ಜಾಹೀರಾತಿಗೆ ಸಿಕ್ಕಾಪಟ್ಟೆ ಕಾಸು! ಅಧಿಕಾರಕ್ಕೇರುವ ಮುನ್ನವೇ ಸಾಧನೆಯ ಪೋಸು!!
ಹೀಗೂ ಆಗುತ್ತಾ? ಆಗಿದೆ ನೋಡಿ. ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದುಕೊಂಡೇ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದಲ್ಲೂ ಜಾಗ ಗಿಟ್ಟಿಸಿದ್ದಾರೆ. ಕೇಂದ್ರ ಸರಕಾರದ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ಗೂ ಅವರು ಸದಸ್ಯೆ. ಒಬ್ಬರೇ ಇಷ್ಟು ಲಾಭದಾಯಕ ಹುದ್ದೆಗಳಲ್ಲಿ ಕೂರಬಹುದೇ? ಇನ್ನು; ನಿಗಮ-ಮಂಡಳಿ, ಪ್ರಾಧಿಕಾರಕ್ಕೆ ನೇಮಕವಾದ ಕೂಡಲೇ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸುವ ನಾಯಕರ ನಿರ್ಲಜ್ಜತೆಯ ಪರಿ, ಅವುಗಳಿಗೆ ನಡೆಯುವ ನೇಮಕಾತಿ ಪ್ರಹಸನ, ರಾಜಕೀಯ ಗಂಜೀಕೇಂದ್ರಗಳಲ್ಲಿ ನಾರುತ್ತಿರುವ ಕೊಳಕು.. ಇತ್ಯಾದಿಗಳ ಬಗ್ಗೆ ಅತ್ಯಂತ ನಿಷ್ಠುರವಾಗಿ ಚರ್ಚಿಸಿದ್ದಾರೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ.
****
ರಾಜ್ಯದಲ್ಲೀಗ ಸಚಿವ ಸಂಪುಟ ವಿಸ್ತರಣೆಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಸಂಗತಿಯೆಂದರೆ ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕದ್ದು. ಕೆಆರ್‌ಐಡಿಎಲ್, ಮರಾಠಾ ಅಭಿವೃದ್ಧಿ ನಿಗಮ, ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಆದಿಜಾಂಬವ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)… ಹೀಗೆ ದಿನಕ್ಕೊಂದು, ಎರಡು ನಿಗಮ, ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಸರಕಾರ ಆದೇಶ ಹೊರಡಿಸುತ್ತಲೇ ಇದೆ. ಆಕಾಂಕ್ಷಿಗಳ ಪೈಕಿ ಕೆಲವರಿಗೆ ಸಂತಸವಾಗಿದ್ದರೆ ಹುದ್ದೆ ಸಿಗದವರಿಗೆ ನಿರಾಶೆ, ದುಃಖವೂ ಆಗಿರುವುದು ಸಹಜ. ಕೆಲ ನಿಗಮಗಳಿಗೆ ಅಧ್ಯಕ್ಷರಾದವರು ತಾವೇನೋ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿಬಿಟ್ಟೆವೇನೋ ಎಂಬಂತೆ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅಭಿಮಾನಿಗಳಿಂದ ಪುಟಗಟ್ಟಲೆ ಜಾಹೀರಾತು ಕೊಡಿಸಿ (ಅಥವಾ ತಾವೇ ಅಭಿಮಾನಿಗಳಿಗೆ ಕಾಸು ಕೊಟ್ಟು ಜಾಹೀರಾತು ಹಾಕಿಸಿಕೊಂಡು) ತಾನುಂಟೋ ಮೂರು ಲೋಕವುಂಟೋ ಎಂದು ಮೆರೆಯುತ್ತಿರುವುದನ್ನು ಕಂಡರೆ ಪ್ರಜ್ಞಾವಂತರಿಗೆ ಅಸಹ್ಯ, ಜಿಗುಪ್ಸೆ ಉಂಟಾಗದೆ ಇರದು. ಕೆಆರ್‌ಐಡಿಎಲ್ (ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಂ.ರುದ್ರೇಶ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಅವರಂತೂ ಪ್ರತಿನಿತ್ಯವೆಂಬಂತೆ ಪತ್ರಿಕೆಗಳಲ್ಲಿ ದೊಡ್ಡದೊಡ್ಡ ಜಾಹೀರಾತುಗಳ ಮೂಲಕ ಮಿಂಚುತ್ತಲೇ ಇದ್ದಾರೆ!
ಏನಾದರೊಂದು ಮಹತ್ವದ ಸಾಧನೆ ಮಾಡಿದಾಗ, ಅದು ನಾಲ್ಕು ಜನರಿಗೆ ತಿಳಿಯಲೆಂದು ಜಾಹೀರಾತು ಹಾಕಿಸಿಕೊಳ್ಳುವುದಕ್ಕೆ ಅರ್ಥವಿರುತ್ತದೆ. ಅದನ್ನು ತಪ್ಪು ಎಂದು ಯಾರೂ ಅಷ್ಟಾಗಿ ಹೇಳುವುದಿಲ್ಲ. ಆದರೆ ಈಗಿನ್ನೂ ಅಧ್ಯಕ್ಷರಾದ ಕೂಡಲೇ, ತಮಗೆ ವಹಿಸಿರುವ ನಿಗಮ-ಮಂಡಳಿಯ ಕಾರ್ಯವ್ಯಾಪ್ತಿ, ಮಾಡಬೇಕಾದ ಸಾಧನೆ, ಎದುರಿಗಿರುವ ಸವಾಲುಗಳ ಬಗ್ಗೆ ಒಂದಿನಿತೂ ತಿಳಿದುಕೊಳ್ಳದೆ ತಾವು ಅಧ್ಯಕ್ಷರಾಗಿದ್ದೇ ಮಹಾನ್ ಸಾಧನೆ ಎಂದು ಜಾಹೀರಾತಿನ ಮೂಲಕ ಬಿಂಬಿಸಿಕೊಳ್ಳುವುದು ಯಾವ ಸೀಮೆಯ ರಾಜಕೀಯ? ಭಾರೀ ಮೊತ್ತದ ಜಾಹೀರಾತಿಗೆ ಖರ್ಚು ಮಾಡಲು ಇವರಿಗೆ ಹಣ ಬರುವುದಾದರೂ ಎಲ್ಲಿಂದ? ಅದೂ ಅಲ್ಲದೆ ಈ ಅಧ್ಯಕ್ಷಗಿರಿಯೇನೂ ಶಾಶ್ವತವಲ್ಲ. ಈ ಸರಕಾರ ಒಂದು ವೇಳೆ ಪತನಗೊಂಡರೆ (ಹಾಗಾಗದಿರಲಿ!) ನಿಗಮ, ಮಂಡಳಿ ಅಧ್ಯಕ್ಷರೂ ರಾಜೀನಾಮೆ ನೀಡಿ ತಣ್ಣಗೆ ಮನೆಗೆ ಬರಬೇಕಾಗುತ್ತದೆ.
ಯಾವುದೇ ಸರಕಾರವಿರಲಿ, ನಿಗಮ ಮಂಡಳಿಗಳು ಅಂತಹ ಘನಂದಾರಿ ಸಾಧನೆ ಮಾಡಿದ ಒಂದೇ ಒಂದು ನಿದರ್ಶನ ಹುಡುಕಿದರೂ ಸಿಗುವುದಿಲ್ಲ. ಆದರೆ ಅವ್ಯವಹಾರ, ಗೋಲ್‌ಮಾಲ್ ಮಾಡಿ ಕಳಂಕ ತಂದ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ! ಇಷ್ಟೊಂದು ನಿಗಮ, ಮಂಡಳಿಗಳಿದ್ದರೂ ರಾಜ್ಯದ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಒಂದಿಂಚಿನಷ್ಟೂ ಆಗದಿರುವುದಕ್ಕೆ ಕಾರಣಗಳೇನು? ನಿಗಮ, ಮಂಡಳಿಗಳು ಅತೃಪ್ತ ರಾಜಕಾರಣಿಗಳ ʼಗಂಜಿಕೇಂದ್ರʼ ಆಗಿರುವುದಕ್ಕೆ, ಅಲ್ಲವೇ?
