲ್ಲದಿರುವುದು ಪರಮಾಶ್ಚರ್ಯದ ಸಂಗತಿ. ನಿಜಕ್ಕೂ ಈ ಶಿಕ್ಷಕರನ್ನು ಎಷ್ಟೊಂದು ಬಗೆಯಲ್ಲಿ ಶೋಷಿಸಲಾಗುತ್ತಿದೆ ಅಲ್ಲವೇ?
ನಾನೊಂದು ಸಲ ಶಿಕ್ಷಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಹೋಗಿದ್ದೆ. ಅದು ’ಶಿಕ್ಷಕರ ದಿನಾಚರಣೆ’ಯ ಸಂದರ್ಭ. ನಾನು ಅಲ್ಲಿ ನೆರೆದಿದ್ದ ಶಿಕ್ಷಕರನ್ನೆಲ್ಲ ಉದ್ದೇಶಿಸಿ ’ಒಬ್ಬ ಶಿಕ್ಷಕ ಈ ದೇಶದ ರಾಷ್ಟ್ರಪತಿಯಾದರೆ ಅದರಿಂದ ಶಿಕ್ಷಕರಿಗೆ ಬಂದ ಭಾಗ್ಯವೇನು? ಇದರಿಂದ ಶಿಕ್ಷಕರನ್ನೇನಾದರೂ ಗೌರವಿಸಿದಂತಾಗುತ್ತದೆಯೇ?’ ಎಂದು ನೇರವಾಗಿ ಕೇಳಿದೆ. ಏಕೆಂದರೆ, ಶಿಕ್ಷಕನಾಗಿದ್ದ ವ್ಯಕ್ತಿಯೊಬ್ಬ ರಾಷ್ಟ್ರಪತಿ ಪದವಿಗೇರಿದರೆ ಅದರಿಂದ ಶಿಕ್ಷಕರನ್ನು ಗೌರವಿಸಿದಂತೇನೂ ಆಗುವುದಿಲ್ಲ. ಇದು ತದ್ವಿರುದ್ಧವಾಗಬೇಕು. ಅಂದರೆ, ರಾಷ್ಟ್ರಪತಿಯೊಬ್ಬ ಶಿಕ್ಷಕನಾಗಬೇಕು. ಆಗಮಾತ್ರ ಶಿಕ್ಷಕರಿಗೆ ಮರ್ಯಾದೆ ಸಿಕ್ಕುತ್ತದೆ; ಅವರನ್ನು ಗೌರವಿಸಿದಂತಾಗುತ್ತದೆ. ರಾಷ್ಟ್ರಪತಿಯೊಬ್ಬ ’ನೋಡಿ, ಈ ಕೆಲಸ ನಿಷ್ಪ್ರಯೋಜಕ. ನಾನೇನಿದ್ದರೂ ಮಕ್ಕಳಿಗೆ ಪಾಠ ಮಾಡಬೇಕು. ಅದರಲ್ಲೇ ನನಗೆ ನಿಜವಾದ ಆನಂದವಿದೆ. ಈ ಕುರ್ಚಿಯಲ್ಲಿ ನಾನು ಅರೆಘಳಿಗೆಯೂ ಕೂತಿರಲಾರೆ,’ ಎಂದು ಹೇಳಿ, ಹಾಗೆ ಮಾಡಿ ತೋರಿಸಬೇಕು. ಆಗ ನಮೆಗೆಲ್ಲ ’ಓಹೋ, ಶಿಕ್ಷಕ ವೃತ್ತಿಗೆ ಗೌರವವಿದೆ; ಅದಕ್ಕೊಂದು ನಿಜವಾದ ಮರ್ಯಾದೆ ಇದೆ,’ ಎಂದು ನಮಗೆ ಅರ್ಥವಾಗುತ್ತದೆ. ಇದರ ಬದಲು, ಶಿಕ್ಷಕನಾಗಿದ್ದವನೊಬ್ಬ ರಾಷ್ಟ್ರಪತಿಯಾದರೆ ಅದರ ಶ್ರೇಯಸ್ಸು ರಾಜಕಾರಣಿಗಳಿಗೆ ಹೋಗುತ್ತದೆಯೇ ವಿನಾ ಶಿಕ್ಷಕರಿಗಲ್ಲ. ಶಿಕ್ಷಕನಾಗಿದ್ದ ವ್ಯಕ್ತಿಯೊಬ್ಬ ರಾಷ್ಟ್ರಪತಿಯಾದಾಗ ’ಇದರಿಂದ ಇಡೀ ಶಿಕ್ಷಕ ಸಮುದಾಯವನ್ನೇ ಗೌರವಿಸದಂತಾಯಿತು,’ ಎಂದು ಭಾವಿಸುವುದಾದರೆ, ಅದೇ ಶಿಕ್ಷಕನೊಬ್ಬ ಶಾಲೆಯ ಮುಖ್ಯೋಪಾಧ್ಯಾಯನೋ, ಶಾಲಾ ಇನ್ಸ್ಪೆಕ್ಟರೋ ಅಥವಾ ಶಿಕ್ಷಣ ಸಚಿವನೋ ಆಗಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ? ಎಲ್ಲಿ ಅಧಿಕಾರವಿದೆಯೋ ಅಲ್ಲಿ ಮರ್ಯಾದೆ! ಎಲ್ಲಿ ಸರಕಾರವಿದೆಯೋ ಅಲ್ಲಿ ಅಧಿಕಾರ!! ನಮ್ಮ ಆಲೋಚನಾ ಕ್ರಮವೇ ಹೀಗಿದೆ. ನಾವು ’ಸರಕಾರವು ಎಲ್ಲಕ್ಕಿಂತಲೂ ದೊಡ್ಡದು; ಆದ್ದರಿಂದ ರಾಜಕಾರಣಿ ಉಳಿದವರಿಗಿಂತ ದೊಡ್ಡವನು; ಉಳಿದಿದ್ದೆಲ್ಲ ಆಮೇಲೆ,’ ಎಂದು ನಂಬಿಕೊಂಡು ಬಂದಿದ್ದೇವೆ. ಆದರೆ, ರಾಜಕಾರಣಿ ಯಾವಾಗಲೂ ಒಬ್ಬ ಫಟಿಂಗ; ಅವನಿಗಿರುವಷ್ಟು ಖದೀಮ ಮನಸ್ಸು ಬೇರ‍್ಯಾರಿಗೂ ಇಲ್ಲ. ಏಕೆಂದರೆ ಅವನು ತನಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ತನ್ನ ಚಿಂತನೆಗಳು ಮತ್ತು ಆಲೋಚನೆಗಳೆಲ್ಲವನ್ನೂ ಈ ಶಿಕ್ಷಕರ ಮೂಲಕ ಮಕ್ಕಳ ಮನಸ್ಸಿಗೆ ತುಂಬುತ್ತಾನೆ. ಪುರೋಹಿತಶಾಹಿಗಳು ಕೂಡ ಧರ್ಮದ ಹೆಸರಿನಲ್ಲಿ, ಧಾರ್ಮಿಕ ಶಿಕ್ಷಣದ ನೆಪದಲ್ಲಿ ಮಾಡುವುದು ಇದನ್ನೇ. ಇದರಲ್ಲಿ ಆ ಧರ್ಮ, ಈ ಧರ್ಮ ಎಂಬ ಭೇದವೇನೂ ಇಲ್ಲ. ಎಲ್ಲ ಧರ್ಮಗಳೂ ಸಹ ಓಬೀರಾಯನ ಕಾಲದ ನಂಬಿಕೆಗಳನ್ನು ಅವು ಸರಿಯೋ, ತಪ್ಪೋ ಎಂದು ಯೋಚಿಸದೆಯೇ ಮಕ್ಕಳ ಮೇಲೆ ಹೇರುತ್ತವೆ. ಮಕ್ಕಳಿಗೆ ಈ ಜಗತ್ತೆಂದರೆ ಏನೆಂಬುದೂ ಗೊತ್ತಿಲ್ಲದಂತಹ ತೀರಾ ಚಿಕ್ಕ ವಯಸ್ಸಿನಲ್ಲೇ ಇದನ್ನೆಲ್ಲ ಮಾಡಿಬಿಡಲಾಗುತ್ತದೆ. ನಿಸ್ಸಂಶಯವಾಗಿಯೂ ಇದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ.
“
ನಾವು ಇನ್ನೊಬ್ಬರಲ್ಲಿ ಶಿಸ್ತನ್ನು ರೂಢಿಸಲು ಹೆಣಗಾಡುತ್ತೇವೆ. ಇದಕ್ಕಿಂತ ಕೆಟ್ಟ ಚಾಳಿ ಇನ್ನೊಂದಿಲ್ಲ. ಇದನ್ನು ತೊರೆದು ಬಿಟ್ಟರೆ ಈ ಜಗತ್ತು ಈಗಿರುವುದಕ್ಕಿಂತ ಎಷ್ಟೋ ಚೆನ್ನಾಗಿರುತ್ತದೆ. ನಿಮಗೆ ನಿಜಕ್ಕೂ ಈ ಜಗತ್ತು ಸುಂದರವಾಗಿರಬೇಕು ಎನ್ನುವ ಕಳಕಳಿಯಿದ್ದರೆ ದಯವಿಟ್ಟು ಎಲ್ಲರನ್ನೂ ಪ್ರೀತಿಸಿ; ಪ್ರೀತಿಯ ಪಸೆ ಇರುವಂತೆ ಬದುಕಿ. ಸದಾ ಮಕ್ಕಳ ಒಳಿತಿನ ಬಗ್ಗೆ ಯೋಚಿಸಿ, ಆ ಮಗುವಿನ ಒಳಿತಿಗೆ ಏನು ಮಾಡಬಹುದೆಂದು ನೋಡಿ. ಪ್ರೀತಿಯು ನಿಮಗೆ ಯಾವ ಮರ್ಯಾದೆಯನ್ನೂ ತಂದುಕೊಡಲಾರದು ಎಂದು ತಪ್ಪಾಗಿ ಭಾವಿಸಬೇಡಿ. ಪ್ರೀತಿಗಿರುವ ಬೆಲೆ ಜಗತ್ತಿನಲ್ಲಿ ಬರ‍್ಯಾವುದಕ್ಕೂ ಇಲ್ಲ ಎನ್ನುವ ಅಂತಿಮ ಸತ್ಯವನ್ನು ಅರಿತುಕೊಳ್ಳಿ.
“
ಹೇರಿಕೆ ಘೋರ ಅಪರಾಧ
ಕುರಾನಿನಲ್ಲಿ ಹೇಳಿರುವುದೇ ಸತ್ಯ, ಭಗವದ್ಗೀತೆಯಲ್ಲಿ ಹೇಳಿರುವುದೇ ಸತ್ಯ, ಅಥವಾ ಮಹಾವೀರ, ಕೃಷ್ಣ ಮತ್ತು ಮಹಮದ್ ಪೈಗಂಬರ್ ಹೇಳಿರುವುದೇ ವೇದವಾಕ್ಯ ಎಂದು ಮಕ್ಕಳನ್ನು ನಂಬಿಸುವುದಕ್ಕಿಂತ ಹೇಯವಾದ ಅಪರಾಧ ಬೇರ‍್ಯಾವುದಿದೆ ಹೇಳಿ? ಖಂಡಿತವಾಗಿಯೂ ತುಂಬಾ ಮುಗ್ಧತೆಯಿಂದ ಕೂಡಿರುವ, ಏನೂ ಅರಿಯದಿರುವ ಮತ್ತು ಸುತ್ತಲಿನ ಪ್ರಪಂಚದ ಬಗ್ಗೆ ಏನೆಂದರೇನೂ ಗೊತ್ತಿರದ ಎಳೆಯ ಮಗುವಿನ ಮೇಲೆ ಈ ಸಂಗತಿಗಳನ್ನೆಲ್ಲ ಹೇರುವುದು ಘೋರವಾದ ಪಾಪವೆನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಹೀಗೆಯೇ ಆಯಿತು. ರಾಜಕಾರಣಿಗಳು ʼದೇಶದ ಸ್ವಾತಂತ್ರ್ಯಕ್ಕಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೆಲ್ಲ ಹೋರಾಟಕ್ಕೆ ಧುಮುಕಬೇಕು,’ ಎಂದು ಕರೆ ಕೊಟ್ಟರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇದೇ ರಾಜಕಾರಣಿಗಳು ಅಧಿಕಾರಕ್ಕೆ ಬಂದರು. ಆಗ ಇವರೇ “ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಜಕಾರಣದಿಂದ ದೂರವಿರಬೇಕು,” ಎಂದರು. ಇನ್ನೊಂದೆಡೆ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು “ಇಲ್ಲ ಇಲ್ಲ, ಶಿಕ್ಷಕರು ಮತ್ತು ರಾಜಕಾರಣಿಗಳು ರಾಜಕಾರಣದಿಂದ ದೂರವಿರಬೇಕಾಗಿಲ್ಲ. ಅವರು ಇಲ್ಲೇ ಇರಬೇಕು,” ಎಂದರು ಒಂದು ವೇಳೆ ನಾಳೆ ಕಮ್ಯುನಿಸ್ಟರೇ ಅಧಿಕಾರಕ್ಕೆ ಬಂದರೆ “ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈಗ ರಾಜಕಾರಣದಲ್ಲಿ ಪಾಲ್ಗೊಳ್ಳಬೇಕಾಗಿಲ್ಲ,” ಎನ್ನುತ್ತಾರೆ. ರಾಜಕಾರಣಿಗಳ ದೃಷ್ಟಿಯಿಂದ ಯಾವುದು ಸರಿ ಎನಿಸುತ್ತದೋ ಅದನ್ನೆಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡ ಸರಿ ಎಂದು ನಂಬುವಂತೆ ಮಾಡಲಾಗುತ್ತದೆ.
ನನ್ನ ಪ್ರಕಾರ, ಯಾವುದೇ ವ್ಯಕ್ತಿಯೊಬ್ಬ ಶಿಕ್ಷಕನಾಗಬೇಕೆಂದರೆ ಆತನ ಅಂತರಂಗದಲ್ಲಿ ನಿಜವಾದ ಒಂದು ಬಂಡುಕೋರ ಪ್ರವೃತ್ತಿ ಧಗಧಗಿಸುತ್ತಿರಬೇಕು. ಇದಿಲ್ಲದವನು ಶಿಕ್ಷಕನಾಗಲು ಯೋಗ್ಯನಲ್ಲ. ಸಿಡಿದೇಳುವ ಈ ಜ್ವಾಲೆಯೇ ಇಲ್ಲದ ಮನುಷ್ಯನೊಬ್ಬ ಶಿಕ್ಷಕನಾದರೆ ಅವನು ಕೊನೆಗೆ ಯಾವುದೋ ಒಂದು ನಿರ್ದಿಷ್ಟವಾದ ವಿಚಾರದ, ನೀತಿಯ ದಲ್ಲಾಳಿಯಾಗುತ್ತಾನಷ್ಟೆ. ಇಂಥ ವಿಚಾರಗಳು ಸಮಾಜದ್ದಾದರೂ ಆಗಿರಬಹುದು, ಧರ್ಮದ್ದಾದರೂ ಆಗಿರಬಹುದು, ಅಥವಾ ರಾಜಕೀಯದ್ದಾದರೂ ಆಗಿರಬಹುದು. ನಿಜ ಹೇಳಬೇಕೆಂದರೆ, ಪ್ರತಿಯೊಬ್ಬ ಶಿಕ್ಷಕನಲ್ಲೂ ಬಂಡುಕೋರ ಪ್ರವೃತ್ತಿಯ ತಹತಹ, ಚಿಂತನೆಯ ತೀವ್ರತೆ, ಮತ್ತು ಇದನ್ನೆಲ್ಲ ಪ್ರತಿಫಲಿಸುವಂತಹ ಅಂಶಗಳು ಇರಲೇಬೇಕು. ಆದರೆ, ನಮ್ಮಲ್ಲಿ ಈ ಸ್ವತಂತ್ರ ಚಿಂತನೆಯ ಕಿಡಿ ಇದೆಯೇ? ಒಂದು ವೇಳೆ ಇದು ಇಲ್ಲವೆಂದಾದರೆ, ಗಲ್ಲಾಪೆಟ್ಟಿಗೆ ಮುಂದೆ ಕೂತಿರುವ ಅಂಗಡಿ ಮಾಲೀಕನಿಗೂ ಶಿಕ್ಷಕರಿಗೂ ವ್ಯತ್ಯಾಸವೇನಿದೆ? ಖಂಡಿತವಾಗಿಯೂ ಏನೇನೂ ಇಲ್ಲ. ಶಿಕ್ಷಕರಾಗಿ ಕೆಲಸ ಮಾಡುವುದು ನಿಜಕ್ಕೂ ತುಂಬಾ ದೊಡ್ಡ ಸಂಗತಿ. ಇಷ್ಟಕ್ಕೂ ಶಿಕ್ಷಕರಾಗಿರುವುದೆಂದರೆ ಏನರ್ಥ? ಇದರ ಬಗ್ಗೆ ನಾವು ಯಾವತ್ತಾದರೂ ಯೋಚಿಸಿದ್ದೇವಾ?
