- 340 ವರ್ಷಗಳ ಹಿಂದೆ ತಮ್ಮ 50-53ರ ವಯಸ್ಸಿನ ಅಸುಪಾಸಿನಲ್ಲೇ ಅಗಲಿದ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಮಾತನಾಡುತ್ತಿದ್ದಾರೆ. ಮರಾಠಕ್ಕೆ ಮಾತ್ರವಲ್ಲ, ಭಾರತಕ್ಕಷ್ಟೇ ಅಲ್ಲ, ಜಗತ್ತಿನ ಅದ್ವೀತಿಯ ವೀರರಾಗಿದ್ದ ಅವರು ಮತ್ತೊಮ್ಮೆ ಧುತ್ತೆಂದು ಸದ್ದು ಮಾಡಿದ್ದು ನಮ್ಮ ದೇಶದ ಮಾಧ್ಯಮಗಳ ಕಣ್ಣಿಗೆ ಕಾಣಲೇ ಇಲ್ಲ!! ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಈ ಮರೆವಿನ ಹೊತ್ತಿನಲ್ಲಿ ಛತ್ರಪತಿಯನ್ನು ಮತ್ತೊಮ್ಮೆ ನೆನಪು ಮಾಡಿದ್ದಾರೆ. ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನದ ಮಹತ್ತ್ವ ಮತ್ತಷ್ಟು ಹೆಚ್ಚಾಗಿದೆ.
***
ಈಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಒಂದು ವಿದ್ಯಮಾನ ಮಾಧ್ಯಮಗಳಲ್ಲಿ ಸಣ್ಣದೊಂದು ಸುದ್ದಿಯಾಗಿ ತೇಲಿ ಹೋಯಿತು. ಅಷ್ಟಾಗಿ ಯಾರೂ ಅದನ್ನು ಗಮನಿಸಲಿಲ್ಲ. ಅಥವಾ ಯಾರೂ ಅದನ್ನು ಗಮನಿಸದಿರಲೆಂದೇ ಮಾಧ್ಯಮಗಳು ಆ ವಿದ್ಯಮಾನಕ್ಕೆ ಮಹತ್ವ ನೀಡಲಿಲ್ಲವೇನೋ. ಆದರೆ ನಿಜಕ್ಕೂ ಮಹತ್ವ ನೀಡಬೇಕಾಗಿದ್ದ ಬಹುಮುಖ್ಯ ವಿದ್ಯಮಾನ ಅದಾಗಿತ್ತು.
ಆಗ್ರಾದಲ್ಲಿ ನಿರ್ಮಿಸಲಾಗುತ್ತಿರುವ ಮೊಘಲ್ ಮ್ಯೂಸಿಯಂ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ’ ಎಂದು ಬದಲಾಯಿಸಿ ಮರುನಾಮಕರಣ ಮಾಡಿದ್ದೇ ಆ ವಿದ್ಯಮಾನ. ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡವರು ಮತ್ಯಾರೂ ಅಲ್ಲ, ಉತ್ತರ ಪ್ರದೇಶದ ಗಂಡೆದೆಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು. ಜಾತ್ಯತೀತರಿಗೆ, ಬುದ್ಧಿಜೀವಿಗಳಿಗೆ ಯೋಗಿಯ ಹೆಸರು ಕೇಳಿದರೇ ಆಗುವುದಿಲ್ಲ. ಬಿಡಿ, ಜಾತ್ಯತೀತರ ಹಣೆಬರಹವೇ ಅದು. ಮೊಘಲ್ ಮ್ಯೂಸಿಯಂ ಎಂದು ಬದಲಾಯಿಸಿದ್ದು – ಮುಸ್ಲಿಂ ದೊರೆಗಳ ಇತಿಹಾಸವನ್ನು ನೆನಪಿಸುವ ಹೆಸರುಗಳನ್ನು ಅಳಿಸಿ ಹಾಕಿ, ಹಿಂದು ಹಿನ್ನೆಲೆಯ ಹೆಸರುಗಳನ್ನು ಮರಳಿ ಸ್ಥಾಪಿಸುವ ಯೋಗಿಯವರ ಶ್ಲಾಘನೀಯ ಯತ್ನದ ಮುಂದುವರಿದ ಭಾಗ, ಅಷ್ಟೆ. ಮೊಘಲ್ ಹೆಸರುಗಳು ಗುಲಾಮಗಿರಿಯ ಸಂಕೇತಗಳು. ಅವುಗಳನ್ನು ಅಳಿಸಬೇಕು ಎನ್ನುವುದು ಯೋಗಿಯವರ ನಿಲುವು. ‘ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?’ ಎಂದೇ ಯೋಗಿ ಪ್ರಶ್ನಿಸುತ್ತಾರೆ. ಆಗ್ರಾದ ತಾಜ್‌ಮಹಲ್ ಬಳಿ 2015ರಲ್ಲಿ ಅಖಿಲೇಶ್ ಸರ್ಕಾರ ಈ ಮ್ಯೂಸಿಯಂ ನಿರ್ಮಾಣಕ್ಕೆ ಆರಂಭಿಸಿತ್ತು. ಈಗ ಹೊಸ ಹೆಸರಿನೊಂದಿಗೆ ಆ ಮ್ಯೂಸಿಯಂ ಮುಚ್ಚಿಟ್ಟ ಚರಿತ್ರೆಯ ಅಧ್ಯಾಯವೊಂದನ್ನು ಬಿಚ್ಚಿಟ್ಟು ಶಿವಾಜಿ ಎಂಬ ವೀರ ಸರದಾರನನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.
ಆಗ್ರಾ -ಶಿವಾಜಿ ನಡುವಿನ ಸಂಬಂಧವೇನು?
ಅಷ್ಟಕ್ಕೂ ಶಿವಾಜಿಗೂ ಆಗ್ರಾದ ಕೋಟೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಇತಿಹಾಸ ಅರಿಯದ ಹಲವು ಮಂದಿ ಮುಗ್ಧರಾಗಿ ಕೇಳಬಹುದು. ಅಲ್ಲೇ ಇರುವುದು ಸ್ವಾರಸ್ಯ. ಮೊಘಲ್ ಮ್ಯೂಸಿಯಂ ಈಗ ಶಿವಾಜಿ ಮ್ಯೂಸಿಯಂ ಆಗುವುದರೊಂದಿಗೆ ಶಿವಾಜಿಗೂ ಆಗ್ರಾದ ಕೋಟೆಗೂ ಇರುವ ಸಂಬಂಧದ ಎಳೆ ಬಿಚ್ಚಿಕೊಂಡಿದೆ.
ಹಿಂದೂಸ್ಥಾನಕ್ಕೆ ಕಂಟಕಪ್ರಾಯರಾಗಿದ್ದ ಅಫಜಲ್‌ಖಾನ್, ಶಯಿಸ್ತೇಖಾನ್‌ರಂತಹ ಭಯಂಕರ ವೀರರನ್ನೇ ಉಪಾಯದಿಂದ ಕೊಂದು ಹಾಕಿದ ಶಿವಾಜಿಯ ಮೇಲೆ ದಿಲ್ಲಿಯ ಬಾದಶಹಾ ಔರಂಗಜೇಬನಿಗೆ ಸಹಜವಾಗಿಯೇ ಆಕ್ರೋಶ ಉಂಟಾಗಿತ್ತು. ಶಿವಾಜಿಯನ್ನು ಉಪಾಯವಾಗಿ ತನ್ನ ಆಸ್ಥಾನಕ್ಕೆ ಕರೆಸಿ, ಆತನನ್ನು ಜೀವಂತವಾಗಿ ಮುಗಿಸಬೇಕೆಂದು ಔರಂಗಜೇಬನ ಲೆಕ್ಕಾಚಾರ ಹಾಕುತ್ತಲೇ ಇದ್ದ. ಸಂಧಾನದ ನೆಪದಲ್ಲಿ ಶಿವಾಜಿಗೆ ತನ್ನ ಆಸ್ಥಾನಕ್ಕೆ ಬಂದು ಗೌರವಾದರಗಳನ್ನು ಸ್ವೀಕರಿಸುವಂತೆ ಆಮಂತ್ರಣ ನೀಡಿದ. ಎಂಥೆಂಥ ಮೊಘಲ್ ಸರದಾರರನ್ನೇ ಖತಂ ಮಾಡಿದ್ದ ಶಿವಾಜಿ ಮಹಾರಾಜರಿಗೆ ಔರಂಗಜೇಬನ ಈ ಕುತಂತ್ರ, ಕಪಟನಾಟಕ ಅರ್ಥವಾಗದೆ ಇದ್ದೀತೆ? ಆದರೆ ಔರಂಗಜೇಬನನ್ನು ಮುಖತಃ ಭೇಟಿ ಮಾಡುವ ಈ ಅವಕಾಶವನ್ನೇಕೆ ತಪ್ಪಿಸಿಕೊಳ್ಳುವುದು? ಸಮಯಾವಕಾಶ ದೊರೆತರೆ ಆತನನ್ನೇ ಮುಗಿಸಿಯೇ ಬರಬಹುದೆಂದು ಆಲೋಚಿಸಿ ಔರಂಗಜೇಬನ ಆಮಂತ್ರಣದಂತೆ ಶಿವಾಜಿ ಆಗ್ರಾದಲ್ಲಿರುವ ಆತನ ಆಸ್ಥಾನಕ್ಕೆ ತೆರಳಿದರು. ಆದರೆ ಅಲ್ಲಿಗೆ ತೆರಳಿದ ಬಳಿಕ ಔರಂಗಜೇಬನ ನಿಜಬಣ್ಣ ಏನೆಂದು ಶಿವಾಜಿಗೆ ತಿಳಿಯಿತು. ಸಂಧಾನದ ನೆಪದಲ್ಲಿ ತನ್ನ ಆಸ್ಥಾನಕ್ಕೆ ಶಿವಾಜಿಯನ್ನು ಕರೆಸಿಕೊಂಡ ಔರಂಗಜೇಬ ನಾನಾ ರೀತಿಯಲ್ಲಿ ಅವಮಾನ ಮಾಡಿ, ಆಗ್ರಾ ಕೋಟೆಯಲ್ಲಿ ಸೆರೆಯಲ್ಲಿಟ್ಟಿದ್ದ. ಆದರೆ ಔರಂಗಜೇಬ ಚಾಪೆ ಕೆಳಗೆ ತೂರಿದರೆ ಶಿವಾಜಿ ರಂಗೋಲಿ ಕೆಳಗೆ ತೂರಬಲ್ಲ ಚತುರಮತಿಗಳಾಗಿದ್ದರು. ತನಗೆ ಆರೋಗ್ಯ ಕೆಟ್ಟಿದೆ. ಅದಕ್ಕೆ ಊರಿನವರಿಗೆಲ್ಲ ಸಿಹಿ ಹಂಚಿ ಪ್ರಾರ್ಥಿಸಬೇಕೆಂದು ಬುಟ್ಟಿಗಳಲ್ಲಿ ಸಿಹಿ ತರಿಸಿದರು. ಈ ನೆಪದಲ್ಲಿ ಸಾಲುಸಾಲು ಬುಟ್ಟಿಗಳ ನಡುವೆ ಎರಡು ದೊಡ್ಡ ಬುಟ್ಟಿಗಳಲ್ಲಿ ತಾನು ಮತ್ತು ಮಗ ಸಂಭಾಜಿ ಕುಳಿತು ಪಹರೆಗಾರರ ಕಣ್ತಪ್ಪಿಸಿ ಔರಂಗಜೇಬನ ಸೆರೆಮನೆಯಿಂದ ಪಾರಾಗಿದ್ದರು. ಔರಂಗಜೇಬನಿಗೆ ಸುದ್ದಿ ಗೊತ್ತಾಗುವಷ್ಟರಲ್ಲಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ತಮ್ಮ ಕೋಟೆ ಸೇರಿಕೊಂಡಾಗಿತ್ತು. ಔರಂಗಜೇಬನ ತಂತ್ರಕ್ಕೆ ಪ್ರತಿತಂತ್ರ ಹೊಸೆದು ಶಿವಾಜಿ ಎಲ್ಲರನ್ನೂ ಅಚ್ಚರಿಯ ಕಡಲಲ್ಲಿ ಕೆಡವಿದ್ದರು ಶಿವಾಜಿ. ಈ ಹಿನ್ನೆಲೆಯಲ್ಲೇ ಆಗ್ರಾ ಮ್ಯೂಸಿಯಂಗೆ ಈಗ ಶಿವಾಜಿ ಮ್ಯೂಸಿಯಂ ಎಂದು ಹೆಸರಿಡಲಾಗಿದೆ.
