Lead Photo: CKPhotography ಸಿಕೆಪಿ@ckpixels
ಬೆಂಗಳೂರು: ಬುಧವಾರ ಮಧ್ಯರಾತ್ರಿಗೆ ಮುನ್ನವೇ ಪುದುಚೆರಿ ಬಳಿ ಭೂಮಿಗೆ ಅಪ್ಪಳಿಸಿರುವ ನಿವಾರ್ ಚಂಡಮಾರುತವು ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಗೆ ಕಾರಣವಾಗಿದ್ದು, ಈ ಎಲ್ಲ ಜಿಲ್ಲೆಗಳ ರೈತರು ತೀವ್ರ ಕಂಗಾಲಾಗಿದ್ದಾರೆ.
ಈಗಾಗಲೇ ರಾಜ್ಯದ ಏಳೂ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಣೆ ಮಾಡಿದೆ. ಈ ನಡುವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಗುರುವಾರದಂದು ಹಳದಿ ಅಲರ್ಟ್ ಘೋಷಿಸಲಾಗಿದೆ.
ಈ ಚಂಡಮಾರುತದ ಗಾಳಿಯು ಕೋಲಾರ ಜಿಲ್ಲೆಯ ಕೆಜಿಎಫ್ ಮೂಲಕ ರಾಜ್ಯವನ್ನು ಪ್ರವೇಶ ಮಾಡಿದ್ದು; ತಮಿಳುನಾಡು-ಆಂಧ್ರ ಪ್ರದೇಶದ ಗಡಿ ತಾಲ್ಲೂಕುಗಳಾದ ಬಂಗಾರಪೇಟೆ, ಮಾಲೂರು, ಮುಳಬಾಗಿಲು ಮತ್ತು ಶ್ರೀನಿವಾಸಪುರ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಅದೇ ಬುಧವಾರ ಮಧ್ಯರಾತ್ರಿಯಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮೊದಲೇ ಚಳಿಗಾಲ, ಅದಕ್ಕೆ ಸೈಕ್ಲೋನ್ ಕೂಡ ಸೇರಿದ್ದರಿಂದ ವಾತಾವರಣ ಇನ್ನಷ್ಟು ತಂಪಾಗಿದೆ. ಹೀಗಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜನರು ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ.
ಮೊದಲೇ ಕೋವಿಡ್ ಭೀತಿ, ಇನ್ನೊಂದೆಡೆ ಮಳೆ ಬೀಳುತ್ತಿರುವುದರಿಂದ ಜನರು ಹೊರಗೆ ಬರುತ್ತಿಲ್ಲ. ಈಗಾಗಲೇ ಆರಂಭವಾಗಿರುವ ಪದವಿ ಕಾಲೇಜುಗಳತ್ತ ವಿದ್ಯಾರ್ಥಿಗಳು ಸುಳಿಯುತ್ತಿಲ್ಲ. ಮುಖ್ಯವಾಗಿ, ವೃದ್ಧರು ಮತ್ತು ಮಕ್ಕಳು ಚಳಿಗೆ ತತ್ತರಿಸುವಂಥ ಪರಿಸ್ಥಿತಿ ಉಂಟಾಗಿದೆ. ನಿವಾರ್ ಕಾರಣಕ್ಕೆ ತಮಿಳುನಾಡಿನಲ್ಲಿ ಸರಕಾರಿ ರಜೆ ಘೋಷಿಸಲಾಗಿದ್ದು, ಅದೇ ರೀತಿ ಕರ್ನಾಟಕದ ಗಡಿ ತಾಲ್ಲೂಕುಗಳಲ್ಲೂ ಇಂಥದ್ದೇ ಪರಿಸ್ಥಿತಿ ಇದೆ.
ಇನ್ನು ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ಉಷ್ಣಾಂಶ ಗಣನೀಯವಾಗಿ ತಗ್ಗಿರುವುದರಿಂದ ಚಳಿಯೂ ಹೆಚ್ಚಾಗಿದೆ. ಒಂದು ಕುಂಭದ್ರೋಣ ಮಳೆ ಸುರಿದರೆ ತಗ್ಗುಪ್ರದೇಶಗಳಿಗೆ ನೀರು ನುಗದಗುವುದು ಖಚಿತ. ಅಂಥ ಪರಿಸ್ಥಿತಿನ್ನು ಎದುರಿಸಲು ಬಿಬಿಎಪಿ ಸಜ್ಜಾಗಿದೆ.
