ಲಕ್ಷ್ಮೀ, ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕನ್ನಡಕ್ಕೆ ಸಂಭಾಷಣೆ-ಸಾಹಿತ್ಯ ಬರೆದ ವರದರಾಜು ಚಿಕ್ಕಬಳ್ಳಾಪುರ
ಬೆಂಗಳೂರು: 2012ರಲ್ಲಿ ಟಾಲಿವುಡ್‌ನಲ್ಲಿ ಬಹಳ ಚರ್ಚೆಗೊಳಗಾದ ಚಿತ್ರವೆಂದರೆ, ಅದು ʼಮಿಥುನಂʼ ಮಾತ್ರ. ಬಹುತೇಕ ಕಮರ್ಷಿಯಲ್ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಆ ವರ್ಷದ ಕೊನೆಯಲ್ಲಿ ಬಂದ ಈ ಸಿನಿಮಾ ಹೊಸ ಅಲೆಯನ್ನೇ ಎಬ್ಬಿಸಿತ್ತು. ಈಗ ಕನ್ನಡಕ್ಕೆ ಡಬ್ ಮಾಡಲಾಗುತ್ತಿದೆ.
ತೆಲುಗಿನ ಖ್ಯಾತನಟ, ಸಾಹಿತಿ ತೆನಿಕಳ್ಳ ಭರಣಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಲೆಜೆಂಡರಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕನ್ನಡದ ನಟಿ ಲಕ್ಷ್ಮೀ ಮಾತ್ರವೇ ನಟಿಸಿದ್ದರು. ಅವರಿಬ್ಬರು ಬಿಟ್ಟರೆ ಮೂರನೇ ಪಾತ್ರ ಇರಲಿಲ್ಲ.
ಮಿಥುನಂ ಚಿತ್ರದ ದೃಶ್ಯ.
ಎಸ್‌ಪಿಬಿ ನಿಧನರಾದ 38 ದಿನಗಳ ನಂತರ, ಅಂದರೆ ನವೆಂಬರ್ 1ಕ್ಕೆ ʼಮಿಥುನಂʼ ಚಿತ್ರವನ್ನು ಕನ್ನಡಕ್ಕೆ ʼಮಿಥುನʼ ಎಂಬ ಹೆಸರಿನಲ್ಲಿ ಡಬ್ ಮಾಡಲಾಗುತ್ತಿದೆ. ವಿಶೇಷವೆಂದರೆ; ಈ ಕನ್ನಡ ಡಬ್ಬಿಂಗ್ ಸಿನಿಮಾಕ್ಕೆ ಚಿಕ್ಕಬಳ್ಳಾಪುರದ ವರದರಾಜು ಸಂಭಾಷಣೆ-ಸಾಹಿತ್ಯ ಬರೆದಿದ್ದಾರೆ. ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದ್ದು, ತೆಲುಗಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದ ಆನಂದ ಮುಯಿದ ರಾವು ಅವರೇ ಕನ್ನಡದಲ್ಲೂ ನಿರ್ಮಿಸುತ್ತಿದ್ದಾರೆ.
ಕಥೆ ಹೇಗಿದೆ?
