Lead Photo by Tima Miroshnichenko from Pexels
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಫೇಕ್‌ನ್ಯೂಸ್ ಹಾವಳಿಯನ್ನು ಮುಲಾಜಿಲ್ಲದೆ ಹತ್ತಿಕ್ಕಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಬೆಂಗಳೂರು ಟೆಕ್ ಸಮಿಟ್-2020 ವರ್ಚುಯಲ್ ವೇದಿಕೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಶಾಂತಿನ್ನು ಕದಡುವ ಹಾಗೂ ಧಾರ್ಮಿಕ ಸಹಿಷ್ಣುತೆಯನ್ನು ಹಾಳು ಮಾಡುವ ಸುಳ್ಳುಸುದ್ದಿಗಳ ಮೇಲೆ ನಿಗಾ ಇರಿಸಲಾಗಿದೆ. ಅಂಥ ಅಪಾಯಕಾರಿ ಸುದ್ದಿಗಳನ್ನು ಹರಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದರು.
ಈ ಬಗ್ಗೆ ಮುಂದುವರಿದು ಅವರು ಹೇಳಿದ್ದಿಷ್ಟು;
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟಿಟ್ಟರ್, ಇನ್ಸ್‌ಟಾಗ್ರಾಂ, ವಾಟ್ಸಾಪ್, ಟೆಲಿಗ್ರಾಂ ಸೇರಿದಂತೆ ಎಲ್ಲ ಆನ್‌ಲೈನ್ ಜಾಲತಾಣಗಳ ಮೂಲಕ ಸುಳ್ಳುಸುದ್ದಿಗಳನ್ನು ಹರಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಯುಟ್ಯೂಬ್‌ನಲ್ಲಿಯೂ ಇಂಥವರ ಹಾವಳಿ ಹೆಚ್ಚಾಗಿದೆ. ಇದರ ಮೇಲೆ ಈಗಾಗಲೇ ಸೈಬರ್ ಪೊಲೀಸರು, ರೆಗ್ಯೂಲರ್ ಪೊಲೀಸರು ಹಾಗೂ ಆಂತರಿಕ ಭದ್ರತಾ ಪಡೆ ಪೊಲೀಸರು ನಿಗಾ ಇರಿಸಿದ್ದಾರೆ.
ಬ್ಯಾಂಕ್ ಖಾತೆಗಳು, ಮಹತ್ತ್ವದ ಅಂತರ್ಜಾಲ ತಾಣಗಳು, ರಕ್ಷಣಾ ಇಲಾಖೆ ವೆಬ್‌ಸೈಟುಗಳು, ಜಾಲತಾಣಗಳು ಸೇರಿದಂತೆ ದೇಶದ ಹಿತಾಸಕ್ತಿಗೆ ಪೂರಕವಾದ ದತ್ತಾಂಶವನ್ನು ಕೆಲವರು ಡಾರ್ಕ್ ವೆಬ್‌ಸೈಟುಗಳ ಮೂಲಕ ಜಗತ್ತಿನ ಯಾವುದೋ ಮೂಲೆಯಲ್ಲಿದ್ದು ಹ್ಯಾಕ್ ಮಾಡುತ್ತಿದ್ದಾರೆ. ಅಂಥವರನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಿ, ಅದಕ್ಕೆ ತಾಂತ್ರಿಕ ಶಕ್ತಿ ತುಂಬಲಾಗುತ್ತಿದೆ.
ಡ್ರಗ್, ಮಾನವ ಕಳ್ಳಸಾಗಣೆ, ಹೆಣ್ಮಕ್ಕಳ ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಮುಂತಾದ ವಿದ್ರೋಹಿ ಚಟುವಟಿಕೆಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡ್ರಗ್ ಜಾಲವನ್ನು ಹತ್ತಿಕ್ಕಲಾಗಿದೆ.
ಉನ್ನತಮಟ್ಟದ ಸಮಿತಿ
ಸೈಬರ್ ಆರ್ಥಿಕ ಅಪರಾಧಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವುದರ ಜತೆಗೆ, ಈ ಬಗ್ಗೆ ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈಗಾಗಲೇ ಕ್ರೈಂ, ಸೈಬರ್, ಸಿಐಡಿ ಪೊಲೀಸರು ಹಾಗೂ ರಾಜ್ಯದ ಬ್ಯಾಂಕರ್‌ಗಳನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ರಚಿಸಲಾಗಿದೆ. ರಿಜರ್ವ್ ಬ್ಯಾಂಕ್ ಜತೆಯೂ ನಿರಂತರವಾಗಿ ಸಮಾಲೋಚನೆ ನಡೆಸಲಾಗುತ್ತಿದೆ. ಜನರ ಬ್ಯಾಂಕ್ ಖಾತೆಗಳನ್ನು ರಕ್ಷಿಸುವುದರ ಜತೆಗೆ, ಅಪರಾಧಿಗಳ ಬ್ಯಾಂಕ್ ಖಾತೆಗಳನ್ನೂ ಟ್ರ್ಯಾಕ್ ಮಾಡಲಾಗುತ್ತಿದೆ.
ಆಂತರಿಕ ಭದ್ರತಾ ವಿಭಾಗವನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 43 ಸೈಬರ್ ಪೊಲೀಸ್ ಠಾಣೆಗಳು ದಿನದ ಇಪ್ಪತ್ತನಾಲ್ಕು ಗಂಟೆ ಕಾಲವೂ ಕೆಲಸ ಮಾಡುತ್ತಿವೆ. ಆ ಠಾಣೆಗಳಿಗೆ ಐಟಿ ತಜ್ಞರನ್ನೂ ನೇಮಿಸಲಾಗಿದ್ದು; ಕ್ರೈಂ ಹಾಗೂ ಸಿಐಡಿ ಪೊಲೀಸರು ನೆರವು ನೀಡುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ಹತ್ತಿಕ್ಕಲಾಗುತ್ತಿದೆ.