ಹದಿನಾರು ವರ್ಷಗಳ ಹಿಂದೆ ಬೆಂಗಳೂರಿನ ಜಿಕೆಇಕೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ನಟಿ ಸೌಂದರ್ಯ ಮತ್ತೆ ಬೆಳ್ಳಿತೆರೆಯ ಮೇಲೆ ಬಂದಿದ್ದಾರೆ!
ಅರೆ! ಅದು ಹೇಗೆ? ಎಂದು ಆಶ್ಚರ್ಯವಾಯಿತೇ? ಹಾಗಾದರೆ ಈ ಸುದ್ದಿ ಓದಿ.
ಸೌಂದರ್ಯ ಅವರು ತಾವು ದುರ್ಮರಣಕ್ಕೀಡಾಗುವ ಕೆಲವೇ ದಿನಗಳ ಹಿಂದೆ ನಟಿಸಿದ್ದ ತೆಲುಗಿನ ʼನರ್ತನಶಾಲʼ ಎಂಬ ಸಿನಿಮಾ ಇದೀಗ ಆನ್‌ಲೈನ್‌ನಲ್ಲಿ ರಿಲೀಸ್ ಆಗಿದ್ದು, ಪ್ರೇಕ್ಷಕರು ತಮ್ಮ ನೆಚ್ಚಿನ ನಟಿಯ ಅಭಿನಯಕ್ಕೆ ಫಿದಾ ಆಗಿದ್ದಾರೆ.
ನಂದಮೂರಿ ಬಾಲಕೃಷ್ಣ ನಿರ್ದೇಶಿಸಿ ಅರ್ಜುನನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಸೌಂದರ್ಯ ಅವರು ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ದಿವಂಗತ ಶ್ರೀಹರಿ (ಅವರು 2013 ಅಕ್ಟೋಬರ್ 9ರಂದು ನಿಧನರಾಗಿದ್ದರು) ಭೀಮನ ಪಾತ್ರದಲ್ಲಿ, ಮತ್ತೊಬ್ಬ ಹಿರಿಯ ನಟ ಶರತ್‌ಬಾಬು, ಧರ್ಮರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
17 ನಿಮಿಷದ ಕಿರು ಸಿನಿಮಾ
ತಮ್ಮ ತಂದೆ ಎನ್.ಟಿ.ರಾಮಾರಾವ್ ಅವರು ನಟಿಸಿ ನಿರ್ದೇಶಿಸಿದ್ದ ʼನರ್ತನಶಾಲʼ ಚಿತ್ರವನ್ನೇ ಬಾಲಕೃಷ್ಣ ರೀಮೇಕ್ ಮಾಡಿ ಸ್ವತಃ ನಿರ್ದೇಶನ ಮಾಡಲು ಮುಂದಾಗಿದ್ದರು. ಆದರೆ; ಇದ್ದಕ್ಕಿದ್ದಂತೆ ಸೌಂದರ್ಯ ತೀರಿಕೊಂಡ ಕಾರಣಕ್ಕೆ ಬೇಸತ್ತು, ಆ ಪಾತ್ರಕ್ಕೆ ಬೇರೊಬ್ಬ ನಟಿಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲದೆ ಸುಮಾರು 17ರಿಂದ 20 ನಿಮಿಷದಷ್ಟು ಶೂಟ್ ಆಗಿದ್ದ ಫೂಟೇಜ್ ಅನ್ನು ಹಾಗೆಯೇ ಇಟ್ಟಿದ್ದರು.
