lead photo: bnmk photographs
ಅಂತರ್ಜಲ ಅಭಿವೃದ್ಧಿಗೆ ಮಾಡಿದ ಖರ್ಚಿನ ಲೆಕ್ಕ ಕೇಳಿದ ರೈತರು
ಬೆಂಗಳೂರು: ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಹೋಗಿ ರೈತನ ಬಾಳಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಪಾತಾಳ ಗಂಗೆ ಒಂದೆಡೆಯಾದರೆ, ಸರಕಾರ ಇನ್ನೊಂದು ರೀತಿಯಲ್ಲಿ ಜಲ ದಿಗ್ಬಂಧನಗಳನ್ನು ಹೇರಿ ಅದೇ ರೈತರನ್ನು ಕಂಗಾಲು ಮಾಡುತ್ತಿದೆ.
ಚಿಕ್ಕಬಳ್ಳಾಪುರ, ಕೋಲಾರ ಸೇರಿ 15 ಜಿಲ್ಲೆಗಳಲ್ಲಿ (ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೋಲಾರ, ರಾಮನಗರ, ತುಮಕೂರು) ರೈತರು ಕೊಳವೆ ಬಾವಿ ಇರಲಿ, ತೆರೆದ ಬಾವಿ ಕೊರೆಸಲಿಕ್ಕೂ ಅಂತರ್ಜಲ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಹಾಗೆಂದು ರಾಜ್ಯ ಅಂತರ್ಜಲ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದ್ದು, ಇದೀಗ ಹೊಸ ಬೋರ್‌ವೆಲ್ ಕೊರೆಸಿ ಒಂದಿಷ್ಟು ಬೇಸಾಯ ಮಾಡಿಕೊಂಡು ಬದುಕಬೇಕೆಂಬ ಆಸೆ ಇಟ್ಟುಕೊಂಡಿದ್ದ ರೈತರು ಈಗ ಯೋಚಿಸುವಂತಾಗಿದೆ.
ಅಂತರ್ಜಲವನ್ನು ಬಳಕೆ ಮಾಡುವ ಉದ್ದೇಶದಿಂದ ತೆರೆದ ಬಾವಿ ಅಥವಾ ಕೊಳವೆ ಬಾವಿ ತೋಡಬೇಕಾದರೆ ಸಮಿತಿ ಅನುಮತಿ ಪಡೆಯುವುದು ಒಂದೆಡೆಯಾದರೆ, ಈಗಾಗಲೇ ತೆರೆದ ಬಾವಿಗಳು ಮತ್ತು ಕೊಳವೆ ಬಾವಿಗಳ ಮೂಲಕ ಅಂತರ್ಜಲವನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆ, ಅಂಥ ರೈತರು ಕೂಡ ಅಂತರ್ಜಲ ಪ್ರಾಧಿಕಾರದಲ್ಲಿ ತಮ್ಮ ಹೆಸರು, ಮತ್ತಿತರೆ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಒಂದು ವೇಳೆ ಯಾವೊಬ್ಬ ರೈತ; ಪ್ರಾಧಿಕಾರದ ಅನುಮತಿ ಪಡೆಯದೇ ಬೋರ್‌ವೆಲ್ ಕೊರೆಸಿದರೆ ಸರಕಾರದ ಬ್ಯಾಂಕುಗಳು, ಸಹಕಾರ ಸಂಘಗಳು ಸೇರಿ ಯಾವುದೇ ಸಂಸ್ಥೆಯಿಂದ ಹಣಕಾಸು ನೆರವು ಸಿಗುವುದಿಲ್ಲ. ಅಷ್ಟೇ ಅಲ್ಲ; ವಿದ್ಯುತ್ ಸಂಪರ್ಕವೂ ಸಿಗದು. ಒಟ್ಟಾರೆಯಾಗಿ ಸರಕಾರದಿಂದ ಯಾವುದೇ ಸೌಲಭ್ಯ ಸಿಗಬೇಕಾದರೆ ಕೊಳೆವೆ ಬಾವಿ ಕೊರೆಸಬೇಕೆಂದಿರುವ ರೈತರು ತಪ್ಪದೇ ಅಂತರ್ಜಲ ಪ್ರಾಧಿಕಾರ ನೀಡುವ ಅನುಮತಿ ಪತ್ರವನ್ನು ಜೇಬಿನಲ್ಲೇ ಇಟ್ಟುಕೊಂಡಿರಬೇಕು.
ಶಿಕ್ಷೆಗೂ ಅವಕಾಶವಿದೆ!
