- ಓ ನನ್ನ ಚೇತನ ಆಗು ನೀ ಅನಿಕೇತನ… ಎಂದು ವಿಶ್ವಮಾನವತೆಯನ್ನು ಪ್ರತಿಪಾದಿಸಿದ ಜಗದಕವಿ ಯುಗದಕವಿ ರಸ ಋಷಿ ಕುವೆಂಪು ಅವರು ಕನ್ನಡದ ಅನನ್ಯ ಸಾಂಸ್ಕೃತಿಕ ಪ್ರಜ್ಞೆ ಮನುಜಮತ ವಿಶ್ವಪಥವಾಗಬೇಕೆಂದು ಹಾರೈಸಿ ಸರ್ವೋದಯ ಸಮನ್ವಯ ಪೂರ್ಣದೃಷ್ಠಿಯ ಮೂಲಕ ಜೀವನಪ್ರೀತಿಯ ಬದುಕು ಸಾಧ್ಯವಾಗಬೇಕೆಂದು ಹಂಬಲಿಸಿದ ಮಹಾಮಾನವತಾವಾದಿ… “ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ” “ಶ್ರೀ ಸಾಮಾನ್ಯನೆ ಭಗವದ್ ಮಾನ್ಯಂ” “ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ” ಎಂದೆಲ್ಲಾ “ವಿಚಾರಕ್ರಾಂತಿಗೆ ಆಹ್ವಾನ” ನೀಡಿದ ಕುವೆಂಪು ಕನ್ನಡದ ಮೊದಲ ಜ್ಞಾನಪೀಠ ಪರಸ್ಕೃತರು.. “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂದು ಅಖಂಡ ಕರ್ನಾಟಕದ ಕನಸುಕಂಡು… “ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂದು ರಾಷ್ಟ್ರದ ಐಕ್ಯತೆಯ ಗೀತೆ ಹಾಡಿ ರೈತನನ್ನು ನೇಗಿಲಯೋಗಿ ಎಂದು ಗುರುತಿಸಿದ ದಾರ್ಶನಿಕ, ಮಹಾಕವಿ, ಸಂತ ಕುವೆಂಪು. ಇಂದು ಕುವೆಂಪು ಅವರ 116ನೇ ಜನ್ಮದಿನ. ಜಾನಪದ ಚಿಂತಕ ಡಾ. ನಯಾಜ್ ಅಹಮದ್ ನಮಗೆ ಜಗದ ಕವಿಯನ್ನು ಬಹಳ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.
photo courtesy: Wikipedia
***
ಯಾರೋ ಒಮ್ಮ ಸಾಕ್ರೇಟಿಸ್‌ನನ್ನು ಕೇಳುತ್ತಾನೆ…..ತಾನು ಯಾವ ದೇಶದವದವನೆಂದು ಹೇಳಿಕೊಳ್ಳುತ್ತಾನೆಂದು.
ಸಾಕ್ರೆಟೀಸ್ ಆ ಪ್ರಶ್ನೆಗೆ ಉತ್ತರಿಸಿದನಂತೆ…”ನಾನು ಜಗತ್ತಿನವನು”. ನಿಜ ಸಾಕ್ರೆಟೀಸ್ ಗ್ರೀಕ್ ದೇಶದಲ್ಲಿ ಹುಟ್ಟಿ ಬೆಳೆದರೂ ಆತ ವಿಶ್ವದ ನಿವಾಸಿ, ಜಗದ ಚಿಂತಕ, ಜಗತ್ತಿನ ಪ್ರಜೆ, ಜಗದ ನಿವಾಸಿ.
ಎಲ್ಲಾ ಎಲ್ಲೆಗಳನ್ನು ಮೀಟಿ ಬೆಳೆದ ಭಾವದೀಟಿ ಆತ. ತನ್ನ ಚಿಂತನೆಗಳು ಒಂದು ರೀತಿಯಲ್ಲಿ ಹರಿವ ನದಿಯಾಗಿಸಿದಾತ. ಬೀಸುವ ಗಾಳಿಯಾಗಿಸಿದಾತ. ನಭಕೂ-ಭೂಮಿಗೂ ತಾನು ಸಂಬಂಧಿಸಿದವನೆಂದುಕೊಂಡವ. ಅಂದರೆ ಒಂದು ಸಣ್ಣ ಭೂಮಿಯ ತುಂಡಾದ ಒಂದು ದೇಶ, ಒಂದು ರಾಜ್ಯ, ಒಂದು ಪ್ರಾಂತ್ಯ, ಒಂದು ಗಲ್ಲಿಗೆ ಮಾತ್ರ ಸೀಮಿತವಾಗಲಿಲ್ಲ. ಗ್ರೀಕ್‌ನ ಸಂಸ್ಕೃತಿ ನರನಾಡಿಗಳಲ್ಲಿ ಹರಿದಾಡುತ್ತಿದ್ದರೂ ಆತನ ಸ್ತಿತ ಪ್ರಜ್ಞೆ ಮಾತ್ರ ವಿಶ್ವವ್ಯಾಪಿಯಾಗಿತ್ತು.