ಕೆಲ ಅತೃಪ್ತ ರಾಜಕಾರಣಿಗಳು ತಮಗೆ ಇಂತಹುದೇ ನಿಗಮ, ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಆಟವಾಡಿಸಿದ ಘಟನೆಯೂ ನಡೆದಿದೆ. ಶಾಸಕ ದುರ್ಯೋಧನ ಐಹೊಳೆ ಬೆಳಗ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾದರು. ಅದೇ ದಿನ ಸಂಜೆ ಆದಿಜಾಂಬವ ನಿಗಮಕ್ಕೆ ಅಧ್ಯಕ್ಷರಾಗಿ ಬದಲಾದರು. ಆರಂಭದಲ್ಲಿ ಖಾದಿ ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಐಹೊಳೆ ಅವರನ್ನು ನೇಮಿಸಲಾಗಿತ್ತು. ಆ ಹುದ್ದೆಯನ್ನು ತಿರಸ್ಕರಿಸಿ, ಅಂಬೇಡ್ಕರ್ ನಿಗಮವೇ ಬೇಕು ಎಂದು ಹಠ ಹಿಡಿದು ಪಡೆದುಕೊಂಡಿದ್ದರು. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ, ಅಧಿಕಾರಿಗಳಿಂದ ಶುಭಾಶಯವನ್ನೂ ಗಿಟ್ಟಿಸಿಕೊಂಡಿದ್ದರು. ಈಗ ಆದಿಜಾಂಬವ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ, ಮತ್ತೆ ಅಧಿಕಾರಿಗಳಿಂದ ಶುಭಾಶಯ ಗಿಟ್ಟಿಸಿಕೊಂಡಿದ್ದಾರೆ. ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯಲ್ಲಿ ಪೂರ್ವತಯಾರಿ, ದೂರದೃಷ್ಟಿ ಇಲ್ಲದಿರುವುದಕ್ಕೆ ಇದೊಂದು ದಿವ್ಯ ನಿದರ್ಶನ.
ಸದ್ಯ ದುರ್ಯೋಧನ ಐಹೊಳೆ ಪತ್ರಿಕೆಗಳಿಗೆ ತಾವು ನಿಗಮದ ಅಧ್ಯಕ್ಷನಾಗಿದ್ದಕ್ಕೆ ಜಾಹೀರಾತು ಕೊಟ್ಟಿರಲಿಲ್ಲವೆಂದು ಕಾಣುತ್ತದೆ. ಇಲ್ಲದಿದ್ದರೆ ಎರಡೆರಡು ನಿಗಮದ ಅಧ್ಯಕ್ಷರಾಗಿದ್ದಕ್ಕೆ ಬೇರೆಬೇರೆ ಜಾಹೀರಾತು ಪ್ರಕಟಿಸಬೇಕಾಗುತ್ತಿತ್ತು!
ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಅದೃಷ್ಟ
ಮಂಡಳಿ, ನಿಗಮ, ಪ್ರಾಧಿಕಾರದ ಸದಸ್ಯರ ನೇಮಕಾತಿಯಲ್ಲೂ ಯಾವುದೇ ಪಾರದರ್ಶಕತೆಯಾಗಲೀ, ಸದುದ್ದೇಶವಾಗಲೀ ಗೋಚರಿಸುವುದಿಲ್ಲ. ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿಗೆ ಸದಸ್ಯರಾಗಿರುವವರ ಪೈಕಿ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಕೂಡ ಒಬ್ಬರು. ಆದರೆ ಇವರು ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿಗೆ ಸದಸ್ಯರಾಗಿ ನೇಮಕವಾಗುವುದಕ್ಕೆ ಮೊದಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಸದಸ್ಯೆಯಾಗಿ ಸರಕಾರದಿಂದ ನೇಮಕಗೊಂಡಿದ್ದಾರೆ. ಒಬ್ಬರೇ ವ್ಯಕ್ತಿ ಹೀಗೆ ಮಂಡಳಿ ಹಾಗೂ ಪ್ರಾಧಿಕಾರ ಎರಡರ ಹುದ್ದೆಯಲ್ಲೂ ನೇಮಕಗೊಳ್ಳುವುದು ಸರಿಯೆ? ನೈತಿಕವಾಗಿ ತಪ್ಪಲ್ಲವೆ? ಕಾನೂನಿನಲ್ಲಿ ಅವಕಾಶವಿದೆಯೆ? ಇತ್ಯಾದಿ ಬಿಸಿಬಿಸಿ ಚರ್ಚೆಗಳು ಈಗ ಶುರುವಿಟ್ಟುಕೊಂಡಿವೆ. ಡಾ. ವಿಜಯಲಕ್ಷ್ಮೀಯವರೇ ಮೇಲೆ ಬಿದ್ದು ಪ್ರಾಧಿಕಾರ ಮತ್ತು ಮಂಡಳಿ ಎರಡಕ್ಕೂ ತಮ್ಮ ನೇಮಕಾತಿಯಾಗುವಂತೆ ಒತ್ತಡ ತಂದರೆ? ಆ ಒತ್ತಡಕ್ಕೆ ಮುಖ್ಯಮಂತ್ರಿಗಳು ತಲೆಬಾಗಿದರೆ? ಎಂಬ ಗುಮಾನಿಯೂ ಹುಟ್ಟಿಕೊಂಡಿದೆ. ಇವೆರಡೇ ಅಲ್ಲದೆ ಕೇಂದ್ರ ಸರಕಾರದ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ಗೂ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮವೇ ಬಿಜೆಪಿಯಲ್ಲಿದೆ. ಸಿ.ಟಿ.ರವಿ ಬಿಜೆಪಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾದ ಕೂಡಲೇ ಅಧ್ಯಕ್ಷಗಿರಿಯನ್ನು ಜೆ.ಪಿ. ನಡ್ಡಾ ಅವರಿಗೆ ವಹಿಸಿದರು. ಇದೇ ಮೇಲ್ಪಂಕ್ತಿಯನ್ನು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿಯವರೂ ಅನುಸರಿಸಬೇಕಿತ್ತಲ್ಲವೆ? ಇತರರಿಗೆ ಹಾಗಿರಬೇಕು ಹೀಗಿರಬೇಕು ಎಂದು ಬಹಳಷ್ಟು ಉಪದೇಶ ಮಾಡುವ ಅವರು, ತಾವು ಮಾತ್ರ ಇತರರಿಗೆ ಮಾದರಿಯಾಗಿರಬೇಕು ಎಂದು ಯಾಕೆ ಯೋಚಿಸುತ್ತಿಲ್ಲ?
ಪ್ರಭುದೇವ ಕಪ್ಪಗಲ್ಲು ದ್ವಿಪಾತ್ರಾಭಿನಯ
ಸಾಂಸ್ಕೃತಿಕ ಸಂಸ್ಥೆಗಳಾದ ಅಕಾಡೆಮಿ, ಪ್ರಾಧಿಕಾರ, ರಂಗಸಮಾಜ ಹಾಗೂ ರಂಗಾಯಣಗಳ ಪೈಕಿ ಒಂದು ಸಂಸ್ಥೆಗೆ ನೇಮಕ ಮಾಡಿದವರನ್ನು ಮತ್ತೊಂದು ಸಂಸ್ಥೆಗೆ ನೇಮಕ ಮಾಡುವಂತಿಲ್ಲ. ಹಾಗೆಯೇ ಒಂದೇ ಸಂಸ್ಥೆಗೆ ಸತತವಾಗಿ ಎರಡು ಅವಧಿಗೆ ಸದಸ್ಯರನ್ನಾಗಿಯೂ ನೇಮಿಸುವಂತಿಲ್ಲ ಎಂಬುದು ನಿಯಮ. ಆದರೆ ಸರಕಾರಕ್ಕೆ ತಾನೇ ರೂಪಿಸಿದ ಈ ನಿಯಮದ ಬಗ್ಗೆ ಗೌರವವೇ ಇಲ್ಲ! ಹಿರಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ ಹಾಗೂ ಪ್ರಭುದೇವ ಕಪ್ಪಗಲ್ಲು ಇವರಿಬ್ಬರನ್ನೂ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಆದರೆ ಅಷ್ಟರಲ್ಲಿ ಯಶವಂತ ಸರದೇಶಪಾಂಡೆ ಅವರನ್ನು ಕರ್ನಾಟಕ ವೃತ್ತಿರಂಗಭೂಮಿ ಶಾಲೆಯ ಅಧ್ಯಕ್ಷರನ್ನಾಗಿಯೂ ಪ್ರಭುದೇವ ಕಪ್ಪಗಲ್ಲು ಅವರನ್ನು ರಂಗ ಸಮಾಜದ ಸಹಸದಸ್ಯರಾಗಿಯೂ (ಕೋ-ಆಪ್ಟ್) ಇದೇ ಸರಕಾರ ನೇಮಕ ಮಾಡಿ ತಾನೇ ಇಲಾಖೆಯ ನಿಯಮವನ್ನು ಉಲ್ಲಂಘಿಸಿದೆ! ಯಶವಂತ ಸರದೇಶಪಾಂಡೆ ಆವರೇನೋ ನಾಟಕ ಅಕಾಡೆಮಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಲಾಖೆಯ ನಿಯಮವನ್ನು ಗೌರವಿಸಿದರು. ಆದರೆ ಪ್ರಭುದೇವ ಕಪ್ಪಗಲ್ಲು ಮಾತ್ರ ನಾಟಕ ಅಕಾಡೆಮಿಯ ಸದಸ್ಯ ಹಾಗೂ ರಂಗಸಮಾಜದ ಸಹ ಸದಸ್ಯರಾಗಿ ʼದ್ವಿಪಾತ್ರಾಭಿನಯʼ ಮುಂದುವರಿಸಿದ್ದಾರೆ!
ಇನ್ನು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕಗೊಂಡವರು ಹಿರಿಯ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ. ಬಿಜೆಪಿ ಸರಕಾರದಲ್ಲೂ ಅವರೇ ಮುಂದುವರಿದಿದ್ದರು. ಆದರೂ ಅವರು ಸಂಸ್ಕೃತಿ ಸಚಿವರಾಗಿದ್ದ ಸಿ.ಟಿ.ರವಿಯವರ ಸುತ್ತ ಠಳಾಯಿಸಿ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಳ್ಳುವಲ್ಲೂ ಯಶಸ್ವಿಯಾದರು! ಇಷ್ಟರಲ್ಲಿ ಧಾರವಾಡದ ಈರಣ್ಣ ಜಡಿ ಅವರನ್ನು ಸರಕಾರ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿಬಿಟ್ಟಿದೆ. ಕಿಕ್ಕೇರಿಯವರಿಗೆ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲವೆನ್ನಲಾಗುತ್ತಿದೆ. ಕಿಕ್ಕೇರಿಯವರು ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯರಾಗಿ ವಕ್ಕರಿಸಿಕೊಂಡಿರುವುದು ಅಕಾಡೆಮಿಯ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರಿಗೆ ಕಿರಿಕಿರಿ ಉಂಟು ಮಾಡಿದೆಯೆಂದು ಸುದ್ದಿ!
ಹೀಗೆ ಅಕಾಡೆಮಿ, ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೇಮಕಾತಿ ವಿಷಯದಲ್ಲಿ ಯಾವುದೇ ಸ್ಪಷ್ಟತೆ, ಗೊತ್ತುಗುರಿ, ಪಾರದರ್ಶಕತೆಗಳಿಲ್ಲದೆ ಲಂಗುಲಗಾಮು ಇಲ್ಲದಂತಾಗಿರುವುದು ಹಗಲಿನಷ್ಟು ಸ್ಪಷ್ಟ. ಹೀಗಾಗಿ ಅವಕಾಶವಾದಿಗಳ ಪಾಲಿಗೆ ನಿಗಮ, ಮಂಡಳಿ, ಪ್ರಾಧಿಕಾರ, ಅಕಾಡೆಮಿಗಳು ʼಸಿಕ್ಕವರಿಗೆ ಸೀರುಂಡೆʼಯಂತಾಗಿಬಿಟ್ಟಿದೆ.
ಸೈದ್ಧಾಂತಿಕ ನಿಷ್ಠೆ, ಮೌಲ್ಯ, ಪ್ರಾಮಾಣಿಕತೆಗೆ ಒಂದಿಷ್ಟಾದರೂ ಬೆಲೆ ಕೊಡುವ ಬಿಜೆಪಿ ಸರಕಾರದಲ್ಲಿ ಇಂತಹ ಅಧ್ವಾನಗಳು ಆಗಬಾರದಾಗಿತ್ತು.
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.