ಶಿವಾಜಿ 1680ರಲ್ಲಿ ಸ್ವರ್ಗಸ್ಥರಾದ ಬಳಿಕ ಔರಂಗಜೇಬ ನಮಾಜ್ ಸಂದರ್ಭದಲ್ಲಿ ಹೇಳಿದ್ದನ್ನು ಬರೆದಿಡಲಾಗಿದೆ. ಆತ ಹೇಳಿದ್ದೇನು ಗೊತ್ತೆ? “ಕಾಬೂಲ್‌ನಿಂದ ಕಂದಹಾರ್‌ವರೆಗೆ ನನ್ನ ತೈಮೂರ್ ಕುಟುಂಬದ ಮೊಘಲ್ ಸುಲ್ತಾನರ ಸಾಮ್ರಾಜ್ಯ ವಿಸ್ತರಿಸಿತ್ತು. ಇರಾಕ್, ಇರಾನ್, ತುರ್ಕಿಸ್ಥಾನ್ ಮೊದಲಾದ ಹಲವು ದೇಶಗಳಲ್ಲಿ ನನ್ನ ಸೈನ್ಯ ವೀರಾವೀರರನ್ನೆಲ್ಲ ಸದೆಬಡಿಸಿತ್ತು. ಆದರೆ ಭಾರತದಲ್ಲಿ ಮಾತ್ರ ಶಿವಾಜಿ ಎಂಬ ಭೂತ ನನ್ನ ಸೋಲರಿಯದ ಸಾಹಸಕ್ಕೆ ಕಡಿವಾಣ ಹಾಕಿದ. ನಾನು ನನ್ನ ಗರಿಷ್ಠ ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆ ಬಳಸಿದರೂ ಶಿವಾಜಿಯನ್ನು ಹಿಡಿಯಲಾಗಲಿಲ್ಲ. ಯಾ ಅಲ್ಲಾಹ್, ನೀನು ನನಗೆ ಒಬ್ಬ ನಿರ್ಭೀತ, ವೀರಾವೀರ, ಪರಾಕ್ರಮಿ ವೈರಿಯನ್ನು ಕೊಟ್ಟೆ. ಆತನಿಗಾಗಿ ನೀನು ಸ್ವರ್ಗದ ಬಾಗಿಲುಗಳನ್ನು ತೆರೆದಿಡು. ಏಕೆಂದರೆ ಜಗತ್ತಿನ ಅತ್ಯುತ್ತಮ, ಶ್ರೇಷ್ಠ, ವಿಶಾಲ ಹೃದಯಿ ಯೋಧನೊಬ್ಬ ನಿನ್ನಲ್ಲಿಗೆ ಬರುತ್ತಿದ್ದಾನೆ”
ಶಯಿಸ್ತೆಖಾನ್ ಎಂಬ ಮೊಘಲ್ ವೀರನ ಕೈಗಳನ್ನೇ ಕತ್ತಲಿನಲ್ಲಿ ಶಿವಾಜಿ ತುಂಡರಿಸಿದ್ದರು. ʼಶಿವಾಜಿ ಕತ್ತರಿಸಿದ್ದು ನನ್ನ ಕೈಗಳನ್ನಲ್ಲ. ನನ್ನ ದುರಹಂಕಾರವನ್ನೇ ಕತ್ತರಿಸಿ ಹಾಕಿದ್ದಾನೆ. ಕನಸಿನಲ್ಲಿ ಆತನನ್ನು ಭೇಟಿ ಮಾಡುವುದಕ್ಕೂ ಭಯವಾಗುತ್ತದೆ’ ಎಂದು ಶಯಿಸ್ತೇಖಾನ್ ಅನಂತರ ಅಲವತ್ತುಕೊಂಡಿದ್ದನಂತೆ! ಬಿಜಾಪುರದ ಮೊಘಲ್ ದೊರೆ ಆಲಿ ಅದಿಲ್‌ಶಾನ ಹತಾಶ ಪತ್ನಿ, ʼನಮ್ಮ ರಾಜ್ಯದಲ್ಲಿ ಶಿವಾಜಿಯನ್ನು ಸದೆಬಡಿಯಬಲ್ಲ ಒಬ್ಬನೇ ಒಬ್ಬ ಯೋಧನಿಲ್ಲವೇ?’ ಎಂದು ಮರುಗಿದ್ದಳಂತೆ.
