lead photo: pixabay from pexels
ಕೋಲಾರ: ರೈಲು ಬೋಗಿಗಳಲ್ಲಿ ಕೋಲಾರದ ಟೊಮೆಟೊವನ್ನು ಪಶ್ಚಿಮ ಬಂಗಾಳದ ಹೌರಾಕ್ಕೆ ಸಾಗಿಸುವ ರೈಲ್ವೆ ಇಲಾಖೆಯ ಉಪಕ್ರಮಕ್ಕೆ ಕೋಲಾರ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಇದರಿಂದ ರೈತರಿಗೆಷ್ಟು ಅನುಕೂಲವಾಗಲಿದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಬೆಳೆ ಮತ್ತು ಬೆಲೆಯಲ್ಲೂ ಯಾವಾಗಲೂ ರೈತರ ಪಾಲಿಗೆ ಕಣ್ಣಾಮುಚ್ಚಾಲೆ ಆಡುವ ಟೊಮೆಟೊಕ್ಕೆ ಈ ಮೂಲಕವಾದರೂ ಒಂದು ಸ್ಥಿರವಾದ ಬೆಲೆ ಸಿಗಲಿದೆ ಎಂಬ ನಂಬಿಕೆ, ಆಶಯ ರೈತರದ್ದು. ಆದರೆ, ಟೊಮೆಟೊವನ್ನು ಟ್ರೈನ್ ಲಿಫ್ಟ್ ಮಾಡುವುದು ಎಪಿಎಂಪಿ ಅಧಿಕಾರಿಗಳೋ ಅಥವಾ ಸದಾ ಲಾಭಕೋರ ಬುದ್ಧಿಯ ದಳ್ಳಾಳಿಗಳೋ ಎಂಬ ಪ್ರಶ್ನೆ ಎದ್ದಿದೆ.
ಹೀಗಿದ್ದರೂ; ಸಾಮಾನ್ಯ ಪ್ರಯಾಣಿಕರ ಬೋಗಿಗಳನ್ನೇ ಪರಿವರ್ತಿಸಿ ಅವುಗಳ ಮೂಲಕ ಕೋಲಾರದಿಂದ ಹೌರಾಕ್ಕೆ ಟೊಮೆಟೊವನ್ನು ಸಾಗಣೆ ಮಾಡಲು ಬೆಂಗಳೂರು ವಿಭಾಗೀಯ ರೈಲ್ವೆ ಮುಂದಾಗಿದ್ದು, ಒಂದು ವಾರದೊಳಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.
ಕೋಲಾರದ ರೈಲ್ವೆ ನಿಲ್ದಾಣದಲ್ಲಿ ರೈಲುಗಳಿಗೆ ಟೊಮೆಟೊವನ್ನು ತುಂಬಲಾಗುವುದು ಹಾಗೂ ಆ ರೈಲು ಬಂಗಾರಪೇಟೆ, ಚೆನ್ನೈ ಮೂಲಕ ಹಾದು 1956 ಕಿ.ಮೀ ದೂರದ ಹೌರಾವನ್ನು 34ರಿಂದ 36 ಗಂಟೆಗಳ ಅವಧಿಯಲ್ಲಿ ತಲುಪಲಿದೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆಯ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮ ಅವರು ನೀಡಿದ ಮಾಹಿತಿ ಹೀಗಿದೆ;
“ಪ್ರಯಾಣಿಕರ ಎರಡನೇ ದರ್ಜೆಯ ಬೋಗಿಗಳ (ಜಿ.ಎಸ್ ಕೋಚ್) ರೈಲುಗಳನ್ನೇ ಪರಿವರ್ತನೆ ಮಾಡಿ, ಅವುಗಳಲ್ಲಿ ಟೊಮೆಟೊ ಸಾಗಣೆ ಮಾಡುವುದು ನಮ್ಮ ಉದ್ದೇಶ. ಈ ಉದ್ದೇಶಕ್ಕೆ ಹತ್ತು ಬೋಗಿಗಳನ್ನು ಬಳಸಲು ರೈಲ್ವೆ ಮಂಡಳಿ ಅವಕಾಶ ನೀಡಿದೆ. ಜತೆಗೆ, ಒಂದು ಶೈತ್ಯಾಗಾರ ಇರುತ್ತದೆ. ಈ ಉದ್ದೇಶಕ್ಕಾಗಿ ಒಟ್ಟು 15 ಬೋಗಿಗಳನ್ನು ಪ್ರಾಯೋಗಿಕವಾಗಿ ಬಳಸಲಾಗುವುದು. ಮುಂದಿನ ವಾರದ ಹೊತ್ತಿಗೆ ಟೊಮೆಟೊ ಸಾಗಣೆ ಶುರುವಾಗಬಹುದು” ಎಂದಿದ್ದಾರೆ.