ಒಂದು ವೇಳೆ ರೈತರು ಪ್ರಾಧಿಕಾರದ ಅನುಮತಿ ಪಡೆಯದೇ ಈ ಹದಿನೈದೂ ಜಿಲ್ಲೆಗಳಲ್ಲಿ ತೆರೆದ ಬಾವಿ ಅಥವಾ ಕೊಳವೆ ಬಾವಿ ಕೊರೆಸಿದ್ದೇ ಆದರೆ, ಅಂಥ ರೈತರಿಗೆ ಸೆಕ್ಷನ್ 32ರ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಇದು ಬೋರ್‌ವೆಲ್ ಯಂತ್ರದ ಮಾಲೀಕರಿಗೂ ಅನ್ವಯವಾಗುತ್ತದೆ. ಹೆಚ್ಚಿನ ವಿವರಗಳು ಬೇಕಾಗಿದ್ದರೆ ಆಯಾ ಜಿಲ್ಲೆಯ ಹಿರಿಯ ಭೂ ವಿಜ್ಞಾನಿಗಳು, ಪ್ರಾಧಿಕಾರದ ನಿರ್ದೇಶಕರ ಕಚೇರಿ, ಜಿಲ್ಲಾ ಅಂತರ್ಜಲ ಕಚೇರಿ ಅಥವಾ https://antharjala.kar.nic.nic ವೆಬ್‌ತಾಣಕ್ಕೆ ಭೇಟಿ ನೀಡಿ ಎಂದು ಹೇಳಿದೆ. ಜತೆಗೆ, ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಯೂ ಈ ವೆಬ್‌ಸೈಟ್ನಲ್ಲಿ ಈಗಾಗಲೇ ಲಭ್ಯವಿದೆ. ಅಷ್ಟೇ ಅಲ್ಲ, ಬೋರ್‌ವೆಲ್ ಕೊರೆಯುವ ಏಜೆನ್ಸಿಗೂ ಪ್ರತ್ಯೇಕ ಅರ್ಜಿ ಇದೆ.
ಅಂತರ್ಜಲ ರಕ್ಷಣೆ ಉದ್ದೇಶ
ಚಿಕ್ಕಬಳ್ಳಾಪುರ-ಕೋಲಾರ ಸೇರಿ ಅಧಿಸೂಚಿತ ಎಲ್ಲ ಜಿಲ್ಲೆಗಳಲ್ಲಿ ಅಂತರ್ಜಲದ ಬಳಕೆ ಮಿತಿಮೀರಿದೆ ಎಂಬುದು ಪ್ರಾಧಿಕಾರ ನೀಡುವ ಕಾರಣ. ಅದರಲ್ಲೂ ಶಾಶ್ವತ ನೀರಾವರಿ ಸೌಲಭ್ಯ ಇಲ್ಲದ ಬರಪೀಡಿತ ಬಯಲುಸೀಮೆಯಲ್ಲಿ ಬೋರ್‌ವೆಲ್ ಕೊರೆಯುವುದು ಹೆಚ್ಚು. 90ರ ದಶಕದಲ್ಲಿ 100ರಿಂದ 150 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು, ಇದೀಗ 1000ದಿಂದ 1500 ಅಡಿ ಆಳಕ್ಕೆ ಹೋದರೂ ಸಿಗುತ್ತಿಲ್ಲ. ಕೊಳವೆಬಾವಿಗಳು ಹೆಚ್ಚಿದಂತೆಲ್ಲ ಭೂಮೇಲ್ಮೈ ಮಟ್ಟದಲ್ಲಿ ನೀರು ಕಡಿಮೆಯಾಗುತ್ತಿದೆ ಎಂದು ಭೂ ವಿಜ್ಞಾನಿಯೊಬ್ಬರು ಹೇಳುವ ಮಾತು. ಆದರೆ, ಚಿಕ್ಕಮಗಳೂರಿನಂಥ ಮಲೆನಾಡು-ಅರೆ ಮಲೆನಾಡು ಜಿಲ್ಲೆ, ಸದಾ ನೆರೆಯಿಂದ ಕಷ್ಟಕ್ಕೆ ಸಿಲುಕುವ ಬೆಳಗಾವಿ ರೈತರಿಗೂ ಪ್ರಾಧಿಕಾರ ಬೋರ್‌ವೆಲ್ ಅನುಮತಿ ಕಡ್ಡಾಯ ಎಂದಿದೆ!
ರೈತರು ಏನಂತಾರೆ?