ತೆಲುಗು ʼಮಿಥುನಂʼ ಸಿನಿಮಾದಲ್ಲಿ ʼಅಪ್ಪದಾಸುʼ ಎಂಬ ಪಾತ್ರವಿದೆ. ಸರಕಾರಿ ಶಾಲೆಯ ಹೆಡ್ ಮಾಸ್ಟರ್ ಆಗಿ ನಿವೃತ್ತಿಗೊಂಡು ತಮ್ಮ ಹಳ್ಳಿಯಲ್ಲೇ ವಾಸ ಮಾಡುತ್ತಿದ್ದ ಆತನಿಗೆ ʼಬುಚ್ಚಿʼ (ಲಕ್ಷ್ಮೀ) ಎಂಬ ಹೆಂಡತಿ. ಜೀವನದ ಸಂಧ್ಯಾಕಾಲದಲ್ಲಿರುವ ಅವರಿಬ್ಬರೇ ಮನೆಯಲ್ಲಿದ್ದರೆ, ಅವರ ಮಕ್ಕಳು ವಿದೇಶಗಳಲ್ಲಿ ಸೆಟ್ಲ್ ಆಗಿರುತ್ತಾರೆ. ಮಕ್ಕಳ ನೆನಪಿನಲ್ಲೇ ಸಾಗುವ ಅವರ ಬದುಕಿನಲ್ಲಿ ಘಟಿಸುವ ಸರಸ-ವಿರಸ ಇತ್ಯಾದಿಗಳ ಹದವಾದ ಮಿಶ್ರಣವೇ ʼಮಿಥುನಂʼ. ಅರವತ್ತರ ಆಸುಪಾಸಿನ ದಾಂಪತ್ಯ ಮಧುರಾನುಭೂತಿಗಳು ಪ್ರತಿಯೊಬ್ಬರಿಗೂ ಕಚಗುಳಿ ಇಡುವಂತೆ ಇದ್ದವು. ಮೇಲಾಗಿ, ಈ ಚಿತ್ರ ಆಸ್ಕರ್ ಪ್ರಶಸ್ತಿಗೂ ನಾಮಿನೇಟ್ ಆಗಿತ್ತು.
advt
2012ರಲ್ಲಿ ಈ ಚಿತ್ರಕ್ಕೆ ನಂದಿ ಪುರಸ್ಕಾರವೂ ಸಿಕ್ಕಿತ್ತು. ಜತೆಗೆ, ಎಸ್‌ಪಿಬಿ ಮತ್ತು ಲಕ್ಷ್ಮೀ ಅವರಿಗೂ ಪ್ರಶಸ್ತಿ ಸಿಕ್ಕಿತ್ತು. ಶ್ರೀರಮಣ ಅವರು ಬರೆದಿದ್ದ ಈ ಸುಂದರ ಕಥೆಗೆ ತೆನಿಕಳ್ಳ ಭರಣಿ ಮತ್ತು ಕವಿ ಜೊನ್ನವಿತ್ತುಲ ಅದ್ಭುತವಾದ ಚಿತ್ರಕಥೆ ಬರೆದಿದ್ದರು. ತೆಲುಗಿನ ಸಂಭಾಷಣೆಯಂತೂ ಆ ಲಯವೇ ಬೇರೆ. ಆ ಮಾತುಗಳಿಗೆ ಸ್ವತಃ ಎಸ್‌ಪಿಬಿ ಮತ್ತು ಲಕ್ಷ್ಮೀ ಅವರೇ ಧ್ವನಿ ನೀಡಿದ್ದರು. ಈಗ ಕನ್ನಡಕ್ಕೆ ಡಬ್ ಆಗುತ್ತಿರುವ ʼಮಿಥುನʼಕ್ಕೆ ಇವರಿಬ್ಬರಿಗೆ ಯಾರು ಕಂಠದಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ತೆಲುಗು ʼಮಿಥುನಂʼ ನೋಡಿರುವ ಕನ್ನಡಿಗರು, ಇಲ್ಲವೇ ಈ ಮಹಾ ಕಲಾವಿದರಿಬ್ಬರ ಧ್ವನಿಯ ಪರಿಚಯ ಇದ್ದವರಿಗೆ ಇನ್ನೊಬ್ಬರ ಧ್ವನಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಏನೇ ಆದರೂ ಇಂಥ ಸದಭಿರುಚಿಯ ಸಿನಿಮಾವೊಂದು ಕನ್ನಡಕ್ಕೆ ಬರುತ್ತಿರುವುದಕ್ಕೆ ಮೆಚ್ಚಲೇಬೇಕು.
ಕೊನೆಗೆ; ʼಮಿಥುನಂʼ ಚಿತ್ರವು ಎಸ್‌ಪಿಬಿ ಮತ್ತು ಲಕ್ಷ್ಮೀ ಇಬ್ಬರ ನಟಜೀವನದಲ್ಲಿ ದೃಶ್ಯಕಾವ್ಯ ಎನ್ನಲೇಬಹುದು. ಮಿಸ್ ಮಾಡಲೇಬಾರ ಚಿತ್ರವಿದು.