ಶಿವಾಜಿ ಬಗ್ಗೆ ಹಿಟ್ಲರ್ ಹೇಳಿದ್ದೇನು ಗೊತ್ತ?
ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ನೇತಾಜಿ ಸುಭಾಶ್ಚಂದ್ರ ಬೋಸ್ ಅವರಿಗೆ ಹೀಗೆ ಹೇಳಿದ್ದನಂತೆ; “ನೇತಾಜಿಯವರೆ, ಬ್ರಿಟಿಷರನ್ನು ತೊಲಗಿಸಲು ನಿಮ್ಮ ದೇಶಕ್ಕೆ ಯಾವ ಹಿಟ್ಲರನ ಅಗತ್ಯವೂ ಇಲ್ಲ. ಶಿವಾಜಿಯ ಚರಿತ್ರೆಯನ್ನು ನೀವು ಎಲ್ಲರಿಗೂ ಕಲಿಸಿ, ಸಾಕು”. ʼಶಿವಾಜಿಯೇನಾದರೂ ಇಂಗ್ಲೆಂಡ್‌ನಲ್ಲಿ ಜನಿಸಿದ್ದೇ ಆಗಿದ್ದರೆ, ನಾವು ಬ್ರಿಟಿಷರು ಕೇವಲ ಈ ಭೂಮಿಯಷ್ಟೇ ಅಲ್ಲ. ಇಡೀ ವಿಶ್ವವನ್ನೇ ಆಳುತ್ತಿದ್ದೆವುʼ ಎಂದು ಲಾರ್ಡ್ ಮೌಂಟ್ ಬ್ಯಾಟನ್ ಪ್ರಶಂಶಿಸಿದ್ದರು. ‘ಶಿವಾಜಿ ಇನ್ನೂ ಹತ್ತು ವರ್ಷ ಕಾಲ ಬದುಕಿದ್ದರೆ ಬ್ರಿಟಿಷರು ಭಾರತದ ಕಡೆ ತಲೆಯಿಟ್ಟು ಖಂಡಿತ ಮಲಗುತ್ತಿರಲಿಲ್ಲ’ – ಇದು ಒಬ್ಬ ಬ್ರಿಟಿಷ್ ಗವರ್ನರ್‌ನ ಉದ್ಗಾರ.
ಸ್ವತಃ ನೇತಾಜಿ ಸುಭಾಸ್‌ಚಂದ್ರರೇ ಹೇಳಿದ್ದರು. ‘ಭಾರತ ಸ್ವತಂತ್ರವಾಗ ಬೇಕಾದರೆ ಇರುವುದೊಂದೆ ದಾರಿ. ಅದು ಶಿವಾಜಿಯಂತೆ ಹೋರಾಡುವುದು’.
“ಶಿವಾಜಿ ಎನ್ನುವುದು ಭಾರತೀಯ ಯುವಕರ ಪಾಲಿಗೆ ಕೇವಲ ಒಂದು ಹೆಸರಲ್ಲ. ಅದೊಂದು ಅವರ ಪಾಲಿಗೆ ಶಕ್ತಿಯ ಸಂಕೇತ”- ಎಂದವರು ಸ್ವಾಮಿ ವಿವೇಕಾನಂದರು. ಉಜ್ಬೇಕಿಸ್ಥಾನದ ಕರ್‍ತಲಾಬ್ ಖಾನ್ ನೇತೃತ್ವದ ೩೦ ಸಾವಿರ ಬಲಿಷ್ಠ ಸೈನಿಕಪಡೆಯನ್ನು ಶಿವಾಜಿಯ ಜುಜುಬಿ ಒಂದು ಸಾವಿರ ಮಾವಳಿಗಳ ಸೈನ್ಯ ಸೋಲಿಸಿತ್ತು. ಒಬ್ಬನೇ ಒಬ್ಬ ಉಜ್ಬೇಕಿ ಈ ಸಮರದಲ್ಲಿ ಬದುಕುಳಿದಿರಲಿಲ್ಲ. ಇದೊಂದು ಗಿನ್ನೆಸ್ ದಾಖಲೆಯೇ ಸರಿ.