ಅಹಂಕಾರಕ್ಕೆ ನಾಂದಿ
ಜಗತ್ತಿನ ಎಲ್ಲ ಭಾಗಗಳಲ್ಲೂ ಮಕ್ಕಳಿಗೆ ’ಎಲ್ಲರನ್ನೂ ಪ್ರೀತಿಸಬೇಕು,’ ಎಂದು ಬೋಧಿಸಲಾಗುತ್ತಿದೆ. ಇದನ್ನೇ ನೀವೂ ಮಾಡುತ್ತಿರಬಹುದು. ಆದರೆ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಸ್ಪರ್ಧೆ ಎನ್ನುವ ತತ್ತ್ವದ ಮೇಲೆ ಕಟ್ಟಲಾಗಿದೆಯೇ ವಿನಾ ಪ್ರೀತಿಯ ತತ್ತ್ವದ ಮೇಲೆ ಕಟ್ಟಿಲ್ಲ ಎನ್ನುವುದನ್ನು ನೀವು ಎಂದಾದರೂ ಯೋಚಿಸಿದ್ದೀರ? ಮಕ್ಕಳಲ್ಲಿ ಪ್ರೀತಿ-ನೀತಿ-ರೀತಿಗಳನ್ನು ಕಲಿಸುವುದೇ ನಮ್ಮ ಕೆಲಸ ಎಂದು ನೀವು ಹೇಳಿಕೊಳ್ಳಬಹುದು. ಆದರೆ, ಇಡೀ ಶಿಕ್ಷಣ ಪದ್ಧತಿಯನ್ನು ಸ್ಪರ್ಧೆ ಎನ್ನುವ ಅಂಶದ ಮೇಲೆ ನಿಲ್ಲಿಸಲಾಗಿದೆ. ಎಲ್ಲಿ ಸ್ಪರ್ಧೆ ಇರುತ್ತದೋ ಅಲ್ಲಿ ಪ್ರೀತಿ ಇರಲು ಸಾಧ್ಯವೇ ಇಲ್ಲ. ಸ್ಪರ್ಧೆ ಎನ್ನುವುದು ಒಂದು ಬಗೆಯಲ್ಲಿ ದ್ವೇಷ; ಅದು ಒಳಗೆ ಕುದಿಯುತ್ತಿರುವ ಲಾವಾರಸ; ಅದು ಅಸೂಯೆ. ಹಾಗಾದರೆ, ನೀವು ಮಕ್ಕಳಿಗೆ ಏನನ್ನು ಹೇಳಿ ಕೊಡುತ್ತಿದ್ದೀರಿ? ಶಾಲೆಯಲ್ಲಿ ಒಂದು ಮಗು ಹೆಚ್ಚು ಅಂಕ ಗಳಿಸಿದೆ ಎಂದಿಟ್ಟುಕೊಳ್ಳಿ. ಆಗ ಇನ್ನೊಂದು ಮಗುವಿಗೆ ಈ ಮಗುವಿನ ಮೇಲೆ ಹೊಟ್ಟೆಯುರಿ ಶುರುವಾಗುತ್ತದೆ. ಆ ಮಗುವಿಗಿಂತ ಒಂದೆರೆಡು ಅಂಕಗಳನ್ನು ಕಡಿಮೆ ತೆಗೆದಿರುವ ಮಗುವಿಗೆ ನೀವೇ ’ಹೇ ದಡ್ಡ ಮುಂಡೇಗಂಡ, ಅವನನ್ನು ನೋಡಿ ಕಲಿಯೋ,’ ಎನ್ನುತ್ತೀರಿ. ನೀವೇ ಈ ಮೂಲಕ ಒಬ್ಬನನ್ನು ಹೊಗಳುತ್ತೀರಿ, ಇನ್ನೊಬ್ಬನನ್ನು ತೆಗಳುತ್ತೀರಿ. ಅಲ್ಲದೆ, ಅವನ ಜತೆ ಸ್ಪರ್ಧಿಸುವಂತೆ, ಅವನನ್ನು ಮೀರಿಸುವಂತೆ ಇವನಿಗೆ ಹೇಳುತ್ತೀರಿ. ಈ ಮೂಲಕ ಮಕ್ಕಳಿಗೆ ನೀವು ಅಹಂಕಾರವನ್ನು ಕಲಿಸುತ್ತೀರಿ. ಇಡೀ ತರಗತಿಗೆ ಯಾರು ಪ್ರಥಮ ಸ್ಥಾನ ಗಳಿಸುತ್ತಾರೋ ಅವರು ಶ್ರೇಷ್ಠರೆಂದೂ ಇಲ್ಲದಿದ್ದವರು ಕನಿಷ್ಠರೆಂದೂ ನೀವೇ ಹೇಳಿಕೊಡುತ್ತೀರಿ. ನೀವು ಪಾಠ ಮಾಡುವಾಗ ಮಾತ್ರ ವಿದ್ಯಾರ್ಥಿಗಳಿಗೆ ವಿನಯ, ಪ್ರೀತಿ ಇತ್ಯಾದಿಗಳನ್ನು ಹೇಳಿಕೊಡುತ್ತೀರಷ್ಟೆ. ಆದರೆ ಇಡೀ ಶಿಕ್ಷಣ ವ್ಯವಸ್ಥೆಯ ಲಕ್ಷಣಗಳು ಹೇಗಿವೆಯೆಂದರೆ, ಅಲ್ಲಿ ದ್ವೇಷ, ಅಸೂಯೆ, ವೈರತ್ವ ಮತ್ತು ಇಡೀ ತರಗತಿಗೇ ಪ್ರಥಮ ಸ್ಥಾನ ಗಳಿಸಬೇಕೆಂಬುದನ್ನು ಬಿಟ್ಟರೆ ಬೇರೇನನ್ನೂ ಹೇಳಿಕೊಡಲು ಸಾಧ್ಯವಿಲ್ಲ. ಪ್ರಥಮ ಸ್ಥಾನ ಗಳಿಸಿದವನಿಗೆ ನೀವು ಹಾರ-ತುರಾಯಿ, ಚಿನ್ನದ ಪದಕಗಳನ್ನೆಲ್ಲ ಹಾಕುತ್ತೀರಿ; ಅವನ ಫೋಟೋ ತೂಗು ಹಾಕುತ್ತೀರಿ. ಅವನಿಗಿಂತ ಒಂದೆರಡು ಅಂಕ ಕಡಿಮೆ ತೆಗೆದವರನ್ನೆಲ್ಲ ನೀವು ಹೀಗಳೆಯುತ್ತೀರಿ. ಇದು ವ್ಯವಸ್ಥೆಯು ನಿಮ್ಮ ಮೂಲಕ ಮಾಡುವ ತಪ್ಪು! ಹೆಚ್ಚು ಅಂಕ ತೆಗೆದವನಿಗಿಂತ ಒಂದಿಷ್ಟು ಅಂಕ ಕಡಿಮೆ ತೆಗೆದವನನ್ನು ಅವಮಾನಿಸುವ ಮೂಲಕ ನೀವು ಅವನ ಅಹಂಕಾರ ಕೆರಳುವಂತೆ ಮಾಡುತ್ತೀರಿ. ನಿಮ್ಮ ಬೋಧನೆಯನ್ನು ಕೇಳಿದ ಪರಿಣಾಮವಾಗಿ ಅವನ ಅಹಂಕಾರ ಮುನ್ನೆಲೆಗೆ ಬರುತ್ತದಲ್ಲವೇ? ಇದೇ ರೀತಿಯಲ್ಲಿ, ಪ್ರಥಮ ಸ್ಥಾನ ಗಳಿಸಿದವನನ್ನು ನೀವು ಅನಗತ್ಯವಾಗಿ ಸನ್ಮಾನಿಸುವ ಮೂಲಕ ಅವನ ಅಹಂಕಾರಕ್ಕೂ ನೀರು-ಗೊಬ್ಬರ ಹಾಕುತ್ತೀರಿ. ನಾನು ಹೇಳುತ್ತಿರುವುದು ಸತ್ಯವೇ ತಾನೇ? ಹೀಗೆ ಮಕ್ಕಳಲ್ಲಿ ದ್ವೇಷ, ಅಸೂಯೆ, ಶತ್ರುತ್ವ, ಸ್ಪರ್ಧೆಗಳನ್ನು ರೂಢಿಸಿದ ಮೇಲೆ ಅವರು ಇನ್ನೊಬ್ಬರನ್ನು ಪ್ರೀತಿಸುವುದು ತಾನೇ ಹೇಗೆ ಸಾಧ್ಯ? ನಿಜವಾದ ಪ್ರೀತಿಯ ಗುಣವೇನೆಂದರೆ, ನಾವು ಯಾರನ್ನು ಪ್ರೀತಿಸುತ್ತೇವೋ ಅವರು ಮುಂದಕ್ಕೆ ಹೋಗಲಿ, ನಾನು ಹಿಂದೆಯೇ ಇರುತ್ತೇನೆ ಎನ್ನುತ್ತದೆ.
ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಲು ನಾನು ನಿಮಗೊಂದು ವೃತ್ತಾಂತವನ್ನು ಹೇಳುತ್ತೇನೆ. ಒಮ್ಮೆ ಮೂವರು ಸೂಫಿ ಸಂತರಿಗೆ, ಗಲ್ಲುಶಿಕ್ಷೆಯನ್ನು ವಿಧಿಸಲಾಯಿತು. ಧರ್ಮದ ರಕ್ಷಕರಂತೆ ಬೀಗುವವರೆಲ್ಲ ಇಷ್ಟೇ ತಾನೇ? ಅವರು ಯಾವಾಗಲೂ ನಿಜವಾದ ಸಂತರನ್ನು ದ್ವೇಷಿಸುತ್ತಾರೆ; ಅವರಿಗೆ ನಿಜವಾದ ಸಂತರನ್ನು ಕಂಡರೆ ಆಗುವುದಿಲ್ಲ. ಈ ಸಂತರನ್ನು ನೇಣಿಗೇರಿಸುವ ದಿನ ಬಂದೇಬಿಟ್ಟಿತು. ಆಗ ಈ ಮುವರೂ ಸಾಲಾಗಿ ಕೂತಿದ್ದರು. ಗಲ್ಲಿಗೇರಿಸುವವನು ಬಂದು ’ನಾನು ನಿಮ್ಮ ಹೆಸರನ್ನು ಒಂದೊಂದಾಗಿ ಕರೀತೀನಿ. ಆಗ ನೀವು ಒಬ್ಬೊಬ್ಬರಾಗಿ ಎದ್ದು ಬರಬೇಕು,’ ಎಂದ. ಹೀಗೆಂದವನೇ ಅವನು ಮೊದಲಿಗೆ ’ನೂರಿ, ನೀನು ಎದ್ದು ಬಾರಯ್ಯ,’ ಎಂದ. ಆಗ ದಡಕ್ಕನೆ ಒಬ್ಬಾತ ಎದ್ದ. ಆದರೆ, ನಿಜವಾದ ನೂರಿ ಮಾತ್ರ ಕೂತೇ ಇದ್ದ. ಎದ್ದಾತ ’ನೀನು ಗಲ್ಲಿಗೆ ಹಾಕುವುದಾದರೆ ಮೊದಲು ನನ್ನನ್ನು ಹಾಕು, ಅವನನ್ನಲ್ಲ’ ಎಂದ. ಕೊರಳಿಗೆ ನೇಣು ಬಿಗಿಯುವವನು ಇದನ್ನು ಕಂಡು ’ಹೇ, ನೀನು ನೂರೀನಾ? ನೀನ್ಯಾಕೆ ಸಾಯೋಕೆ ಇಷ್ಟೊಂದು ಅವಸರದಲ್ಲಿದ್ದೀಯ?’ ಎಂದ. ನೇಣಿಗೆ ಗೋಣು ಕೊಡಲು ಎದ್ದು ಬಂದವನು ’ನೋಡಯ್ಯ, ನನಗೆ ನೂರಿ ಅಂದರೆ ಪಂಚಪ್ರಾಣ. ನಾವಿಬ್ಬರೂ ಸಾಯೋ ಸಂದರ್ಭ ಅಂತೇನಾದರೂ ಬಂದರೆ ಅವನಿಗಿಂತ ಮೊದಲು ನಾನು ಸಾಯ್ಬೇಕು, ಅದೇ ಬದುಕುಳಿಯೋ ಸಂದರ್ಭ ಬಂದರೆ ಅವನು ಬದುಕುಳಿಯಬೇಕು ಅನ್ನೋದನ್ನು ನಾನು ಅರ್ಥ ಮಾಡ್ಕೊಂಡಿದ್ದೀನಿ. ನನ್ನ ಈ ಗೆಳೆಯ ನನಗಿಂತ ಮೊದಲು ಸಾಯೋದನ್ನು ನಾನು ನೋಡಲಾರೆ. ಅದೇನಿದ್ದರೂ ನನ್ನ ಸರದಿಯೇ ಆಗಬೇಕು. ಅದೇ, ಬದುಕುಳಿಯೋದಾದರೆ ಅವನು ನನಗಿಂತ ಹೆಚ್ಚು ಕಾಲ ಬದುಕಬೇಕು,’ ಎಂದು ಉತ್ತರ ಕೊಟ್ಟ.
ಪ್ರೀತಿಯ ವರಸೆ ಅಂದರೆ ಇದು! ಆದರೆ, ಜಿದ್ದಾಜಿದ್ದಿನ ಸ್ಪರ್ಧೆಗೆ ಇದೆಲ್ಲ ಗೊತ್ತೇ ಇಲ್ಲ. ಅದು ಸಾಯುವ ಸಂದರ್ಭ ಬಂದರೆ ಮೊದಲು ಬೇರೆಯವರನ್ನು ಮುಂದಕ್ಕೆ ತಳ್ಳಿ, ನೀನು ಹಿಂದೆಯೇ ನಿಲ್ಲುವಂತೆ ಹೇಳುತ್ತದೆ. ಅದೇ, ಬದುಕುಳಿಯುವ ಪರಿಸ್ಥಿತಿ ಬಂದರೆ ಎಲ್ಲರಿಗಿಂತ ಮುಂದಿರುವ ವ್ಯಸನವನ್ನು ಕಲಿಸುತ್ತದೆ. ಅಂದಮೇಲೆ ಎಳೆಯ ಮಕ್ಕಳಿಗೆ ನಾವು ಸ್ಪರ್ಧೆ ಮತ್ತು ಮಹತ್ತ್ವಾಕಾಂಕ್ಷೆ ಎಂಬ ವಿಷವನ್ನುಣಿಸಿದ ಮೇಲೆ ಜಗತ್ತು ನೆಮ್ಮದಿಯಿಂದ ಇರುವುದು ಸಾಧ್ಯವೇ? ಇಪ್ಪತ್ತು ವರ್ಷಗಳ ಕಾಲ ಇದನ್ನೇ ಕಲಿತ ಒಂದು ಮಗು ಇತರ ಮಕ್ಕಳನ್ನು ಹಿಂದಿಕ್ಕಿ ಮುನ್ನುಗ್ಗಲು ಹವಣಿಸತೊಡಗುತ್ತದೆ; ಉಳಿದ ಮಕ್ಕಳೆಲ್ಲರೂ ಇನ್ನೊಂದು ಮಗುವನ್ನು ಹಿಂದಕ್ಕೆ ತಳ್ಳಿಹಾಕಲು ಹೊಂಚು ಹಾಕುತ್ತಿರುತ್ತಾರೆ. ಹೀಗೆ ಶಾಲೆ-ಕಾಲೇಜುಗಳಲ್ಲಿ ಇದನ್ನೇ ಕಲಿತ ಮಗು ಮುಂದೆ ಜೀವನದಲ್ಲಿ ಇನ್ನೇನು ಮಾಡುತ್ತದೆ? ಅವನು ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಈ ದ್ವೇಷ, ಅಸೂಯೆ, ವೈರತ್ವವನ್ನೇ ಮುಂದುವರಿಸುತ್ತಾನೆ.
ಕಾಲೆಳೆಯುವ ಕಲಿಕೆ
ಇಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದರೆ ಒಬ್ಬನು ಇನ್ನೊಬ್ಬನ ಕಾಲನ್ನು ಎಳೆಯುತ್ತಿದ್ದಾನೆ. ಜವಾನನಿಂದ ಹಿಡಿದು ದಿವಾನನವರೆಗೂ ಈ ಮಾತು ಅನ್ವಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಜವಾನನಾಗಿದ್ದವನೇನಾದರೂ ದಿವಾನನಾದರೆ ’ಇದು ನಿಜಕ್ಕೂ ಅಭಿಮಾನದ ಮತ್ತು ಹೆಮ್ಮೆಯ ಸಂಗತಿ. ಇದು ಅವನಿಗೆ ಘನತೆಯನ್ನು ತಂದುಕೊಟ್ಟಿದೆ,’ ಎನ್ನುತ್ತೇವೆ. ಆದರೆ ವಾಸ್ತವವಾಗಿ, ಮಿಕ್ಕವರನ್ನೆಲ್ಲ ಹಿಂದಕ್ಕೆ ತಳ್ಳಿ ಯಾರೋ ಒಬ್ಬನನ್ನು ಮೇಲಕ್ಕೆತ್ತುವುದಕ್ಕಿಂತ ಭೀಕರವಾದ ಹಿಂಸೆ ಇನ್ನೊಂದಿಲ್ಲ. ಆದರೆ, ನಾವು ಈ ಹಿಂಸೆಯನ್ನೇ ಮಕ್ಕಳಿಗೆ ಕಲಿಸಿಕೊಡುತ್ತಿದ್ದು ಇದನ್ನೇ ಶಿಕ್ಷಣ ಎಂದು ಕರೆಯುತ್ತಿದ್ದೇವೆ. ಇಂಥ ಹಿಂಸೆಯಿಂದ ಕೂಡಿರುವ ಜಗತ್ತಿನಲ್ಲಿ ನಿರಂತರವಾಗಿ ಯುದ್ಧಗಳೇನಾದರೂ ಸಂಭವಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ! ಈ ಬಗೆಯ ಶಿಕ್ಷಣವನ್ನು ನೆಚ್ಚಿಕೊಂಡಿರುವ ಸಮಾಜದಲ್ಲಿ ಏನಾಗುತ್ತಿದೆಯೆಂದರೆ, ಗುಡಿಸಲುಗಳ ಬಳಿಯೇ ಅರಮನೆಗಳಂಥ ಬಂಗಲೆಗಳನ್ನು ಕಟ್ಟಲಾಗುತ್ತಿದೆ. ಈ ಐಷಾರಾಮಿ ಬಂಗಲೆಗಳಲ್ಲಿರುವವರು ಗುಡಿಸಲುಗಳಲ್ಲಿರುವ ಜನರು ಸಾಯುವುದನ್ನು ಕಂಡು ಸಂತೋಷಪಟ್ಟರೆ ಅದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಇಲ್ಲಿ ಒಂದೆಡೆ ಕಡುಬಡವರಿದ್ದಾರೆ. ಇನ್ನೊಂದೆಡೆ, ಅಗತ್ಯಕ್ಕಿಂತ ಹೆಚ್ಚು ಸಿರಿವಂತರಾಗಿದ್ದು, ಅದನ್ನು ಏನು ಮಾಡಬೇಕೆಂದು ತೋಚದೆ ಒದ್ದಾಡುವವರಿದ್ದಾರೆ. ಇದಕ್ಕೆಲ್ಲ ಈಗಿನ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರೇ ಕಾರಣ. ಇಂತಹ ಕೆಟ್ಟ ಶಿಕ್ಷಣವನ್ನು ನೆಚ್ಚಿಕೊಂಡು ಈ ಜಗತ್ತು ರೂಪುಗೊಂಡಿರುವುದಕ್ಕೆ ಶಿಕ್ಷಕರೇ ಹೊಣೆ! ಜಗತ್ತಿನಲ್ಲಿ ಇವತ್ತು ಶೋಷಣೆಯೇನಾದರೂ ಇದ್ದರೆ ಅದಕ್ಕೆ ಈ ಶಿಕ್ಷಕರೇ ಕಾರಣ. ಮಕ್ಕಳಿಗೆ ಶಿಕ್ಷಣ ಕೊಡುತ್ತೇವೆನ್ನುವ ನೆಪದಲ್ಲಿ ಇವರು ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ದಾಳವಾಗಿ ಹೋಗಿದ್ದಾರೆ.
@ckphotography9
ನಿಜವಾದ ಶಿಕ್ಷಣ ಅಂದರೆ..?
