Lead Photo: CKPhotography ಸಿಕೆಪಿ@ckpixels
ತಿರುಮಲ/ಬೆಂಗಳೂರು: ನಿವಾರ್ ಚಂಡಮಾರುತದ ಪ್ರಭಾವಕ್ಕೆ ತಮಿಳುನಾಡು ಜತೆಗೆ ಆಂದ್ರ ಪ್ರದೇಶವೂ ಸಿಲುಕಿದೆ. ಮುಖ್ಯವಾಗಿ ಜಗತ್ಪ್ರಸಿದ್ಧ ಯಾತ್ರಾಸ್ಥಳ ತಿರುಮಲದಲ್ಲಿ ಮಳೆಯಿಂದ ಎಲ್ಲವೂ ಅಸ್ತವ್ಯಸ್ತವಾಗಿದ್ದು, ಹೊರಗಿನಿಂದ ಬರುವ ಭಕ್ತರ ಪ್ರಮಾಣ ಕಡಿಮೆಯಾಗಿದೆ.
ಬುಧವಾರ ಬೆಳಗ್ಗೆಯಿಂದಲೇ ತಿರುಮಲದಲ್ಲಿ ಮಳೆ ಆರಂಭವಾಗಿದ್ದು, ಭಕ್ತರು ಹಾಗೂ ಬೀದಿಬದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಸಕಾಲಕ್ಕೆ ಭಕ್ತರು ದರ್ಶನಕ್ಕೆ ತೆರಳಲಾಗದೇ ಪರದಾಡಿದರು. ತಿರುಪತಿ-ತಿರುಮಲ ಘಾಟ್ ರಸ್ತೆಯಲ್ಲಿ ನಿಧಾನವಾಗಿ ಚಲಿಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರಲ್ಲದೆ, ವಾಹನ ಸವಾರರ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು, ಅಲಿಪಿರಿಯಿಂದ ಕಾಲುದಾರಿಯಲ್ಲಿ ಭಕ್ತರು ನಡೆದು ಬರುತ್ತಿಲ್ಲ. ಮಾರ್ಗಮಧ್ಯೆ ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಕಾರಣಕ್ಕೆ ಭಕ್ತರೆಲ್ಲರೂ ಘಾಟ್ ರಸ್ತೆಯಲ್ಲೇ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನವನ್ನು ಸೇರಿಕೊಳ್ಳುತ್ತಿದ್ದಾರೆ.
ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ತಿರಮಲದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚೆನ್ನೈಗೆ 136 ಕಿ.ಮೀ ದೂರದಲ್ಲಷ್ಟೇ ಇರುವ ತಿರುಮಲದ ಗಿರಿಶ್ರೇಣಿಯಲ್ಲಿ ನಿವಾರ್ ಅಬ್ಬರ ತುಸು ಜಾಸ್ತಿಯೇ ಇದೆ. ಮೊದಲೇ ಕೋವಿಡ್ ಭಯ, ಇನ್ನೊಂದೆಡೆ ಹೆಚ್ಚುತ್ತಿರುವ ಚಳಿಯ ಕಾರಣಕ್ಕೆ ಯಾತ್ರಿಗಳ ಪ್ರಮಾಣ ಕಡಿಮೆಯಾಗಿದೆ. ಮಕ್ಕಳು, ಹಿರಿಯ ನಾಗರೀಕರು ಕಾಣಿಸಿಕೊಳ್ಳುತ್ತಿಲ್ಲ.
