ಮುಂಬಯಿ: ಸದಾ ಒಂದಿಲ್ಲ ಒಂದು ವಿವಾದದಲ್ಲೇ ಮುಳುಗಿ ತೇಲುವ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ತಮ್ಮ ನಾಲಗೆಯನ್ನು ಜಾರಿಬಿಟ್ಟಿದ್ದಾರೆ.
ಇದೀಗ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರ ಬಗ್ಗೆ ಅಸಂಬದ್ಧವಾಗಿ ಟ್ವೀಟ್ ಮಾಡಿರುವ ಅವರು, 77 ವರ್ಷದ ಬೈಡನ್, ಅವರ ಆರೋಗ್ಯ ಮತ್ತು ವಯಸ್ಸಿನ ಬಗ್ಗೆ ಗೇಲಿ ಮಾಡಿದ್ದಾರೆ. ಅಷ್ಟೇ ಅಲ್ಲದೆ; ತಮಿಳಿನಲ್ಲಿ ಸೂರ್ಯ ನಟಿಸಿದ್ದ ʼಗಜನಿʼ ಚಿತ್ರದಲ್ಲಿನ (ಈ ಚಿತ್ರ ಹಿಂದಿಗೂ ರೀಮೇಕ್ ಆಗಿತ್ತು) ಪಾತ್ರಕ್ಕೆ ಬಿಡೆನ್ ಅವರನ್ನು ಹೋಲಿಸುವ ಪ್ರಹಸನ ಮಾಡಿದ್ದಾರೆ. ಆ ಸಿನಿಮಾದಲ್ಲಿ ನಾಯಕನಿಗೆ ಮರೆವಿನ ರೋಗ ಇರುತ್ತದೆ. ಈ ಅಂಶವನ್ನೇ ಇಟ್ಟುಕೊಂಡು ಕಂಗನಾ, ಬೈಡನ್ ಅವರ ಮೇಲೆ ಅನಗತ್ಯವಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.
ಅಮೆರಿಕದ ಮುಂದಿನ ರಾಜಕೀಯದ ಬಗ್ಗೆ ಭವಿಷ್ಯ ನುಡಿಯುವಂತೆ ಮಾತನಾಡಿರುವ ಕಂಗನಾ; “ಗಜನಿ ಬೈಡೆನ್ ಅವರ ಡೇಟಾ ಪ್ರತಿ ಐದು ನಿಮಿಷಕ್ಕೊಮ್ಮೆ ಕ್ರ್ಯಾಶ್ ಆಗುತ್ತದೆ. ಅವರು ಚುಚ್ಚಿದ ಮೆಡಿಸಿನ್ಗಳ ಬಗ್ಗೆ ಯಾರಿಗೂ ಖಾತ್ರಿಯಿಲ್ಲ. ಈ ಪ್ರಕಾರ ಹೇಳುವುದಾದರೆ ಅವರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ. ನಂತರ ಕಮಲಾ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಓರ್ವ ಮಹಿಳೆ ಎತ್ತರಕ್ಕೇರಿದಾಗ ಆಕೆ ಪ್ರತಿಯೊಬ್ಬ ಮಹಿಳೆಗೂ ದಾರಿ ತೋರುತ್ತಾರೆ. ಈ ಐತಿಹಾಸಿಕ ದಿನಕ್ಕಾಗಿ ಚಿಯರ್ಸ್” ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಕಂಗನಾ ಟ್ವೀಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬದುಕಿದ್ದಾಗಲೇ ಇನ್ನೊಬ್ಬರ ಸಾವನ್ನು ಬಯಸುವುದು ವಿಕೃತಿ ಎಂದು ಕೆಲವರು ನಟಿಯ ಮೇಲೆ ಮುಗಿಬಿದ್ದಾರೆ. Against our culture to wish anyone dead .. ಎಂದು ಪಲ್ಲವಿ ಘೋಷ್ ಎಂಬುವವರು ಟಾಂಗ್ ನೀಡಿದ್ದಾರೆ. ಇನ್ನೊಬ್ಬರು; “ಈಗಷ್ಟೇ ಆಯ್ಕೆಯಾಗಿರುವ ಬೈಡನ್ ಅವರಿಗೆ ಸಾವು ಬರಲಿ ಎಂದು ಹಾರೈಸುವುದ ಎಷ್ಟು ಸಭ್ಯತೆ” ಎಂದು ಝಾಡಿಸಿದ್ದಾರೆ.
ಈ ಟ್ವೀಟ್ ಬಗ್ಗೆ ವ್ಯಾಪಕ ಕಾಮೆಂಟುಗಳು ಬರುತ್ತಿದ್ದರೂ ಕಂಗನಾ ಮಾತ್ರ ಮತ್ತೆ ಪ್ರತಿಕ್ರಿಯಿಸಲು ಹೋಗಿಲ್ಲ. ಕೆಲವಂತೂ ಕಂಗನಾ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಪದ್ಮಶ್ರೀಯಂಥ ಪ್ರತಿಷ್ಠಿತ ನಾಗರಿಕ ಪುರಸ್ಕಾರ ಪಡೆದಿರುವ ಅವರು ಅನಾಗರೀಕರಂತೆ ಮಾತನಾಡುತ್ತಿದ್ದಾರೆಂದು ಟ್ವಿಟ್ಟಿಗರು ಕುಟುಕಿದ್ದಾರೆ.