Lead photo: CKPhotography ಸಿಕೆಪಿ@ckpixels
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಆರಂಭಿಸಿದಾಗ್ಯೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಭೌತಿಕ ತರಗತಿಗಳನ್ನು ನಡೆಸದಿರಲು ರಾಜ್ಯ ಸರಕಾರ ನಿರ್ಧರಿಸಿದೆ.
ಕಳೆದ ಹಲವು ದಿನಗಳಿಂದ ಆನ್‌ಲೈನ್ ಸಾಕು, ಆಫ್‌ಲೈನ್ ಬೇಕೆಂದು ಎದ್ದಿದ್ದ ಕೂಗಿಗೆ ಮನ್ನಣೆ ನೀಡದ ಸರಕಾರ, ಒಂದರಂದ 12ನೇ ತರಗತಿವರೆಗೆ, ಅಂದರೆ; ದ್ವಿತೀಯ ಪಿಯಸಿ ತನಕ ನೇರ ಕ್ಲಾಸ್‌ಗಳನ್ನು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಯಡಿಯೂಪ್ಪ ಅವರು ಬೆಂಗಳೂರಿನಲ್ಲಿ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿಂದು ಬೆಳಗ್ಗೆ ಆರೋಗ್ಯ ಇಲಾಖೆ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿಗಳನ್ನು ಪರಿಶೀಲಿಸಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಅವರ ಜತೆ ಮಾತುಕತೆ ನಡೆಸಿದ ನಂತರ ಸಿಎಂ ಈ ನಿರ್ಧಾರ ಕೈಗೊಂಡರು.
ಇದೇ ವೇಳೆ ಅವರು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ, ಸಾರಿಗೆ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಜತೆ ಕೂಲಂಕಶವಾಗಿ ಚರ್ಚಿಸಿದರಲ್ಲದೆ, ಮುಖ್ಯವಾಗಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಮಿತಿ ನೀಡಿದ ಸಲಹೆಗಳನ್ನು ಒಪ್ಪಿಕೊಂಡರು. ಇದರ ಜತೆಗೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ, ಡಿಸೆಂಬರ್‌ವರೆಗೆ ಶಾಲೆಗಳನ್ನು ತೆರೆಯುವುದು ಬೇಡ ಎಂದು ಆನ್‌ಲೈನ್ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದರು.
ಚಳಿಗಾಲ ಕಾರಣ
ಈ ಮೊದಲು ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕೋವಿಡ್ ಅಬ್ಬರ ಹೆಚ್ಚಲಿದೆ ಎಂದು ಈ ಮೊದಲೇ ಐಸಿಎಂಆರ್ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಉತ್ತರ ಭಾರತದಲ್ಲಿ ವೈರಸ್ ಅಬ್ಬರ ಮತ್ತೆ ಹೆಚ್ಚಾಗಿದೆ. ಶೀತದ ಕಾರಣಕ್ಕೆ ವೈರಸ್ ನಡೆಯನ್ನು ಗುರುತಿಸಿ ಚಿಕಿತ್ಸೆ ನೀಡುವುದು ಸವಾಲಾಗಿದೆ. ರಾಜ್ಯದಲ್ಲೂ ಈ ಬಾರಿ ಚಳಿ ಹೆಚ್ಚು ಕಾರಣಕ್ಕೆ ಡಿಸೆಂಬರ್‌ವರೆಗೂ ಶಾಲೆ-ಕಾಲೇಜ್‌ಗಳನ್ನು ತೆರೆಯುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಜತೆಗೆ, ನವೆಂಬರ್ ಕೊನೆಗೆ ಅಥವಾ ಡಿಸೆಂಬರ್ ತಿಂಗಳ ಯಾವುದೇ ವೇಳೆಯಲ್ಲಿ ಕೋವಿಡ್ ಎರಡನೆ ಅಲೆ ಕಾಣಬರುವ ಆತಂಕದ ಕಾರಣಕ್ಕೆ ಆರೋಗ್ಯ ಇಲಾಖೆ ಮತ್ತು ಕೋವಿಡ್ ಸಲಹಾ ಸಮಿತಿ ಶಾಲೆ ಕಾಲೇಜುಗಳನ್ನು ತೆರೆಯುವುದು ಬೇಡ ಎಂದು ಅಭಿಪ್ರಾಯಪಟ್ಟಿವೆ. ಅಲ್ಲದೆ, ಡಿಸೆಂಬರ್ ಮೂರು ಅಥವಾ ಕೊನೆ ವಾರದಲ್ಲಿ ಮತ್ತೆ ಸಭೆ ಸೇರಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆಗಳ ಅಭಿಪ್ರಾಯಗಳನ್ನು ಈ ಬಗ್ಗೆ ನಿರ್ಧಾರ ಮಾಡೋಣ ಎಂಬ ಸಲಹೆ ಸಭೆಯಲ್ಲಿ ಬಂದಿದೆ.
ಡಾ. ಕೆ.ಸುಧಾಕರ್ ಹೇಳಿದ್ದೇನು?
ಕೋವಿಡ್ ಹಿನ್ನೆಲೆಯಲ್ಲಿ ಡಿಸೆಂಬರ್ʼನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭಿಸುವುದು ಸೂಕ್ತವಲ್ಲ. ಡಿಸೆಂಬರ್ ಚಳಿಗಾಲ ಸೋಂಕು ಹರಡಲು ಅನುಕೂಲ ಮಾಡಿಕೊಡಬಹುದು. ಕೊರೊನಾದ ಎರಡನೇ ಅಲೆಯೂ ಬರಲಿದೆ ಎಂಬ ಸುದ್ದಿಯೂ ಇರುವುದರಿಂದ ಮುಂದಾಲೋಚನೆ ಮಾಡಬೇಕಿದೆ. ಈ ಕುರಿತು ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಕೂಡ ಚರ್ಚೆಯಾಗಿದ್ದು, ಈಗಾಗಲೇ ಸಭೆಯ ನಿರ್ಣಯವನ್ನು ಸರಕಾರಕ್ಕೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ತೆರೆಯುವುದು ಬೇಡ ಎಂದು ಸಚಿವರು ಸಲಹೆ ನೀಡಿದರು.
ಶಾಲೆ ಪುನರಾರಂಭಕ್ಕೆ ಸಂಬಂಧಿಸಿದಂತೆ, ಡಿಸೆಂಬರ್ 3ನೇ ವಾರದಲ್ಲಿ ಸಭೆ ನಡೆಸಿ ಮಾಡಿ ನಿರ್ಧಾರ ಕೈಗೊಳ್ಳಬಹುದು. ಆ ಸಮಯದಲ್ಲಿ ಕೋವಿಡ್ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಬಹುದು ಎಂದು ಸಚಿವರು ಸಭೆಗೆ ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿದ್ದರು.
ಕೋವಿಡ್ ತಾಂತ್ರಿಕ ಸಮಿತಿ ಶಿಫಾರಸು
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿಸೆಂಬರ್ʼನಲ್ಲೂ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀಣದಲ್ಲಿ ಕೆಲಸ ಮಾಡುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ಗಟ್ಟಿಯಾಗಿ ಸಲಹೆ ನೀಡಿದೆ.
ಭಾನುವಾರ (ನವೆಂಬರ್ 22) ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆಯಾಗಿದ್ದು, ಡಿಸೆಂಬರ್ʼನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಸೂಚನೆ ಮೇರೆಗೆ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲೂ ಸೌಲಭ್ಯ ಹೆಚ್ಚಿಸಲಾಗಿದೆ. ಈಗ ಪ್ರತಿ ದಿನ ಸರಾಸರಿ 1,700 ರಷ್ಟು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ಸಮಿತಿ ಒತ್ತಿ ಹೇಳಿದೆ.