ಇದೇ ನಿಜವಾದ ಶಿಕ್ಷಣ ಎನ್ನುವುದಾದರೆ ಇದನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ಒಳ್ಳೆಯದು. ಪ್ರಾಯಶಃ ಅದರಿಂದ ಮನುಷ್ಯನಿಗೆ ಒಳ್ಳೆಯದೇ ಆಗುತ್ತದೆ. ಇವತ್ತು ಕಾಡುಮೇಡುಗಳಲ್ಲಿ ಬದುಕುತ್ತಿರುವ ಅವಿದ್ಯಾವಂತನೊಬ್ಬ ಆಧುನಿಕ ಜಗತ್ತಿನ ವಿದ್ಯಾವಂತನಿಗಿಂತ ಉತ್ತಮನಾಗಿದ್ದಾನೆ. ಏಕೆಂದರೆ, ಅವನ ಅಂತರಂಗದಲ್ಲಿ ಈ ವಿದ್ಯಾವಂತನಿಗಿಂತ ಹೆಚ್ಚು ಪ್ರೀತಿಯ ಪಸೆ ಇರುತ್ತದೆ. ಅವನಲ್ಲಿ ಸ್ಪರ್ಧೆಯ ಮನೋಭಾವನೆ ನಿಜಕ್ಕೂ ತುಂಬಾ ಕಡಿಮೆ ಇರುತ್ತದೆ. ಹಾಗೆಯೇ, ಅವನ ಹೃದಯ ನಿಜಕ್ಕೂ ಕಳಕಳಿಯಿಂದ ಮಿಡಿಯುತ್ತಿರುತ್ತದೆ; ಹಾಗೆಯೇ, ಅವನ ಮಿದುಳು ಆಧುನಿಕನ ಮಿದುಳಿನಂತೆ ಅನಾರೋಗ್ಯಕರವಾಗಿ ಕೆಲಸ ಮಾಡುತ್ತಿರುವುದಿಲ್ಲ. ಇದನ್ನು ನಾವು ಶಿಕ್ಷಣ ಎನ್ನುತ್ತಿದ್ದೇವೆ! ನಾವು ಮಕ್ಕಳು ಏನೇನನ್ನು ಮಾಡಬೇಕೆಂದು ನಿರೀಕ್ಷಿಸುತ್ತೇವೋ ಅದಕ್ಕೆ ತದ್ವಿರುದ್ಧವಾದುದನ್ನು ಹೇಳಿಕೊಡುತ್ತಿದ್ದೇವೆ. ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಎಷ್ಟೊಂದು ಅಧ್ವಾನವಾಗಿದೆ ಎಂದರೆ, ಇಲ್ಲಿ ಬರೀ ವಿರೋಧಾಭಾಸದಿಂದ ಕೂಡಿರುವ ಸಂಗತಿಗಳನ್ನೇ ಕಲಿಸಿ ಕೊಡುತ್ತಿದ್ದೇವೆ. ಹಾಗಾದರೆ ನಾವು ನಿಜಕ್ಕೂ ಏನನ್ನು ಬೋಧಿಸಬೇಕು? ಮಕ್ಕಳಿಗೆ ನಾವು ಈಗ ಸಹಾನುಭೂತಿ ಮತ್ತು ಔದಾರ್ಯಗಳನ್ನು ಕಲಿಸಬೇಕಾಗಿದೆ. ಆದರೆ, ಸ್ಪರ್ಧೆಯ ಜಿದ್ದಿಗೆ ಬಿದ್ದಿರುವ ಒಂದು ಮನಸ್ಸು ಔದಾರ್ಯದಿಂದಲೂ ಸಹಾನುಭೂತಿಯಿಂದಲೂ ಕೂಡಿರುವುದಾದರೂ ಹೇಗೆ? ಮಗುವಿನ ಮನಸ್ಸಿನಲ್ಲಿ ಸಹಾನುಭೂತಿಯ ಭಾವನೆ ಸಮೃದ್ಧವಾಗಿದ್ದರೆ ಅವನು ಸ್ಪರ್ಧಿಸಲಾರ. ಜಿದ್ದಾಜಿದ್ದಿನ ಭಾವನೆಯಿಂದ ಕೂಡಿರುವ ಮನಸ್ಸು ಯಾವಾಗಲೂ ಕಠೋರವಾಗಿರುತ್ತದೆ; ಹಿಂಸೆಯಿಂದ ಕೂಡಿರುತ್ತದೆ; ಅಲ್ಲಿ ಔದಾರ್ಯದ ಸಣ್ಣ ತಂತುವೂ ಇರುವುದಿಲ್ಲ. ಇಂಥ ಸ್ವಭಾವದವನು ಹೀಗೆಯೇ ಇರಬೇಕು. ಒಬ್ಬನನ್ನು ಹಿಂದಕ್ಕೆ ತಳ್ಳಿ ತಾನು ಮಾತ್ರ ಮುಂದಕ್ಕೆ ಹೋಗುವುದು ಹಿಂಸೆ ಎನ್ನುವುದನ್ನೇ ನಮ್ಮ ವ್ಯವಸ್ಥೆ ಅರ್ಥ ಮಾಡಿಕೊಂಡಿಲ್ಲ. ಅಂದರೆ, ವ್ಯವಸ್ಥೆ ಅಷ್ಟೊಂದು ಜಡವಾಗಿದೆ. ಇಲ್ಲಿ ಎಲ್ಲರೂ ಹಿಂಸಕರಾಗಿದ್ದು, ಪ್ರತಿಯೊಬ್ಬರೂ ಇನ್ನೊಬ್ಬರನ್ನು ಹಿಂಸಿಸುವಂತೆ ನಾವು ಅವರನ್ನು ಸಜ್ಜುಗೊಳಿಸುತ್ತಿದ್ದೇವೆ. ಹೀಗೆ, ಶಿಕ್ಷಣದ ಹೆಸರಿನಲ್ಲಿ ಫ್ಯಾಕ್ಟರಿಗಳು ಒಂದೇ ಸಮನೆ ಹೆಚ್ಚಾಗುತ್ತಿವೆ. ಇಂಥ ಫ್ಯಾಕ್ಟರಿಗಳನ್ನು ನಾವು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳೆಂದು ಕರೆಯುತ್ತಿದ್ದೇವೆ. ಇದಕ್ಕಿಂತ ಹಸಿಸುಳ್ಳು ಇನ್ನೊಂದಿಲ್ಲ. ಈ ಫ್ಯಾಕ್ಟರಿಗಳಲ್ಲಿ ನಾವು ರೋಗಗ್ರಸ್ತ ಮನಸ್ಸುಗಳನ್ನಷ್ಟೇ ಸೃಷ್ಟಿಸುತ್ತಿದ್ದು, ಇಂತಹ ಮನಸ್ಸುಗಳೇ ಇಡೀ ಜಗತ್ತನ್ನು ಕಂದಕಕ್ಕೆ ತಳ್ಳುತ್ತಿವೆ. ಎಲ್ಲೆಡೆಯೂ ಹಿಂಸೆ ಮತ್ತು ಸ್ಪರ್ಧೆ ಹೆಚ್ಚಾಗುತ್ತಿವೆ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಕೈಯನ್ನು ಇನ್ನೊಬ್ಬರ ಕುತ್ತಿಗೆಯ ಮೇಲಿಟ್ಟಿದ್ದು, ಹಿಸುಕಲು ನೋಡುತ್ತಿದ್ದಾರೆ.
ನನ್ನ ಮುಂದೆ ಕೂತಿರುವ ನೀವೆಲ್ಲರೂ ಈಗ ’ಹಾಗಾದರೆ ನಾವು ಯಾರ ಕೊರಳಪಟ್ಟಿಯನ್ನು ಹಿಡಿದುಕೊಂಡಿದ್ದೇವೆ?’ ಎಂದು ಕೇಳಬಹುದು. ಇದು ಗೊತ್ತಾಗಬೇಕಾದರೆ, ನೀವು ಈ ಸಮಾಜವನ್ನು ಆಳವಾಗಿ ಗಮನಿಸಬೇಕು. ಆಗಮಾತ್ರ ನಿಮಗೆ ಈ ಸತ್ಯ -ಒಬ್ಬರ ಇನ್ನೊಬ್ಬರ ಕುತ್ತಿಗೆಯನ್ನು ಹಿಡಿದುಕೊಂಡಿರುವುದು- ಗೊತ್ತಾಗುತ್ತದೆ. ಇಷ್ಟೇ ಅಲ್ಲ, ಇಲ್ಲಿ ಒಬ್ಬರ ಕೈ ಇನ್ನೊಬ್ಬರ ಜೇಬಿನಲ್ಲಿದೆ. ಇದು ಇನ್ನೂ ಎಷ್ಟು ಕಾಲ ಹೀಗೆಯೇ ಮುಂದುವರಿಯುತ್ತದೆ? ಇದಕ್ಕೆ ಕೊನೆ ಎಲ್ಲಿ? ಈ ಜಲಜನಕದ ಬಾಂಬುಗಳು ಮತ್ತು ಅಣುಬಾಂಬುಗಳು ಎಲ್ಲಿಂದ ಬರುತ್ತಿವೆ? ಇದಕ್ಕೆಲ್ಲ ಕಾರಣ, ಸ್ಪರ್ಧೆ ಮತ್ತು ದ್ವೇಷ ಅಷ್ಟೆ! ಇಬ್ಬರು ವ್ಯಕ್ತಿಗಳ ನಡುವೆಯೇ ದ್ವೇಷವಿರಲಿ, ಎರಡು ದೇಶಗಳ ನಡುವೆಯೇ ವೈರತ್ವವಿರಲಿ, ಇದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಇದನ್ನೆಲ್ಲ ರಷ್ಯಾವೇ ಮಾಡಲಿ, ಅಮೆರಿಕವೇ ಮಾಡಲಿ, ಯಾವ ವ್ಯತ್ಯಾಸವೂ ಇಲ್ಲ. ಎಲ್ಲೆಲ್ಲೂ ಸ್ಪರ್ಧೆ ಇದ್ದು, ನಾವು ಅದರೊಂದಿಗೆ ಏಗಬೇಕಾಗಿದೆ ಅಷ್ಟೆ. ಇಲ್ಲಿ ಒಬ್ಬ ಅಣುಬಾಂಬನ್ನು ತಯಾರಿಸುತ್ತಿದ್ದಾನೆ ಎಂದರೆ, ಅದಕ್ಕೆ ಎದುರಾಗಿ ನಾವು ಜಲಜನಕದ ಬಾಂಬನ್ನು ಮಾಡುತ್ತೇವೆ; ಇಷ್ಟು ಸಾಲದೆಂದು ಸೂಪರ್ ಹೈಡ್ರೋಜನ್ ಬಾಂಬನ್ನು ತಯಾರಿಸುತ್ತೇವೆಯೇ ಹೊರತು ’ಅವನು ಏನಾದರೂ ಮಾಡಿಕೊಳ್ಳಲಿ, ಅದರಿಂದ ನಮಗೇನು?’ ಎಂದು ಸುಮ್ಮನಾಗುವುದಿಲ್ಲ. ಇಲ್ಲಿ ನಮ್ಮ ಎದುರಾಳಿಯೇನಾದರೂ ಒಂದು ದೇಶದ ಮೇಲೆ ಮುಗಿಬಿದ್ದರೆ ನಾವು ಎರಡು ದೇಶಗಳ ಮೇಲೆ ಎರಗುತ್ತೇವೆ. ಅಂದರೆ, ನಾವು ಸರ್ವನಾಶ ಮಾಡಲು ಸಿದ್ಧರಾಗಿದ್ದೇವೆಯೇ ವಿನಾ ಸುಮ್ಮನಿರುವುದಲ್ಲ ಎಂದರ್ಥ. ಇಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿರುವವರು ಯಾರು? ನಮ್ಮ ಶಿಕ್ಷಣವೇ ಇದಕ್ಕೆ ಕಾರಣ! ಆದರೆ ನಾವೆಲ್ಲರೂ ಕುರುಡರು. ಹೀಗಾಗಿ, ನಮಗೆ ಇಲ್ಲಿನ ಸಮಸ್ಯಗಳು ಕಾಣಿಸುತ್ತಿಲ್ಲ. ನಾವು ಮಕ್ಕಳಿಗೆ ’ನೀವು ಯಾವತ್ತೂ ದುರಾಸೆಯನ್ನು ಬೆಳೆಸಿಕೊಳ್ಳಬಾರದು; ಯಾವತ್ತೂ ನೀವು ಇನ್ನೊಬ್ಬರಿಗೆ ಹೆದರಬಾರದು,’ ಎಂದು ಹೇಳುತ್ತೇವೆ. ಆದರೆ, ಮಕ್ಕಳಲ್ಲಿ ನಾವು ಇದನ್ನೆಲ್ಲ ನಿಜಕ್ಕೂ ರೂಢಿಸುತ್ತಿದ್ದೇವೆಯೆ? ಖಂಡಿತವಾಗಿಯೂ ಇಲ್ಲ. ಏಕೆಂದರೆ, ನಾವು ಸದಾ ಅವರಿಗೆ ಅತಿಯಾಸೆ ಬೆಳೆಸಿಕೊಳ್ಳುವುದನ್ನೂ ಪುಕ್ಕಲುತನವನ್ನೂ ಹೇಳಿಕೊಡುತ್ತಿದ್ದೇವೆ.
ದುರಾಸೆ ಮತ್ತು ಭಯ ಬಿತ್ತನೆ
ಹಿಂದೆಲ್ಲ ನರಕದ ಭಯವೂ ನಾಕದ ಆಸೆಯೂ ತುಂಬಾ ಜೋರಾಗಿದ್ದವು. ಇದನ್ನೇ ಸಾವಿರಾರು ವರ್ಷಗಳ ಕಾಲದಿಂದ ಬೋಧಿಸಲಾಗಿದೆ. ನಾನು ನರಕಕ್ಕೆ ಹೋಗಿ ಬೀಳಬಹುದೆನ್ನುವ ಭಯ ನನಗಿದೆ. ಹಾಗೆಯೇ, ಏನಾದರೂ ಮಾಡಿ ಸ್ವರ್ಗವಾಸಿಯಾಗಬೇಕೆನ್ನುವ ದುರಾಸೆಯೂ ನನಗಿದೆ. ಎಲ್ಲಿ ಪುರಸ್ಕಾರ ಮತ್ತು ಶಿಕ್ಷೆಗಳು ಪ್ರಧಾನವಾಗಿದೆಯೋ ಅಲ್ಲಿ ಅನುಕ್ರಮವಾಗಿ ದುರಾಸೆ ಮತ್ತು ಭಯಗಳೂ ಇರುತ್ತವೆ. ಆದರೆ, ನಾವು ನಮ್ಮ ಮಕ್ಕಳಿಗೆ ಏನನ್ನು ಬೋಧಿಸುತ್ತಿದ್ದೇವೆ? ನಮ್ಮ ಬೋಧನೆಯ ವಿಧಾನವಾದರೂ ಏನು? ನಾವು ಅನುಸರಿಸುತ್ತಿರುವ ಒಂದೇಒಂದು ವಿಧಾನವೆಂದರೆ ಇದೇ- ದುರಾಸೆ ಮತ್ತು ಭಯಗಳನ್ನು ಬಿತ್ತುವ ವಿಧಾನ! ಒಂದೋ ನಾವು ಮಕ್ಕಳನ್ನು ವಿನಾ ಕಾರಣ ಶಿಕ್ಷಿಸುತ್ತೇವೆ; ಇಲ್ಲದಿದ್ದರೆ ಅವರಲ್ಲಿ ಚಿನ್ನದ ಪದಕಗಳ ಆಸೆಯನ್ನು, ಒಳ್ಳೆಯ ಹೆಸರು ಮಾಡಬೇಕೆಂಬ ದುರಾಸೆಯನ್ನು, ಸರಿಯಾದ ಅಧಿಕಾರವನ್ನು ಗಳಿಸಿಕೊಳ್ಳಬೇಕೆಂಬ ಕೆಟ್ಟ ಹಂಬಲವನ್ನು ಅಥವಾ ಸಮಾಜದಲ್ಲಿ ಭಾರೀ ಸ್ಥಾನಮಾನ ಗಳಿಸಿಕೊಳ್ಳಬೇಕೆಂಬ ಅಂಶವನ್ನು ಅವರಲ್ಲಿ ತುರುಕಿ, ಪ್ರಚೋದಿಸುತ್ತೇವೆ.
ನಾನು ವಿದ್ಯಾರ್ಥಿಯಾಗಿದ್ದಾಗ ’ನೀನು ಚೆನ್ನಾಗಿ ಓದಿದರೆ ಶ್ರೀಮಂತನಾಗಬಹುದು, ಮಂತ್ರಿಯಾಗಿ ಅಧಿಕಾರ ಚಲಾಯಿಸಬಹುದು, ಇಲ್ಲವೇ ಅಧ್ಯಕ್ಷನಾಗಬಹುದು,’ ಎನ್ನುವ ಮಾತು ಚಾಲ್ತಿಯಲ್ಲಿತ್ತು. ನಾವು ಮಕ್ಕಳ ಮನಸ್ಸಿನಲ್ಲಿ ಇಂತಹ ಕೆಟ್ಟ ಆಸೆಗಳನ್ನು ಉದ್ದೀಪಿಸುತ್ತೇವೆ. ಯಾವತ್ತಾದರೂ ನಾವು ಮಕ್ಕಳಿಗೆ `ನೋಡಿ, ಬದುಕಿನಲ್ಲಿ ಶಾಂತಿ ಮತ್ತು ಸಂತೋಷದಿಂದ ಬದುಕಬೇಕು,’ ಎಂದು ಹೇಳಿಕೊಟ್ಟಿದ್ದೇವಾ? ಖಂಡಿತವಾಗಿಯೂ ಇಲ್ಲ! ನಾವೇನಿದ್ದರೂ ಅವರಿಗೆ ದೊಡ್ಡದೊಡ್ಡ ಅಧಿಕಾರದ ಹುದ್ದೆಗಳಿಗೇರಬೇಕೆಂದೇ ಹೇಳಿಕೊಟ್ಟಿದ್ದೇವೆ. ನಾವು ಅವರಿಗೆ ದುಡ್ಡನ್ನು ಸಂಪಾದಿಸುವುದು ಹೇಗೆ ಮತ್ತು ಒಳ್ಳೊಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳುವುದು ಹೇಗೆಂದು ಬೋಧಿಸಿದ್ದೇವೆ. ನಾವು ಅವರಿಗೆ ಹೆಚ್ಚುಹೆಚ್ಚು ದುರಾಸೆಯನ್ನು ಬೆಳೆಸಿಕೊಳ್ಳುವುದನ್ನು ಕಲಿಸಿದ್ದೇವೆ. ಏಕೆಂದರೆ, ಇದಕ್ಕೇ ನಾವು ’ಯಶಸ್ಸು’ ಎಂಬ ಹೆಸರಿಟ್ಟಿದ್ದೇವೆ. ಇಂತಹ ಯಶಸ್ಸನ್ನು ಗಳಿಸದೆ ಇರುವವರಿಗೆ ನಾವು ಎಲ್ಲಾದರೂ ಸೂಕ್ತ ಸ್ಥಾನಮಾನ ಕೊಟ್ಟಿದ್ದೇವಾ?
ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಯಶಸ್ಸನ್ನು ಗಳಿಸದೆ ಇರುವವರಿಗೆ ಯಾವ ಜಾಗವೂ ಇಲ್ಲ. ನಾವು ಕೇವಲ ಯಶಸ್ಸೆಂಬ ಕಾಯಿಲೆಯನ್ನಷ್ಟೇ ಸೃಷ್ಟಿಸುತ್ತಿದ್ದೇವೆ. ಹೀಗಾಗಿ ಪ್ರತಿಯೊಬ್ಬರೂ ಇಲ್ಲಿ ಯಶಸ್ಸನ್ನು ಗಳಿಸಲು ಹಪಹಪಿಸುತ್ತಿದ್ದು, ಅದಕ್ಕೇನೇನು ಬೇಕೋ ಅದನ್ನಷ್ಟೇ ಮಾಡುತ್ತಿದ್ದಾರೆ. ಆದರೆ, ಯಶಸ್ಸು ಎಲ್ಲ ಬಗೆಯ ತಪ್ಪುಗಳನ್ನೂ ಮರೆಮಾಚಿ ಬಿಡುತ್ತದೆ. ಜವಾನನಾಗಿ ಕಸ ಗುಡಿಸಿಕೊಂಡಿದ್ದ ವ್ಯಕ್ತಿಯೊಬ್ಬ ನಾಳೆ ದಿವಾನನಾದರೆ ಅವನು ಆ ಹುದ್ದೆಗೆ ಬಂದಿದ್ದಾದರೂ ಹೇಗೆ ಎನ್ನುವ ಪ್ರಶ್ನೆಯನ್ನೇ ನಾವು ಮರೆತು ಬಿಡುತ್ತೇವೆ. ಅವನು ಈ ಸ್ಥಾನಕ್ಕೆ ಬರಲು ಯಾವ ಮಾರ್ಗವನ್ನನುಸರಿಸಿದ, ಯಾವ ಹುನ್ನಾರಗಳನ್ನು ಮಾಡಿದ, ಎಷ್ಟು ಸುಳ್ಳುಗಳನ್ನು ಹೇಳಿದ ಮತ್ತು ಯಾವ್ಯಾವ ತಂತ್ರಗಳನ್ನು ಅನುಸರಿಸಿದ ಎನ್ನುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಮನುಷ್ಯ ಅಧ್ಯಕ್ಷನಾಗಿದ್ದಾದರೂ ಹೇಗೆಂದು ಕೇಳುವ ಪ್ರಮೇಯವೇ ಇಲ್ಲಿ ತಲೆದೋರುವುದಿಲ್ಲ. ಇಲ್ಲಿ ಯಾರೂ ಏನನ್ನೂ ಪ್ರಶ್ನಿಸುವುದಿಲ್ಲ. ಒಬ್ಬ ಮನುಷ್ಯ ಒಂದು ಸಲ ಯಶಸ್ಸನ್ನು ಕಂಡುಬಿಟ್ಟರೆ ಸಾಕು, ಅವನು ಮಾಡಿದ ಪಾಪಗಳೆಲ್ಲವೂ ತೊಳೆದು ಹೋಗಿಬಿಡುತ್ತವೆ. ನಮ್ಮೆದುರಿಗಿರುವ ಗುರಿಯೆಂದರೆ ಯಶಸ್ಸೊಂದೇ. ಅಂದಮೇಲೆ, ವ್ಯಕ್ತಿಯೊಬ್ಬ ಸುಳ್ಳುಗಳನ್ನು ಹೇಳುತ್ತ ಮತ್ತು ಅಪ್ರಾಮಾಣಿಕವಾಗಿರುತ್ತ ಯಶಸ್ಸನ್ನು ಗಳಿಸಲು ನೋಡುತ್ತಾನೆ. ನಾನು ಪ್ರಾಮಾಣಿಕನಾಗಿದ್ದು, ಯಶಸ್ಸನ್ನು ಕಾಣಲಾರದವನಾದರೆ ಏನು ಮಾಡಬೇಕು ಹೇಳಿ?
ಯಶಸ್ಸಿಗೆ ಕಿಮ್ಮತ್ತೇ ಇಲ್ಲ
ಹೀಗೆ ನಾವು ಯಶಸ್ಸನ್ನೇ ಬದುಕಿನ ಕೇಂದ್ರಬಿಂದುವನ್ನಾಗಿ ಮಾಡಿಟ್ಟಿದ್ದೇವೆ. ಇದರ ಫಲವಾಗಿ ಸುಳ್ಳು ಹೇಳುವುದೂ ಅಪ್ರಾಮಾಣಿಕತೆಯೂ ದಿನದಿಂದ ದಿನಕ್ಕೆ ತಾಂಡವವಾಡುತ್ತಲೇ ಇವೆ. ಹೀಗಾಗಿ ನಾವೆಲ್ಲರೂ ತೀವ್ರವಾಗಿ ಅಸಂತೃಪ್ತರಾಗಿದ್ದೇವೆ. ಅಂದರೆ, ನಮ್ಮಲ್ಲಿ ಸುಖ-ಸಂತೋಷಗಳು ಮಾಯವಾಗುತ್ತಿವೆ. ಎಲ್ಲಿಯವರೆಗೂ ಯಶಸ್ಸೊಂದೇ ವ್ಯಕ್ಯಿಯೊಬ್ಬನನ್ನು ಅಳೆಯುವ ಮಾನದಂಡವಾಗಿರುತ್ತದೋ ಅಲ್ಲಿಯವರೆಗೂ ಸುಳ್ಳು, ತಟವಟ ಮತ್ತು ಕಳ್ಳತನಗಳು ಇದ್ದೇಇರುತ್ತವೆ. ಇವುಗಳನ್ನು ಕಿತ್ತು ಹಾಕುವುದು ನಿಜಕ್ಕೂ ಸುಲಭವಲ್ಲ. ಏಕೆಂದರೆ, ಯಶಸ್ಸನ್ನು ಗಳಿಸಬೇಕೆಂದರೆ ಸುಳ್ಳು ಮತ್ತು ಅಪ್ರಾಮಾಣಿಕತೆಯ ಹಾದಿಯನ್ನು ತುಳಿಯಲೇಬೇಕು ಎನ್ನುವಂತಹ ವಾತಾವರಣವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಸೃಷ್ಟಿಸಿದೆ. ಅಲ್ಲದೆ, ಮಿಕ್ಕೆಲ್ಲ ಸಂಗತಿಗಳೂ ಯಶಸ್ಸಿನ ಅಡಿಯಾಳುಗಳನ್ನಾಗಿ ಮಾಡಲಾಗಿದೆ. ಇನ್ನೊಂದೆಡೆ ನಾವು ‘ಅಯ್ಯೋ, ಸಮಾಜದಲ್ಲಿ ಅಪ್ರಾಮಾಣಿಕತೆಯೇ ವಿಜೃಂಭಿಸುತ್ತಿದೆ,’ ಎಂದು ಗಂಟಲು ಹರಿದುಕೊಳ್ಳುತ್ತಿದ್ದೇವೆ. ಆದರೆ, ಇದು ಅನಿವಾರ್ಯ. ಏಕೆಂದರೆ, ಸಾವಿರಾರು ವರ್ಷಗಳಿಂದಲೂ ನಾವು ಯಶಸ್ಸನ್ನು ಗಳಿಸುವುದೇ ಮುಖ್ಯ ಎಂದೇ ಬೋಧಿಸಿಕೊಂಡು ಬರುತ್ತಿದ್ದೇವೆ. ಇವೆಲ್ಲವೂ ಇದರ ಫಲವೇ ಆಗಿದೆ. ಯಶಸ್ಸಿಗೆ ನಿಜಕ್ಕೂ ಯಾವ ಕಿಮ್ಮತ್ತೂ ಇಲ್ಲ. ಅದಕ್ಕೆ ತುಂಬಾ ಮರ್ಯಾದೆಯನ್ನೇನೂ ಕೊಡಬೇಕಾಗಿಲ್ಲ. ಒಬ್ಬ ಮನುಷ್ಯ ಯಾವಾಗಲೂ ಸಂತೃಪ್ತನಾಗಿರಬೇಕೇ ವಿನಾ ಯಶಸ್ವಿಯಾಗಿರಬಾರದು. ಒಬ್ಬ ಮನುಷ್ಯ ಕೆಟ್ಟ ಮಾರ್ಗದಿಂದ ಯಶಸ್ಸನ್ನು ಗಳಿಸುವುದಕ್ಕಿಂತ ಒಳ್ಳೆಯ ಮಾರ್ಗದಲ್ಲಿದ್ದು ಸೋಲುವುದೇ ಒಳ್ಳೆಯದು. ಯಾವತ್ತೂ ನಾವು ಒಬ್ಬ ವ್ಯಕ್ತಿಯ ಒಳ್ಳೆಯ ಉದ್ದೇಶಗಳಿಗೆ ಬೆಲೆ ಕೊಡಬೇಕೇ ವಿನಾ ಅವನು ಕಂಡಿರುವ ಯಶಸ್ಸಿಗಲ್ಲ ಆದರೆ, ಸಾವಿರಾರು ವರ್ಷಗಳ ಕೆಟ್ಟ ಶಿಕ್ಷಣದ ಫಲವಾಗಿ ಯಶಸ್ಸೆನ್ನುವುದು ಒಂದು ಮೌಲ್ಯದ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗಿದ್ದು, ಇಡೀ ಬದುಕೇ ಇದರ ಸುತ್ತ ಗಿರಕಿ ಹೊಡೆಯುತ್ತಿದೆ.
ಇತ್ತೀಚೆಗೆ ಒಂದು ಶಿಕ್ಷಣ ಆಯೋಗವನ್ನು ರಚಿಸಲಾಯಿತು. ಅದರ ಅಧ್ಯಕ್ಷರು ನಾವು ನಮ್ಮ ವಿದ್ಯಾರ್ಥಿಗಳಿಗೆಲ್ಲ ಪ್ರಾಮಾಣಿಕವಾಗಿರುವಂತೆ ಪಾಠ ಮಾಡುತ್ತಲೇ ಇದ್ದೇವೆ. ಇದನ್ನು ನಾವು ಬಗೆಬಗೆಯಲ್ಲಿ ಹೇಳುತ್ತೇವೆ.ಆದರೂ ಮಕ್ಕಳು ತುಂಬಾ ಸಲ ಸುಳ್ಳನ್ನೇ ಹೇಳುತ್ತಿರುತ್ತಾರೆ,’ ಎಂದರು.ನಾನು ಈ ಅಧ್ಯಕ್ಷರನ್ನು ನೇರವಾಗಿಅಲ್ಲ ಸ್ವಾಮಿ, ನಿಮ್ಮ ಮಗ ನಾಳೆ ಜಾಡಮಾಲಿಯೋ, ಯಾವುದೋ ಒಂದು ಶಾಲೆಯಲ್ಲಿ ಜವಾನನೋ ಆದರೆ ನೀವು ಸುಮ್ಮನಿರುತ್ತೀರ? ಅಥವಾ ಅವನೂ ನಿಮ್ಮಂತೆಯೇ ಯಾವುದಾದರೂ ಆಯೋಗ, ಸಮಿತಿ ಇತ್ಯಾದಿಗಳ ಅಧ್ಯಕ್ಷನಾಗಬೇಕೆಂದೋ, ಯಾವುದಾದರೂ ದೇಶದಲ್ಲಿ ರಾಯಭಾರಿ ಯಾಗಬೇಕೆಂದೋ, ಅಥವಾ ಹಂತಹಂತವಾಗಿ ಅವನೂ ಉನ್ನತ ಸ್ಥಾನಮಾನದಲ್ಲಿ ವಿರಾಜಮಾನನಾಗಬೇಕೆಂದು ಬಯಸುತ್ತೀರೋ? ಅಕಸ್ಮಾತ್ ಅವನೇನಾದರೂ ಜಾಡಮಾಲಿಯಾದರೆ ನಿಮ್ಮಲ್ಲಿ ಕೋಲಾಹಲ ಉಂಟಾಗುವುದಿಲ್ಲವೇ?’ ಎಂದು ಕೇಳಿದೆ. ಇದಕ್ಕೆ ಆ ಅಧ್ಯಕ್ಷರು ನೀವು ಹೇಳೋದು ನಿಜವೇ. ನಮ್ಮ ಮಗನೇನಾದರೂ ಜಾಡಮಾಲಿಯಾದರೆ ನನಗೆ ಅದನ್ನು ಸಹಿಸಿಕೊಳ್ಳೋಕೂ ಆಗೋದಿಲ್ಲ,’ ಎಂದರು.ನಾನುಸ್ವಾಮಿ, ಹಾಗಾದರೆ ನೀವು ನಿಜಕ್ಕೂ ನಿಮ್ಮ ಮಗ ಸತ್ಯಸಂಧನೂ ಪ್ರಾಮಾಣಿಕನೂ ಆಗಿರಬೇಕೆಂದು ಬಯಸುತ್ತಿದ್ದೀರ?’ ಎಂದೆ.
ಪ್ರಾಮಾಣಿಕತೆ ಎಲ್ಲಿ ಬರುತ್ತದೆ?
ಎಲ್ಲಿಯವರೆಗೆ ನಾವು ಒಬ್ಬ ಜವಾನನಿಗೆ ಬೆಲೆ ಕೊಡುವುದಿಲ್ಲವೋ, ಮತ್ತು ಎಲ್ಲಿಯವರೆಗೆ ದಿವಾನನಿಗೆ ಮಾತ್ರ ಬೆಲೆ ಕೊಡುತ್ತೇವೋ ಅಲ್ಲಿಯವರೆಗೂ ಜಗತ್ತಿನಲ್ಲಿ ಪ್ರಾಮಾಣಿಕತೆ ಬರಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ಒಬ್ಬ ಜವಾನ ಅದೇ ಹುದ್ದೆಯಲ್ಲಿರುವುದು ಅಸಂಭವ. ಇದಕ್ಕೂ ಕಾರಣವಿದೆ. ಅದೇನೆಂದರೆ, ನಮ್ಮೆಲ್ಲದ ಬದುಕೂ ತುಂಬಾ ದೀರ್ಘವಾದುದು. ಹೀಗಾಗಿ ಇಲ್ಲಿ ಪ್ರಾಮಾಣಿಕನಾಗಿದ್ದುಕೊಂಡು ’ಇವತ್ತಲ್ಲ ನಾಳೆ ನಾನು ಗೆದ್ದೇ ಗೆಲ್ಲುತ್ತೀನಿ,’ ಎಂದು ಸುಮ್ಮನೆ ಕೂತುಕೊಳ್ಳಲು ಸಾಧ್ಯವಿಲ್ಲ. ಅಸತ್ಯದ ಹಾದಿಯು ನಿಮಗೆ ಯಶಸ್ಸನ್ನು ತಂದುಕೊಡುತ್ತದೆ ಎನ್ನುವುದಾದರೆ ಸತ್ಯದ ಹಾದಿಯಲ್ಲಿರಲು ಯಾರು ಬಯಸುತ್ತಾರೆ? ಇದು ಕೇವಲ ನಿಮ್ಮೊಬ್ಬರ ಕತೆಯಲ್ಲ. ಬದಲಿಗೆ ಸ್ವತಃ ನೀವೇ ಕೈಯಾರೆ ಸೃಷ್ಟಿಸಿರುವ ದೇವರು ಕೂಡ ಯಶಸ್ಸಿಗೆ ಮಾತ್ರ ಬೆಲೆ ಕೊಡುತ್ತಾನೆ! ಅಷ್ಟೇ ಏಕೆ, ನಿಮ್ಮದೇ ಸೃಷ್ಟಿಯಾದ ಸ್ವರ್ಗದಲ್ಲೂ ಗೆಲುವಿಗೆ ಮಾತ್ರ ಮರ್ಯಾದೆ!! ಇವತ್ತು ನಮ್ಮಲ್ಲಿ ಒಬ್ಬ ಜವಾನನೇನಾದರೂ ಸತ್ತರೆ ಅವನು ಸೀದಾ ನರಕಕ್ಕೇ ಹೋಗುತ್ತಾನೆ. ಯಾವ ಪ್ರಧಾನಮಂತ್ರಿಯೇ ಆಗಲಿ, ರಾಷ್ಟçಪತಿಯೇ ಆಗಲಿ, ಅವರಿಗೆಂದೂ ನರಕಪ್ರಾಪ್ತಿಯಾಗುವುದಿಲ್ಲ. ಸತ್ತ ಕೂಡಲೇ ಇವರೆಲ್ಲ ನೇರವಾಗಿ ಸ್ವರ್ಗವಾಸಿಗಳೇ ಆಗಿಬಿಡುತ್ತಾರೆ. ಈ ಯಶಸ್ಸೆನ್ನುವುದು ಬದುಕಿನ ಕೇಂದ್ರಬಿಂದುವಾಗಿದೆಯಲ್ಲವೇ? ನಿಜಕ್ಕೂ ಇದನ್ನು ನಾವು ಧ್ವಂಸಗೊಳಿಸಬೇಕಾಗಿದೆ. ನೀವು ನಿಜಕ್ಕೂ ನಿಮ್ಮ ಮಕ್ಕಳಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದುಕೊಂಡಿದ್ದರೆ, ನಿಜಕ್ಕೂ ನೀವು ಅವರನ್ನು ಪ್ರೀತಿಸುತ್ತಿದ್ದರೆ `ಯಶಸ್ಸಿನ ಜಪ’ವನ್ನು ನಿಲ್ಲಿಸಿ, ಅವರಿಗೆ ಸಂತೃಪ್ತಿಯಿಂದ ಬದುಕುವುದನ್ನು ಹೇಳಿಕೊಡಿ. ನಿಮಗೇನಾದರೂ ಈ ಮನುಕುಲದ ಬಗ್ಗೆ ಪ್ರೀತಿಯಿದ್ದರೆ, ನಿಮಗೇನಾದರೂ ಹೊಸ ಬಗೆಯ ಜಗತ್ತನ್ನು ಸೃಷ್ಟಿಸಬೇಕು ಎಂದಿದ್ದರೆ, ನಿಮಗೇನಾದರೂ ಒಂದು ಹೊಸ ಸಂಸ್ಕೃತಿ, ಹೊಸ ಬಗೆಯ ಮನುಷ್ಯರನ್ನು ಕಾಣಬೇಕೆನ್ನುವ ಹಂಬಲವಿದ್ದರೆ ಗತಕಾಲದ ಮೂರ್ಖತನಗಳನ್ನೆಲ್ಲ ಬಿಟ್ಟು, ಆಚೆಗೆ ಬನ್ನಿ. ಹೀಗೆ ಮುಂದಡಿ ಇಟ್ಟು, ಹೇಗೆ ನಮ್ಮೊಳಗಿನಿಂದಲೇ ಒಬ್ಬ ಬಂಡುಕೋರನನ್ನು ಸೃಷ್ಟಿಸಬಹುದು ಎಂಬುದನ್ನು ಯೋಚಿಸಿ. ಈಗೇನಾಗಿದೆ ಎಂದರೆ, ಇಲ್ಲಿ ಯಾವುದೂ ಸರಿಯಿಲ್ಲ. ಹೀಗಾಗಿ, ಬರೀ ಅಪರಾಧಿಗಳೇ ಎಲ್ಲೆಲ್ಲೂ ಕಂಡುಬರುತ್ತಿದ್ದಾರೆ.
ಶಿಕ್ಷಕ ಸಿಡಿದೇಳಲಿ
ಈ ಜಗತ್ತಿನಲ್ಲಿ ಶಿಕ್ಷಕನೆನ್ನುವ ವ್ಯಕ್ತಿಯು ಮೂಲಭೂತವಾಗಿ ಒಬ್ಬ ಬಂಡುಕೋರನಾಗಿರಬೇಕು. ಅವನಿಗೆ ಸಿಡಿದೇಳುವ ಗುಣವಿರಬೇಕು. ಆಗಮಾತ್ರ ಅವನು ಒಂದು ಹೊಸ ತಲೆಮಾರನ್ನು ಮುನ್ನಡೆಸಬಲ್ಲ. ಆದರೆ, ಈಗಿರುವ ಶಿಕ್ಷಕ ಒಬ್ಬ ಮಹಾ ಸಂಪ್ರದಾಯವಾದಿಯಾಗಿದ್ದು, ಬರೀ ಹಳೆಯದನ್ನೇ ತೌಡು ಕುಟ್ಟುತ್ತಿದ್ದಾನೆ. ಈ ಶಿಕ್ಷಕರು ಯಾವತ್ತಿಗೂ ಬದಲಾಗುವುದಿಲ್ಲ. ಯಾವತ್ತಾದರೂ ನೀವು ಒಂದು ವಿಚಾರದ ವಿರುದ್ಧ ಸಿಡಿದೆದ್ದಿರುವ ಶಿಕ್ಷಕನ ಬಗ್ಗೆ ಕೇಳಿದ್ದೀರ? ನಿಜ ಹೇಳಬೇಕೆಂದರೆ, ನಮ್ಮಲ್ಲಿ ಶಿಕ್ಷಕರಷ್ಟು ಕರ್ಮಠರು ಇನ್ನೊಬ್ಬರಿಲ್ಲ. ಹೀಗಾಗಿ ಅಪಾಯ ಜಾಸ್ತಿ! ಹೀಗಾಗಿ ಇವರಿಂದ ಲೋಕೋದ್ಧಾರವೂ ಸಾಧ್ಯವಿಲ್ಲ. ಹಾಗಾದರೆ ಶಿಕ್ಷಕರಿಂದ ನಾವು ಯಾವ ಬಗೆಯ ಬಂಡುಕೋರತನ್ನು ನಿರೀಕ್ಷಿಸಬೇಕು? ಶಿಕ್ಷಕನಾದವನು ಮನೆಗಳಿಗೆ ಬೆಂಕಿ ಹಚ್ಚಬೇಕಾ, ರೈಲುಗಳನ್ನು ಹಳಿ ತಪ್ಪಿಸಬೇಕಾ ಅಥವಾ ಬಸ್ಸುಗಳಿಗೆ ಬೆಂಕಿ ಇಡಬೇಕಾ? ಖಂಡಿತವಾಗಿಯೂ ಇದನ್ನೆಲ್ಲ ಅವನು ಮಾಡಬಾರದು. ನನ್ನ ಮಾತುಗಳನ್ನು ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ. ನನ್ನ ಮಾತಿನ ನಿಜವಾದ ಅರ್ಥವೇನೆಂದರೆ, ಶಿಕ್ಷಕನಾದವನು ನಮ್ಮ ಮೌಲ್ಯಗಳ ದೃಷ್ಟಿಯಿಂದ ಸಿಡಿದೇಳಬೇಕು. ಅಲ್ಲದೆ, ನಿಜಕ್ಕೂ ಈ ಸಮಾಜದಲ್ಲಿ ಎಲ್ಲಿ ಎಡವಟ್ಟಾಗುತ್ತಿದೆ ಎನ್ನುವ ಬಗ್ಗೆ ಅವನು ಸ್ಪಷ್ಟವಾಗಿ ಚಿಂತಿಸಬೇಕು.