“ನಮ್ಮ ಪ್ರಯತ್ನದಿಂದ ರೈತರಿಗೆ ಅನುಕೂಲವಾಗುತ್ತದೆ. ಈಗಾಗಲೇ ರೈಲ್ವೆಯು ಗುಂತಕಲ್‌ಗೆ ಕಿಸಾನ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕಲ್ಪಿಸಿದೆ. ಅದೇ ಮಾದರಿಯಲ್ಲಿ ಕೋಲಾರದಿಂದ ಹೌರಾಕ್ಕೆ ಟೊಮೆಟೊವನ್ನು ಸಾಗಿಸಲಾಗುವುದು. ಕೋಲಾರ ಮತ್ತು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮೆಟೊವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ರೈತರು, ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜತೆ ಮಾತುಕತೆ ನಡೆಸಲಾಗುತ್ತಿದೆ. ನಮ್ಮ ಅಂದಾಜಿನ ಪ್ರಕಾರ, ಒಂದು ರೈಲಿನ 15 ಬೋಗಿಗಳಲ್ಲಿ ಸುಮಾರು ಹತ್ತು ಟನ್‌ಗೂ ಹೆಚ್ಚು ಟೊಮೆಟೊವನ್ನು ಸಾಗಿಸಬಹುದು. ಒಟ್ಟು 100 ಟನ್‌ನಷ್ಟು ಟೊಮೆಟೊ ಸಾಗಿಸಲಿದ್ದೇವೆ” ಎನ್ನುತ್ತಾರೆ ಶರ್ಮ.
ಈಗಷ್ಟೇ ಫಸಲು ಕೊಡಲು ಆರಂಭಿಸುತ್ತಿರುವ ಟೊಮೆಟೊ ತೋಟ. / CKPhotography ಸಿಕೆಪಿ@ckphotographi
ಹೊರಗೆ ಭಾರೀ ಬೇಡಿಕೆ
ಉತ್ತಮ ಗುಣಮಟ್ಟವುಳ್ಳ ಕೋಲಾರ ಟೊಮೆಟೊಗೆ ಉತ್ತರ, ಪೂರ್ವ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆ ಇದೆ. ಉತ್ತಮ ನೆಟ್‌ವರ್ಕ್ ಮಾಡಿಕೊಂಡರೆ ಪ್ರತಿಸಲವೂ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಾಡುತ್ತಿರುವ ಕೆಲಸ ಶ್ಲಾಘನೀಯ. ಈಗ ಕೋಲಾರ ಮಾರುಕಟ್ಟೆಗೆ ಸಾವಿರಾರು ಟನ್ ಟೊಮ್ಯಾಟೊ ಬರುತ್ತಿದೆ. ಒಂದು ಲಾರಿ ಲೋಡ್‌ನಲ್ಲಿ ಕಡಿಮೆ ಎಂದರೂ 100ರಿಂದ 160 ಟನ್ ಟೊಮ್ಯಾಟೊ ಇರುತ್ತದೆ. ಹೀಗಾಗಿ ರೈಲ್ವೆಯವರು ನಿತ್ಯವೂ ಟೊಮ್ಯಾಟೊ ಲಿಫ್ಟ್ ಮಾಡಿದರೆ ಉತ್ತಮ ಎನ್ನುತ್ತಾರೆ ಮಾಲೂರಿನ ರೈತ ಎಂ.ವಿ.ನಾರಾಯಣ ಸ್ವಾಮಿ.
ನಮ್ಮ ಅಕ್ಕಪಕ್ಕದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣವೂ ಸೇರಿದಂತೆ ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್, ಪಶ್ಚಿಮ ಬಂಗಾಳ ಹಾಗೂ ಹೊರ ದೇಶಗಳಾದ ಬಾಂಗ್ಲಾ ದೇಶ, ಆಪ್ಘಾನಿಸ್ತಾನ, ಮ್ಯಾನ್ಮಾರ್ ಸೇರಿ ಆಸಿಯಾನ್ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ರೈತರು ಬೆಳೆಯುವ ಟೊಮೆಟೊಗೆ ಉತ್ತಮ ಬೆಲೆ ಸಿಗಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಸಾಕಷ್ಟು ಟೊಮ್ಯಾಟೊ ಕೋಲಾರ ಮಾರುಕಟ್ಟೆಗೆ ಹೋಗುತ್ತಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಪ್ರಗತಿಪರ ರೈತ ಆರ್.ಆಂಜನೇಯ ರೆಡ್ಡಿ.