ನೌಕಾಪಡೆಯ ಮೂಲಪುರುಷ
ಶಿವಾಜಿ ಹೋರಾಡಿದ್ದು ಹೆಚ್ಚಾಗಿ ಹೊರಗಿನ ಶತ್ರುಗಳ ವಿರುದ್ಧವೇ. ಶಯಿಸ್ತೇಖಾನ್ ಅಬು ತಾಲಿಬಾನ್ ಮತ್ತು ತುರ್ಕಿಸ್ಥಾನ್ ರಾಜನಾಗಿದ್ದ. ಹೆಬ್ಲೋಲ್ ಖಾನ್ ಪಠಾಣ್, ಸಿಕಂದರ್ ಪಠಾಣ್, ಚಿದರ್‌ಖಾನ್ ಪಠಾಣ್ – ಇವರೆಲ್ಲ ಅಫಘಾನಿಸ್ಥಾನದ ಸೈನಿಕರಾಗಿದ್ದರು. ದಿಲೇರ್‌ಖಾನ್ ಪಠಾಣ್ ಮಂಗೋಲಿಯಾದ ಶೂರ ಸರದಾರನಾಗಿದ್ದ. ಆದರೆ ಇವರೆಲ್ಲರೂ ಶಿವಾಜಿಯ ಸಾಹಸದೆದುರು ಮಣ್ಣು ಪಾಲಾಗಬೇಕಾಯಿತು. ಶಿವಾಜಿಯಿಂದ ಸೋತು ಹಿಮ್ಮೆಟ್ಟಿದ ಸಿದ್ದಿ ಜೌಹರ್ ಮತ್ತು ಸಲಬಾ ಖಾನ್ ಇರಾನ್ ಯೋಧರಾಗಿದ್ದರು. ಸಿದ್ದಿ ಜೌಹರ್ ಅನಂತರ ಸಮುದ್ರ ಮಾರ್ಗದ ಮೂಲಕ ಮತ್ತೆ ದಂಡೆತ್ತಿ ಬಂದಾಗ, ಶಿವಾಜಿ ನೌಕಾಪಡೆ ಕಟ್ಟಿ ಆತನನ್ನು ಹಿಮ್ಮೆಟ್ಟಿಸಿದ್ದರು. ಹೀಗೆ ಭಾರತೀಯ ನೌಕಾಪಡೆ ಕಟ್ಟಿದ ಮೊದಲ ಹಿಂದುರಾಜ ಕೂಡ ಶಿವಾಜಿಯೇ.
ಶತ್ರು ಸಂಹಾರ ಕಾರ್ಯದಲ್ಲಿ ಪರಶಿವನ ತ್ರಿಶೂಲದಂತೆ ಶಿವಾಜಿಯವರ ಭವಾನಿ ಖಡ್ಗ ಹೊಳೆದಂತೆಯೇ ಆದರ್ಶ ಧರ್ಮರಾಜ್ಯ ಸ್ಥಾಪನೆಯಲ್ಲಿ ಶಿವಾಜಿ ಮಹಾರಾಜರ ವಿಧಾಯಕ ಪ್ರತಿಭೆ ಪ್ರಕಾಶಮಾನವಾಗಿ ಅರಳಿತು. ಸ್ವರಾಜ್ಯದ ಗುಪ್ತಚರ ವಿಭಾಗ ಅವರ ಕಾಲದಲ್ಲಿ ಅತ್ಯಂತ ದಕ್ಷತೆಯಿಂದ ಕೂಡಿತ್ತು. ಶಿವಾಜಿ ಮಹಾರಾಜರ ನ್ಯಾಯ ನಿಷ್ಠುರತೆ, ಗುಣಗ್ರಾಹಕತೆ, ಶಿಸ್ತಿನ ಕಠೋರತೆಯಿಂದಾಗಿ ಸ್ವರಾಜ್ಯದ ಬಗೆಗಿದ್ದ ಜನಸಾಮಾನ್ಯರ ನಿಷ್ಠೆ ಸಾವಿರಪಟ್ಟು ವೃದ್ಧಿಸಿತ್ತು. ಜಾತಿ, ಮತ, ಸ್ಥಾನಮಾನ ಯಾವುದೂ ಅವರ ಶಾಸನಕ್ಕೆ ಅಡ್ಡಿ ಬರುತ್ತಿರಲಿಲ್ಲ. ಮೊಘಲ್ ದೊರೆಗಳ ವಿರುದ್ಧವೇ ಹೆಚ್ಚಾಗಿ ಅವರು ಹೋರಾಡಬೇಕಾಗಿ ಬಂದಿದ್ದರೂ ಅವರೆಂದೂ ಮುಸಲ್ಮಾನ ವಿರೋಧಿಯಾಗಿರಲಿಲ್ಲ. ಅವರ ಅತ್ಯಂತ ಆಪ್ತಸೇವಕ ಮದಾರಿ ಮೆಹತರ್ ಎಂಬುದೇ ಇದಕ್ಕೆ ಸಾಕ್ಷಿ.