ಕುವೆಂಪು ಹಾಗೆಯೇ.
“ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ;
ರಾಜನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,”
ಕನ್ನಡಮ್ಮನ ಬೆಳಕು ಬಗ್ಗಿ”
(ಕೋಗಿಲೆ ಮತ್ತು ಸೋವಿಯಟ್ ರಷ್ಯಾ) ಎಂಬ ವಾಣಿಯಿಂದ ಕನ್ನಡದ ಏಕೀಕರಣಕ್ಕಾಗಿ ಹಂಬಲಿಸಿದ ಮನುಷ್ಯ. ಕನ್ನಡ ಮತ್ತು ಕರ್ನಾಟಕದ ಅಖಂಡತ್ವದ ಕನಸು ಕಂಡವರು. ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಶ್ರೇಷ್ಠ ಎಂದು ಬದುಕಿದವರು, ತಮ್ಮ ಚಿಂತನೆಗಳನ್ನು ಹೊರಹಾಕಿದವರು.
ಅದೇ ಕುವೆಂಪು ಮುಂದುವರಿದು,
“ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೋಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ”
(ಪ್ರಾರ್ಥನಾ ಗೀತಾಂಜಲಿ) ಎಂದು ಹೇಳಿದ್ದಾರೆ. ಸಹಜ ಇಲ್ಲಿ ಕುವೆಂಪುರವರ ಬಗೆಗೆ ಜನ ಸಾಮಾನ್ಯರಲ್ಲಿ ಒಂದು ಗೊಂದಲ ಮೂಡುವುದು ಸಹಜ. ಇದು ಮನಸ್ಸಿನ ಭಾವನೆಗಳ ಮೂಲವೂ ಹೌದು. ಹಲವು ಪ್ರಶ್ನೆಗಳ ಸಮಾಗಮವೂ ಹೌದು. ಸಾಮಾನ್ಯರಲ್ಲಿ ಇದು ಗೊಂದಲ ಮೂಡಿಸುವುದೂ ಹೌದು.
ಆದರೆ ಇಲ್ಲಿಯೇ ನಾವು ಕುವೆಂಪುರವರನ್ನು ಅರ್ಥ ಮಾಡಿಕೊಳ್ಳಬೇಕಾದದ್ದು. ಕುವೆಂಪುರವರದ್ದು ಸಾಕ್ರೇಟಿಸ್ ನಂತೆಯೇ, ಕವಿ ರವೀದ್ರರಂತೆಯೇ ವಿಶ್ವಪಥ, ಮನುಜ ಮತ. ಅದೇ ಚಿಂತನೆಗಳು ಕುವೆಂಪುರವರನ್ನು ವಿಶ್ವಮಟ್ಟದ ಕವಿಗಳ ಸಾಲಿನಲ್ಲಿ ನಿಲ್ಲಿಸುತ್ತದೆ. ಕರ್ನಾಟಕ ಮತ್ತು ಕನ್ನಡದ ಅಸ್ಮತತೆಯನ್ನು ಹಾಗೆಯೇ ಉಳಿಸಿಕೊಂಡು ಜಾಗತಿಕ ಸ್ಥಿತಪ್ರಜ್ಞೆಯನ್ನು ಪ್ರಚುರ ಪಡಿಸುವ ವಿಧಾನ ನಾವು ಕುವೆಂಪುರವರಿಂದ ಕಲಿಸಯಬೇಕಿದೆ.
