ಕಂಠೀರವ ಕ್ರೀಡಾಂಗಣದಲ್ಲಿ ನಡೆದ 65ನೇ ವರ್ಷದ ಕರ್ನಾಟಕ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿಗೆ ಮುಖ್ಯಮಂತ್ರಿ ಪೂಜೆ..
ಕೋವಿಡ್ ಕಾರಣದಿಂದ ಕಂಠೀರವ ಕ್ರೀಡಾಂಗಣದಲ್ಲಿ ಸರಳ ರಾಜ್ಯೋತ್ಸವ
ಬೆಂಗಳೂರು: ವಿಶ್ವಮಟ್ಟದಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಹೆಸರಾಗಿದೆ. ಹೀಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡೇ ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ಯೋಣ. ಮುಂದಿನ ವರ್ಷವನ್ನು ʼಕನ್ನಡ ಕಾಯಕ ವರ್ಷʼವನ್ನಾಗಿ ಪರಿಗಣಿಸಿ, ಕನ್ನಡಪರವಾದ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರದಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದ 65ನೇ ವರ್ಷದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು; “ನಾವೆಲ್ಲರೂ ನವೆಂಬರ್ ಕನ್ನಡಿಗರಾಗೋದು ಬೇಡ. ವರ್ಷವಿಡೀ ಕನ್ನಡವನ್ನು ಪೂಜಿಸೋಣ. ವರ್ಷಪೂರ್ತಿ ಕನ್ನಡತನವನ್ನೇ ಹೊಂದಿರಬೇಕು. ಇವತ್ತಿನ ದಿನಗಳಲ್ಲಿ ತಂತ್ರಜ್ಞಾನ ಸಂಷಪೂರ್ಣವಾಗಿ ನಮ್ಮ ಬದುಕನ್ನು ಆವರಿಸಿಕೊಂಡಿದೆ. ಎಲ್ಲ ಹಂತಗಳಲ್ಲಿಯೂ ತಂತ್ರಜ್ಞಾನವು ನಮ್ಮ ಭಾಷೆ-ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ತಂತ್ರಜ್ಞಾನದಿಂದ ಮತ್ತಷ್ಟು ಬಲ ತುಂಬಬೇಕು. ಈ ಕಾರಣಕ್ಕಾಗಿಯೇ ಮುಂದಿನ ವರ್ಷವನ್ನು ʼಕನ್ನಡ ಕಾಯಕ ವರ್ಷʼವನ್ನಾಗಿ ಆಚರಿಸಿ ಭಾಷಾಭಿವೃದ್ಧಿಗೆ ಅಗತ್ಯವಾಗಿ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಿದ ಸಂಗತಿಗಳು ಇವು;
ಮಹಾಮಾರಿ ಕೊರೊನ ವೈರಸ್ ರಾಜ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಎಂತಹುದೇ ಕಠಿಣ ಸಂದರ್ಭ ಎದುರಾದರೂ ಸರಕಾರ ಎಲ್ಲವನ್ನೂ ರಾಜಿ ಇಲ್ಲದೇ ಎದುರಿಸಿದೆ. ಇದರ ಜತೆಯಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಈ ವೈರಸ್‌ನ್ನು ತೊಲಗಿಸಬಹುದು. ಒಂದು ಕಡೆ ಕೋವಿಡ್, ಇನ್ನೊಂದು ಕಡೆ ಪ್ರವಾಹ. ಇವೆರಡೂ ಕಷ್ಟದ ಪರಿಸ್ಥಿತಿಗಳನ್ನು ನಮ್ಮ ಸರಕಾರ ದಿಟ್ಟತನದಿಂದ ನಿರ್ವಹಿಸಿದೆ.
ನಿಮಗೆ ಗೊತ್ತಿರಲಿ. ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇವತ್ತು ನಮ್ಮ ಕನ್ನಡದಲ್ಲಿಯೇ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಇದಕ್ಕಾಗಿ ರಾಜ್ಯದ ಪರವಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ.
“ಕನ್ನಡಕ್ಕಾಗಿ ಕಿರುಬೆರಳೆತ್ತಿದರು ಸಾಕು, ಅದೇ ಗೋವರ್ಧನ ಗಿರಿ” ಎಂದು ಬರೆದಿದ್ದರು ರಾಷ್ಟ್ರಕವಿ ಕುವೆಂಪು. ಅವರ ಮಾತುಗಳು ನನಗೀಗ ನೆನೆಪಿಗೆ ಬರುತ್ತಿವೆ. ಕನ್ನಡದ ಉಳಿವಿಗಾಗಿ ನಾವೆಲ್ಲರೂ ಹೆಚ್ಚುಹೆಚ್ಚಾಗಿ ಕನ್ನಡವನ್ನೇ ಬಳಸಬೇಕು. ನಿತ್ಯದ ಚಟುವಟಿಕೆಗಳಲ್ಲಿ ಕನ್ನಡವನ್ನೇ ಮಾತನಾಡಬೇಕು, ತಮ್ಮ-ತಮ್ಮ ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಮಕ್ಕಳು ಕನ್ನಡವನ್ನು ಕಲಿತುಕೊಳ್ಳುವುದರಿಂದ ಭಾಷೆ ಬೆಳೆಯುತ್ತದೆ. ಅವರರಿಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ಕೊಡಬೇಕು ಆಗ ಕನ್ನಡ ಸಮೃದ್ಧವಾಗುತ್ತದೆ.
ಕನ್ನಡ ಶಾಲೆಗಳಿಗೆ ಒಳ್ಳೆಯ ಕಾಲ
ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್; ಕೋವಿಡ್ ಕಾರಣದಿಂದ ಪೋಷಕರ ಮನಸ್ಸಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಮ್ಮ ಮಕ್ಕಳನ್ನು ಮತ್ತೆ ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅದರಲ್ಲೂ ಆರ್ಥಿಕವಾಗಿ ದುರ್ಬಲವಾಗಿರುವ ಮನೆಗಳ ಮಕ್ಕಳು ನಮ್ಮ ಶಾಲೆಗಳತ್ತ ಬರುತ್ತಿದ್ದಾರೆ. ಅವರಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುವುದು ಎಂದು ಎಂದರು.
advt
ಕೋವಿಡ್ ಕಾಲದಲ್ಲಿ 90,000ಕ್ಕೂ ಹೆಚ್ಚು ಮಕ್ಕಳು ಸರಕಾರಿ ಶಾಲೆಗಳಿಗೆ ಸೇರ್ಪಡೆ ಆಗಿದ್ದಾರೆ. ನಿಜಕ್ಕೆ ಇದೊಂದು ಉತ್ತಮ ದಾಖಲೆ. ಕಳೆದ ೧೪ ವರ್ಷಗಳಲ್ಲೇ ಅತಿಹೆಚ್ಚು ಮಕ್ಕಳು ದಾಖಲಾದ ಕಾಲವಿದು. ಇಂಥ ಮಕ್ಕಳ ನಿರೀಕ್ಷೆಗೆ ತಕ್ಕಂತೆ ಉತ್ತಮ ಕಲಿಕೆ ಮತ್ತು ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸುರೇಶ್ ಕುಮಾರ್.
ಇನ್ನು; ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಶಾಸಕ
ರಿಜ್ವಾನ್ ಅರ್ಷಾದ್, “ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ” ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕೋವಿಡ್ ಕಾರಣಕ್ಕೆ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ, ಸಚಿವ ಸುರೇಶ್ ಕುಮಾರ್ ನಾಡ ಧ್ವಜಾರೋಹಣ ಮಾಡಿದರು.