ದಿಲ್ಲಿಯ ಬಾದಶಹ ಔರಂಗಜೇಬನ ಕೃಪಾಛತ್ರದಲ್ಲೆ ತನ್ನ ಜೀವನದ ಸಾರ್ಥಕ್ಯ ಕಂಡುಕೊಂಡು ಆತನ ಗುಣಗಾನ ಮಾಡುತ್ತಿದ್ದ ಹಿಂದಿ ಕವಿ ಭೂಷಣನಿಗೆ ಕ್ರಮೇಣ ಔರಂಗಜೇಬನ ಕ್ರೌರ್‍ಯ, ಹಿಂದು ದ್ವೇಷದ ಅರಿವಾಗಿ ಬಾದಶಹನ ಸಹವಾಸವೇ ಬೇಡವೆಂದು ದಕ್ಷಿಣಕ್ಕೆ ಧಾವಿಸಿ ಬಂದ. ಆ ನಂತರ ಆತ ತಾನು ಅರಿತ ಕಟುಸತ್ಯವನ್ನು ಕವಿತೆಯಾಗಿ ಬರೆದ.
“ಕಾಶಿಜಿ ಕೀ ಕಲಾ ಜಾತಿ,
ಮಥುರಾ ಮಸಜೀದ ಹೋತಿ|
ಶಿವಾಜಿ ನ ಹೋತೋ ತೋ ಸುನ್ನತ ಹೋತ ಸಬಕೀ”
(ಕಾಶಿಯ ಕಲೆ ಅಳಿಯುತ್ತಿತ್ತು
ಮಥುರೆ ಮಸೀದಿ ಆಗುತ್ತಿತ್ತು
ಶಿವಾಜಿ ಇಲ್ಲವಾಗಿದ್ದರೆ ಎಲ್ಲರ ಸುನ್ನತ್ (ಇಸ್ಲಾಮೀಕರಣ) ಆಗುತ್ತಿತ್ತು!)
ಎಂದು ಆ ಕವಿ ಭೂಷಣ ಮಾರ್ಮಿಕವಾಗಿ ವರ್ಣಿಸಿದ್ದ.
ಇಂಗ್ಲೆಂಡಿನ ಸಾರ್ವಜನಿಕ ಸಂಸ್ಥೆಯೊಂದು ಜಾಗತಿಕ ವೀರರನ್ನು ಕುರಿತು ನಡೆಸಿದ ಚಿಕಿತ್ಸಕ ತುಲನೆ ಬಹು ಅರ್ಥಪೂರ್ಣ. ‘ಜಗತ್ತಿನ ಸರ್ವಶ್ರೇಷ್ಠ ವೀರ ಪುರುಷ ಯಾರು?’ ಎನ್ನುವ ಪ್ರಶ್ನೆಯನ್ನು ಅದು ವಿವಿಧ ದೇಶಗಳಿಗೆ ಕಳಿಸಿತು. ಹ್ಯಾನಿಬಾಲ್, ಸೀಸರ್, ಅಲೆಕ್ಸಾಂಡರ್, ನೆಪೋಲಿಯ ಮುಂತಾದವರ ಬಗ್ಗೆ ಅಕೃತ ಜೀವನಚರಿತ್ರೆ ತರಿಸಿಕೊಂಡು ತುಲನಾತ್ಮಕ ಅಧ್ಯಯನ ನಡೆಸಿತು. ಕೊನೆಗೆ ಆ ಸಂಸ್ಥೆ ತಳೆದ ನಿಷ್ಕರ್ಷೆಯೇನೆಂದರೆ; ಶಿವಾಜಿಯೇ ಆ ಲೋಕೋತ್ತರ ಪಟ್ಟಕ್ಕೆ ಸರ್ವದೃಷ್ಟಿಯಿಂದಲೂ ಯೋಗ್ಯ ಪುರುಷ. ಬೋಸ್ಟನ್ ಯೂನಿವರ್ಸಿಟಿಯಲ್ಲಿ ಈಗಲೂ ‘Shivaji, The Management Guru’ ಎಂಬುದು ಒಂದು ಮುಖ್ಯ ಅಧ್ಯಯನ ವಿಷಯವಾಗಿದೆ.