ನಿಜ ಇಂದು ನಮ್ಮಗಳ ಸುತ್ತಲೂ ಒಂದು ಪ್ರಭಾವಳಿಯನ್ನು ನಿರ್ಮಿಸಿಕೊಳ್ಳಲು ಹಪಿಸುತ್ತಿದ್ದೇವೆ. ನಮ್ಮ ಪ್ರತಿ ಹೆಜ್ಜೆಯೂ ಅದರ ಸುತ್ತಲೇ ಗಿರಕಿಹೊಡೆಯುವಂತೆ ಬದಲಾಗುತ್ತಿದ್ದೇವೆ. ಯಾವ ವರವೋ, ಯಾವ ಪುರಾಣದಲ್ಲಿ ಇದೆಯೋ ನಾನು ಕಾಣೆ. ನಮ್ಮ ನಡುವೆ , ನಮ್ಮ ಪಕ್ಕದಲ್ಲಿಯೇ ಇಲ್ಲಿಯೇ ಈ ಪ್ರಭಾವಳಿಯನ್ನು ನಿರ್ಮಿಸಿಕೊಂಡು ಗಟ್ಟಿ ತಳ ಊರಿದ್ದೇವೆ ಅನಿಸುತ್ತದೆ.
ಆ ಪ್ರಭಾವಳಿಯಿಂದ ನಾವು ಹೊರಗೆ ಬರಲಾಗುತ್ತಿಲ್ಲ, ಅದಕ್ಕೇ ಕುವೆಂಪುರವರು ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ. ಇಲ್ಲಿ ಕುವೆಂಪುರವರು ಕನ್ನಡತನಕ್ಕೆ ಗಟ್ಟಿಧ್ವನಿ ನೀಡಿದ್ದರೂ ವಿಶ್ವ ಸಂದೇಶವನ್ನು ನೀಡಿದ ಅಪರೂಪದ ಕವಿ. ಪ್ರತಿಯೊಂದು ವಸ್ತುವಿನ ರಚನೆಗೂ ಅಣುಗಳು ಮುಖ್ಯ. ಅಣುವು ಕಣಗಳಿಂದ ತುಂಬಿದೆ. ಅಣುಗಳು ಒಂದಾದದರೆ ಕಣ, ಕಣಗಳು ಮುಷ್ಠಿಯಾದರೆ ವಸ್ತು. ಇದೇ ಕುವೆಂಪುರವರ ಆದರ್ಶ ಮತ್ತು ಸರ್ವಕಾಲಿಕ ಸತ್ಯ.
ಕನ್ನಡತನದ ಬಗ್ಗೆ ಕುವೆಂಪುರವರದ್ದು ಕೂಪ ಮಂಡೂಕ ದೃಷ್ಠಿಕೋನವಲ್ಲ, ವೃಷ್ಟಿ ಪ್ರಾಮುಖ್ಯವನ್ನು ಎತ್ತಿ ಹಿಡಿಹಿಡಿಯುವ ಭರದಲ್ಲಿ ಸಮಷ್ಟಿ ದೃಷ್ಠಿ ಎಂದಿಗೂ ಅವರಿಂದ ಮರೆಯಾಗಿಲ್ಲ. ಅಣು ಅನಂತದ ಅಂಶ. ಅನಂತವೆಂಬುದು ಅಣುಗಳ ಕಣಜ. ತೋಡಿದಷ್ಟೂ ತುಂಬಿಕೊಳ್ಳುವುದು ಅನಂತದ ಗುಣ. ವ್ಯಷ್ಠಿಯಲ್ಲಿ ಸಮಷ್ಠಿಯನ್ನು ಸಮಷ್ಠಿಯಲ್ಲಿ ವ್ಯಷ್ಠಿಯನ್ನೂ ಕಾಣುವುದು ಕುವೆಂಪು ರವರ ವಿಧಾನ. ಕರ್ನಾಟಕವಾದರೂ ಸಮಷ್ಠಿ ಲೋಕದ ವ್ಯಷ್ಠಿ ಸತ್ವ; ಜೀವ ಸಂತಾನ ಸಾಗಣೆಗೆ ಸಾಧಕವಾದ, ಅದರ ಮೂಲ ಸಾಮಗ್ರಿಯಾದ, ಜೀವಿಯ ಎಲ್ಲಾ ಗುಣಧರ್ಮಗಳನ್ನೂ ತನ್ನ ಅಣುಗರ್ಭದಲ್ಲಿ ಅಡಗಿಸಿಟ್ಟುಕೊಂಡಿರುವ ಜೀನ್‌ಗಳ ತರಹದ್ದು. ಈ ಅರಿವು ಕವಿಯಲ್ಲಿ ಸದಾ ಜಾಗೃತವಾಗಿರುವುದರಿಂದಲೇ ಅವರು ಹೀಗೆ ಹೇಳುತ್ತಾರೆ: “ನೀ ಮೆಟ್ಟುವ ನೆಲ-ಅದೇ ಕರ್ನಾಟಕ; ನೀ ನೇರುವ ಮಲೆ-ಸಹ್ಯಾದ್ರಿ.”