130ರಿಂದ 140 ಕಿ.ಮೀ ವೇಗದಲ್ಲಿ ತಮಿಳುನಾಡು ತೀರದತ್ತ ಬರುತ್ತಿರುವ ಚಂಡಮಾರುತವು, ಚೆನ್ನೈ ಮತ್ತು ಪುದುಚೆರಿಗೆ ಅಪ್ಪಳಿಸುವಷ್ಟರಲ್ಲಿ ತಿರುಮಲದಲ್ಲಿಯೂ ಮಳೆಯ ತೀವ್ರತೆ ಹೆಚ್ಚಲಿದೆ ಎಂದು ಈಗಾಗಲೇ ಆಂಧ್ರ ಪ್ರದೇಶದ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈಗೆ 300 ಕಿ.ಮೀ ದೂರದ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಈ ಪರಿ ಮಳೆಯಾಗುತ್ತಿದೆ. ಹೀಗಾಗಿ ತಿರುಮಲಕ್ಕೆ ಭೇಟಿ ನೀಡಬೇಕೆಂದಿರುವ ಭಕ್ತರು ಮೂರು ದಿನಗಳ ನಂತರ ಹೋದರೆ ಉತ್ತಮ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಾಳಹಸ್ತಿಯಲ್ಲೂ ಮಳೆ
ಇನ್ನು, ತಿರುಪತಿಗೆ ಕೇವಲ 37 ಕಿ.ಮೀ ದೂರದಲ್ಲಿರುವ ಶ್ರೀಕಾಳಹಸ್ತಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ಮಳೆಯ ಕಾರಣಕ್ಕೆ ಶ್ರೀಕಾಳಹಸ್ತೇಶ್ವರನ ದರ್ಶನಕ್ಕೆ ಬರುವ ಭಕ್ತರು, ರಾಹುಪೂಜೆ ಮಾಡಿಸುವವೆ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಇಲ್ಲಿ ಭಕ್ತರಿಗೆ ಮಳೆಯಿಂದ ಆಶ್ರಯ ಪಡೆಯುವ ಮೂಲಸೌಕರ್ಯಗಳ ಕೊರತೆ ಇದ್ದು, ಕೆಲ ಭಕ್ತರು ಮಳೆಯಲ್ಲಿ ತೊಯ್ದುಕೊಂಡೇ ದರ್ಶನ ಮಾಡಿದರು ಎಂದು ವರದಿಯಾಗಿದೆ.
ತಮಿಳುನಾಡು ಕಡೆ ಹೋಗಲೇಬೇಡಿ
ನಿವಾರ್ ಮಾರುತ ಇನ್ನೂ ತೀರಕ್ಕೆ ಅಪ್ಪಳಿಸುವ ಮುನ್ನವೇ ಚೆನ್ನೈ ಮತ್ತು ಪುದುಚೆರಿಗಳ ಪರಿಸ್ಥಿತಿ ಅಯೋಮಯವಾಗಿದೆ. ಮುಖ್ಯವಾಗಿ ಚೆನ್ನೈ ನಗರದ ರಸ್ತೆಗಳಲ್ಲಿ ನದಿಗಳಂತೆ ನೀರು ಹರಿಯುತ್ತಿದೆ. ನಗರ ಸಾರಿಗೆ, ಸಿಟಿ ರೈಲು ಸಂಚಾರ ಪೂರ್ಣ ವ್ಯತ್ಯಯವಾಗಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈಗಾಗಲೇ ಸಮುದ್ರದ ಪಕ್ಕದಲ್ಲಿ ವಾಸ ಮಾಡುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.
ಇದೇ ವೇಳೆ ಬುಧವಾರ ರಾತ್ರಿ 11.34 ಗಂಟೆಗೆ ಟ್ವೀಟ್ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, ಇನ್ನು ಕೇವಲ ಮೂರು ಗಂಟೆಗಳಲ್ಲಿ ಪುದುಚೆರಿ ತೀರಕ್ಕೆ ನಿವಾರ್ ಅಪ್ಪಳಿಸಲಿದೆ ಎಂದು ಮಾಹಿತಿ ನೀಡಿದೆ.