ಇಂತಿಪ್ಪ ಈ ಯುಗಪುರುಷ, ಹಿಂದು ಸಾಮ್ರಾಟನನ್ನು ಎಡಪಂಥೀಯ ಇತಿಹಾಸಕಾರರು ಬೆಟ್ಟದ ಇಲಿ, ಲೂಟಿಕೋರ ಎಂದು ಕೀಳಾಗಿ ಚಿತ್ರಿಸಿ ಆತನ ನಿಜಚರಿತ್ರೆಯನ್ನೇ ಮುಚ್ಚಿಟ್ಟುಬಿಟ್ಟರಲ್ಲ! ಅಕ್ಬರ್, ಔರಂಗಜೇಬ್, ಬಾಬರ್‌ಗಳನ್ನೇ ವೀರಾವೀರರೆಂದು ನಮ್ಮ ಮಕ್ಕಳ ಬಾಯಲ್ಲಿ ಉರು ಹೊಡೆಸಿಬಿಟ್ಟರಲ್ಲ! ಈ ವಿಪರ್ಯಾಸಕ್ಕೆ ಏನೆನ್ನೋಣ. ಈಗಲೂ ಶಿವಾಜಿ ಮಹಾರಾಜರ ನೈಜ ಚರಿತ್ರೆಯ ಕುರಿತು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೇ ಇಲ್ಲ. ಮಹಾರಾಷ್ಟ್ರದ ಶಿವಸೈನಿಕರಂತೂ ಶಿವಾಜಿಯನ್ನು ಕೇವಲ ಒಬ್ಬ ಮರಾಠ ವೀರನೆಂದು ಕೊಂಡಾಡಿ, ಶಿವಾಜಿ ವಿರೋಧಿಸಿದ ಮೊಘಲರ ಪಳೆಯುಳಿಕೆ ಪಿಂಡಗಳನ್ನೇ ಪೋಷಿಸುವ ಹೀನಕಾರ್ಯದಲ್ಲಿ ನಿರತರಾಗಿದ್ದಾರೆ.
ಅದೇನಾದರೂ ಇರಲಿ, ಈವರೆಗಿನ ಶಿಕ್ಷಣದಲ್ಲಿ ಶಿವಾಜಿ ಮಹಾರಾಜರ ಮುಚ್ಚಿಟ್ಟ ನೈಜ ಚರಿತ್ರೆಯನ್ನು ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಿ ನಮ್ಮ ಮುಂದಿನ ಪೀಳಿಗೆಯವರಾದರೂ ಅದನ್ನು ಅರಿಯುವಂತಾಗಬೇಕು. ಎಡಪಂಥೀಯರು ಸೃಷ್ಟಿಸಿದ ವಿಕೃತ ಇತಿಹಾಸವನ್ನು ಯಾವ ಕರ್ಮಕ್ಕೆ ನಮ್ಮ ಮಕ್ಕಳು ಈಗಲೂ ಓದಬೇಕು?
***
- ದು.ಗು. ಲಕ್ಷ್ಮಣರ ಈ ಲೆಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ದು.ಗು. ಲಕ್ಷ್ಮಣ
- ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ. ಸಿಕೆನ್ಯೂಸ್ ನೌ ವೆಬ್‌ತಾಣದ ಅತ್ಯಂತ ಪ್ರಮುಖ ಅಂಕಣಕಾರರು ಕೂಡ.
Comments 1