ಜೀರ್ಣೋದ್ಧಾರ, ಪ್ರತಿಷ್ಠಾಪನೆ ಕಾರ್ಯ ಸಂಪನ್ನ
ಗುಡಿಬಂಡೆ: ಐತಿಹಾಸಿಕ ಪಟ್ಟಣ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಅಮಾನಿಭೈರ ಸಾಗರದ ಎದುರಿನ ತಪೋವನದಲ್ಲಿ ಜೀರ್ಣೋದ್ಧಾರ ಮಾಡಲಾಗಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯವು ಲೋಕಾರ್ಪಣೆಯಾಗಿದ್ದು, ಹರಿಧ್ವಾರದಿಂದ ತರಿಸಲಾಗಿರುವ ಅಮೃತಶಿಲೆಯ ಶಿವಲಿಂಗ ಹಾಗೂ ನಂದಿಯನ್ನು ಪ್ರತಿಷ್ಠಾಪನೆ ಮಾಡುವ ಪುಣ್ಯಕಾರ್ಯವು ಸೋಮವಾರ ಸಂಪನ್ನಗೊಂಡಿತು.
ಇದೇ ನವೆಂಬರ್ 21ರಿಂದ 23ರವರೆಗೆ ಮೂರು ದಿನ ನಡೆದ ಈ ಕಾರ್ಯಕ್ರಮದಲ್ಲಿ ದೇವಾಲಯದ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಕಾರ್ಯವು ಗುಡಿಬಂಡೆಯ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಶ್ರದ್ಧಾಭಕ್ತಿಯಿಂದ ನೆರೆವೇರಿತು. ವೇದ ಪಂಡಿತ ಸ.ನಾ.ನಾಗೇಂದ್ರ ನೇತೃತ್ವದ ತಂಡವು ಪ್ರತಿಷ್ಠಾಪನೆಯ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟಿತು.
ಮೊದಲ ದಿನ ಯಮುನಾ ಪೂಜೆಯೊಂದಿಗೆ (ಗಂಗೆಯ ಪೂಜೆ), ಕಲಶ ಪ್ರತಿಷ್ಠಾಪನೆ ನೆರವೇರಿತು. ಭಾನುವಾರ ಗೋಪುರ ಕಳಶ ಪೂಜೆ, ನವಗ್ರಹ ಪೂಜೆ, ರುದ್ರ ಹೋಮ, ಗಣಪತಿ-ನವಗ್ರಹ ಹೋಮ, ಶಾಂತಿ ಹೋಮ ನಡೆಯಿತು. ಸಂಜೆ ಅದಿವಾಸಿ ಪೂಜೆಯ ನಿಮಿತ್ತ ಜಲ, ಕ್ಷೀರ, ಫಲ, ಪುಷ್ಪ, ನವರತ್ನ, ಶೈನವಾಸ ಪೂಜಾ ಕಾರ್ಯಕ್ರಮಗಳು ನಡೆದವು.
ಸೋಮವಾರ ಬೆಳಗ್ಗೆ ಪುಣ್ಯ ಮಹೂರ್ತದಲ್ಲಿ ಭಕ್ತಾಧಿಗಳ ಸಮ್ಮುಖದಲ್ಲಿ ಶಿವ, ನಂದಿಯ ಪ್ರತಿಷ್ಠಾಪನಾ ಕಾರ್ಯವನ್ನು ನೆರೆವೇರಿಸಲಾಯಿತು. ಜತೆಗೆ, ದೇನು (ಗೋವು) ದರ್ಶನ, ನೇತ್ರೋನ್ಮಿಲನ ಕಾರ್ಯಕ್ರಮಗಳು ನೆರೆವೇರಿದವು. ಅದಾದ ಮೇಲೆ, ಕುಂಭಾಭಿಷೇಕ ಪೂರ್ಣಗೊಂಡ ನಂತರ ಸ್ವಾಮಿಯನ್ನು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.