ಕೋವಿಡ್ ಕಾಲದಲ್ಲಿ ಮತ್ತೆ ʼನರ್ತನಶಾಲʼ ಸಿನಿಮಾ ಮಾಡುವ ಆಲೋಚನೆ ಬಾಲಕೃಷ್ಣ ಅವರಿಗೆ ಬಂದಿದೆ. ಡಬ್ಬದಲ್ಲಿಟ್ಟಿದ್ದ ಫೂಟೇಜ್ ನೋಡಿದಾಗ ಅವರಿಗೆ ಅಚ್ಚರಿಯಾಗಿದೆ. ಅದರಲ್ಲೂ ಸೌಂದರ್ಯ ಅವರ ಸಹಜಾಭಿನಯವನ್ನು ಕಂಡು ಚಕಿತರಾಗಿದ್ದಾರೆ. ಈ ಫೂಟೇಜ್‌ನ್ನು ಹಾಗೆಯೇ ಬಿಟ್ಟರೆ ಆ ನಟಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಭಾವಿಸಿದ ಬಾಲಯ್ಯ, ಅಷ್ಟೂ ಫೂಟೇಜ್‌ನ್ನು ಶ್ರೇಯಾ ಲ್ಯಾಬ್‌ಗೆ ಒಪ್ಪಿಸಿ, ನೀಟಾಗಿ ಎಡಿಟ್ ಮತ್ತು ಡಬ್ಬಿಂಗ್ ಸೇರಿದಂತೆ ಎಲ್ಲ ಕಾರ್ಯಗಳನ್ನು ಮಾಡಿಸಿ 17 ನಿಮಿಷಗಳ ಕಿರು ʼನರ್ತನಶಾಲʼ ಚಿತ್ರವನ್ನು ಇದೇ ಅಕ್ಟೋಬರ್ 24ರಂದು ಡಿಜಿಟಲ್ ಫ್ಲಾಟ್‌ಫಾರಂನಲ್ಲಿಯೇ ರಿಲೀಸ್ ಮಾಡಿಸಿದ್ದಾರೆ. ಟಿಕೆಟ್ ದರ 50 ರೂಪಾಯಿ. ಆ ಹಣವು ಬಾಲಯ್ಯ ಅವರ ತಾಯಿ ಬಸವತಾರಕಂ ಹೆಸರಿನ ಟ್ರಸ್ಟ್‌ನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸೇವಾ ಕಾರ್ಯಗಳಿಗೆ ವಿನಿಯೋಗವಾಗುತ್ತದೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ನಟಿಸುವ ಮುನ್ನ ಮೋಹನ್ ಬಾಬು ಜತೆ ʼಶಿವಶಂಕರ್ʼ ಎಂಬ ಚಿತ್ರದಲ್ಲಿ ನಟಿಸಿದ್ದ ಸೌಂದರ್ಯ, ಅದ್ಭುತವಾಗಿ ನಟಿಸಿದ್ದರು. ಚಿತ್ರದಲ್ಲಿ ಬೌದ್ಧಬಿಕ್ಕುವಾಗಿ ನಟಿಸಿದ್ದ ಮೋಹನ್ ಬಾಬುಗೆ ನಾಯಕಿಯಾಗಿ ನಟಿಸಿದ್ದ ಅವರು, ಅಭಿನಯದ ಮೂಲಕ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದರು. ಆ ಚಿತ್ರದ ಹೆಚ್ಚು ಭಾಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೈಲುಕುಪ್ಪೆಯ ಬೌದ್ಧಕೇಂದ್ರದಲ್ಲಿ ನಡೆದಿತ್ತು. ಆದರೆ, ಅವರ ಕೊನೆಯ ಚಿತ್ರ ʼನರ್ತನಶಾಲʼ ಎಂದೇ ಹೇಳಬಹುದು. ಕೇವಲ ಮೂರ್ನಾಲ್ಕು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅವರು ಸೊಗಸಾಗಿ ನಟಿಸಿದ್ದಾರೆ. ಅವರನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನಿಸದಿರದು.