“ಪಂಪನಂನ್ನೋದುವ ನಾಲಗೆ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ಕುಮಾರವ್ಯಾಸನನ್ನಾಲಿಸ ಕಿವಿ ಆಂಡಿಸ್ ಪರ್ವತವನ್ನು ಏರುತ್ತಿದ್ದರೂ ಅದು ಸಹ್ಯಾದ್ರಿಯೆ.”. ಕರ್ನಾಟಕದ ವಿಸ್ತಾರ ನಿರ್ದಿಗಂತವಾದ್ದು; ಅದರ ಊನ್ನತ್ಯ ನಿಶ್ಚಿಖರವಾದದ್ದು.
ಹೀಗೆ ಸಾಮಾನ್ಯರ ಮಾತಿನಲ್ಲಿ ಸಂಕುಚಿತವೂ ಸ್ವಾರ್ಥಪೂರಿತವೂ ದ್ವೇಷಯುಕ್ತವೂ ಆಗಬಹುದಾದ ಭಾವನೆ, ಇವರ ಸ್ಪರ್ಷದಿಂದ ಎಲ್ಲಾ ಸಂಕುಚಿತತೆಯ ಸೀಮೋಲ್ಲಂಘನೆ ಮಾಡಿ ವಿಶ್ವ ವ್ಯಾಪಿಯಾಗುತ್ತದೆ. ಮಿಸಿಸಿಪಿಯ ನೀರನ್ನೀಂಟುತ್ತದೆ, ಆಂಡೀಸ್ ಪರ್ವತ ಶಿಖರವನ್ನೇರುತ್ತದೆ. ಇದು ಕುವೆಂಪು ಕಾಣ್ಕೆಯ ವಿಶಿಷ್ಟತೆ.
ಇದೇ ದೃಷ್ಟಿಯಲ್ಲಿ ಕುವೆಂಪುರವರನ್ನು ನಾವುಗಳು ಅರ್ಥೈಸಿಕೊಳ್ಳಬೇಕಿದೆ. ಸಂಕುಚಿತತೆಯಿಂದ ಹೊರಬರಬೇಕಿದೆ. ಬದಲಾದ ಸನ್ನಿವೇಶದಲ್ಲಿ ನಮ್ಮಗಳ ಚಿಂತನೆಗಳು ಒಂದು ಸೀಮಿತ ದೃಷ್ಟಿಕೋನಕ್ಕೆ ಸೀಮಿತವಾಗುತ್ತಾ ಹೋಗುತ್ತಿವೆ. ನಮ್ಮಲ್ಲಿ ಪ್ರಾಂತೀಯ ಮನೋಭಾವನೆಗಳು, ಧಾರ್ಮಿಕ ಮನೋಭಾವನೆಗಳು, ಜಾತಿ ಮನೋಭಾವನೆಗಳೂ ಕೇಂದ್ರೀಕೃತವಾಗುತ್ತಿವೆ. ಅವುಗಳ ನೆಲೆಯಲ್ಲಿಯೇ ನಮ್ಮ ಚಿಂತನೆಗಳು ರೂಪಗೊಳ್ಳುತ್ತಿವೆ.