ಅಂತರ್ಜಲ ಪ್ರಾಧಿಕಾರ ಹೊರಡಿಸಿರುವ ಈ ಅಧಿಸೂಚನೆ ಬಗ್ಗೆ ನೀರಾವರಿ ಹೋರಾಟಗಾರ ಮತ್ತು ಪ್ರಗತಿಪರ ಕೃಷಿಕ ಆರ್.ಆಂಜನೇಯ ರೆಡ್ಡಿ ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿದೆ..
“ಪ್ರಾಧಿಕಾರವೇನೋ ಹೊಸದಾಗಿ ಕೊಳವೆ ಬಾವಿ ಕೊರೆಸುವವರೇನೋ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದೆ. ಅದು ಸರಿ. ಆದರೆ, ಮುಂದೆ ಕೊಳವೆ ಬಾವಿ ಕೊರೆಸಲು ಯಾರು-ಯಾರಿಗೆ ಅನುಮತಿ ಕೊಡಲಾಗುವುದು? ಎಂಬ ಬಗ್ಗೆ ಯಾವ ಮಾಹಿತಿಯನ್ನೂ ಪ್ರಾಧಿಕಾರ ನೀಡಿಲ್ಲ. 2011-12ರಲ್ಲಿ ಕೂಡ ಇದೇ ರೀತಿಯ ಅಧಿನಿಯಮ ಬಂದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆ ನಿಯಮದ ವ್ಯಾಪ್ತಿಗೆ ಐದು ತಾಲ್ಲೂಕುಗಳನ್ನು ಸೇರಿಸಲಾಗಿತ್ತು. ಈಗ ಆರೂ ತಾಲ್ಲೂಕುಗಳನ್ನು ಸೇರಿಸಲಾಗಿದೆ. ಇದರ ಜತೆಗೆ ಕೋಲಾರದಲ್ಲೂ ಎಲ್ಲ ತಾಲ್ಲೂಕುಗಳನ್ನು ಸೇರಿಸಲಾಗಿದೆ. ಈ ಎಲ್ಲ ತಾಲ್ಲೂಕುಗಳನ್ನು ಅಂತರ್ಜಲದ ʼಅತಿಬಳಕೆ ವಲಯʼ ಎಂದು ಗುರುತಿಸಲಾಗಿದೆ.
15-20 ವರ್ಷಗಳ ಜಲಾನಯನ ಪ್ರದೇಶ ಅಭಿವೃದ್ಧಿ ಹೆಸರಿನಲ್ಲಿ, ಅಂತರ್ಜಲ ಅಭಿವೃದ್ಧಿ ಹೆಸರಿನಲ್ಲಿ, ಸುಜಲ-1,2,3.. ಈ ರೀತಿಯ ವಿಶೇಷ ಕಾರ್ಯಕ್ರಮಗಳ ಹೆಸರಿನಲ್ಲಿ, ಇದರ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಕೃಷಿ, ಅರಣ್ಯ, ಬೃಹತ್ ನೀರಾವರಿ, ಸಣ್ಣ ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಅಂತರ್ಜಲ ಅಭಿವೃದ್ಧಿ ಅಂತ ಹೇಳಿಕೊಂಡು 10ರಿಂದ 20 ಸಾವಿರ ಕೋಟಿ ರೂ. ಖರ್ಚು ಮಾಡಿರುವ ಅಂದಾಜಿದೆ. ಅಂತರ್ಜಲ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣ, ಕೆರೆ ಹೂಳೆತ್ತುವುದು, ಕೆರೆ ಮತ್ತು ಹಳ್ಳ-ಕೊಳ್ಳ ಮತ್ತು ನದಿಗಳ ಪುನಶ್ಚೇತನ.. ಹೀಗೆ ಅನೇಕ ಉದ್ದೇಶಗಳಿಗಾಗಿ ಸಾವಿರಾರು ಕೋಟಿ ರೂ. ಖರ್ಚಾಗಿದೆ. ಹಾಗಾದರೆ ಈ 15 ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಇಷ್ಟು ದುಃಸ್ಥಿತಿಗೆ ಹೋಗಿದೆ ಎಂದರೆ, ಇಷ್ಟು