ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬೆಂಗಳೂರು: ಕೋವಿಡ್ ಇನ್ನು ಅಬ್ಬರಿಸುತ್ತಿರುವ ನಡುವೆಯೇ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಒಳ್ಳೆಯದೊಂದು ವಿಷಯಕ್ಕಾಗಿ ಸುದ್ದಿಯಲ್ಲಿದೆ. ತನ್ನ ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಮನೆಯಿಂದ ಹೊರಬಂದು ವೈರಸ್‌ಗೆ ಸಿಕ್ಕಿಬೀಳಬಾರದು ಎಂಬ ಸದುದ್ದೇಶದಿಂದ ತಾಂತ್ರಿಕವಾಗಿ ಉಪಯುಕ್ತ ಹೆಜ್ಜೆಯನ್ನಿಟ್ಟಿದೆ.
ವಿಶ್ವವಿದ್ಯಾಲಯಕ್ಕೆ ಭೌತಿಕವಾಗಿ ಬರುವ ಯಾವುದೇ ಪ್ರಮೇಯವಿಲ್ಲದೆ, ಇದ್ದಲ್ಲಿಯೇ ಆನ್‌ಲೈನ್ ಮೂಲಕವೇ ತಮ್ಮ ಅಗತ್ಯಗಳೆಲ್ಲವನ್ನೂ ಪೂರೈಸಿಕೊಳ್ಳುವ ಸುಸಜ್ಜಿತ ಆನ್‌ಲೈನ್ ವ್ಯವಸ್ಥೆಯನ್ನು ವಿವಿ ಸಿದ್ಧಪಡಿಸಿದ್ದು, ಅದಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಗಳವಾರ ಚಾಲನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲವಾಗುವಂತೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ಬಹುತೇಕ ಎಲ್ಲ ಸಮಸ್ಯೆಗಳಿಗೂ ಟೆಕ್ನಾಲಜಿಯೇ ಪರಿಹಾರ. ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕವೇ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ವ್ಯವಸ್ಥೆಯನ್ನು ಶ್ರೀ ಕೃಷ್ಣದೇವರಾಯ ವಿವಿ ರೂಪಿಸಿದೆ. ಈವರೆಗೂ ಎಲ್ಲಿಯು ಇಂಥ ವ್ಯವಸ್ಥೆ ಇರಲಿಲ್ಲ. ಪ್ರವೇಶ, ಶುಲ್ಕ ಪಾವತಿ, ಸೀಟು ಹಂಚಿಕೆ, ರೋಸ್ಟರ್ ಸೇರಿ ಎಲ್ಲ ಪ್ರಕ್ರಿಯೆಗಳು ಅನ್ಲೈನ್ʼನಲ್ಲಿಯೇ ನಡೆಯಲಿವೆ. ಇತರೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೆಲ್ಲವೂ ಇದೇ ಮಾದರಿಯನ್ನು ಅನುಸರಿಸಬೇಕು ಎಂಬುದುದ ಉಪ ಮುಖ್ಯಮಂತ್ರಿ ಹೇಳಿದರು. ಅವರು ಬೆಂಗಳೂರಿನಿಂದಲೇ ವರ್ಚುಯಲ್ ವೇದಿಕೆಯ ಮೂಲಕ ಪಾಲ್ಗೊಂಡಿದ್ದರು.
ಕೋವಿಡ್‌ನಂಥ ಮಾರಕ, ವೇಗವಾಗಿ ಹರಡುವ ಸೋಂಕಿನ ಕಾಲದಲ್ಲಿ ಮನೆಯಿಂದಲೇ ಸುರಕ್ಷಿತವಾಗಿ ವಿದ್ಯಾರ್ಥಿಗಳು ವಿವಿಯಲ್ಲಿನ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪೋಷಕರಿಗೂ ಇದರಿಂದ ಹೆಚ್ಚು ಅನುಕೂಲವಾಗಿದೆ. ಶ್ರೀ ಕೃಷ್ಣದೇವರಾಯ ವಿವಿಯು ಅತ್ಯುತ್ತಮ ಕೆಲಸ ಮಾಡಿದೆ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಇವತ್ತು ಕೋವಿಡ್ ಅನ್ನು ಹತ್ತಿಕ್ಕಲು ತಂತ್ರಜ್ಞಾನವೇ ದೊಡ್ಡ ಶಕ್ತಿಯಾಗಿ ನಮ್ಮ ಕೈಹಿಡಿದೆ. ಯಾವುದೇ ಕ್ಷೇತ್ರಕ್ಕೆ ಬೇಕಾದರೂ ಸರಿಹೊಂದುವ ತಂತ್ರಜ್ಞಾನಕ್ಕೆ ನಮ್ಮಲ್ಲಿ ವಿಪುಲವಾಗಿ ಲಭ್ಯವಿದೆ. ಅದನ್ನು ಬಳಕೆ ಮಾಡಿಕೊಳ್ಳಲು ಹಿಂಜರಿಯಬಾರದು. ಅಗತ್ಯಕ್ಕೆ ತಕ್ಕಂತೆ ಅದನ್ನೂ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು. ಟೆಕ್ನಾಲಜಿ ಬಗ್ಗೆ ಹಿಂಜರಿಕೆಯೇ ಇದ್ದರೆ ನಾವು ಹಿಂದುಳಿದುಬಿಡುತ್ತೇವೆ.
–ಡಾ.ಸಿ.ಎನ್.ಅಶ್ವತ್ಥನಾರಾಯಣ
ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ಸೇರಿದಂತೆ ಹಲವರು ಆನ್‌ಲೈನ್ ಕಾರ್ಯಕ್ರಮದಲ್ಲಿ ಹಾಜರಿದ್ದರು.