ಚಿಕ್ಕಬಳ್ಳಾಪುರ/ಗುಡಿಬಂಡೆ: “ನಾನು ಗುಡಿಬಂಡೆಯನ್ನು ಅದೃಷ್ಟದ ತಾಲೂಕು ಎಂದೇ ಭಾವಿಸಿದ್ದೇನೆ. ಈ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಏನೇ ಅಂದುಕೊಂಡರೂ ಅದು ಯಶಸ್ವಿಯಾಗುತ್ತಿದೆ.”
ಹೀಗೆಂದವರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ. ಜಿಲ್ಲಾಡಳಿತ, ಕಂದಾಯ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ತಮ್ಮ ವಿಧಾನಸಭಾ ಕ್ಷೇತ್ರದ ಹಂಪಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಗುರಿ ಈ ವರ್ಷವೇ ಪೂರ್ಣಗೊಳಿಸುತ್ತೇನೆ. ಹಂಪಸಂದ್ರ ಗ್ರಾಮ ಒಳಗೊಂಡಂತೆ ಗುಡಿಬಂಡೆ ತಾಲೂಕಿನಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಮನೆ ಮನೆಗೂ ಗಂಗೆ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಕಲ್ಪಿಸುವ ಹಾಗೂ ತಾಲೂಕನ್ನು ಹೊಗೆಮುಕ್ತ ತಾಲೂಕು ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ಎಲ್ಲರೂ ಶೌಚಾಲಯಗಳನ್ನು ಬಳಕೆ ಮಾಡಬೇಕು. ಗ್ರಾಮದ ಸ್ವಚ್ಛತೆ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
ಮನೆ ಬಾಗಿಲಿಗೆ ಸರಕಾರ
ಗ್ರಾಮೀಣ ಭಾಗದ ಜನರು ಮುಗ್ಧರು, ಅನಕ್ಷರಸ್ಥರಿಗೆ ಸರಕಾರ ಸೌಲಭ್ಯಗಳ ಬಗ್ಗೆ ಅರಿವಿನ ಕೊರತೆ ಇದರಿಂದ ಅವು ಅವರಿಗೆ ಸಿಗುತ್ತಿಲ್ಲ. ಇದನ್ನು ಮನಗಂಡ ಸರಕಾರ, ಮನೆ ಬಾಗಿಲಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಸದುದ್ದೇಶದಿಂದ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರೂಪಿಸಿದ್ದು, ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಗಡಿ ಭಾಗದ ಗ್ರಾಮಸ್ಥರು ಯಾವುದಾದರೂ ಸರಕಾರಿ ಸೌಲಭ್ಯ ಪಡೆಯಬೇಕೆಂದರೆ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಒಂದು ದಿನವೆಲ್ಲಾ ಆಗುತ್ತಿತ್ತು. ಆದರೂ ಹೋದ ಕೆಲಸಗಳು ಆಗುತ್ತಿರಲಿಲ್ಲ. ಇದರಿಂದ ಗ್ರಾಮೀಣ ಜನ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಈ ಕಾರಣದಿಂದ ಸರಕಾರ ಜಿಲ್ಲಾಡಳಿತವನ್ನೇ ಗ್ರಾಮೀಣ ಭಾಗಕ್ಕೆ ತಂದು ಸಾರ್ವಜನಿಕರ ಕೆಲಸಗಳು ಮಾಡಿಕೊಡಲು ಈ ವಾಸ್ತವ್ಯ ಕಾರ್ಯಕ್ರಮ ರೂಪಿಸಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.
ಕಾನೂನು ಮಿತಿಯಲ್ಲಿರದ ಸೌಲಭ್ಯಗಳನ್ನು ಕೊಡಲು ಸರಕಾರಗಳಿಂದಾಗಲೀ, ಅಧಿಕಾರಿಗಳಿಂದಾಗಲೀ ಅಥವಾ ಬೇರೆ ಯಾರಿಂದಲೂ ಕೊಡಲು ಸಾಧ್ಯವಾಗಲ್ಲ. ಹಾಗಾಗಿ ಸಾರ್ವಜನಿಕರು ಅದನ್ನು ಅರಿತುಕೊಳ್ಳಬೇಕು. ಕಾನೂನು ಪ್ರಕಾರ ಇರುವ ಸಮಸ್ಯೆಗಳ ಬಗ್ಗೆ ಜನಪ್ರತಿಗಳು, ಅಧಿಕಾರಿಗಳ ಬಳಿ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಮಗುವಿನ ಶಿಕ್ಷಣದ ಬಗ್ಗೆ ಆಗಿದ್ಧಾಗ್ಗೆ ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗದ ಜನ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಆಗ ಮಾತ್ರ ಆ ಗ್ರಾಮಗಳು ಅಭಿವೃದ್ಧಿ ಆಗಲು ಸಾಧ್ಯ ಎಂದು ಶಾಸಕರು ಅಭಿಪ್ರಾಯಪಟ್ಟರು.
ಸರಕಾರದ ಯೋಜನೆಗಳ ಬಗ್ಗೆ ತಿಳಿಯಿರಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ, “ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಸರಕಾರಗಳಿಂದ ಕಾಲಕಾಲಕ್ಕೆ ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸೌಲಭ್ಯಗಳಿಂದ ವಂಚಿತ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಅವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಇದಾಗಿದ್ದು, ಜನರು ಮೊದಲು ಸರಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಬೆಳಸಿಕೊಳ್ಳಬೇಕು. ತಿಳಿದುಕೊಂಡರೆ ಅವುಗಳನ್ನು ಪ್ರಶ್ನೆ ಮಾಡಿ, ಪಡೆದುಕೊಳ್ಳಬಹುದು” ಎಂದರು.
ಇತ್ತೀಚಿಗೆ ಬೇರೆ ರಾಜ್ಯಗಳಲ್ಲಿ ಕೋವಿಡ್ ಮಹಾಮಾರಿ ಹೆಚ್ಚುತ್ತಿದ್ದು, ಈ ಬಗ್ಗೆ ಎಚ್ಚರವಿರಲಿ. ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಿ, ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಎರಡನೇ ಅಲೆ, ಇರಲಿ ಎಚ್ಚರ
ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರು ಮಾತನಾಡಿ, “ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸರಕಾರದ ಆಡಳಿತ ಗ್ರಾಮಗಳ ಮೂಲಕ ಜನರ ಅನಿಸಿಕೆಗಳನ್ನು ಆಲಿಸಿ ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಯೋಜನೆ ಸೌಲಭ್ಯಗಳನ್ನು ತಿಳಿದುಕೊಳ್ಳಬೇಕು” ಎಂದರು.
ಕೊರೋನಾ ಎರಡನೇ ಅಲೆ ಆತಂಕ ಶುರುವಾಗುತ್ತಿದೆ. ಜಿಲ್ಲಾಡಳಿತ ಜೊತೆ ಸಹಕಾರ ನೀಡಬೇಕು. ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 45 ವರ್ಷದೊಳಗಿನ ಎಲ್ಲರೂ ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಬಗ್ಗೆ ಯಾವುದೇ ಗೊಂದಲ, ಆತಂಕ, ಊಹಾ ಪೋಹಗಳಿಗೆ ಕಿವಿ ಕೊಡಬೇಡಿ, ಧೈರ್ಯವಾಗಿ ಲಸಿಕೆ ಪಡೆಯಿರಿ. ಎಲ್ಲಾ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಸ್ಥಳದಲ್ಲೇ 29 ಮಂದಿಗೆ ವಿವಿಧ ವೇತನ ಮಂಜೂರು ಮಾಡಲಾಯಿತು. ಅಲ್ಲದೆ 6 ಪೌತಿ ಖಾತೆ, 11 ಸಾಗುವಳಿ ಚೀಟಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಇದೇ ವೇಳೆ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಾಯತ್ರಿ ನಂಜುಂಡಪ್ಪ, ಉಪ ವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಇಂದಿರಾ ಕಬಾಡೆ, ತಹಸೀಲ್ದಾರ್ ಸಿಗ್ಬತ್ತುಲ್ಲಾ, ಶಿರಸ್ಥೇದಾರ್ ಶಿಲ್ಪಾ ಹಾಗೂ ಅನೇಕ ಜನಪ್ರತಿನಿಧಿಗಳಿದ್ದರು.