ನಾಡು-ನುಡಿಯೆಂಬುದು ಭಾವನಾತ್ಮಕ ವಿಚಾರವಾಗುತ್ತಿವೆ. ಅವುಗಳ ಹೆಸರಿನಲ್ಲಿ ಮಾರಣಹೋಮಗಳೂ ನಡೆಯುತ್ತಿವೆ. ನಮ್ಮತನದ ವೈಭವ ಬೇಕೇ ಬೇಕು ಆದರೆ ಇತರರ ಅವಹೇಳನ ಎಂದಿಗೂ ಸಲ್ಲ ಎಂಬ ಕನಿಷ್ಠ ಪ್ರಜ್ಞೆಯಿಂದಲೂ ನಾವು ದೂರವಾಗಿ ಬದುಕುತ್ತಿದ್ದೇವೆ. ಆದರೆ ಕುವೆಂಪುರವರ ವಿಚಾರದಲ್ಲಿ ಅಣುವಿನಿಂದ ಸಮಷ್ಠಿ ಎಂಬುದು ನಾವು ಅರ್ಥೈಸಿಕೊಳ್ಳಬೇಕಿದೆ. ಕನ್ನಡತನವನ್ನು ಕಾಪಿಟ್ಟುಕೊಂಡು, ಕರ್ನಾಟಕವನ್ನೂ ಬಿಗಿದಪ್ಪಿಕೊಂಡು ಇತರರನ್ನೂ ಅಪ್ಪಿಕೊಳ್ಳಬೇಕಾದ ಶ್ರೀಮಂತ ದೃಷ್ಠಿ ನಮಗೆ ಬರಬೇಕಿದೆ. ‘ಜಯಹೇ ಕರ್ನಾಟಕ ಮಾತೆಯಾದರೂ ಮೊದಲು ಜಯಭಾರತ ಜನನಿಯ ತನುಜಾತೆ’ ಎಂಬುದು ನಾವು ಮರೆಯಬಾರದು. ಅಖಂಡ ಕರ್ನಾಟಕ ಎಂದರೆ ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಫಾರಸಿಕ ಜೈನರ ಉದ್ಯಾನ. ಜಾತಿ-ಧರ್ಮ-ಭಾಷೆಗಳನ್ನು ಮೀರಿದ ಅಖಂಡತ್ವ. ಒಂದು ಗಟ್ಟಿ ಚಿಂತನೆ. ಈ ಅಖಂಡತ್ವವೇ ಈ ನಾಡಿನ ಧೀ ಶಕ್ತಿ. ಅದು ಸಡಿಲಗೊಂಡರೆ ಕನ್ನಡವೂ ಇಲ್ಲ, ಕರ್ನಾಟಕವೂ ಇಲ್ಲ ಎಂಬುದನ್ನು ನಾವುಗಳು ಮನಗಾಣಬೇಕಿದೆ.
ಸುಂದರ ಕರ್ನಾಟಕವೆಂದರೆ ಜುಟ್ಟಿಗೆ ಹೂ ಮುಡಿಯುವುದಲ್ಲ, ತುಳುವ, ಕೊಡವ, ಕನ್ನಡವ ಒಂದಾಗಿ ಬಾಳುವ, ಆ ಮೂಲಕ ನಗುವ ಒಂದು ಸುಂದರ ನಗು. ಕನ್ನಡೀಕರಣಗೊಳ್ಳುವ ಒಂದು ಸುಂದರ ಪರಿ. ಎಲ್ಲರನ್ನೂ ಪ್ರೀತಿಸುವ, ಎಲ್ಲವನ್ನೂ ಸ್ವೀಕರಿಸುವ, ದ್ವೇಷ, ಅಸೂಯೆ, ದುರಂಕಾರಗಳನ್ನು ತ್ಯಜಿಸುವ ಋಷಿ ವಾಕ್ಯ. ಪ್ರೀತಿಯಿಂದ ಹುಲಿ ಸಿಂಹಗಳನ್ನೂ ತನ್ನತ್ತ ಸೆಳೆಯುವ ಶಕ್ತಿ ಹೊಂದಿದ ಮನುಷ್ಯನಲ್ಲಿ ಮನುಷ್ಯನನ್ನು ಕಂಡರೆ ದ್ವೇಷಿಸುವ ಗುಣವೇಕೋ ತಿಳಿಯದು. ಅದಕ್ಕೆ ಕುವೆಂಪುರವರ ಮಾತುಗಳಲ್ಲಿ ಸ್ಪಷ್ಟ ಧಿಕ್ಕಾರವಿದೆ.