ದಿನ ಮಾಡಿದ ಹಣದ ವ್ಯಯ ಏನಾದರೂ ಫಲ ಕೊಟ್ಟಿದೆಯಾ? ಅಥವಾ ಅಷ್ಟೂ ಹಣವನ್ನು ಖರ್ಚು ಮಾಡಿಸಿದ ಅಷ್ಟೆಲ್ಲ ಯೋಜನೆಗಳು ಅವೈಜ್ಞಾನಿಕವಾಗಿದ್ದವಾ? ಪ್ರತಿ ವರ್ಷವೂ ಸರಕಾರ ಈ ಯೋಜನೆಗಳ ಪ್ರಯೋಜನದ ಬಗ್ಗೆ ಏನಾದರೂ ಮೌಲ್ಯಮಾಪನ ಮಾಡಿದೆಯಾ? ಒಂದು ವೇಳೆ ಆ ಯೋಜನೆಗಳನ್ನು ಮೌಲ್ಯಮಾಪನ ಮಾಡಿದ್ದರೆ ಉಪಯುಕ್ತವಲ್ಲದ ಅದೇ ಯೋಜನೆಗಳನ್ನು ಇವತ್ತಿಗೂ ಮುಂದುವರಿಸಿಕೊಂಡು ಹೋಗಲೇಬೇಕಾದ ಅಗತ್ಯವೇನಿತ್ತು? ಅಂತರ್ಜಲ ಅಭಿವೃದ್ಧಿ ಅಂದರೆ, ಹೂಳೆತ್ತುವುದು, ಚೆಕ್ ಡ್ಯಾಂ ಕಟ್ಟುವುದು, ಕಾಲುವೆ ತೋಡಿಸುವುದಷ್ಟೇನಾ? ಇದರಿಂದ ಯಾವುದೇ ಪ್ರಯೋಜನ ಆಗಿದೆಯಾ? ಈಗಲಾದರೂ ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಾಡಿರುವ ಹಣದ ಖರ್ಚಿನ ಬಗ್ಗೆ ನಿಯತ್ತಾಗಿ ಲೆಕ್ಕ ಹಾಕಬೇಕಿದೆ. ಮುಂದಿನ ಯೋಜನೆಗಳ ಬಗ್ಗೆ ಪ್ರಾಮಾಣಿಕತೆ-ದೂರದೃಷ್ಟಿಯಿಂದ ಆಲೋಚಿಸಬೇಕಿದೆ. ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಎಗ್ಗಿಲ್ಲದೆ ಖರ್ಚು ಮಾಡುವ ಸರಕಾರಕ್ಕೆ ಪ್ರಾಮಾಣಿಕ ಮೌಲ್ಯಮಾಪನ ಮಾಡಲು ಸಮಸ್ಯೆ ಏನು? ಇಲ್ಲಿ ರಾಜಕಾರಣಿಗಳ ಜತೆಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇಷ್ಟಬಂದ ಹಾಗೆ ಹಣವನ್ನು ಬಳಸಿದ್ದಾರೆ. ಹಾಗಾದರೆ ರೈತರು ಬದುಕೋದು ಹೇಗೆ? ನಮ್ಮ ಮುಂದಿನ ದಿನಗಳ ಬಗ್ಗೆ ಈಗಲಾದರೂ ಎಚ್ಚೆತ್ತು ಆಲೋಚನೆ ಮಾಡಬೇಕಿದೆ. ಇಲ್ಲದಿದ್ದರೆ ಕಳೆದ ಮೂರು ದಶಕಗಳಿಂದ ಬಂದ ಕೆಟ್ಟ ಫಲಿತಾಂಶವೇ ಮುಂದೆಯೂ ಬರುವುದರಲ್ಲಿ ಅನುಮಾನವಿಲ್ಲ. ಜತೆಗೆ, ಇನ್ನೂ ಘೋರವಾದ ದಿನಗಳನ್ನೂ ನೋಡಬೇಕಾಗುತ್ತದೆ. ಬರಪೀಡಿತ ಜಿಲ್ಲೆಗಳು,ಶಾಶ್ವತ ನೀರಾವರಿ ಇಲ್ಲದ ಜಿಲ್ಲೆಗಳು ಎಚ್ಚೆತ್ತುಕೊಳ್ಳಬೇಕಿದೆ. ಅದೇ ಹಣ, ಅದೇ ಹಣ ಎಂದುಕೊಂಡರೆ ಜನರ ತೆರಿಗೆ ಹಣಕ್ಕೆ ನ್ಯಾಯ ಸಿಗುವುದಿಲ್ಲ.
ಗುಡಿಬಂಡೆ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಚೆಕ್‌ಡ್ಯಾಂ ಕಿತ್ತು ಹೋಗಿರುವುದು. ಕಳಪೆ ಕಾಮಗಾರಿ ಅದು ಹಾಳಾಗಲು ಮುಖ್ಯ ಕಾರಣ.