ಶ್ರೀಹರಿ, ಸೌಂದರ್ಯ, ಶರತ್‌ಬಾಬು
ಇನ್ನು ಅರ್ಜುನನ ಪಾತ್ರದಲ್ಲಿ ಬಾಲಯ್ಯ ಸೂಪರ್. ಟಾಲಿವುಡ್‌ನಲ್ಲಿ ಈಗ ಪೌರಾಣಿಕ ಪಾತ್ರಗಳಿಗೆ ಅವರನ್ನು ಬಿಟ್ಟರೆ ಬೇರೆ ಇಲ್ಲ ಎಂಬುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ. ಧರ್ಮರಾಯ (ಶರತ್‌ಬಾಬು)ನನ್ನು ಉದ್ದೇಶಿಸಿ ಹೇಳುವ ದೀರ್ಘ ಡೈಲಾಗ್ ಈ ಚಿತ್ರದ ಹೈಲೇಟ್. ಇನ್ನು, ಶ್ರೀಹರಿ ಬಗ್ಗೆ ಹೇಳಲೇಬೇಕು. ಭೀಮನ ಪಾತ್ರದಲ್ಲಿ ಅವರು ಘರ್ಜಿಸಿದ್ದಾರೆ. ಆದರೆ, ಅವರಿಗೆ ಕಂಠದಾನ ಮಾಡಿರುವ ಕಲಾವಿದ ಇನ್ನಷ್ಟು ಶ್ರಮ ಹಾಕಬೇಕಿತ್ತು ಎನಿಸುತ್ತದೆ. ಬಾಲಯ್ಯ ʼಬೃಹನ್ನಳೆʼ ವೇಷ ಧರಿಸಿ ಉತ್ತರೆಗೆ ನೃತ್ಯಪಾಠ ಹೇಳಿಕೊಡುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಎನ್‌ಟಿಆರ್ ಅವರ ಹಳೆಯ ʼನರ್ತನಶಾಲʼ ಚಿತ್ರದ ಕೆಲ ದೃಶ್ಯಗಳನ್ನು ಒಪ್ಪವಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ 17 ನಿಮಿಷ ಮುಗಿದದ್ದೇ ಗೊತ್ತಾಗುವುದಿಲ್ಲ.
ಸೌಂದರ್ಯ ಅವರು ತೀರಿಕೊಳ್ಳದೇ ಇದ್ದಿದ್ದರೆ ಈ ಸಿನಿಮಾ ಪೂರ್ಣವಾಗುತ್ತಿತ್ತು. ಟಾಲಿವುಡ್‌ನಲ್ಲೊಂದು ಟ್ರೆಂಡ್‌ಸೆಟ್ಟರ್ ಖಂಡಿತಾ ಆಗುತ್ತಿತ್ತು. ರಿಲೀಸ್ ಆದ ಮೊದಲ ದಿನವೇ ಚಿತ್ರವನ್ನು 1.95 ಲಕ್ಷ ಮಂದಿ ನೋಡಿದ್ದಾರೆಂದು ಹೇಳಲಾಗಿದೆ.
ನರ್ತನಶಾಲ ಚಿತ್ರದ ಟ್ರೇಲರ್.
2004 ಏಪ್ರಿಲ್ ತಿಂಗಳಲ್ಲಿ ಲೋಕಸಭೆ ಚುನಾವಣೆ ಬಂದಿತ್ತು. ಆ ತಿಂಗಳ 17ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಮುಗಿಸಿಕೊಂಡು ಅದೇ ದಿನ ಅಂದಿನ ಆಂಧ್ರ ಪ್ರದೇಶದ ಕರೀಂನಗರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ವಿದ್ಯಾಸಾಗರ ರಾವ್ ಪರ ಚುನಾವಣಾ ಪ್ರಚಾರಕ್ಕೆ ತೆರಳಬೇಕಾಗಿತ್ತು. ಜಕ್ಕೂರು ಹೇರೋಡ್ರಂನಲ್ಲಿ ಸೌಂದರ್ಯ ಅವರನ್ನು ಹತ್ತಿಸಿಕೊಂಡ ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನವು ಟೇಕಾಫ್ ಆದ ಕೆಲ ನಿಮಿಷಗಳಲ್ಲಿಯೇ ಪಕ್ಕದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಪತನವಾಯಿತು. ಅಲ್ಲಿಗೆ ಬಾಲಯ್ಯ ಅವರ ʼನರ್ತನಶಾಲʼಕ್ಕೆ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದ ನಟಿಯೊಬ್ಬರು ಇನ್ನಿಲ್ಲವಾದರು.
ಅಂತೂ ಹೊಸ ʼನರ್ತನಶಾಲʼ ಚಿತ್ರದ ಮೂಲಕ ಸೌಂದರ್ಯ ಮತ್ತೆ ನಮ್ಮ ಕಣ್ಮುಂದೆ ಬಂದಿದ್ದಾರೆ.