ಹೇಳಿಕೇಳಿ ನಾವು ಗಡಿಯವರು. ಕನ್ನಡದೊಂದಿಗೆ ತೆಲುಗನ್ನೂ ಸೇರಿಸಿಕೊಂಡು ಬದುಕು ಸವೆಸುತ್ತಿರುವ ಜನರು. ಇಲ್ಲಿಯೂ ಕುವೆಂಪುರವರ ಚಿಂತನೆಗಳು ಮೌಲಿಕವಾಗುತ್ತವೆ. ಕನ್ನಡದ ಅಭಿವೃದ್ಧಿ ಅಥವಾ ಕರ್ನಾಟಕದ ಅಭಿವೃದ್ಧಿ ಎಂದರೆ ಅದು ಬರಿಯ ಮಾತಲ್ಲ, ಅಥವಾ ಕನ್ನಡ ಗೀತೆ ಕೇಳುವ ಅಥವಾ ಕನ್ನಡ ಚಿತ್ರ ನೋಡುವ ಜಾಯಮಾನವಲ್ಲ, ಬದಲಿಗೆ ಸರ್ವಭೌಮತ್ವದ ಮಾತುಗಳು. ಸಾರ್ವಭೌಮನೆಂದರೆ ದೊರೆ, ರಾಜ, ಚಕ್ರವರ್ತಿ. ಅಂದರೆ ಸಕಲ ಸೌಕರ್ಯಗಳನ್ನು ಹೊಂದಿ ಅಭಿವೃದ್ಧಿಯ ಪಥದಲ್ಲಿ ನಗೆ ಬೀರುವ, ಸರ್ವ ಸುಖಗಳನ್ನು ಅನುಭಿಸಿಕೊಂಡು ನೆಮ್ಮದಿಯ ಜೀವನವನ್ನು ಮಾಡುವವನೆ ಕನ್ನಡಿಗ. ಕರ್ನಾಟಕದಲ್ಲಿ ಕನ್ನಡಿಗರಿಗೆ ಯಾವುದೇ ಲೋಪವಾಗಬಾರದು, ಸುಖ ಶಾಂತಿ ನೆಮ್ಮದಿಗಳು ಬೇಕು. ಇಲ್ಲಿನ ನೆಲೆ, ಜಲದ ಮೇಲೆ ಆತನಿಗೆ ಅಧಿರಾವಿರಬೇಕು, ಎಲ್ಲಾ ಸಂಪತ್ತುಗಳಿಗೂ ಆತ ಒಡೆಯನಾಗಿರಬೇಕು. ಬದುಕು ಹಸನಾಗಬೇಕು, ಜೀವನ ಶೈಲಿ ಉತ್ತಮವಾಗಬೇಕು, ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು, ಹಸಿದ ಹೊಟ್ಟೆಗಳಿಗೆ ಅನ್ನವೀಯಬೇಕು, ಉತ್ತಮ ಉದ್ಯೋಗ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ಸಮಾನತೆ, ಪ್ರೀತಿ, ಪ್ರೇಮ, ವಿಶ್ವಾಸ, ಗಣತಂತ್ರ ವ್ಯವಸ್ಥೆ, ಸಂವಿಧಾನಾತ್ಮಕ ರಕ್ಷಣೆ ಎಲ್ಲವೂ ಈ ನೆಲೆದೊಡೆಯನಿಗೆ ಸಿಗಬೇಕು, ಅದುವೇ ಸಮಗ್ರ ಕರ್ನಾಟಕ, ಸಮರ್ಥ ಕರ್ನಾಟಕ, ಅಭಿವೃದ್ಧಿಯ ಕರ್ನಾಟಕ ಎಂಬ ಕುವೆಂಪು ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ಚೋರರು, ಭಿಕ್ಷುಕರು, ಕೂಲಿ-ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು ಎಲ್ಲರನ್ನೂ ಹೊತ್ತ ನೆಲವಿದು. ಎಲ್ಲರಿಂದಲೂ ಕಟ್ಟುವ ನಾಡಿದು, ದೇಶವಿದು, ವಿಶ್ವವಿದು. ಇಲ್ಲಿ ಪ್ರತಿಯೊಂದಕ್ಕೂ ಒಂದೊಂದೊಂದು ಕೊಂಡಿಯಿದೆ. ಒಂದಕ್ಕೊಂದು ಭಾವನೆಗಳನ್ನು ಸಂಬಂಧಗಳನ್ನು ಬೆಸೆದುಕೊಂಡಿವೆ. ಎಲ್ಲರೂ ಕೂಡಿದರೆನೇ ಜಗತ್ತು. ಇದೇ ಭಾವನೆ ಕುವೆಂಪುರವರ ಆದರ್ಶ ಮತ್ತು ಆಶಯ.
ಕಾರ್ಮಿಕರಿಲ್ಲದೆ ಚಿನ್ನದ ಆಭರಣಗಳನ್ನು ಯಾರು ತಯಾರಿಸುತ್ತಿದ್ದರು. ರೈತರೇ ಇಲ್ಲವೆಂದ ಮೇಲೆ ಸಾಮ್ರಾಜ್ಯದ ಜನರಿಗೆ ಅನ್ನವನ್ನು ಯಾರು ಉತ್ಪಾದಿಸುತ್ತಿದ್ದರು. ಜಲಗಾರರೇ ಇಲ್ಲದ ಮೇಲೆ ಸುಂದರ ನಗರವನ್ನು ಯಾರು ಹಾಗೆಯೇ ಸುಂದರವಾಗಿ ಇಡುತ್ತಿದ್ದರು. ಅಗಸ, ನಾಯಿಂದ, ಜಾಡಮಾಲಿ, ಕಮ್ಮಾರ, ಕುಂಬಾರ, ಚಮ್ಮಾರ, ದರ್ಜಿ, ಹೊಲೆಯ, ಶೆಟ್ಟಿ, ಬೆಸ್ತ, ಕಾವಾಡಿಗ, ಹೂವಾಡಿಗ, ಹಾವಾಡಿಗ, ತೋಟಿ, ತಲಾರಿ ಇವೇ ಹತ್ತು ಹಲವು ಕುಲಗಳು ಕರ್ನಾಟಕದ ಹೆಮ್ಮೆ. ರಾಗಿ ಮುದ್ದೆ, ಬಸ್ಸಾರು, ಜೋಳದ ರೊಟ್ಟಿ ಕುಂಡ್ಲಿ ಪಲ್ಯ, ದಾಲ್ ತಡ್ಕಾ ರೋಟಿ, ಢೋಕ್ಲಾ ಎಲ್ಲವೂ ಸೇರಿದರೆ ಈ ನಾಡು
.
“ನಿನ್ನದೆ ನೆಲ, ನಿನ್ನದೆ ಹೊಲ
ನಿನ್ನದೇ ಕಾನ್ ನಿನ್ನದೇ ಬಾನ್
ನಿನ್ನದೆ ನುಡಿ ನಿನ್ನದೆ ಗುಡಿ
ನಿನ್ನದೆ ಹೊಳೆ ನಿನ್ನದೆ ಬೆಳೆ”
ಎನ್ನುವ ಕುವೆಂಪು ರವರನ್ನು ಇನ್ನಾದರೂ ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ.
“ನಿನ್ನಿಚ್ಛೆ ನೆರವೇರಲಿ! ಕವಿಯಾಸೆ ಕೈಸೇರಲಿ!
ಬೇಗ ಲೋಕಕೆ ಶಾಂತಿ ಮೈದೋರಲಿ! ಸರ್ವರಿಗೆ,
ತಾರತಮ್ಯಗಳಳಿದು, ಸ್ವಾತಂತ್ರ್ಯ ಸಮತೆಗಳ್
ಸಿದ್ಧಿಯಾಗಲಿ, ಸಾಧಿಸಲ್ ಪರಮಪುರುಷಾರ್ಥಮಂ!
ಹೀಗೆ ತಾರತಮ್ಯವಿಲ್ಲದ, ಸ್ವಾತಂತ್ರ್ಯ, ಸಮಗ್ರತೆಯುಳ್ಳ ವಿಶ್ವ ವ್ಯವಸ್ಥೆಯೇ ಕುವೆಂಪುರವರ ಆಶಯ. ಓ ಮನುಜ ಇನ್ನಾದರೂ ಅರ್ಥ ಮಾಡಿಕೊ..!
ಡಾ.ಕೆ.ಎಂ.ನಯಾಜ್ ಅಹ್ಮದ್ ಬರೆದ ಇನ್ನೊಂದು ಲೇಖನ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಡಾ.ಕೆ.ಎಂ.ನಯಾಜ್ ಅಹ್ಮದ್
ಮೂಲತಃ ಬಾಗೇಪಲ್ಲಿಯವರು. ವೃತ್ತಿಯಲ್ಲಿ ಕನ್ನಡದ ಬೋಧಕ. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ. ಗಡಿಭಾಗದ ಅತ್ಯಂತ ಪ್ರಮುಖ ಜಾನಪದ ತಜ್ಞ ಹಾಗೂ ಸಾಂಸ್ಕೃತಿ ಚಿಂತಕ. ಹಲವು ಕೃತಿಗಳ ಜತೆಗೆ, ಅನೇಕ ಮೌಲಿಕ ಬರಹಗಳನ್ನೂ ಇವರು ಬರೆದಿದ್ದಾರೆ.