ಹವಮಾನ ಇಲಾಖೆಯ ಮಾಹಿತಿಯಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ಹೆಚ್ಚು ಮಳೆಯಾಗಲಿದೆ. ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಬೆಂಗಳೂರು ನಗರದಲ್ಲಿ ಸಣ್ಣಗೆ ಸೋನೆಯಂತೆ ಸುರಿಯುತ್ತಿದ್ದ ಮಳೆ ಪಕ್ಕದ ಆ ಎರಡು ಜಿಲ್ಲೆಗಳಲ್ಲಿ ಗಾಳಿಮಿಶ್ರಿತವಾಗಿ ಅಬ್ಬರಿಸುತ್ತಿತ್ತು. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ದಾಟಿಕೊಂಡು ತುಮಕೂರು ಜಿಲ್ಲೆಯ ಪಾವಗಢ, ಆಂಧ್ರದ ಅನಂತಪುರ ಜಿಲ್ಲೆಗಳತ್ತ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಪುದುಚೆರಿ, ತಮಿಳುನಾಡು, ಆಂಧ್ರ ತತ್ತರ
ಈ ಮೊದಲೇ ಅಂದಾಜು ಮಾಡಿದಂತೆ ನಿವಾರ್ ಚಂಡಮಾರುತವು ಪುದುಚೆರಿ ಬಳಿ ಭೂಮಿಗೆ ಅಲ್ಲಳಿಸಿದೆ. ಮಂಗಳವಾರದಿಂದಲೇ ತತ್ತರಿಸಿದ್ದ ಈ ಪ್ರದೇಶಗಳಲ್ಲಿ ಬೂಧವಾರವೂ ಭಾರೀ ಗಾಳಿಮಿಶ್ರಿತ ಮಳೆಯಾಗಿತ್ತು. ಗುರುವಾರ ಅದರ ರಭಸ ಮತ್ತಷ್ಟು ಹೆಚ್ಚಿದ ಪರಿಣಾಮ ವಿದ್ಯುತ್, ಸಂಚಾರ ಎಲ್ಲವುಗಳೂ ಅಸ್ತವ್ಯಸ್ತವಾಗಿವೆ. ಹವಾಮಾನ ಇಲಖೆ ಮಾಹಿತಿಯಂತೆ ಶುಕ್ರವಾರವೂ ಮಳೆ ಮುಂದುವರಿಯಲಿದೆ. ಶನಿವಾರ ಅಥವಾ ಭಾನುವಾರದವರೆಗೂ ಈಲ್ಲಿನ ಜನರಿಗೆ ಸೂರ್ಯದರ್ಶನ ಆಗವುದು ಕಷ್ಟ ಎನ್ನುವ ಮಾಹಿತಿ ಇದೆ.
ಇನ್ನೊಂದೆಡೆ ತೀರ ಪ್ರದೇಶದಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗಾಳಿ ಸುಮಾರು 160 ಕಿ.ಮೀ ಹೆಚ್ಚು ವೇಗದಲ್ಲಿ ಬೀಸುತ್ತಿರುವುದರಿಂದ ರಸ್ತೆಗಳಲ್ಲಿ ಬಸ್‌ಗಳು ಹಾರಿಹೋಗುವ ಅಪಾಯಕ್ಕೆ ತುತ್ತಾಗಿವೆ.
ನಿವಾರ್ ಅಪ್ಪಳಿಸಿದ ರಭಸಕ್ಕೆ ಪುದುಚೆರಿಯಲ್ಲಿ ಅನೇಕ ಸಾವು-ನೋವು ಉಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇನ್ನೊಂದೆಡೆ ಅನೇಕರು ಕಣ್ಮರೆಯಾಗಿದ್ದಾರೆ ಎಂಬ ಅನುಮಾನವಿದೆ. ಚಂಡಮಾರುತವನ್ನು ಎದುರಿಸಲು ಎಲ್ಲ ರೀತಿಯ ಸನ್ನದ್ಧತೆ ಮಾಡಿಕೊಂಡಿದ್ದರೂ ಸಾವು-ನೋವು ಉಂಟಾಗಿರುವ ಬಗ್ಗೆ ಪುದುಚೆರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಚಂಡಮಾರುತ ಕಾರಣಕ್ಕೆ ಪುದುಚೆರಿ, ಕಾರೈಕಲ್, ತಿರುನಲ್ಲಾರ್, ನವಗ್ರಹ ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಯಾತ್ರೆಯನ್ನು ಮುಂದೂಡುವಂತೆ ಪುದುಚೆರಿ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.
ತಿರುಪತಿ ಜಲಾವೃತ
ನಿರೀಕ್ಷೆಯಂತೆ ತಿರುಮಲ ತಿರುಪತಿಯಲ್ಲಿ ಕಳೆದ ಮಧ್ಯರಾತ್ರಿಯಿಂದಲೇ ಕುಂಭದ್ರೋಣ ಮಳೆಯಾಗುತ್ತಿದೆ. ಪರಿಣಾಮವಾಗಿ ನಗರದ ಎಲ್ಲ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಇನ್ನು, ಶ್ರೀ ಗೋವಿಂದರಾಜುಲು ಸ್ವಾಮಿ ದೇವಾಲಯದ ಹತ್ತಿರವೂ ರಾಜಕಾಳುವೆಯೊಂದು ಉಕ್ಕಿ ಭಕ್ತರಿಗೆ ತೀವ್ರ ಸಂಕಷ್ಟ ಸೃಷ್ಟಿಸಿದೆ. ಇನ್ನು ಮುಖ್ಯವಾಗಿ ತಿರುಪತಿಯಿಂದ ತಿರುಮಲಕ್ಕೆ, ವಿಮಾನ ನಿಲ್ದಾಣಕ್ಕೆ ಹಾಗೂ ಶ್ರೀಕಾಳಹಸ್ತಿಗೆ ಸಂಪರ್ಕ ಕಲ್ಪಿಸುವ ಕರಕಂಬಾಡಿ ಮುಖ್ಯರಸ್ತೆಯು ಪೂರ್ಣ ಜಲಾವೃತವಾಗಿ ನೀರು ನದಿಯಂತೆ ಹರಿಯುತ್ತಿದೆ. ತಿರುಮಲದಲ್ಲಿ ಮಳೆ ಎಡೆಬಿಡದೇ ಸುರಿಯುತ್ತಿದ್ದು, ಹೀಗಾಗಿ ಭಕ್ತರ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.
- ಕೆಳಗಿನ ಸುದ್ದಿ ಓದಲು ಓ ಲಿಂಕ್ ಕ್ಲಿಕ್ ಮಾಡಿ…