ಒಂದು ಮಗು ಕೆಲವು ವಿಚಾರಗಳಲ್ಲಿ ಮುಂದಿದೆ ಎಂದಿಟ್ಟುಕೊಳ್ಳಿ. ಆ ಮಗುವಿಗೆ ಇನ್ನೊಂದು ಮಗುವನ್ನು ಹೋಲಿಸಿ ನೀನು ದಡ್ಡ ಶಿಖಾಮಣಿ, ನೀನೊಂದು ಕತ್ತೆ, ನೀನೊಬ್ಬ ಮುಟ್ಟಾಳ,’ ಎಂದೆಲ್ಲ ನೀವು ಹೀಯಾಳಿಸುತ್ತಿದ್ದ ಪಕ್ಷದಲ್ಲಿಅಯ್ಯೋ, ನಾನು ಹೀಗೆ ಮಾಡುತ್ತಿರುವುದ ಸರಿಯೇ?’ ಎಂದು ಪ್ರಶ್ನಿಸಿಕೊಳ್ಳಿ. ಈ ಜಗತ್ತಿನಲ್ಲಿ ಇಬ್ಬರು ಮನುಷ್ಯರು ಯಾವತ್ತಾದರೂ ಸರಿಸಮನಾಗಿರುವುದು, ಒಂದು ಮಗುವು ಇನ್ನೊಂದು ಮಗುವಿನಂತಾಗುವುದು ಸಾಧ್ಯವೇನು? ಹೀಗಾಗಿ, ಇಲ್ಲಿ ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವ ಪ್ರಶ್ನೆಯೇ ಬರಬಾರದು. ಇಷ್ಟೇ ಅಲ್ಲ, ಒಬ್ಬರನ್ನು ಇನ್ನೊಬ್ಬರ ಜೊತೆಗಿಟ್ಟು ಅಳೆಯುವ ಪ್ರಮೇಯವೂ ಇರಬಾರದು. ಯಾವತ್ತಿಗೂ ಒಂದು ಸಣ್ಣ ಕಲ್ಲು ಸಣ್ಣದೇ; ದೊಡ್ಡ ಬಂಡೆಯೊಂದು ದೊಡ್ಡದೇ. ಪ್ರಕೃತಿಯಲ್ಲೂ ಅಷ್ಟೇ, ಸಣ್ಣ ಗಿಡಗಳೂ ಇವೆ; ದೊಡ್ಡ ಮರಗಳೂ ಇವೆ. ಇಲ್ಲಿ ಹುಲ್ಲಿನ ಗರಿಕೆಯೂ ಇದೆ; ಗುಲಾಬಿ ಹೂವೂ ಇದೆ. ನಾವು ನಿಸರ್ಗದಿಂದ ಒಂದು ಪಾಠವನ್ನು ಕಲಿಯಬೇಕು. ಅದೇನೆಂದರೆ, ಅದು ಗುಲಾಬಿ ಹೂವನ್ನು ಮಾತ್ರ ಇಷ್ಟಪಡುವುದಿಲ್ಲ. ಬದಲಿಗೆ, ಹುಲ್ಲಿನ ಗರಿಕೆಯನ್ನೂ ಪ್ರೀತಿಸುತ್ತದೆ. ಅದು ಗುಲಾಬಿ ಹೂವಿಗೆ ಎಷ್ಟು ಅವಕಾಶ ಕೊಡುತ್ತದೋ ಗರಿಕೆ ಹುಲ್ಲಿಗೂ ಅಷ್ಟೇ ಅವಕಾಶ ಕೊಡುತ್ತದೆ. ನೀವು ಮನುಷ್ಯನ ಮನಸ್ಸನ್ನು ಪಕ್ಕಕ್ಕಿಡಿ. ನಿಜಕ್ಕೂ ಈ ಗುಲಾಬಿ ಹೂವು ಮತ್ತು ಗರಿಕೆ ಹುಲ್ಲಿನಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು? ಸತ್ಯವೇನೆಂದರೆ, ಇಲ್ಲಿ ಯಾವುದೂ ದೊಡ್ಡದಲ್ಲ; ಯಾವುದೂ ಚಿಕ್ಕದಲ್ಲ. ಒಂದು ಹುಲ್ಲಿನ ಗರಿಕೆಯು ತೆಂಗಿನ ಮರಕ್ಕಿಂತ ಚಿಕ್ಕದೇನು? ಇದೇ ನಿಜವಾಗಿ ಬಿಟ್ಟಿದ್ದರೆ ಆ ದೇವರು ಗರಿಕೆ ಹುಲ್ಲನ್ನು ನಾಶ ಮಾಡಿ, ಇಡೀ ಜಗತ್ತಿನಲ್ಲಿ ತೆಂಗಿನ ಮರಗಳೇ ತುಂಬಿರುವಂತೆ ಮಾಡುತ್ತಿದ್ದ. ಇಂತಹ ಸಮಸ್ಯೆಗಳಿಗೆಲ್ಲ ಕಾರಣವೇನೆಂದರೆ, ನಮ್ಮ ಮೌಲ್ಯವ್ಯವಸ್ಥೆ. ಇಲ್ಲಿ ಇಡೀ ಮೌಲ್ಯಗಳನ್ನು ತಪ್ಪುತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ಕೆಲವು ಗಾಢವಾದ ಸಂಗತಿಗಳನ್ನು ನಿಮಗೆಲ್ಲ ಹೇಳಬಯಸುತ್ತೇನೆ. ಮೊದಲಿಗೆ, ನಾವು ಎಲ್ಲಿಯವರೆಗೆ ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಸುತ್ತಿರುತ್ತೇವೋ ಅಲ್ಲಿಯವರೆಗೂ ತಪ್ಪು ಮಾಡುತ್ತಲೇ ಇರುತ್ತೇವೆ. ಈ ಹಾದಿಯಲ್ಲಿ ಏನಾಗುತ್ತಿದೆಯೆಂದರೆ, ನಾವು ಇನ್ನೊಬ್ಬರಂತಾಗಲು ಹೋಗುತ್ತಿದ್ದೇವೆ. ಆದರೆ, ವಾಸ್ತವವೇನೆಂದರೆ ಜಗತ್ತಿನಲ್ಲಿ ಯಾವೊಬ್ಬ ಮನುಷ್ಯನೂ ಇನ್ನೊಬ್ಬನಂತಾಗಲಾರ.
ರಾಮ ಮತ್ತು ಯೇಸು ಇಬ್ಬರೂ ಸಾವಿರಾರು ವರ್ಷಗಳ ಹಿಂದೆಯೇ ಸತ್ತು ಹೋಗಿದ್ದಾರೆ. ಇತ್ತ ಕೋಟ್ಯಂತರ ಕ್ರೈಸ್ತರು ಸ್ವತಃ ತಾವೇ ಇನ್ನೊಬ್ಬ ಕ್ರಿಸ್ತನಾಗಲು ತಹತಹಿಸುತ್ತಿದ್ದಾರೆ. ಆದರೂ ಇಷ್ಟೊಂದು ಕಾಲ ಉರುಳಿದರೂ ಏಕೆ ಇನ್ನೊಬ್ಬ ಕ್ರಿಸ್ತ ಹುಟ್ಟಿಲ್ಲ? ರಾಮನ ವಿಚಾರದಲ್ಲೂ ಇದೇ ಮಾತು ಸಲ್ಲುತ್ತದೆ. ಇನ್ನು ಜೈನರು ಮತ್ತು ಬೌದ್ಧರಲ್ಲೂ ಲಕ್ಷಾಂತರ ಜನ ಸ್ವತಃ ತಾವೇ ಮಹಾವೀರ ಮತ್ತು ಬುದ್ಧರಾಗಲು ಹವಣಿಸುತ್ತಿದ್ದಾರೆ. ಆದರೆ ಇದು ಸಾಧ್ಯವಾಗಿದೆಯೇ? ಇದು ನಿಮ್ಮ ಕಣ್ಣನ್ನು ತೆರೆಸಬೇಕು. ನಾನಿಲ್ಲಿ ರಾಮನ ಬಗ್ಗೆಯಾಗಲಿ, ರಾಮಲೀಲಾ ಬಗ್ಗೆಯಾಗಲಿ ಮಾತನಾಡುತ್ತಿಲ್ಲ. ನಾನು ಇಂತಹ ರಾಮನ ಬಗ್ಗೆ ಮಾತನಾಡುತ್ತಿದ್ದೇನೆಂದು ಅಂದುಕೊಳ್ಳಬೇಡಿ. ಕೆಲವರಂತೂ ಬಟ್ಟೆಬರೆಗಳನ್ನೆಲ್ಲ ಕಿತ್ತೆಸೆದು, ಮಹಾವೀರನಂತೆ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುತ್ತಾರೆ. ನಾನು ಅಂತಹ ರಾಮನ ಬಗ್ಗೆಯಾಗಲಿ, ಮಹಾವೀರನ ಬಗ್ಗೆಯಾಗಲಿ ಇಲ್ಲಿ ಹೇಳುತ್ತಿಲ್ಲ.
ನಿಮ್ಮ ಬದುಕಿನಲ್ಲಿ ನೀವೆಂದಾದರೂ ಒಬ್ಬ ಮನುಷ್ಯ ಥೇಟ್ ಇನ್ನೊಬ್ಬನಂತೆ ಇರುವುದನ್ನು ನೋಡಿದ್ದೀರ? ಮನುಷ್ಯರಷ್ಟೇ ಏಕೆ, ಈ ಜಗತ್ತಿನಲ್ಲಿ ಒಂದು ನೀರಿನ ಗುಳ್ಳೆ ಕೂಡ ಇನ್ನೊಂದು ಗುಳ್ಳೆಯಂತೆ ಇರಲಾರದು. ಇಲ್ಲಿ ಎಲ್ಲವೂ ಅನನ್ಯ; ಎಲ್ಲವೂ ಅನುಪಮ. ನಾವು ಎಲ್ಲಿಯವರೆಗೆ ಪ್ರತಿಯೊಬ್ಬ ಮನುಷ್ಯನಲ್ಲಿರುವ ಅನನ್ಯತೆಯನ್ನು ಗುರುತಿಸಿ, ಗೌರವಿಸುವುದಿಲ್ಲವೋ ಅಲ್ಲಿಯವರೆಗೂ ಈ ಜಗತ್ತಿನಲ್ಲಿ ಕೊಲೆ, ಸುಲಿಗೆ, ಶತ್ರುತ್ವ, ಜಿದ್ದಾಜಿದ್ದಿ ಇದ್ದೇಇರುತ್ತವೆ. ಅಲ್ಲಿಯವರೆಗೂ ಪ್ರತಿಯೊಬ್ಬರೂ ಮನುಷ್ಯರು ಅಪ್ರಾಮಾಣಿಕರಾಗಿದ್ದು, ಮತ್ತೊಬ್ಬನಂತಾಗಲು ಹೆಣಗಾಡುತ್ತಿರುತ್ತಾರೆ. ಅಂದಮೇಲೆ, ನಾವು ಯಾವ ಬಗೆಯ ಫಲಿತಾಂಶವನ್ನು ನಿರೀಕ್ಷಿಸಬಹುದು? ನಿಸರ್ಗದಲ್ಲಿ ನೂರಾರು ತರಹದ ಹೂವುಗಳಿವೆ ಅಲ್ಲವೇ? ಇಲ್ಲಿ ಯಾವುದಾದರೂ ಒಂದು ಹೂವು ತಾನು ಇನ್ನೊಂದು ಹೂವಿನಂತಾಗಬೇಕೆಂಬ ಹುಚ್ಚಾಟಕ್ಕೆ ಇಳಿದಿದೆಯಾ? ಮಲ್ಲಿಗೆ ಹೂವು ಹೋಗಿ ಸಂಪಿಗೆ ಹೂವಾಗಬೇಕು ಎಂದು ಯಾವುದಾದರೂ ಶಿಕ್ಷಕರು ಹೇಳಿದ್ದಾರ ಅಥವಾ ಸಂಪಿಗೆ ಹೂವು ಹೋಗಿ ಮಲ್ಲಿಗೆಯಾಗಬೇಕೆಂದು ಬೋಧಿಸಿದ್ದಾರ? ಅಥವಾ ಸಂಪಿಗೆ ಹೂವಿಗಿಂತ ಮಲ್ಲಿಗೆ ಹೂವೇ ಚೆಂದ ಎಂದು ಹೇಳಿದ್ದಾರ? ಅಥವಾ ಈ ಶಿಕ್ಷಕರು ಅಕಸ್ಮಾತ್ ಹಾಗೆ ಹೇಳಿದರೂ ಅವರು ಹೇಳಿದಂತೆಲ್ಲ ಆಗುತ್ತದಾ? ಖಂಡಿತವಾಗಿಯೂ ಇಲ್ಲ. ಏಕೆಂದರೆ, ಹೂವುಗಳಿಗೆ ಮನುಷ್ಯನಂತೆ ಮರುಳುತನವಿಲ್ಲ! ಅವು ಶಿಕ್ಷಕರ ಮಾತನ್ನಾಗಲಿ, ತತ್ತ್ವಜ್ಞಾನಿಗಳ ಮಾತನ್ನಾಗಲಿ, ಆದರ್ಶವಾದಿಗಳ ಉಪದೇಶಗಳನ್ನಾಗಲಿ, ಅಥವಾ ತಮ್ಮನ್ನು ಬಿಟ್ಟರೆ ಬರ‍್ಯಾರೂ ಇಲ್ಲ ಎಂದು ಬೀಗುವ ಧಾರ್ಮಿಕ ಮುಖಂಡರ ಮಾತನ್ನೂ ಕೇಳುವುದಿಲ್ಲ. ಅಕಸ್ಮಾತ್ ಹೂವುಗಳೇನಾದರೂ ಇವರ ಮಾತನ್ನು ಕೇಳಿಸಿಕೊಂಡರೆ ಕೈತೋಟದ ಗತಿ ಏನಾಗಬಹುದು? ಅಂತಹ ಕಡೆ ಯಾವ ಹೂವೂ ಬೆಳೆಯದೆ, ಎಲ್ಲವೂ ಹಾಳಾಗಿ ಹೋಗುತ್ತದೆ. ಇಷ್ಟಕ್ಕೂ ಮಲ್ಲಿಗೆ ಹೂವು ಎಷ್ಟೇ ಲಾಗಾ ಹೊಡೆದರೂ ಅದು ಸಂಪಿಗೆಯಾಗದು. ಪ್ರಕೃತಿಯಲ್ಲಿ ಅದೆಲ್ಲ ಸಾಧ್ಯವೇ ಇಲ್ಲ. ಮಲ್ಲಿಗೆ ಹೂವೇನಾದರೂ ಸಂಪಿಗೆಯಾಗಲು ಹೊರಟರೆ, ಅದು ಕೊನೆಗೆ ಮಲ್ಲಿಗೆ ಹೂವೂ ಆಗುವುದಿಲ್ಲ. ಮಲ್ಲಿಗೆ ಮಲ್ಲಿಗೆಯೇ; ಸಂಪಿಗೆ ಸಂಪಿಗೆಯೇ!
ಇದೇ ಮನುಷ್ಯನ ಪಾಲಿನ ನಿಜವಾದ ಶಾಪ. ಅಂದರೆ, ಒಬ್ಬ ಇನ್ನೊಬ್ಬನಂತೆ ಆಗಲು ಹೊರಡುವುದೇ ಇಲ್ಲಿನ ದೊಡ್ಡ ಸಮಸ್ಯೆ. ಆದರೆ, ನೀನು ಅವನಂತಾಗಬೇಕು ಎಂದು ಬೋಧಿಸುತ್ತಿರುವವರು ಯಾರು? ಈ ಪಿತೂರಿಯ ಹಿಂದಿರುವ ಶಕ್ತಿ ಯಾವುದು? ಸಾವಿರಾರು ವರ್ಷಗಳಿಂದ ಇಲ್ಲಿರುವ ಶಿಕ್ಷಣ ಪದ್ಧತಿಯೇ ಇದಕ್ಕೆಲ್ಲ ಕಾರಣ. ಇಲ್ಲಿ ರಾಮ ಅಥವಾ ಬುದ್ಧನ ಚಿತ್ರಗಳು ಮಸುಕಾದವೆನ್ನಿ, ಆಗ ನಿಮ್ಮ ಶಿಕ್ಷಕರು ಗಾಂಧಿಯನ್ನೋ, ವಿನೋಬಾ ಭಾವೆಯನ್ನೋ ಎಳೆದುಕೊಂಡು ಬರುತ್ತಾರೆ. ಮಕ್ಕಳು ಅವರಂತಾಗಬೇಕೆಂದು ಗಿಣಿಪಾಠ ಹೇಳಲು ಶುರು ಮಾಡುತ್ತಾರೆ. ಆದರೆ, ಅಪ್ಪಿತಪ್ಪಿಯೂ `ಮಗೂ, ನೀನು ನಿನ್ನದೇ ಆದ ಒಂದು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು,’ ಎಂದು ಮಾತ್ರ ಈ ಶಿಕ್ಷಕರು ಹೇಳುವುದಿಲ್ಲ. ಏಕೆಂದರೆ, ವಿದ್ಯಾರ್ಥಿಗಳೆಲ್ಲ ಅಪ್ರಯೋಜಕರು ಎನ್ನುವ ತೀರ್ಮಾನಕ್ಕೆ ಇವರು ಬಂದು ಬಿಟ್ಟಿರುತ್ತಾರೆ. ಇವರ ದೃಷ್ಟಿಯಲ್ಲಿ ಗಾಂಧೀಜಿ ಮಾತ್ರ ದೊಡ್ಡ ಮನುಷ್ಯ. ಆತ ಮಾತ್ರ ಒಂದು ಘನವಾದ ಧ್ಯೇಯೋದ್ದೇಶದೊಂದಿಗೆ ಹುಟ್ಟಿದ್ದಾತ. ಹಾಗಾದರೆ, ಆ ದೇವರು ನಿಮ್ಮನ್ನು ಸೃಷ್ಟಿಸುವ ಮೂಲಕ ತಪ್ಪು ಮಾಡಿದನಾ? ಹಾಗೇನಾದರೂ ಆಗಿದ್ದಿದ್ದರೆ ಆ ಭಗವಂತನು ರಾಮ ಅಥವಾ ಬುದ್ಧನಂತಹ ಹತ್ತಿಪ್ಪತ್ತು ಜನರನ್ನು ಸೃಷ್ಟಿಸಿ ಸುಮ್ಮನಾಗುತ್ತಿದ್ದ. ಅಥವಾ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇಡೀ ಜಗತ್ತೆಲ್ಲ ಒಂದೇ ಥರ ಇರುವಂತೆ ಮಾಡಿಡುತ್ತಿದ್ದ. ಹೀಗೇನಾದರೂ ಆಗಿಬಿಟ್ಟಿದ್ದರೆ ಏನಾಗುತ್ತಿತ್ತು ಹೇಳಿ? ನೀವು ಒಂದು ಘಳಿಗೆ ಈ ಜಗತ್ತಿನ ಬಗ್ಗೆ ಯೋಚಿಸಿ, ಇಲ್ಲಿ ರಾಮನಂತಹ 500 ಕೋಟಿ ಜನರಿದ್ದಾರೆ ಅಂದುಕೊಳ್ಳಿ. ಹೀಗಾದರೆ ಗತಿ ಏನು ಗೊತ್ತೇ? ಇಡೀ ಜಗತ್ತಿನ ಜನರೆಲ್ಲರೂ ಹತ್ತು-ಹದಿನೈದು ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಿದ್ದರು. ಏಕೆಂದರೆ, ಎಲ್ಲೆಲ್ಲೂ ರಾಮನಂತಹವರನ್ನೇ ನೋಡಿ ಬದುಕಿನಲ್ಲಿ ಆಸಕ್ತಿಯೇ ಹೋಗಿಬಿಡುತ್ತಿತ್ತು. ಹೀಗಾಗಿ ಎಲ್ಲರೂ ಸತ್ತರೆ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಿದ್ದರು. ಹಿತ್ತಿಲಿನಲ್ಲಿರುವ ಗಿಡಗಳೆಲ್ಲ ಬರೀ ಗುಲಾಬಿ ಹೂವನ್ನೇ ಬಿಟ್ಟರೆ ಏನಾಗುತ್ತದೆ ಹೇಳಿ? ಆಗ ಗುಲಾಬಿ ಹೂವಿಗೆ ನಯಾಪೈಸೆಯ ಬೆಲೆಯೂ ಇರುವುದಿಲ್ಲ. ಇಷ್ಟೇ ಅಲ್ಲ, ಯಾರೊಬ್ಬರೂ ಆ ಹೂವನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಅನನ್ಯತೆ ಇರುವುದಕ್ಕೆ ಒಂದು ಪ್ರಾಮುಖ್ಯತೆ ಇದ್ದೇಇದೆ. ನೀವು ನಿಮ್ಮ ಪಕ್ಕದಲ್ಲಿರುವ ಇನ್ನೊಬ್ಬನಿಗಿಂತ ಬೇರೆ ಥರ ಇದ್ದೀರೆನ್ನುವುದು ಹೆಮ್ಮೆಪಡಬೇಕಾದ ವಿಚಾರವೆನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಯಾವುದೂ ಮೇಲಲ್ಲ; ಯಾವುದೂ ಕೀಳಲ್ಲ. ಇಲ್ಲಿ ಎಲ್ಲರಿಗೂ ಅವರವರದೇ ಆದ ಸ್ಥಾನಮಾನಗಳಿವೆ. ಹೀಗಾಗಿ, ಈಗ ಚಾಲ್ತಿಯಲ್ಲಿರುವ ಮೌಲ್ಯಗಳೆಲ್ಲವೂ ಶುದ್ಧ ತಪ್ಪು. ಆದರೆ, ಈ ಎಡವಟ್ಟುಗಳನ್ನೇ ನಾವು ಬೋಧಿಸುತ್ತ ಬಂದಿದ್ದೇವೆ.
ಬಂಡೇಳುವುದು ಎಂದರೆ ಸುಮ್ಮನೆ ಅರಚಾಡುವುದಲ್ಲ. ಬದಲಿಗೆ, ನಾವು ನಮ್ಮ ಮಕ್ಕಳಿಗೆ ಏನನ್ನು ಹೇಳುತ್ತೇವೋ ಅದರ ಬಗ್ಗೆ ತುಂಬಾ ಗಾಢವಾಗಿಯೂ ಆಳವಾಗಿಯೂ ಚಿಂತಿಸಬೇಕು ಎಂದರ್ಥ. ಆದರೆ ನಾವು ನಿಜಕ್ಕೂ ಹೀಗೆ ಮಾಡುತ್ತಿದ್ದೇವಾ? ವಾಸ್ತವವಾಗಿ, ನಾವು ನಮ್ಮ ಮಕ್ಕಳ ತಲೆಯನ್ನು ಕೆಡಿಸುತ್ತಿದ್ದು, ಅವರಿಗೆ ವಿಷವನ್ನುಣಿಸುತ್ತಿದ್ದೇವೆ. ವಿಚಿತ್ರವೆಂದರೆ, ಇಂತಹ ಕೆಲಸವನ್ನು ಕೂಡ ನಾವು ಪ್ರೀತಿಯಿಂದಲೇ ಮಾಡಬಹುದು. ನಮ್ಮ ತಂದೆ-ತಾಯಿಗಳು ಮತ್ತು ಶಿಕ್ಷಕರೆಲ್ಲ ಮಾಡುತ್ತಿರುವುದು ಇದನ್ನೇ! ಇದನ್ನು ನಾವೀಗ ನಿಲ್ಲಿಸಲೇಬೇಕು. ಈ ಜಗತ್ತಿನಲ್ಲಿ ಅನೇಕ ಧಾರ್ಮಿಕ ಕ್ರಾಂತಿಗಳಾಗಿವೆ. ಒಂದು ಧರ್ಮದ ಜನರು ಅದನ್ನು ಬಿಟ್ಟು ಇನ್ನೊಂದು ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಕೆಲವೊಮ್ಮೆ ಇತರರ ಬುದ್ಧಿಮಾತಿಗೆ ಬೆಲೆ ಕೊಟ್ಟು ಹೀಗೆ ಮಾಡಿದ್ದರೆ, ಒಮ್ಮೊಮ್ಮೆ ಇತರರ ಬೆದರಿಕೆಗೆ ಮಣಿದು ಹೀಗೆ ಮಾಡಲಾಗಿದೆ. ಆದರೆ ಇದರಿಂದ ಜಗತ್ತಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಒಬ್ಬ ಹಿಂದೂ ಹೋಗಿ ಮುಸ್ಲಿಮನೇ ಆಗಬಹುದು ಅಥವಾ ಒಬ್ಬ ಮುಸ್ಲಿಂ ಹೋಗಿ ಕ್ರೈಸ್ತನೇ ಆಗಬಹುದು; ಆದರೆ ಮನುಷ್ಯ ಮಾತ್ರ ಹಾಗೆಯೇ ಇರುತ್ತಾನೆ. ಕೇವಲ ಮತಾಂತರದಿಂದ ಮನುಷ್ಯ ಎಂದಿಗೂ ಬದಲಾಗುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಧಾರ್ಮಿಕ ಕ್ರಾಂತಿಗಳಿಂದ ಈ ಜಗತ್ತಿನಲ್ಲಿ ಒಂದು ಸಣ್ಣ ಬದಲಾವಣೆಯೂ ಆಗಿಲ್ಲ.
ಇನ್ನು ರಾಜಕೀಯ ಕ್ರಾಂತಿಯ ವಿಚಾರಕ್ಕೆ ಬರೋಣ. ನಮ್ಮಲ್ಲಿ ಹೇಗೆ ಧಾರ್ಮಿಕ ಕ್ರಾಂತಿಗಳಾಗಿವೆಯೋ ಅದೇ ರೀತಿಯಲ್ಲಿ ರಾಜಕೀಯ ಕ್ರಾಂತಿಗಳೂ ಸಂಭವಿಸಿವೆ. ಅಧಿಕಾರದಲ್ಲಿರುವವರನ್ನು ಕಿತ್ತೆಸೆದು, ಅಲ್ಲಿ ಇನ್ನೊಬ್ಬ ಬಂದು ಕೂತಿರುವುದೆಲ್ಲ ಸಾಕಷ್ಟಾಗಿದೆ. ಒಬ್ಬನ ಸಾಮ್ರಾಜ್ಯವನ್ನು ಇನ್ನೊಬ್ಬ ಕಸಿದುಕೊಂಡಿರುವುದೆಲ್ಲ ಬೇಕಾದಷ್ಟಾಗಿದೆ. ಬಿಳಿ ತೊಗಲಿನವರನ್ನೆಲ್ಲ ಒದ್ದೋಡಿಸಿ, ಕರಿಚರ್ಮದವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಆದರೆ, ಮನುಷ್ಯನ ಅಂತರಂಗದಲ್ಲಿರುವ ಅಧಿಕಾರಪಿಪಾಸು ಮಾತ್ರ ಹಾಗೆಯೇ ಇದ್ದಾನೆ. ಧಾರ್ಮಿಕ ಕ್ರಾಂತಿ, ರಾಜಕೀಯ ಕ್ರಾಂತಿಗಳಂತೆಯೇ ಈ ಪ್ರಪಂಚದಲ್ಲಿ ಹತ್ತಾರು ಆರ್ಥಿಕ ಕ್ರಾಂತಿಗಳೂ ಆಗಿಹೋಗಿವೆ. ಬಂಡವಾಳಶಾಹಿಗಳನ್ನು ಕಿತ್ತೊಗೆದು, ಅಲ್ಲಿ ಕಾರ್ಮಿಕರ ಸಾಮ್ರಾಜ್ಯವೇ ಬಂದಿದ್ದಾಗಿದೆ. ಆದರೆ, ಆ ಜಾಗದಲ್ಲಿ ಕೂತುಕೊಂಡ ಮಾತ್ರಕ್ಕೆ ಕಾರ್ಮಿಕನೊಬ್ಬ ಬಂಡವಾಳಶಾಹಿಯಾಗಿ ಬಿಡುತ್ತಾನೆಯೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಇದೇ ರೀತಿಯಲ್ಲಿ ಬಂಡವಾಳಶಾಹಿಗಳು ಕಣ್ಮರೆಯಾಗಿ ಅವರ ಜಾಗದಲ್ಲಿ ವೃತ್ತಿಪರ ಮ್ಯಾನೇಜರುಗಳು ಬಂದಿದ್ದಾರೆ. ಸತ್ಯವೆಂದರೆ, ಈ ಮ್ಯಾನೇಜರುಗಳು ಕೂಡ ಬಂಡವಾಳಶಾಹಿಗಳಷ್ಟೇ ಅಪಾಯಕಾರಿ ಶೋಷಕರಾಗಿ ಪರಿಣಮಿಸಿದ್ದಾರೆ. ಇಷ್ಟೆಲ್ಲ ಆದರೂ ಜಗತ್ತಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಹಿಂದೆ ಯಾವ ರೀತಿಯಲ್ಲಿ ವರ್ಗ ವ್ಯವಸ್ಥೆ ಇತ್ತೋ ಅದು ಇವತ್ತಿಗೂ ಹಾಗೆಯೇ ಇದೆ. ಶುರುವಿನಲ್ಲಿ ಇಡೀ ಜಗತ್ತಿನಲ್ಲಿ ಕೇವಲ ಶ್ರೀಮಂತ ಮತ್ತು ಬಡವ ಎನ್ನುವ ಎರಡೇ ಎರಡು ವರ್ಗಗಳಿದ್ದವು. ಆದರೆ ಈಗ, ಹಣವನ್ನು ವಿತರಿಸುವ ವರ್ಗ ಮತ್ತು ಹಣವನ್ನು ಪೀಕುವ ವರ್ಗಗಳು ಸೃಷ್ಟಿಯಾಗಿವೆ. ಹಾಗೆಯೇ, ಅಧಿಕಾರದಲ್ಲಿದ್ದವರು ಅಲ್ಲೇ ಇದ್ದಾರೆ; ಅಧಿಕಾರವಿಲ್ಲದಿದ್ದವರು ಈಗಲೂ ಬಡಪಾಯಿ ಗಳಂತೆಯೇ ಇದ್ದಾರೆ. ಇಷ್ಟೇ ಅಲ್ಲ, ದಿನದಿಂದ ದಿನಕ್ಕೆ ಹೊಸಹೊಸ ವರ್ಗಗಳು ಬೇರೆ ಸೃಷ್ಟಿಯಾಗುತ್ತಿವೆ.
ಮನುಕುಲದ ಕಲ್ಯಾಣಕ್ಕೆಂದು ಕಳೆದ ನಾಲ್ಕೈದು ಸಾವಿರ ವರ್ಷಗಳಲ್ಲಿ ನಡೆಸಿರುವ ಪ್ರಯತ್ನಗಳೆಲ್ಲವೂ ಸೋತು ಸುಣ್ಣವಾಗಿವೆ. ಆದರೆ, ಇಲ್ಲಿಯವರೆಗೂ ಶೈಕ್ಷಣಿಕ ಕ್ರಾಂತಿ ಮಾತ್ರ ಈ ಜಗತ್ತಿನಲ್ಲಿ ಸಂಭವಿಸಿಲ್ಲ.ಈ ಪ್ರಯೋಗವನ್ನು ನಿಜವಾಗಿಯೂ ಮಾಡಬೇಕಾದವರೆಂದರೆ, ನಮ್ಮ ಶಿಕ್ಷಕರು. ಶಿಕ್ಷಕರಿಗೆ ಬಹುದೊಡ್ಡ ಕ್ರಾಂತಿಯನ್ನು ಉಂಟುಮಾಡುವಂತಹ ಅಗಾಧ ಶಕ್ತಿ ಇದೆ ಎನ್ನುವುದು ನನ್ನ ಭಾವನೆ. ರಾಜಕೀಯ ಕ್ರಾಂತಿಗಳಿಗಾಗಲಿ, ಆರ್ಥಿಕ ಕ್ರಾಂತಿಗಳಿಗಾಗಲಿ, ಧಾರ್ಮಿಕ ಕ್ರಾಂತಿಗಳಿಗಾಗಲಿ ನಿಜಕ್ಕೂ ಶಿಕ್ಷಣ ಕ್ರಾಂತಿಗೆ ಇರುವಷ್ಟು ಬೆಲೆಯಿಲ್ಲ. ಆದರೆ, ಈ ಕ್ರಾಂತಿಯನ್ನು ಉಂಟುಮಾಡುವರ‍್ಯಾರು? ಇದುವರೆಗೆ ಮಾಡಿಕೊಂಡು ಬಂದಿರುವ ಕೆಲಸವನ್ನು ಯಾರು ಗಂಭೀರವಾಗಿ ಪ್ರಶ್ನಿಸುತ್ತಾನೋ ಅಂತಹ ಬಂಡುಕೋರ ಮಾತ್ರ ಈ ಕ್ರಾಂತಿಯನ್ನು ಹುಟ್ಟು ಹಾಕಬಲ್ಲನಷ್ಟೆ.
ಒಂದು ಸಂಗತಿಯಂತೂ ಮನಸ್ಸಿನಲ್ಲಿ ಸ್ಪಷ್ಟವಾಗಿ ಗೊತ್ತಿರಬೇಕು. ಅದೇನೆಂದರೆ, ಇಲ್ಲಿಯವರೆಗೂ ಮಾಡಿಕೊಂಡು ಬಂದಿರುವ ಬೋಧನೆಗಳೆಲ್ಲವೂ ತಪ್ಪೆನ್ನುವುದು! ಏಕೆಂದರೆ, ಇದು ತಂದುಕೊಟ್ಟಿರುವ ಫಲಿತಾಂಶಗಳೆಲ್ಲವೂ ಭಯಾನಕವಾಗಿವೆ. ಇವತ್ತಿನ ಮನುಷ್ಯ ಹೀಗೆ ರೂಪುಗೊಂಡಿದ್ದು ಯಾವಾಗ? ಈ ಸಮಾಜ ಹೀಗಾಗಿದ್ದು ಯಾವಾಗ? ಎನ್ನುವಂಥ ಸಂಗತಿಗಳನ್ನೆಲ್ಲ ಕುರಿತು ನಾವು ಚಿಂತಿಸಬೇಕು. ಜಗತ್ತಿನಲ್ಲಿ ಎಲ್ಲೆಡೆಯೂ ಯುದ್ಧ, ಹಿಂಸೆ, ಸಂಕಟ, ದ್ವೇಷ, ಅಸಹಾಯಕತೆ ಮತ್ತು ಬಡತನ ಎಲ್ಲವೂ ತಾಂಡವವಾಡುತ್ತಿವೆಯಲ್ಲ, ಈ ಸಮಸ್ಯೆಗಳೆಲ್ಲ ಎಲ್ಲಿಂದ ಬಂದವು ಎಂದು ನಾವು ಯೋಚಿಸಬೇಕು. ನಾವು ಅನುಸರಿಸಿಕೊಂಡು ಬರುತ್ತಿರುವ ಶಿಕ್ಷಣ ಪದ್ಧತಿಯಲ್ಲೇ ಮೂಲಭೂತವಾಗಿ ಏನೋ ದೋಷವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ನೀವು ಯೋಚಿಸಬೇಕು ಮತ್ತು ಮೈ ಕೊಡವಿಕೊಂಡು ಮೇಲೇಳಬೇಕು! ಆದರೆ, ನೀವೆಲ್ಲರೂ ಬೇರೇನೋ ಲೆಕ್ಕಾಚಾರಗಳಲ್ಲಿ ಮುಳುಗಿದ್ದೀರಿ. ಅಲ್ಲೆಲ್ಲೋ ಶಿಕ್ಷಕರ ಸಮಾವೇಶ ನಡೆಯುತ್ತಿದೆ; ಅಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತೇ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಮತ್ತು ಮಕ್ಕಳಲ್ಲಿ ಶಿಸ್ತನ್ನು ರೂಢಿಸುವುದು ಹೇಗೆಂದು ಚರ್ಚಿಸಲಾಗುತ್ತಿದೆ! ದಯವಿಟ್ಟು ನೀವು ಮಕ್ಕಳ ಬಗ್ಗೆ ಅಪಾರವಾದ ಪ್ರೀತಿಯನ್ನು ಬೆಳೆಸಿಕೊಳ್ಳಿ. ಅವರು ಅಶಿಸ್ತಿನಿಂದಲೇ ಇರಲು ಬಿಟ್ಟುಬಿಡಿ! ಏಕೆಂದರೆ, ಕಳೆದ ಐದು ಸಾವಿರ ವರ್ಷಗಳಿಂದ ಮಕ್ಕಳ ಮೇಲೆ ಹೇರುತ್ತಲೇ ಇರುವ ಶಿಸ್ತಿನಿಂದ ಏನಾಗಿದೆ ಎನ್ನುವುದು ನಮಗೆಲ್ಲ ಗೊತ್ತು. ಹೌದು, ಐದು ಸಾವಿರ ವರ್ಷಗಳಿಂದ ಮಕ್ಕಳನ್ನೆಲ್ಲ ಶಿಸ್ತಿನ ಬೇಲಿಯೊಳಗೆ ಕೂಡಿಹಾಕಲಾಗಿದೆ. ಆದರೆ, ಇದರಿಂದ ಆಗಿರುವುದಾದರೂ ಏನು?
ಶಿಸ್ತು ಎಂದರೇನು?
ಶಿಸ್ತನ್ನು ಬೋಧಿಸುವುದೆಂದರೆ ಏನರ್ಥ? ಶಿಕ್ಷಕರು ಹೇಳಿದ್ದೆಲ್ಲವನ್ನೂ ಸರಿ ಎಂದು ತಿಳಿದುಕೊಳ್ಳುವುದೇ ಶಿಸ್ತು ಎನ್ನುವಂತಾಗಿ ಹೋಗಿದೆ. ಶಿಕ್ಷಕರು ಶಾಲಾಕೊಠಡಿಯ ಕಟ್ಟೆಯ ಮೇಲೆ ಕೂತುಕೊಂಡರೆ, ಮಕ್ಕಳು ಕೆಳಗೆ ಕೂತುಕೊಳ್ಳಬೇಕು. ಹಾಗೆಯೇ, ಮಕ್ಕಳೇನಾದರೂ ಶಿಕ್ಷಕರನ್ನು ನೋಡಬೇಕೆಂದರೆ ಮೊದಲಿಗೆ ಅವರು ಭಯ-ಭಕ್ತಿಗಳಿಂದ ಕೈ ಮುಗಿದುಕೊಂಡು ನಿಲ್ಲಬೇಕು; ಇಷ್ಟೇ ಅಲ್ಲ, ಆ ಮಗುವು ಶಿಕ್ಷಕರ ಪಾದಗಳಿಗೆರಗಿದೆ ಇನ್ನೂ ಚೆಂದ! ಶಿಕ್ಷಕರು ಏನೇ ಹೇಳಲಿ, ಅದರ ಬಗ್ಗೆ ಗುಲಗಂಜಿಯಷ್ಟೂ ಅನುಮಾನ ನಿಮಗೆ ಬರಬಾರದು. ನೀವು ಹೇಳಿದ ಹಾದಿಯಲ್ಲೇ ಮಕ್ಕಳು ಹೋಗಬೇಕು. ಶಿಕ್ಷಕರು ಹೇ,ಕೂತ್ಕೊಳೋ,’ ಎಂದರೆ ಮಕ್ಕಳು ತೆಪ್ಪಗೆ ಕೂರಬೇಕು; ಅವರುಹೇ, ಎದ್ ನಿಲ್ಲೋ,’ ಎಂದರೆ ಮಕ್ಕಳು ತುಟಿಕ್‌ಪಿಟಿಕ್ ಎನ್ನದೆ ಎದ್ದು ನಿಲ್ಲಬೇಕು. ಇದುವರೆಗೂ ಕಲಿಸಿಕೊಂಡು ಬಂದಿರುವ ಶಿಸ್ತೆಂದರೆ ಇದೇ! ಆದರೆ, ಬಹುದೊಡ್ಡ ಸತ್ಯವೇನೆಂದರೆ ಇದು ಮನುಷ್ಯನಲ್ಲಿರುವ ವಿವೇಕವನ್ನು, ಪ್ರಜ್ಞೆಯನ್ನು ಮತ್ತು ಜಾಗೃತಿಯನ್ನು ನಾಮಾವಶೇಷ ಮಾಡಲು ಹೆಣೆದಿರುವ ಸಂಚಲ್ಲದೆ ಬೇರೇನೂ ಅಲ್ಲ.
ಅಂದಹಾಗೆ, ಸೇನೆಯಲ್ಲಿ ಯಾವ ಬಗೆಯ ತರಬೇತಿ ಕೊಡಲಾಗುತ್ತದೆ ಎನ್ನುವುದು ನಿಮಗೆ ಗೊತ್ತಾ? ಸೇನೆಯೊಳಕ್ಕೆ ನೇಮಕವಾದ ಪ್ರತಿಯೊಬ್ಬನೂ ಮೂರ‍್ನಾಲ್ಕು ವರ್ಷ ನಿರ್ದಿಷ್ಟ ಬಗೆಯ ತಾಲೀಮನ್ನು ಕಡ್ಡಾಯಗೊಳಿಸುತ್ತಾರೆ. ಅಲ್ಲಿ, ತರಬೇತಿಯ ಹೆಸರಿನಲ್ಲಿ ಎಲ್ಲ ಮೂರ್ಖಸಂಗತಿಗಳನ್ನೂ ಹೇಳಿಕೊಡುತ್ತಾರೆ. ಎಡಕ್ಕೆ ತಿರುಗು, ಬಲಕ್ಕೆ ತಿರುಗು ಎನ್ನುತ್ತಾರೆ. ಇದನ್ನೆಲ್ಲ ಸೈನಿಕರು ಶಿರಸಾ ವಹಿಸಿ ಪಾಲಿಸುತ್ತಾರೆ. ಹೀಗಾಗಿ, ಸೇನಾಸಿಬ್ಬಂದಿಯಲ್ಲಿದ್ದ ಬುದ್ಧಿವಂತಿಕೆ ಸರ್ವನಾಶವಾಗಿ ಹೋಗುತ್ತದೆ. ಒಬ್ಬ ಮನುಷ್ಯನಿಗೆ ನೀನು ಎಡಕ್ಕೆ ತಿರುಗು, ಬಲಕ್ಕೆ ತಿರುಗು ಅಂದರೆ ಏನಾಗುತ್ತದೆ? ಎಷ್ಟು ದಿನ ಅಂತ ಅವನು ಇದನ್ನೆಲ್ಲ ತಡೆದುಕೊಳ್ಳಬಲ್ಲ? ಒಂದು ವೇಳೆ ಅವನು ಇದನ್ನೆಲ್ಲ ಧಿಕ್ಕರಿಸಿದರೆ ಅವನಿಗೆ ಶಿಕ್ಷೆ ಕಾದಿರುತ್ತದೆ. ಹೀಗಾಗಿ, ಸೇನೆಗೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಅವನಿಗಿದ್ದ ಬುದ್ಧಿಯೆಲ್ಲ ಕಣ್ಮರೆಯಾಗಿ, ಅವನಲ್ಲಿದ್ದ ಮನುಷ್ಯಗುಣಗಳೂ ಹೇಳ ಹೆಸರಿಲ್ಲದಂತಾಗಿ ಹೋಗುತ್ತವೆ. ಇದರ ಪರಿಣಾಮವಾಗಿ, ನೀವು ಅವನಿಗೆ ಹೇ, ಬಲಕ್ಕೆ ತಿರುಗು!’ ಎಂದು ಹೂಂಕರಿಸಿದರೆ ಸಾಕು, ಅವನು ಒಂದು ಯಂತ್ರದಂತೆ ಬಲಕ್ಕೆ ತಿರುಗುತ್ತಾನೆ. ಹಾಗೆಯೇ ನೀವು ಅವನಿಗೆಹೇ, ಅವನನ್ನು ಗುಂಡಿಟ್ಟು ಕೊಲ್ಲು,’ ಎಂದರೆ ಸಾಕು, ಆ ಕೆಲಸವನ್ನೂ ಯಾಂತ್ರಿಕವಾಗಿ ಮಾಡುತ್ತಾನೆ. ಒಟ್ಟಿನಲ್ಲಿ ಅವನು ಮನುಷ್ಯತ್ವವನ್ನೇ ಕಳೆದುಕೊಂಡು ಯಃಕಶ್ಚಿತ್ ಯಂತ್ರವಾಗಿ ಹೋಗುತ್ತಾನೆ. ಇದನ್ನು ನಿಜಕ್ಕೂ ಶಿಸ್ತೆಂದು ಕರೆಯಬಹುದೇ? ನೋವಿನ ಸಂಗತಿಯೆಂದರೆ, ಮಕ್ಕಳಲ್ಲೂ ನಾವು ಇಂತಹ ಶಿಸ್ತನ್ನೇ ನಿರೀಕ್ಷಿಸುತ್ತೇವೆ. ಅಂದರೆ, ಸೇನೆಯಲ್ಲಿ ಕೊಡುವಂತಹ ಅರ್ಥಹೀನವಾದ ತರಬೇತಿಯನ್ನೇ ನಾವು ಮಕ್ಕಳಿಗೂ ಕೊಡುತ್ತಿದ್ದೇವೆ. ಅವರಿಗೆ ಸೈನಿಕರಾಗುವುದು ಹೇಗೆ, ಕೈಯಲ್ಲಿ ಬಂದೂಕನ್ನು ಹಿಡಿದುಕೊಳ್ಳುವುದು ಹೇಗೆ ಮತ್ತು ಇನ್ನೊಬ್ಬರನ್ನು ಗುಂಡಿಟ್ಟು ʼಢಮಾರ್!’ ಎನ್ನಿಸುವುದು ಹೇಗೆನ್ನುವುದನ್ನು ನಮ್ಮ ಎಳೆಯರಿಗೆ ಕಲಿಸುತ್ತಿದ್ದೇವೆ. ಆದರೆ, ಮನುಷ್ಯನಿಗೆ ಕಳೆದ ಐದು ಸಾವಿರ ವರ್ಷಗಳಿಂದಲೂ ಇವೆಲ್ಲ ಅರ್ಥವಾದಂತೆ ಕಾಣುತ್ತಿಲ್ಲ. ಶಿಸ್ತೆಂದರೆ ಮನುಷ್ಯನನ್ನು ಜೀವಂತಶವವನ್ನಾಗಿ ಮಾಡಿಡುವುದು ಎಂಬಂತೆ ಕಾಣುತ್ತಿದೆ. ಮನುಷ್ಯ ಹೆಚ್ಚುಹೆಚ್ಚು ಶಿಸ್ತನ್ನು ರೂಢಿಸಿಕೊಂಡಷ್ಟೂ ಅಷ್ಟಷ್ಟು ಅವನು ನಿಷ್ಪ್ರಯೋಜಕನಾಗುತ್ತಿರುತ್ತಾನೆ.
ಹಾಗಾದರೆ, ಮಕ್ಕಳು ಇನ್ನೊಬ್ಬರು ಜೊತೆ ಸುಮ್ಮಸುಮ್ಮನೆ ಕಾಲು ಕೆರೆದುಕೊಂಡು, ಉಳಿದ ಮಕ್ಕಳೊಂದಿಗೆ ಜಗಳವಾಡಬೇಕು, ಹೊಡೆದಾಡಬೇಕು, ಉಳಿದ ಮಕ್ಕಳ್ಯಾರೂ ಓದಲು, ಬರೆಯಲು ಅವರು ಆಸ್ಪದ ಕೊಡಬಾರದು ಎಂದು ನಾನು ಹೇಳುತ್ತಿದ್ದೇನಾ? ಹಾಗೇನೂ ಇಲ್ಲ! ನಾನು ನಿಮಗೆ -ಶಿಕ್ಷಕರಿಗೆ- ಮಕ್ಕಳನ್ನು ಪ್ರೀತಿಸಿ ಎಂದಷ್ಟೇ ಹೇಳುತ್ತಿದ್ದೇನೆ. ನೀವು ಮಕ್ಕಳ ಒಳಿತಿನ ಬಗ್ಗೆ ಮಾತ್ರ ಯೋಚಿಸಿ, ಅವುಗಳಿಗೆ ಅದನ್ನೇ ಹರಸಿ. ನೀವು ಹೀಗೆ ಮಾಡುವುದರಿಂದ ಮಾತ್ರ ಮಕ್ಕಳಲ್ಲಿ ನಿಜವಾದ ಶಿಸ್ತು ಮೂಡುತ್ತದೆ. ಇದು ಮಕ್ಕಳಲ್ಲಿ ಹುದುಗಿರುವ ಬುದ್ಧಿವಂತಿಕೆಯಿಂದಲೇ ಬರುವ ಶಿಸ್ತು! ಮಕ್ಕಳನ್ನು ಪ್ರೀತಿಸಿ ಮತ್ತು ಆ ಪ್ರೀತಿಯು ಶಿಸ್ತನ್ನು ತರುತ್ತದೋ, ಇಲ್ಲವೋ ಎನ್ನುವುದನ್ನು ನೋಡಿ, ಸಾಕು. ಇದು ಸುಮ್ಮನೆ ಗಾಣದೆತ್ತಿನಂತೆ ಎಡಕ್ಕೂ ಬಲಕ್ಕೂ ತಿರುಗುವುದರಿಂದ ಬರುವ ಅರ್ಥಹೀನವಾದ ಶಿಸ್ತಲ್ಲ. ಬದಲಿಗೆ, ಮಗುವಿನ ಮನಸ್ಸು, ಹೃದಯ ಮತ್ತು ಆತ್ಮದಿಂದ ಒಡಮೂಡುವ ಶಿಸ್ತು! ಶಿಕ್ಷಕರೇ, ದಯವಿಟ್ಟು ನೀವು ಮಕ್ಕಳಲ್ಲಿರುವ ಈ ಬುದ್ಧಿವಂತಿಕೆ ಮತ್ತು ಆಲೋಚನಾ ಶಕ್ತಿಗಳನ್ನು ಬಡಿದೆಬ್ಬಿಸಿ, ಮಿಕ್ಕೇನನ್ನೂ ಮಾಡಲು ಹೋಗಬೇಡಿ. ಯಾವ ಕಾರಣಕ್ಕೂ ನೀವು ನಾನು ಅಂದುಕೊಂಡಿರುವುದೇ ಪರಮಸತ್ಯ,’ ಎಂದುಕೊಳ್ಳಬೇಡಿ. ಸತ್ಯವೆಂದರೇನೆಂದು ನಿಮಗೆ ಗೊತ್ತಾ? ಆದರೆ, ಪ್ರತಿಯೊಬ್ಬರೂನಾನು ಹೇಳಿದ್ದೇ ಸತ್ಯ,’ ಎನ್ನುತ್ತಾರೆ. ನೀವು ನನಗಿಂತ ಮುವ್ವತ್ತು ವರ್ಷ ಮೊದಲೇ ಹುಟ್ಟಿದ್ದೀರಿ ಎಂದಮಾತ್ರಕ್ಕೆ ಏನೂ ಆಗುವುದಿಲ್ಲ. ಅಥವಾ ಇನ್ನೊಬ್ಬ ಮನುಷ್ಯ ನಿಮಗಿಂತ ಮುವ್ವತ್ತು ವರ್ಷ ಚಿಕ್ಕವನೆಂದ ಮಾತ್ರಕ್ಕೆ ಸತ್ಯದ ನೆಲೆ-ಬೆಲೆಗಳು ಬದಲಾಗುವುದಿಲ್ಲ. ನಿಜ ಹೇಳಬೇಕೆಂದರೆ, ಈ ಮುವ್ವತ್ತು ವರ್ಷ ಚಿಕ್ಕವನೇ ನಿಮಗಿಂತ ಹೆಚ್ಚು ಬುದ್ಧಿವಂತನಾಗಿರಬಹುದು ಅಥವಾ ಅವನು ನಿಮ್ಮಷ್ಟು ದಡ್ಡನಾಗಿಲ್ಲದೆ ಇರಬಹುದು! ಏಕೆಂದರೆ, ನೀವು ದೊಡ್ಡವನೆಂಬ ಭ್ರಮೆಯಲ್ಲಿ ಎಲ್ಲ ಬಗೆಯ ಅವಿವೇಕಗಳನ್ನೂ ನಿಮ್ಮ ತಲೆಯಲ್ಲಿ ತುಂಬಿಕೊಂಡಿರಬಹುದು!! ಆದರೆ, ನೀವು ಅವನಿಗಿಂತ ಮುವ್ವತ್ತು ವರ್ಷ ದೊಡ್ಡವನೆಂಬ ಒಂದೇಒಂದು ಭ್ರಮೆಯಲ್ಲಿ ಮುಳುಗಿ, ʼಇಲ್ಲ ಇಲ್ಲ, ನಾನು ಅವನಿಗಿಂತಲೂ ಹೆಚ್ಚು ವಿವೇಕಸ್ಥ… ಅವನನ್ನು ಶಿಕ್ಷಿಸುವ ಮತ್ತು ಅವನಲ್ಲಿ ಶಿಸ್ತನ್ನು ರೂಢಿಸುವ ಎಲ್ಲ ಅಧಿಕಾರವೂ ನನಗಿದೆ,’ ಎಂದುಕೊಂಡಿರುತ್ತೀರಿ.
ನಾವು ಇನ್ನೊಬ್ಬರಲ್ಲಿ ಶಿಸ್ತನ್ನು ರೂಢಿಸಲು ಹೆಣಗಾಡುತ್ತೇವೆ. ಇದಕ್ಕಿಂತ ಕೆಟ್ಟ ಚಾಳಿ ಇನ್ನೊಂದಿಲ್ಲ. ಇದನ್ನು ತೊರೆದು ಬಿಟ್ಟರೆ ಈ ಜಗತ್ತು ಈಗಿರುವುದಕ್ಕಿಂತ ಎಷ್ಟೋ ಚೆನ್ನಾಗಿರುತ್ತದೆ. ನಿಮಗೆ ನಿಜಕ್ಕೂ ಈ ಜಗತ್ತು ಸುಂದರವಾಗಿರಬೇಕು ಎನ್ನುವ ಕಳಕಳಿಯಿದ್ದರೆ ದಯವಿಟ್ಟು ಎಲ್ಲರನ್ನೂ ಪ್ರೀತಿಸಿ; ಪ್ರೀತಿಯ ಪಸೆ ಇರುವಂತೆ ಬದುಕಿ. ಸದಾ ಮಕ್ಕಳ ಒಳಿತಿನ ಬಗ್ಗೆ ಯೋಚಿಸಿ, ಆ ಮಗುವಿನ ಒಳಿತಿಗೆ ಏನು ಮಾಡಬಹುದೆಂದು ನೋಡಿ. ಪ್ರೀತಿಯು ನಿಮಗೆ ಯಾವ ಮರ್ಯಾದೆಯನ್ನೂ ತಂದುಕೊಡಲಾರದು ಎಂದು ತಪ್ಪಾಗಿ ಭಾವಿಸಬೇಡಿ. ಪ್ರೀತಿಗಿರುವ ಬೆಲೆ ಜಗತ್ತಿನಲ್ಲಿ ಬರ‍್ಯಾವುದಕ್ಕೂ ಇಲ್ಲ ಎನ್ನುವ ಅಂತಿಮಸತ್ಯವನ್ನು ಅರಿತುಕೊಳ್ಳಿ.
ಶಿಸ್ತಿಗೆ ಸಂಬಂಧಿಸಿದಂತೆ ಒಂದು ಸಮಸ್ಯೆ ಇದೆ. ಅದೇನೆಂದರೆ, ನೀವು ಒಂದು ಮಗುವಿನ ಮೇಲೆ ಶಿಸ್ತನ್ನು ಹೇರಲು ನೋಡಿದಷ್ಟೂ ಅದು ಅಶಿಸ್ತಿನಿಂದ ವರ್ತಿಸತೊಡಗುತ್ತದೆ. ಒಂದು ಮಗು ಸ್ವತಂತ್ರವಾಗಿರಬೇಕು. ಅದರಲ್ಲಿ ನಿಜವಾದ ಒಂದು ಶಿಸ್ತು ಬರುವುದೇ ಆಗ! ನಾನು ನಿಮಗೆ ಏನನ್ನು ಹೇಳುತ್ತಿದ್ದೇನೆಂದರೆ, ಮಗುವಿನಲ್ಲಿ ಶಿಸ್ತು ಬರಬೇಕೆಂದರೆ ಅದನ್ನು ನೀವು ಪ್ರಾಂಜಲವಾಗಿ ಪ್ರೀತಿಸಬೇಕು! ಶಿಸ್ತಿಗೆ ಅದೊಂದೇ ಮಾಧ್ಯಮ. ಯಾರು ನೋಡಲು ಮಂಕಾಗಿ, ಒಡ್ಡೊಡ್ಡಾಗಿ ಇರುತ್ತಾರೋ ಅಂಥವರಲ್ಲಿ ಶಿಸ್ತು ಬರುತ್ತದೆ. ಯಾರು ಅಶಿಸ್ತಿನಿಂದ, ಸಂಪೂರ್ಣ ಸ್ವಾತಂತ್ರ್ಯದಿಂದ ಇರುತ್ತಾರೋ ಅಂಥವರು ಮಾತ್ರ ಘನವಾದ ಸಂಗತಿಗಳ ಬಗ್ಗೆ ಆಲೋಚಿಸಬಲ್ಲರು. ನಿಜವಾದ ಚಿಂತನಾಶಕ್ತಿ ಇರುವುದು ಇಂಥವರಲ್ಲಿ ಮಾತ್ರವೇ! ಪ್ರೀತಿ ಎಲ್ಲಿರುತ್ತದೋ ಅಲ್ಲಿ ರಚನಾತ್ಮಕತೆ ಇರುತ್ತದೆ. ಮುಟ್ಟಾಳರು ರೂಢಿಸಿಕೊಂಡಿರುವ ಶಿಸ್ತಿಗೆ ಅರೆಕಾಸಿನ ಬೆಲೆಯೂ ಇಲ್ಲ. ಶಿಸ್ತು ಏನಿದ್ದರೂ ನಮ್ಮೊಳಗಿನಿಂದಲೇ ಬರಬೇಕು. ಅಂತಹ ಶಿಸ್ತಿಗೆ ಮಾತ್ರ ಮರ್ಯಾದೆ! ಇಂತಹ ಶಿಸ್ತು ಈಗಿರುವ ಶಿಸ್ತಿನಿಂದ ಆಗುತ್ತಿರುವ ಅನಾಹುತಗಳನ್ನು ತಡೆಯಬಲ್ಲದು.
ಅಪಾಯಕಾರಿ ಯಾವುದು?
ಭಾರತ ಮತ್ತು ಪಾಕಿಸ್ತಾನದ ಯುವಜನರಿಗೆ ಅಂತರಂಗದಿಂದ ಬರುವಂತಹ ಇಂತಹ ಶಿಸ್ತಿದ್ದರೆ ಯಾರು ತಾನೇ ಏನು ಮಾಡಲು ಸಾಧ್ಯ? ಪಾಕಿಸ್ತಾನದ ಸರಕಾರವಾಗಲಿ, ಭಾರತದ ಸರಕಾರವಾಗಲಿ ನೀವು ಅವರನ್ನು ಕೊಲ್ಲಿ,ʼ ಎಂದು ಹೇಳಲು ಸಾಧ್ಯವೇ? ನಮ್ಮ ರಾಜಕಾರಣಿಗಳು ಹೀಗೇನಾದರೂ ಕುಮ್ಮಕ್ಕು ಕೊಡತೊಡಗಿದರೆ ಜನರು ʼಹೇ, ಮೊದಲು ಬಾಯಿ ಮುಚ್ಚಯ್ಯ.ನಿನ್ನಈ ಅವಿವೇಕವನ್ನೆಲ್ಲನಿಲ್ಲಿಸು,’ ಎಂದು ಗದರುತ್ತಾರೆ. ಇಷ್ಟೇ ಅಲ್ಲ,ʼ ಹೀಗೆ ಜನರನ್ನು ವಿನಾಕಾರಣ ಕೊಲ್ಲೋದು ಬುದ್ಧಿವಂತಿಕೆ ಅಲ್ಲ, ಅದರಿಂದ ಬಿಡಿಗಾಸಿನ ಪ್ರಯೋಜನವೂ ಇಲ್ಲ. ನೀನು ಹೇಳಿದಂತೆಲ್ಲ ನಾವು ಮಾಡೋಕಾಗಲ್ಲ’ ಎಂದು ನೇರವಾಗಿ ಹೇಳುತ್ತಾರೆ. ಆದರೆ, ಈಗ ಏನಾಗುತ್ತಿದೆ ಎಂದರೆ ಶುದ್ಧ ಮುಟ್ಟಾಳರು ಉಳಿದವರಿಗೆಲ್ಲ ಶಿಸ್ತನ್ನು ಬೋಧಿಸುತ್ತಿದ್ದಾರೆ. ಇಂಥವರು ʼಹೋಗ್ರಯ್ಯ, ಅವರನ್ನು ಬಡಿದು ಹಾಕಿ,’ ಎಂದರೆ ಸಾಕು, ಜನರು ಅದನ್ನೇ ಅಪ್ಪಣೆ ಎಂದುಕೊಂಡು ಹಾಗೆಯೇ ಮಾಡುತ್ತಿದ್ದಾರೆ. ಏಕೆಂದರೆ, ಈ ಮುಟ್ಟಾಳರುಶಿಸ್ತೇ ಸತ್ಯ,’ ಎಂದುಕೊಂಡು ಬಿಟ್ಟಿದ್ದಾರೆ. ರಾಜಕಾರಣಿಗಳು ಮತ್ತು ಪುರೋಹಿತಶಾಹಿಗಳು ಈ ಜಗತ್ತಿನಲ್ಲಿ ತಲೆತಲಾಂತರಗಳಿಂದಲೂ ಶಿಸ್ತನ್ನು ಬೋಧಿಸುತ್ತಿದ್ದಾರೆ. ಏಕೆಂದರೆ, ಇವರಿಗೆ ನಿಜಕ್ಕೂ ಬುದ್ಧಿಯಾಗಲಿ, ಬಂಡುಕೋರತನವಾಗಲಿ, ಯೋಚಿಸುವ ಶಕ್ತಿಯಾಗಲಿ ಖಂಡಿತವಾಗಿಯೂ ಇಲ್ಲ. ಈ ಜನಗಳು ಇಡೀ ಜಗತ್ತನ್ನೇ ಒಂದು ಸೇನಾಶಿಬಿರವನ್ನಾಗಿ ಮಾಡಲು ಹವಣಿಸುತ್ತಿದ್ದಾರೆ. ಅಲ್ಲದೆ, ಜಗತ್ತಿನಲ್ಲಿ ಯಾವೊಬ್ಬನಿಂದಲೂ ಯಾವ ಸಮಸ್ಯೆಯೂ ಉಂಟಾಗದಂತೆ ನೋಡಿಕೊಳ್ಳಲು ಇವರು ದೊಣ್ಣೆನಾಯಕರಂತೆ ನಿಂತಿದ್ದು, ಇದಕ್ಕಾಗಿ ಹಲವು ಮಾರ್ಗಗಳಲ್ಲಿ ತಿಣುಕಾಡುತ್ತಿದ್ದಾರೆ. ನಿಮಗೆ, ಈ ರಾಜಕಾರಣಿಗಳು ಮತ್ತು ಪುರೋಹಿತಶಾಹಿಗಳು ಎಂತೆಂತಹ ಠಕ್ಕ ತಂತ್ರಗಳನ್ನೆಲ್ಲ ಕಂಡುಕೊಂಡಿದ್ದಾರೆನ್ನುವುದು ಗೊತ್ತಿಲ್ಲದೆ ಇರಬಹುದು. ರಷ್ಯಾದಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಮೇಲೆ ಏನು ಮಾಡಿದರೆಂದರೆ, ಯೋಚಿಸಬಲ್ಲಂತಹ ಒಬ್ಬ ಮನುಷ್ಯ ಯಾವತ್ತಿಗೂ ಅಪಾಯಕಾರಿ ಎಂಬ ತೀರ್ಮಾನಕ್ಕೆ ಬಂದರು. ಇಂತಹ ಮನುಷ್ಯರಿದ್ದರೆ ತಾನೇ ತೊಂದರೆ? ಹೀಗಾಗಿ, ಮನುಷ್ಯನ ಯೋಚನಾಶಕ್ತಿಯನ್ನೇ ನಾಶ ಮಾಡಬಲ್ಲಂತಹ ಒಂದು ಯಂತ್ರವನ್ನೇ ಅವರು ಕಂಡುಹಿಡಿದರು! ಯೋಚಿಸಬಲ್ಲಂಥವನು ಸರಕಾರ ಮಾಡುವಂಥ ಎಡವಟ್ಟುಗಳ ಬಗ್ಗೆ ದನಿ ಎತ್ತಬಲ್ಲ, ಇದರ ವಿರುದ್ಧ ಬಂಡೇಳುವಂತೆ ಜನರನ್ನು ಪ್ರಚೋದಿಸಬಲ್ಲ, ಸರಕಾರವನ್ನು ಪ್ರಶ್ನಿಸಬಲ್ಲ ಎನ್ನುವುದು ಅವರಿಗಿದ್ದ ಭಯವಾಗಿತ್ತು. ಇದಕಿಂತ ಮೊದಲು ಇನ್ನೂ ಹಲವು ಹತಾರಗಳಿದ್ದವು. ಆದರೆ, ಅವು ಇಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಆದರೆ ಈಗ ತಮ್ಮ ಮೇಲೆ ಯಾರಿಗೆ ಅನುಮಾನ ಬರುತ್ತದೋ ಅಂಥವರ ತಲೆಯನ್ನೇ ತೊಳೆದು ಬಿಡುವ ಉಪಾಯಗಳನ್ನು ಈ ಶಕ್ತಿಗಳು ಕಂಡುಕೊಂಡಿವೆ. ಜಗತ್ತಿನಾದ್ಯಂತ ಕಂಡುಬರುತ್ತಿರುವ ಈ ಪ್ರವೃತ್ತಿ ನಿಜವಾಗಿಯೂ ಅಣುಬಾಂಬ್ ಅಥವಾ ಜಲಜನಕದ ಬಾಂಬಿಗಿಂತಲೂ ಹೆಚ್ಚು ಅಪಾಯಕಾರಿ ಎನ್ನುವ ಬಗ್ಗೆ ಅನುಮಾನವೇ ಬೇಡ. ಆದರೆ, ಶಿಕ್ಷಕರು ಇದಕ್ಕೆಲ್ಲ ಸಹಕರಿಸುತ್ತಿದ್ದಾರ? ಶಿಕ್ಷಕರೇ, ನಾನು ನಿಮ್ಮ ಮುಂದೆ ಕೆಲವು ಪ್ರಶ್ನೆಗಳನ್ನಿಡುತ್ತಿದ್ದೇನೆ. ದಯವಿಟ್ಟು ನೀವು ಇವುಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ. ನಿಮಗೆ ಈ ಜಗತ್ತಿನ ಬಗ್ಗೆ ಒಪ್ಪಿಗೆ ಇದೆಯಾ? ಇವತ್ತಿನ ಮನುಷ್ಯನ ಬಗ್ಗೆ ನಿಮಗೆ ಸಮಾಧಾನವಿದೆಯಾ? ಯುದ್ಧ, ಹಿಂಸೆ ಮತ್ತು ಅಪ್ರಾಮಾಣಿಕತೆಗಳ ಬಗ್ಗೆ ನಿಮಗೆ ಯಾವ ತಕರಾರೂ ಇಲ್ಲವಾ? ಇವುಗಳ ಬಗ್ಗೆಯೆಲ್ಲ ನಿಮಗೆ ಯಾವುದೇ ತಕರಾರು, ಜಿಜ್ಞಾಸೆ, ಪ್ರಶ್ನೆಗಳೇ ಇಲ್ಲವೆಂದಾದರೆ ʼಹಾಗಾದರೆ, ನಮಗೆ ಕೊಟ್ಟ ಶಿಕ್ಷಣದಲ್ಲಿರುವ ತಪ್ಪೇನು?’ ಎಂದು ಯೋಚಿಸಿ. ಹೌದು, ಇದುವರೆಗೆ ರೂಢಿಸಿಕೊಂಡು ಬಂದಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಿಜಕ್ಕೂ ದೋಷಗಳಿವೆ.
ಶಿಕ್ಷಕನೊಬ್ಬ ಅಂತರಂಗದಿಂದ ಬಂಡುಕೋರನಾಗಿದ್ದು, ಜೀವನದ ಬಗ್ಗೆ ಆತನ ದೃಷ್ಟಿಕೋನವು ಚಿಂತನಶೀಲವೂ ವಿವೇಕಯುತವೂ ಆಗಿದ್ದರೆ ಅಂತಹ ಶಿಕ್ಷಕನಿಂದ ಈ ಸಮಾಜಕ್ಕೆ ಲಾಭವಿದೆ. ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಲು ಇಂಥವನಿಂದ ಸಹಾಯವಾಗಬಹುದು. ಇಲ್ಲದೆ ಹೋದರೆ, ಬರೀ ಗಿಣಿಪಾಠ ಮಾಡುವಂಥವನು ಮಕ್ಕಳ ತಲೆಯಲ್ಲಿ ಅದೇ ಗತಕಾಲದ ಅರ್ಥಹೀನ ಸಂಗತಿಗಳನ್ನೇ ತುಂಬುತ್ತಿರುತ್ತಾನೆ. ವಾಸ್ತವವೆಂದರೆ, ನಮ್ಮ ಶಿಕ್ಷಕರು ತಶತಮಾನಗಳಿಂದಲೂ ಇದನ್ನೇ ಮಾಡುತ್ತಿದ್ದಾರೆ. ನಿಜಕ್ಕೂ ನಮ್ಮಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕ್ರಾಂತಿಯಾಗಬೇಕು. ಇದು ಅಂತಿಂಥ ಕ್ರಾಂತಿಯಾಗದೆ ಮಹಾಕ್ರಾಂತಿಯಾಗಬೇಕು. ಇದರಿಂದಾಗಿ ಹಳೆಯ ಶಿಕ್ಷಣ ಪದ್ಧತಿಗಳು ಮತ್ತು ಅದರ ಚಹರೆಗಳೆಲ್ಲ ನಾಶವಾಗಿ, ಹೊಸ ಶಿಕ್ಷಣ ವ್ಯವಸ್ಥೆ ಮತ್ತು ಮೌಲ್ಯಗಳು ಸೃಷ್ಟಿಯಾಗಬೇಕು. ಈ ಹೊಸ ಪದ್ಧತಿಯಲ್ಲಿ ಅರ್ಥಹೀನವಾದ ಸ್ಪರ್ಧೆಗಾಗಲಿ, ಮಹತ್ತ್ವಾಕಾಂಕ್ಷೆಗಳಿಗಾಲಿ ಬೆಲೆ ಇರಬಾರದು. ಹಾಗೆಯೇ, ಪ್ರಥಮ ಸ್ಥಾನ ಎನ್ನುವುದಾಗಲಿ, ಅಂತಿಮ ಸ್ಥಾನ ಎನ್ನುವುದಾಗಲಿ ಈ ವ್ಯವಸ್ಥೆಯಲ್ಲಿ ಅಪ್ರಸ್ತುತವಾಗಬೇಕು. ಇಂತಹ ಸಂಗತಿಗಳಿಗೆ ಹೊಸ ವ್ಯವಸ್ಥೆಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇರಬಾರದು. ಇಷ್ಟೇ ಅಲ್ಲ, ಒಬ್ಬರೊಂದಿಗೆ ಇನ್ನೊಬ್ಬರನ್ನು ಹೋಲಿಸುವ ಕ್ರಮಕ್ಕೂ ಮಂಗಳ ಹಾಡಬೇಕು. ಏನಿದ್ದರೂ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ವಿಧಾನ ಬರಬೇಕು. ಹೊಚ್ಚಹೊಸ ಮತ್ತು ಎಲ್ಲೆಲ್ಲೂ ಪರಿಮಳದಿಂದ ತುಂಬಿರುವ ಅದ್ಭುತವಾದ ಜಗತ್ತನ್ನು ಸೃಷ್ಟಿಸುವುದು ನಿಜಕ್ಕೂ ಸಾಧ್ಯವಿದೆ. ಗಾಢ ನಿದ್ದೆಯಲ್ಲಿ ಮುಳುಗಿರುವ ಜನರ ಪೈಕಿ ಕೆಲವರನ್ನಾದರೂ ಬಡಿದೆಬ್ಬಿಸುವ ದೃಷ್ಟಿಯಿಂದ ನಾನು ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಆದರೆ, ಕೆಲವರು ಎಷ್ಟೊಂದು ಜಡವಾಗಿದ್ದಾರೆಂದರೆ, ಅವರೆಲ್ಲರೂ ನನ್ನನ್ನು ʼಅಯ್ಯೋ, ಇವನೊಬ್ಬ! ನಿದ್ದೆ ಮಾಡಲೂ ಬಿಡುತ್ತಿಲ್ಲ,’ ಎಂದು ಶಪಿಸುತ್ತಿದ್ದಾರೆ. ಇದೇನೇ ಇರಲಿ, ನನ್ನ ಮಾತುಗಳಿಂದ ಉತ್ತೇಜಿತರಾಗಿ ಕೆಲವೇ ಕೆಲವು ಮಂದಿ ಮೈ ಕೊಡವಿಕೊಂಡು ಎದ್ದರೂ ಸಾಕು, ಅವರಿಗೆ ಹಲವು ಉಪಯುಕ್ತ ಸಂಗತಿಗಳು ಕಾಣುತ್ತವೆ.
ವಿವೇಕ ಮೂಡಲಿ
ನಾನು ಹೇಳಿದ್ದೇ ಸತ್ಯ, ಅದೇ ವೇದವಾಕ್ಯ ಎಂದು ಹೇಳಲಾರೆ. ಗತಕಾಲದ ಸಂಗತಿಗಳನ್ನೇ ಬೋಧಿಸುತ್ತಿರುವ ಶಿಕ್ಷಕರಲ್ಲಿರುವ ಸಮಸ್ಯೆ ಇದೇ. ಅಂದರೆ, ಅವರು ತಮ್ಮ ಬಾಯಿಂದ ಉದುರಿದ್ದೇ ಕೊನೆಯ ಮಾತು ಎನ್ನುವ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಆದರೆ, ನಾನು ಅವರಂಥಲ್ಲ. ಹಲವು ಸಂಗತಿಗಳ ಬಗ್ಗೆ ನನ್ನಲ್ಲಿರುವ ವಿಚಾರವನ್ನಷ್ಟೇ ನಾನು ಹಂಚಿಕೊಂಡಿದ್ದೇನೆ. ನನ್ನ ಈ ಮಾತುಗಳಲ್ಲಿ ಸತ್ಯದ ಲವಲೇಶವೂ ಇಲ್ಲವೆಂದರೆ ಅದು ಸರಿಯಲ್ಲ. ಇದೇನೇ ಇರಲಿ, ನೀವು ನನ್ನ ಮಾತುಗಳನ್ನೆಲ್ಲ ಒಪ್ಪಿಕೊಳ್ಳಲೇಬೇಕು ಅಥವಾ ನನ್ನನ್ನು ನೀವು ನಂಬಬೇಕೆಂದೆಲ್ಲ ಪೀಡಿಸಲಾರೆ. ಈ ವಿಚಾರಗಳ ಬಗ್ಗೆಯೆಲ್ಲ ನೀವು ಚಿಂತಿಸಬೇಕೆಂಬುದಷ್ಟೇ ನನ್ನ ಕಳಕಳಿಯ ಮನವಿ. ಹೀಗೆ ಚಿಂತಿಸಿದ ನಂತರ, ನಾನು ಹೇಳಿದ ವಿಚಾರಗಳಲ್ಲಿ ಯಾವುದಾದರೂ ಸರಿ ಎನಿಸಿದರೆ ಅದರಲ್ಲಿ ನನ್ನ ಹೆಚ್ಚುಗಾರಿಕೇ ಏನೇನೂ ಇಲ್ಲ. ಅದೇನಿದ್ದರೂ ನಿಮ್ಮ ಚಿಂತನೆಯ, ನೀವು ಯೋಚಿಸಿದ್ದರ ಫಲ. ಆಮೇಲೆ ನೀವು ನನ್ನ ಅನುಯಾಯಿಗಳೂ ಆಗಬೇಕಾಗಿಲ್ಲ. ಬದಲಿಗೆ, ನಿಮಗೆ ನಿಮ್ಮದೇ ಆದ ವಿವೇಕವು ಸ್ಪಷ್ಟವಾಗುತ್ತದೆ. ಆ ವಿವೇಕ ಕೂಡ ಆದ್ಯಂತವಾಗಿ ನಿಮ್ಮದೇ!
ನಾನು ಹಂಚಿಕೊಂಡಿರುವ ಕೆಲವು ಸಂಗತಿಗಳ ಬಗ್ಗೆ ನೀವು ದಯವಿಟ್ಟು ಯೋಚಿಸಿ. ಗಾಢನಿದ್ರೆಯಲ್ಲಿ ಮೈಮರೆತಿರುವ ಈ ಜಗತ್ತು ಮೈ ಕೊಡವಿಕೊಂಡು ಎದ್ದೇಳಲು ಹತ್ತಾರು ’ಶಾಕ್‌ಗಳನ್ನು’ ಕೊಡಬೇಕಾಗಿದೆ. ಇದರಿಂದ ಮಾತ್ರ ಹೊಸದೇನಾದರೂ ಸೃಷ್ಟಿಯಾಗಬಹುದಷ್ಟೆ. ಏಕೆಂದರೆ, ನಾವೆಲ್ಲರೂ ಜೀವಂತಶವಗಳಾಗಿ ಹೋಗಿದ್ದೇವೆ. ಅಲ್ಲದೆ, ಇಲ್ಲಿ ಪ್ರತಿಯೊಂದೂ ಹಾಗೆಯೇ ಉರುಳಿ ಹೋಗುತ್ತಿದೆ. ನೀವು ಹಲವು ದಿಕ್ಕುಗಳಿಂದ ಇಂಥ ಅಚ್ಚರಿಯ ಆಘಾತಗಳಿಗೆ ಒಳಗಾಗಲಿದ್ದೀರಿ ಮತ್ತು ಇದರಿಂದ ನೀವು ಕಣ್ತೆರೆದು, ಯೋಚಿಸಲು ಶುರು ಮಾಡುತ್ತೀರಿ ಎನ್ನುವ ಭರವಸೆ ನನಗಿದೆ. ಶಿಕ್ಷಕರ ಮೇಲೆ ಬಹುದೊಡ್ಡ ಹೊಣೆಯೊಂದಿದೆ. ಅದೇನೆಂದರೆ, ಅವರು ತಮ್ಮನ್ನು ತಾವು ಈ ರಾಜಕಾರಣಿಗಳಿಂದ, ಈ ರಾಷ್ಟ್ರಪತಿಗಳಿಂದ ಮತ್ತು ಈ ಪ್ರಧಾನಮಂತ್ರಿಗಳಿಂದ ಪಾರು ಮಾಡಿಕೊಳ್ಳಬೇಕಾಗಿದೆ. ಏಕೆಂದರೆ, ಇಡೀ ಜಗತ್ತಿನ ಸಮಸ್ಯೆಗಳಿಗೆಲ್ಲ ಇವರೇ ಕಾರಣ! ಒಂದು ಮಗು ಯಾವ ಕಾರಣಕ್ಕೂ ಮುಂದೊಂದು ದಿನ ರಾಜಕಾರಣಿಯಾಗಬಾರದು. ಏಕೆಂದರೆ, ಈ ರಾಜಕಾರಣಿಗಳು ಎಲ್ಲದರಲ್ಲೂ ʼನಾನೇ ಮೊದಲಿಗನಾಗಿರಬೇಕು,’ ಎನ್ನುವ ಅಪಾಯಕಾರಿ ಮಹತ್ತ್ವಾವಕಾಂಕ್ಷೆಯನ್ನು ಬಿತ್ತುತ್ತಾರೆ. ಒಂದು ಸಲ ನೀವು ʼನಂಬರ್ 1′ ಎನಿಸಿಕೊಂಡುಬಿಟ್ಟರೆ, ಆಮೇಲೆ ಎಲ್ಲಿಗೆ ಹೋಗುತ್ತೀರಿ? ರಾಜಕಾರಣದಲ್ಲಿ ನಡೆಯುವ ಆಟ ಇದೇ. ಬೇಕಾದರೆ ನೀವು ದಿನಪತ್ರಿಕೆಗಳನ್ನು ನೋಡಿ, ಪ್ರತೀದಿನವೂ ಈ ರಾಜಕಾರಣಿಗಳ ಫೋಟೋಗಳು ಮತ್ತು ಹೆಸರುಗಳೇ ತುಂಬಿತುಳುಕುತ್ತಿರುತ್ತವೆ.
ಮಕ್ಕಳ ನಡುವೆ ಯಾವ ಸ್ಪರ್ಧೆಯೂ ಇರುವುದು ಬೇಡ. ನೀವು ಅವರಲ್ಲಿ ಬದುಕಿನೆಡೆಗೆ ಪ್ರೀತಿ ಮತ್ತು ಸಂತೋಷಗಳನ್ನು ಬೆಳೆಸಬೇಕೇ ವಿನಾ ಸ್ಪರ್ಧೆ ಹಾಗೂ ದ್ವೇಷದ ಭಾವನೆಗಳನ್ನಲ್ಲ. ಏಕೆಂದರೆ, ಸ್ಪರ್ಧೆ ಮತ್ತು ಶತ್ರುತ್ವದ ಭಾವೆನಗಳನ್ನು ಬೆಳೆಸಿಕೊಂಡವನು ನಿಧಾನವಾಗಿ ನಾಶವಾಗಿ ಹೋಗುತ್ತಾನೆ. ಹಾಗೆಯೇ, ಬದುಕಿನಲ್ಲಿ ಆನಂದವನ್ನು ಕಾಣುವವನು ಸುಗಂಧಭರಿತವೂ ಸುಂದರವೂ ಆಗಿರುವ ಹೂವಿನಂತಾಗುತ್ತಾನೆ. ಆ ದೇವರು ನಿಮಗೆ ಇಂತಹ ವಿವೇಕವನ್ನೂ ಸಿಡಿದೇಳುವ ಗುಣವನ್ನೂ ಕರುಣಿಸಲಿ.
ನೀವು ಅತ್ಯಂತ ಗಂಭೀರವಾಗಿ ಕುಳಿತುಕೊಂಡು, ನನ್ನ ವಿಚಾರಗಳಿಗೆ ಕಿವಿಗೊಟ್ಟಿದ್ದಕ್ಕೆ ನಾನು ನಿಮ್ಮೆಲ್ಲರಿಗೂ ಕೃತಜ್ಞ. ನಿಮ್ಮೊಳಗೆ ನೆಲೆಸಿರುವ ಭಗವಂತನಿಗೆ ನನ್ನ ಪ್ರಣಾಮಗಳು. ದಯಮಾಡಿ, ನೀವೆಲ್ಲರೂ ನನ್ನ ಹಾರೈಕೆಗಳನ್ನು ಸ್ವೀಕರಿಸಿ.
*****
Comments 2