ತಮಿಳುನಾಡಿನ ಬಹುತೇಕ ಯಾತ್ರಾಸ್ಥಳಗಳು ಭಕ್ತರಿಲ್ಲದೆ ಭಣಗುಡುತ್ತಿವೆ. ಈ ಪೈಕಿ ದ್ವೀಪವಾಗಿರುವ ರಾಮೇಶ್ವರದಲ್ಲಿ ಮಂಗಳವಾರದಿಂದಲೇ ಮಳೆ ಸುರಿಯುತ್ತಿದೆ. ಇನ್ನೂ ಹಿರಿಯರ ಪೂಜೆಗೆಂದು ಧನುಷ್ಕೋಡಿಗೆ ತೆರಳುವ ಭಕ್ತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ರಾಮೇಶ್ವರಕ್ಕೆ ಅನತಿ ದೂರದಲ್ಲಿರುವ ನೌಕಾಪಡೆ ಚೆಕ್ ಪಾಯಂಟ್‌ವರೆಗೂ ಬಿಡಲಾಗುತ್ತಿದೆಯಾದರೂ, ಬುಧವಾರ ಸಂಜೆಯಿಂದ ಅಲ್ಲಿಗೂ ಬಿಡುತ್ತಿಲ್ಲ ಎಂದು ರಾಮೇಶ್ವರದ ಹೋಟೆಲ್‌ವೊಂದರ ಮಾಲೀಕ ಸೇತುರಾಜನ್ ಅವರು ಸಿಕೆನ್ಯೂಸ್ ನೌ ಸುದ್ದಿತಾಣಕ್ಕೆ ಮಾಹಿತಿ ನೀಡಿದ್ದಾರೆ.
ಅದೇ ರೀತಿ; ಕೋವಿಡ್ ಕಾರಣಕ್ಕೆ ಭಕ್ತರು ಬರುವುದು ಕಡಿಮೆಯಾಗಿದೆ. ಇದೀಗ ನಿವಾರ್ ಚಂಡಮಾರುತದಿಂದ ಇನ್ನು ಮೂರ್ನಾಲ್ಕು ದಿನ ಭಕ್ತರ ಪ್ರಮಾಣ ಹೆಚ್ಚುವುದಿಲ್ಲ. ನಮಗಂತೂ ಏಟಿನ ಮೇಲೆ ಏಟು ಬೀಳುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.
ಇದೇ ರೀತಿ ವಿಶ್ವವಿಖ್ಯಾತ ಮೀನಾಕ್ಷಿ ಅಮ್ಮನವರು ನೆಲೆಸಿರುವ ಮಧುರೈಗೂ ಭಕ್ತರು ವಿರಳವಾಗಿದ್ದಾರೆ. ಸದಾ ದೇಗುಲದ ಎಲ್ಲ ದಿಕ್ಕುಗಳಲ್ಲೂ ಭಕ್ತರು ತುಂಬಿರುತ್ತಿದ್ದರು. ಆದರೆ, ಭಕ್ಕರು ಕಡಿಮೆಯಾಗಿ ಬರುತ್ತಿರುಬ ಕೆಲವೇ ಭಕ್ತರಿಗೆ ಅಮ್ಮನವರ ದರ್ಶನ ನಿರಾಳವಾಗಿ ಆಗುತ್ತಿದೆ ಎಂದು ವರದಿಯಾಗಿದೆ.
ಪುದುಚೆರಿಯಲ್ಲಿ ಪರಿಸ್ಥಿತಿ ಇನೂ ವಿಕೋಪಕ್ಕೆ ಹೋಗಿದೆ. ಅಲ್ಲಿನ ಸರಕಾರ ಮೂರು ದಿನ ಕರ್ಪ್ಯೂ ವಿಧಿಸಿ 144 ಸೆಕ್ಷನ್ ಜಾರಿ ಮಾಡಿದೆ. ಚಂಡಮಾರುತ ಇಳಿಮುಖ ಆಗುವ ತನಕ ಮನೆಯಲ್ಲೇ ಇರಿ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ಜನರನ್ನು ಕೋರಿದ್ದಾರೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಬುಧವಾರ ಮಳೆಯಲ್ಲೇ ಪುದುಚೆರಿ ಉದ್ದಕ್ಕೂ ಪರ್ಯಟನೆ ಮಾಡಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
- ಈ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ….