ಬೇಸಿಗೆಗೆ ಮುನ್ನವೇ ಬೆಂಕಿ ಅವಘಢಕ್ಕೆ ತುತ್ತಾದ ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟಕ್ಕೆ ಆಗಿರುವ ಹಾನಿ ಎಷ್ಟು? ದೇವರ ಕಾಡಿನಲ್ಲಿ ಆಶ್ರಯ ಪಡೆದಿದ್ದ ಕೃಷ್ಣಮೃಗ, ನವಿಲು, ಪಶು-ಪಕ್ಷಿಗಳ ಸ್ಥಿತಿ ಏನಾಗಿದೆ? ಬೆಟ್ಟವನ್ನಾವರಿದ್ದ ಬೆಂಕಿ ಹತೋಟಿಗೆ ಬಂತಾ? ಇಲ್ಲಿದೆ ಪೂರ್ಣ ವರದಿ..
ಗುಡಿಬಂಡೆ: ಸೂಕ್ಷ್ಮ ಜೈವಿಕ ತಾಣ ಮತ್ತೂ ಇತಿಹಾಸ -ಪುರಾಣ ಪ್ರಸಿದ್ಧವೂ ಆಗಿರುವ, ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾಗಿರುವ ತಾಲ್ಲೂಕಿನ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ದುರಂತದಿಂದ ಸುಮಾರು 10ರಿಂದ 15 ಎಕರೆಯಷ್ಟು ಅರಣ್ಯ ಅಗ್ನಿಗೆ ಆಹುತಿಯಾಗಿದೆ.
ಸಕಾಲಕ್ಕೆ ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಅದೃಷ್ಟವಶಾತ್, ಪ್ರಾಣಿಗಳ ಜೀವಹಾನಿ ಆಗಿಲ್ಲ. ಬೆಂಕಿ ಕಂಡೊಡನೆ ಪ್ರಾಣಿಗಳೆಲ್ಲ ಸುರಕ್ಷಿತ ಪ್ರದೇಶಗಳಿಗೆ ಹೋಗಿ ಜೀವ ಉಳಿಸಿಕೊಂಡಿವೆ. ಇನ್ನು ದೊಡ್ಡ ದೊಡ್ಡ ಮರಗಳಿಗೆ ಹಾನಿ ತಪ್ಪಿದ್ದು, ಸಣ್ಣಪುಟ್ಟ ಗಿಡಗಳು ಭಸ್ಮವಾಗಿವೆ.
ದೇವಸ್ಥಾನಕ್ಕೆ ಹಾನಿಯಾಗಿಲ್ಲ
ಹಾಗೆಯೇ ಆದಿನಾರಾಯಣ ಸ್ವಾಮಿ ದೇವಾಲಯಕ್ಕೆ ಬೆಂಕಿ ತಾಕಿಲ್ಲ. ದೇವಸ್ಥಾನದ ಹಿಂಭಾಗದವರೆಗೂ ಬೆಂಕಿ ಬಂದಿತ್ತು. ಅಷ್ಟರಲ್ಲಿ ನಾವು ಬೆಂಕಿಯನ್ನು ತಡೆದೆವು. ಹತ್ತಿರ ಬರುವುದಕ್ಕೆ ಮೊದಲೇ ನಂದಿಸಿದೆವು ಎಂದು ಉಪ ವಲಯ ಅರಣ್ಯಾಧಿಕಾರಿ ಜಾವೆದ್ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಸೋಮವಾರ ರಾತ್ರಿ 7 ಗಂಟೆ ಹೊತ್ತಿಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿ ಗೊತ್ತಾಯಿತು. ರಾತ್ರಿ 7.30-8 ಗಂಟೆಗೆಲ್ಲ ನಮ್ಮ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದೆವು. ಅಪರಾತ್ರಿ 2 ಗಂಟೆ ಹೊತ್ತಿಗೆ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಲಾಯಿತು. ತದ ನಂತರ ಬೆಂಕಿ ಎಲ್ಲಾದರೂ ಕಾಣಿಸಿಕೊಳ್ಳುತ್ತಾ ಅಂತೆಲ್ಲ ಪರಿಶೀಲನೆ ನಡೆಸಿ ವಾಪಸ್ ಬಂದೆವು ಎಂದು ಅವರು ವಿವರ ನೀಡಿದರು.
ಬೆಂಕಿ ಕಾಣಿಸಿಕೊಂಡಿದ್ದು ಎಲ್ಲಿ?
ಬೆಟ್ಟದ ಹಿಂಭಾಗ, ಅಂದರೆ; ಆಂಧ್ರ ಪ್ರದೇಶದ ಗಡಿ ಪ್ರದೇಶದಿಂದ ಬೆಂಕಿ ಹಾಕಲಾಗಿದೆ. ವೀರಾಪುರ ಗ್ರಾಮದ ಕಡೆಯಿಂದ ಬೆಂಕಿ ಅಂಟಿಕೊಂಡಿರುವ ಅನುಮಾನವಿದೆ. ತನಿಖೆ ಮಾಡುತ್ತಿದ್ದೇವೆ. ಈ ಗ್ರಾಮ ಆಂಧ್ರದಲ್ಲಿಯೇ ಇದೆ. ಆದಿನಾರಾಯಣ ಸ್ವಾಮಿ ಬೆಟ್ಟವು ಆಂಧ್ರ ಗಡಿಗಿಂತ ಒಳಗಿದೆ ಎಂದ ಅವರು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ 20 ಸಿಬ್ಬಂದಿ ಪಾಲ್ಗೊಂಡಿದ್ದೆವು. ಇವತ್ತು (ಮಂಗಳವಾರ) ಕೂಡ ಹಗಲಲ್ಲೂ ಬೆಂಕಿ ಬಿದ್ದಿದೆ. ಅದನ್ನು ನಂದಿಸಿದ್ದೇವೆ ಎಂದು ಜಾವೆದ್ ಅವರು ಮಾಹಿತಿ ನೀಡಿದರು.
“ಕಾಡಿನಲ್ಲಿ ಆಕಸ್ಮಿಕವಾಗಿಯೂ ಬೀಳುತ್ತದೆ. ರೈತರು ಅರಣ್ಯದ ಪಕ್ಕದ ತಮ್ಮ ಹೊಲಗಳ ಬದುಗಳಲ್ಲಿ ಹುಲ್ಲು ಚೆನ್ನಾಗಿ ಬೆಳೆಯಲಿ ಎಂದು ಬೆಂಕಿ ಹಚ್ಚುತ್ತಾರೆ. ಅಂಥ ಬೆಂಕಿ ಕಾಡಿಗೂ ಹಬ್ಬುತ್ತದೆ. ಇನ್ನು ಕೆಲವರು ಬೇಜಾಬ್ದಾರಿಯಿಂದ ಬೀಡಿ ಸಿಗರೇಟ್ ಸೇದಿ ಹಾಕಿದ್ರೂ ಬೆಂಕಿ ಅವಘಡ ಆಗುತ್ತದೆ. ಜತೆಗೆ; ಕಾಡಿನೊಳಗೆ ಗಾಜಿನ ಚೂರುಗಳು ಬಿದ್ದಿದ್ದರೆ ಅವು ಬಿಸಿಲಿನ ತಾಪಕ್ಕೆ ಬೆಂಕಿಯಾಗಿ ಪರಿವರ್ತನೆ ಆಗುವ ಅಪಾಯವಿದೆ” ಎನ್ನುತ್ತಾರೆ ಜಾವೆದ್.
ಅರಣ್ಯದಲ್ಲಿ ಏನೇನಿದೆ?
ಶ್ರೀಗಂಧ, ಉಲುಬೆ, ಕಚೆರಿ, ಮತ್ತಿ, ಬೇವು ಸೇರಿ ಎಲ್ಲ ಜಾತಿಯ ಮರಗಳೂ ಇವೆ. ನೈಸರ್ಗಿಕವಾಗಿ ಶ್ರೀಗಂಧ, ಕಾಡು ಜಾತಿ ಮರಗಿಡಗಳು ಜಾತಿ ಮರಗಳು ಬಯಲು ಸೀಮೆಯಲ್ಲಿ ಕಾಣುವ ಎಲ್ಲ ರೀತಿಯ ಮರಗಳೂ ಬೆಟ್ದ ಪ್ರದೇಶದಲ್ಲಿವೆ. ಜತೆಗೆ; ಇಲ್ಲಿ ಅಪರೂಪದ ಕೃಷ್ಣಮೃಗಗಳಿವೆ, ಕರಡಿಗಳಿವೆ. ಮಂಗಗಳಿವೆ. ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಅಪಾರ ಸಂಖ್ಯೆಯಲ್ಲಿ ನವಿಲುಗಳೂ ಇವೆ.
ಸಾಮಾನ್ಯವಾಗಿ ಈ ಬೆಟ್ಟದಲ್ಲಿ ಯಾರೂ ಮರ-ಗಿಡಗಳನ್ನು ಕಡಿಯಲ್ಲ. ಅಷ್ಟೇ ಅಲ್ಲ, ಒಣಗಿಯೋ ಅಥವಾ ಮರದಿಂದ ಮುರಿದು ಬಿದ್ದಿರುವ ಕಡ್ಡಿಗಳನ್ನು ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ ಈ ಬೆಟ್ಟ ಸುರಕ್ಷಿತ. ಇದನ್ನು ಎಲ್ಲರೂ ದೇವರ ಕಾಡು ಎಂದು ನಂಬುತ್ತಾರೆ. ಹೀಗಾಗಿ ಇಲ್ಲಿ ಕಾಡು ಚೆನ್ನಾಗಿದೆ. ಯಾವಾಗಲೂ ಹಸಿರು ಇರುತ್ತದೆ. ಅದೇ ಆದಿನಾರಾಯಣ ಬೆಟ್ಟದ ಅಕ್ಕಪಕ್ಕದ ಬೆಟ್ಟಗುಡ್ಡಗಳಲ್ಲಿ ಜನರು ಮರಗಿಡ ಕಡಿಯುತ್ತಾರೆ.
-ಜಾವೆದ್, ಉಪ ವಲಯ ಅರಣ್ಯಾಧಿಕಾರಿ
ಕಟ್ಟೆಚ್ಚರ ವಹಿಸಲಾಗಿದೆ
ಮುಂದೆ ಈ ರೀತಿಯ ಅವಘಢ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ನೀರಿನ ಕ್ಯಾನುಗಳನ್ನು ಸಿದ್ದ ಮಾಡಿಟ್ಟುಕೊಂಡಿದ್ದೇವೆ. ಅರಣ್ಯ ಪ್ರದೇಶದಲ್ಲಿ ಫೈರ್ ಲೇನುಗಳನ್ನು ಮಾಡಿದ್ದೇವೆ. ಅದೆಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ. ಈ ಲೇನುಗಳು ಬೆಂಕಿ ಹರಡುವುದನ್ನು ತಡೆಯುತ್ತವೆ. ನಿರಂತರ ಪರಿವೇಕ್ಷಣೆ, ತಪಾಸಣೆ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಜಾವೆದ್ ಹೇಳಿದರು.
- ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…