48 ದಿನ ಮಂಡಲಪೂಜೆ
ವೈದ್ಯನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪನೆಯ ದಿನದಿಂದ ನಲವತ್ತೆಂಟು ದಿನಗಳ ಕಾಲ ಮಂಡಲ ಪೂಜೆ ನಡೆಯಲಿದೆ. ಈ ಪೂಜೆಯ ಕೊನೆಯ ದಿನ ಹೋಮ ಇತ್ಯಾದಿ ದೈವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಭಾರತೀಯ ಸೇನಾಪಡೆಯ ಯೋಧ ವಿ.ಲಕ್ಷ್ಮೀನಾರಾಯಣ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಜೀರ್ಣೋದ್ಧಾರ, ಸ್ವಾಮಿಯ ಪ್ರತಿಷ್ಠಾಪನೆಯ ಕಾರ್ಯಕ್ರಮವೂ ಲವಲೇಶವೂ ಸಮಸ್ಯೆ ಇಲ್ಲದೆ ನಿರ್ವಿಘ್ನವಾಗಿ ನೆರವೇರಿತು. ಗುಡಿಬಂಡೆ ಪಟ್ಟಣ ಮಾತ್ರವಲ್ಲದೆ, ತಾಲ್ಲೂಕಿನ ಭಕ್ತಾದಿಗಳೂ ಪಾಲ್ಗೊಂಡಿದ್ದರು. ಶಿರಸಿಯ ಚಿತ್ರದುರ್ಗ ಮುರುಘಾಮಠದ ಶಾಖಾ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಎತ್ತಿನಹೊಳೆ ಯೋಜನೆಯ ಮುಖ್ಯ ಎಂಜಿನೀಯರ್ ರಂಗನಾಥ್ ಮುಂತಾದ ಪ್ರಮುಖರು ಭಾಗಿಯಾಗಿದ್ದರು. ಈ ಪೈಕಿ ರಂಗನಾಥ್ ಅವರು ದೇಗುಲದ ಮತ್ತಷ್ಟು ಅಭಿವೃದ್ಧಿಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕಾರ್ತಿಕ ಪೂಜೆ ಹಾಗೂ ಗಂಗಾ ಆರತಿ
ಕಾರ್ತೀಕ ಮಾಸದಲ್ಲಿ ಸ್ವಾಮಿಯ ಪ್ರತಿಷ್ಠಾಪನೆ ಕಾರ್ಯ ನಡೆದಿರುವುದರಿಂದ ಪ್ರತೀವರ್ಷ ಈ ಮಾಸದಲ್ಲಿ ವಿಶೇಷ ಪೂಜೆಗಳು, ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ, ಕಾಶಿ ಮತ್ತು ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ನಡೆಯುವ ಗಂಗಾ ಆರತಿಯಂತೆ ಇಲ್ಲೂ ನಡೆಸಲಾಗುವುದು. ಸದಾ ಕಾಲ ಈ ದೇಗುಲದಲ್ಲಿ ಒಂದಿಲ್ಲೊಂದು ಧಾರ್ಮಿಕ ಕಾರ್ಯಗಳು ನಡೆಯುತ್ತಲೇ ಇರುತ್ತವೆ ಎಂದು ಲಕ್ಷ್ಮೀನಾರಾಯಣ್ ಮಾಹಿತಿ ನೀಡಿದರು.
ವೈದ್ಯನಾಗಿ ಬಂದಿದ್ದ ಪರಮಶಿವ
ಇದೇ ವೇಳೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಗುಡಿಬಂಡೆಯ ವೇದ ಪಂಡಿತ ಸ.ನಾ. ನಾಗೇಂದ್ರ ಅವರು, “16ನೇ ಶತಮಾನದಲ್ಲಿ ಪಾಳೇಯಗಾರರಾದ ಭೈರೇಗೌಡರು ಇಲ್ಲಿನ ಕೆರೆಯನ್ನು ಕಟ್ಟಿಸುತ್ತಿರುವಾಗ ಈಗಿನ ಕೊರೊನಾದಂತೆ ಒಂದು ಮಾರಕ ವೈರಸ್ ಬಂದಿತ್ತೆಂದು, ಆಗ ಕೆರೆ ಕಟ್ಟುತ್ತಿದ್ದ ಕಾರ್ಮಿಕರೆಲ್ಲ ಸಾಯುತ್ತಿದ್ದರಂತೆ. ಅಂಥ ವಿಷಮ ವೇಳೆಯಲ್ಲಿ ಸಾಕ್ಷಾತ್ ಆ ಪರಮಶಿವನೇ ವೈದ್ಯನಾಗಿ ಬಂದು ಆ ಕಾರ್ಮಿಕರಿಗೆ ಚಿಕಿತ್ಸೆ ನೀಡಿ ಕಾಯಿಲೆ ಗುಣಪಡಿಸಿದನಂತೆ. ಈ ಕಾರಣಕ್ಕಾಗಿಯೇ ಪಾಳೇಯಗಾರರು ಇಲ್ಲಿ ವೈದ್ಯನಾಥೇಶ್ವರ ದೇಗುಲವನ್ನು ಕಟ್ಟಿಸಿದ್ದರು. ಕಾಲಕ್ರಮೇಣ ಅದು ಶಿಥಿಲವಾಗಿ ಪಾಳುಬಿದ್ದಿತ್ತು. ಇದೀಗ ಜೀರ್ನೋದ್ಧಾರವಾಗಿ ಇಡೀ ದೇಗುಲಕ್ಕೆ ಮತ್ತು ಗುಡಿಬಂಡೆಗೆ ಪೂರ್ವವೈಭವ ಬಂದಂತೆ ಆಗಿದೆ” ಎನ್ನುತ್ತಾರೆ.
- ಕೆಳಗಿನ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ..