ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ
- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಅತ್ಯಂತ ಪೈಶಾಚಿಕ, ನಾಗರೀಕ ಸಮಾಜವೇ ತಲೆತಗ್ಗಿಸುವಂಥ ಘೋರ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದುಬಿಟ್ಟಿದೆ.
ಸ್ವಂತ ಚಿಕ್ಕಪ್ಪನೇ ಐದು ವರ್ಷದ ದಿವ್ಯಾಂಗ ಬಾಲಕಿಯ ಕತ್ತುಕುಯ್ದು ಹೆತ್ತ ತಾಯಿಯ ಎದುರಿನಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ತಾಲ್ಲೂಕಿನ ಅಂಗರೇಕನಹಳ್ಳಿ ಗ್ರಾಮದಲ್ಲಿ ಸಂಜೆ ನಾಲ್ಕೂವರೆ ಗಂಟೆ ಸುಮಾರಿಗೆ ನಡೆದಿದೆ.
ಚರ್ವಿತ ಕೊಲೆಯಾದ ನತದೃಷ್ಟ ಬಾಲಕಿ. ಕೃಷ್ಣಮೂರ್ತಿ, ಶಶಿಕಲಾ ಅವರ ಹಿರಿಯ ಮಗಳು. ಕತ್ತು ಸೀಳಿದ ಕಿರಾತಕ ಶಂಕರ್ ಆ ಮಗುವಿನ ಚಿಕ್ಕಪ್ಪ. ಸ್ವಂತ ಅಣ್ಣನ ಮಗಳನ್ನೇ ಇಷ್ಟು ನಿರ್ದಯವಾಗಿ ಅತ್ತಿಗೆಯ ಸಮಕ್ಷಮದಲ್ಲೇ ಹತ್ಯೆ ಮಾಡಿದ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ತನ್ನ ಕಣ್ಣೆದುರೇ ತನ್ನ ಕಂದನನ್ನು ಕೊಂದ ಕ್ರೂರಕ್ಷಣಗಳನ್ನು ಕಂಡೊಡನೆ ಆ ತಾಯಿ ಕುಸಿದುಬಿದ್ದಿದ್ದಾರೆ.
ಹಂತಕ ಶಂಕರ್ ಕೃತ್ಯ ಎಸಗಿದೊಡನೆ ಪರಾರಿಯಾಗಿದ್ದಾನೆ. ಮಗುವಿನ ತಂದೆ ಕೃಷ್ಣಮೂರ್ತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪಾತಕಿ ಶಂಕರನ ಈ ಕೃತ್ಯಕ್ಕೆ ಕಾರಣವೇನು?
ಕೃಷ್ಣಮೂರ್ತಿ ಮತ್ತು ಹಂತಕ ಶಂಕರ್ ಒಡಹುಟ್ಟಿದ ಸಹೋದರರು. ಸೊಣ್ಣಪ್ಪ ಇವರ ತಂದೆ. ಒಟ್ಟು ಏಳು ಜನ ಅಣ್ಣ-ತಮ್ಮಂದಿರ ಕುಟುಂಬ. ತಂದೆ-ತಾಯಿಯ ಜತೆ ಒಟ್ಟಾಗಿದ್ದ ಅವಿಭಕ್ತ ಕುಟುಂಬ. ಇಂಥ ಮನೆಯಲ್ಲಿ ಶಂಕರನಿಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದವು. ಆದರೆ, ಬಂದವರು ಹೆಣ್ಣು ಕೊಡದೇ ಕೈಕೊಡುತ್ತಿದ್ದರು. ದಿವ್ಯಾಂಗ ಬಾಲಕಿ ಚರ್ವಿತಳಿಂದಲೇ ನನಗೆ ಮದುವೆಯಾಗುತ್ತಿಲ್ಲ ಎಂಬ ಭಾವನೆ ಆತನ ಮನಸ್ಸಿನಲ್ಲಿ ಮೂಡಿತ್ತು. ಅದೇ ರೀತಿಯ ದಿವ್ಯಾಂಗ ಮಗು ನನಗೂ ಹುಟ್ಟಬಹುದು ಎಂಬ ಕಾರಣಕ್ಕೆ ನನಗೆ ಯಾರು ಹೆಣ್ಣು ಕೊಡುತ್ತಿಲ್ಲ ಎಂಬ ಮೂಢನಂಬಿಕೆ ಆತನಲ್ಲಿ ಬಲವಾಗಿ ಬೇರೂರತೊಡಗಿತ್ತು.
ಹಂತಕ ಶಂಕರ್
ಚರ್ವಿತಾ ಹುಟ್ಟಿದ ಒಂದು ವರ್ಷದ ನಂತರ ಆ ಮಗುವಿನ ವಿಷಯಕ್ಕಾಗಿ ಅನೇಕ ಸಲ ಶಂಕರ್ ಮನೆಯಲ್ಲಿ ಎಲ್ಲರ ಜತೆ ಜಗಳವಾಡುತ್ತಿದ್ದ. ಮಗು ಬೆಳೆಯುತ್ತಿದ್ದಂತೆಲ್ಲ ಆತನ ಅಸಹನೆಯೂ ಹೆಚ್ಚುತ್ತಲೇ ಹೋಯಿತು. ಚರ್ವಿತ ಮನೆಯ ಪಾಲಿಗೆ ದರಿದ್ರ, ಅಪಶಕುನ ಎಂದೆಲ್ಲ ನಕಾರಾತ್ಮಕ ಭಾವನೆಗಳನ್ನು ತಲೆಗೆ ತುಂಬಿಕೊಂಡಿದ್ದ. ಈ ಮಗು ಮನೆಯಲ್ಲಿ ಇರಬಾರದು ಎಂದು ಯಾವಾಗಲೂ ಕ್ಯಾತೆ ತೆಗೆಯುತ್ತಿದ್ದ. ಆ ಬಾಲಕಿಯನ್ನು ಕೊಲ್ಲಲು ಮೂರು ಸಲ ವಿಫಲ ಯತ್ನ ನಡೆಸಿದ್ದ ಅವನನ್ನು ಎಲ್ಲರೂ ಮನೆಯಿಂದ ಹೊರಹಾಕಿದ್ದರು. ಆಮೇಲೆ ತೋಟದ ಶೆಡ್‌ಯಲ್ಲಿ ವಾಸವಿದ್ದ. ತನಗೆ ಬೇಕಾದ ಹಾಗೆ ಬಿಡಾಡಿಯಾಗಿದ್ದ ಶಂಕರ ಮನೆಯವರಿಗೂ ದೊಡ್ಡ ತಲೆನೋವಾಗಿದ್ದ. ಕೊನೆಗೆ ಐದು ತಿಂಗಳ ಹಿಂದೆಯಷ್ಟೇ ತಂದೆ-ತಾಯಿ ಮತ್ತೆ ಮನೆಗೆ ಸೇರಿಸಿಕೊಂಡಿದ್ದರು. ಮನೆಗೆ ಮರಳಿದ ಮೇಲೆಯೂ ಆ ಮುಗ್ಧ ಬಾಲಕಿಯ ಹತ್ಯೆಗೆ ಹೊಂಚು ಹಾಕಿಕೊಂಡೇ ಇದ್ದ.
ಆ ಕ್ಷಣಕ್ಕಾಗಿ ಕಾಯುತ್ತಿದ್ದ ಪಾತಕಿ
ಪಾಪಿ ಶಂಕರ್ ಹೇಗಾದರೂ ಚರ್ವಿತಳನ್ನು ಕೊಲ್ಲಲೇಬೇಕು ಎಂದು ನಿಶ್ಚಿಯಿಸಿದ್ದ. ಅದಕ್ಕಾಗಿ ನಿರಂತರವಾಗಿ ಹೊಂಚು ಹಾಕಿ ಕಾಯುತ್ತಿದ್ದ. ಮಂಗಳವಾರ ಸಂಜೆ ಅದಕ್ಕೆ ಸಮಯ ನಿಗದಿ ಮಾಡಿಕೊಂಡಿದ್ದ. ಬಾಲಕಿ ಮನೆಯ ಹತ್ತಿರದ ದೇವಸ್ಥಾನದ ಬಳಿ ಅಕ್ಕಪಕ್ಕದ ಮಕ್ಕಳ ಜತೆ ಅನಂದದಿಂದ ಆಟವಾಡುತ್ತಿತ್ತು. ಅವಳ ತಾಯಿ ಶಶಿಕಲಾ ಕೂಡ ಅಲ್ಲೇ ಏನೋ ಕೆಲಸ ಮಾಡಿಕೊಂಡಿದ್ದರು. ಅಷ್ಟರಲ್ಲಿ ಅಲ್ಲಿಗೆ ರಾಕ್ಷಸನಂತೆ ನುಗ್ಗಿಬಂದ ಶಂಕರ್, ಮಗುವನ್ನು ಹಿಡಿದು ತನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದ ಚಾಕುವಿನಿಂದ ಕತ್ತುಕುಯ್ದಿದ್ದಾನೆ. ಏನು ನಡೆಯುತ್ತಿದೆ ಎನ್ನುವಷ್ಟರಲ್ಲಿ ಆ ಪಾಪಿ ಮಗುವನ್ನು ಬಲಿ ಪಡೆದು ಓಡಿಹೋದ. ಕಣ್ಣೆದುರೇ ನಡೆದ ಕೃತ್ಯವನ್ನು ಕಂಡ ಶಶಿಕಲಾ ಕುಸಿದುಬಿದ್ದರು. ಅದೆಲ್ಲವನ್ನು ಪ್ರತ್ಯಕ್ಷವಾಗಿ ನೋಡಿದ ಊರಿನ ಜನರೂ ತೀವ್ರ ಆಘಾತಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಧಾವಿಸಿ ಬರುವಷ್ಟರಲ್ಲಿ ಶಂಕರ ಆ ಚಾಕುವನ್ನು ಅಲ್ಲೇ ಬಿಸಾಡಿ ಓಡಿ ಹೋಗಿದ್ದಾನೆ.
ಘಟನೆ ನಡೆದಾಗ ಮಗುವಿನ ತಂದೆ ಕೃಷ್ಣಮೂರ್ತಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ʼನಿನ್ನ ತಮ್ಮನೇ ನಿನ್ನ ಮಗಳ ಕತ್ತು ಕುಯ್ದಿದ್ದಾನೆʼ ಎಂದು ಊರಿನವರೊಬ್ಬರು ಓಡಿಬಂದು ತಿಳಿಸಿದಾಗ ಕೃಷ್ಣಮೂರ್ತಿಯೂ ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗು ಅಸುನೀಗಿತ್ತು.
ಕೃಷ್ಣಮೂರ್ತಿ, ಶಶಿಕಲಾ ಆಕ್ರಂದನ ಮುಗಿಲುಮುಟ್ಟಿದೆ. ಅವರ ಮನೆ ಮತ್ತು ಗ್ರಾಮದಲ್ಲಿ ಮೌನ ಆವರಿಸಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಊರಿನ ಜನರೇ ಮುಗ್ಧ ಮಗುವಿಗಾಗಿ ಕಣ್ಣೀರು ಹಾಕಿದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶಂಕರನ ಬಂಧನಕ್ಕೆ ಬಲೆ ಬೀಸಿದ್ದಾರೆ.