ಆದರೆ, ಆಂಜನೇಯ ರೆಡ್ಡಿ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ. “ಟ್ರೈನ್‌ಗೆ ಟಮ್ಯಾಟೊವನ್ನು ಯಾರು ಲಿಫ್ಟ್ ಮಾಡುತ್ತಾರೆ? ಎಪಿಎಂಪಿಸಿ ಅಧಿಕಾರಿಗಳಾ? ರೈಲ್ವೆ ಅಧಿಕಾರಿಗಳಾ? ಅಥವಾ ಮಂಡಿ ಮಾಲೀಕರಾ? ಅದೇ ರೀತಿ, ಇಲ್ಲಿಂದ ಹೋಗುವ ಟೊಮ್ಯಾಟೊವನ್ನು ಹೌರಾದಲ್ಲಿ ಯಾರು ಖರೀದಿ ಮಾಡುತ್ತಾರೆ? ಎಂಬುದು ರೈತರಿಗೆ ಎಂಬುದು ಗೊತ್ತಾಗಬೇಕು. ಯಾಕೆಂದರೆ, ಟೊಮೆಟೊ ಮಂಡಿ ಮಾಲೀಕರು ಬೆಳೆಗಾರರ ಮೇಲೆ ಉಕ್ಕಿನ ಹಿಡಿತ ಸಾಧಿಸಿದ್ದಾರೆ. ಗ್ರಾಹಕನಿಗೆ ಬೆಲೆ ಬರೆ ಬೀಳುತ್ತಿದೆ. ರೈತನಿಗೆ ಮಾತ್ರ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಈ ಕೊಳಕನ್ನು ಮೊದಲು ಸರಕಾರ ಸ್ವಚ್ಛ ಮಾಡಬೇಕು. ಮಂಡಿ ಮಾಲೀಕರು ಬೆಲೆ ನಿಗದಿ ಹೇಗೆ ಮಾಡುತ್ತಾರೆ? ಅವರ ನೆಟ್‌ವರ್ಕ್ ಏನು? ಗೊತ್ತಾಗಬೇಕು. ಮುಖ್ಯವಾಗಿ ಮಂಡಿ ಮಾಲೀಕರ ಮೇಲೆ ಸರಕಾರಕ್ಕೆ ನಿಯಂತ್ರಣವೇ ಇಲ್ಲ. ಮಂಡಿ ಮಾಲೀಕರು ತೋಟಗಳಿಗೇ ನುಗ್ಗಿ ಖರೀದಿ ಮಾಡುತ್ತಿದ್ದಾರೆ” ಎನ್ನುತ್ತಾರೆ ಅವರು.
ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಆ ಪೈಕಿ ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 8ರಿಂದ 10 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಜತೆಗೆ, ಪ್ರತಿವರ್ಷವೂ ಈ ಜಿಲ್ಲೆಯಲ್ಲಿ 4 ಲಕ್ಷ ಟನ್‌ಗೂ ಹೆಚ್ಚು ಪ್ರಮಾಣದ ಟೊಮೆಟೊ ಬೆಳೆ ಬೆಳೆಯಲಾಗುತ್ತದೆ ಎನ್ನುತ್ತಾರೆ ಕೋಲಾರ ತಾಲ್ಲೂಕಿನ ರೈತ ಬಾಬು.
ಹೌರಾಕ್ಕೆ ಏಕೆ?
ಕೊಲ್ಕತಾದ ಹೌರಾ ರೈಲು ನಿಲ್ದಾಣವು ಪಶ್ಚಿಮ ಬಂಗಾಳ ಮಾತ್ರವಲ್ಲ, ಪೂರ್ವ ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್. ಈಶಾನ್ಯ ಭಾರತದ ಎಲ್ಲ ರಾಜ್ಯಗಳಿಗೆ, ಬಾಂಗ್ಲಾ ದೇಶಕ್ಕೆ ಇಲ್ಲಿಂದ ಉತ್ತಮ ಸಂಪರ್ಕ ಜಾಲವಿದೆ. ಇದನ್ನು ಗೇಟ್ ವೇ ಆಫ್ ಈಸ್ಟ್ ಇಂಡಿಯಾ ಅಥವಾ ಗೇಟ್ ವೇ ಆಫ್ ವೆಸ್ಟ್ ಬೆಂಗಾಲ್ ಎಂದು ಕರೆಯಲಾಗುತ್ತಿದೆ. ಬೆಂಗಳೂರಿನಿಂದ ಹೌರಾಕ್ಕೆ ಅತ್ಯುತ್ತಮ ರೈಲು ಸಂಪರ್ಕ ಜಾಲವಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾ ದೇಶದಲ್ಲಿ ಕೋಲಾರದ ಟೊಮೆಟೊಗೆ ಸಿಕ್ಕಾಪಟ್ಟೆ ಡಿಮಾಂಡ್ ಇದೆ.