ಗುಡಿಬಂಡೆ: ತಾಲ್ಲೂಕು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ತಾಲೂಕಿನ ಅವುಲನಾಗೇನಹಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ 5.30 ಗಂಟೆ ಸಮಯದಲ್ಲಿ ನಡೆದಿದೆ.
ಮೃತ ವ್ಯಕ್ತಿ ಬೆಂಗಳೂರು ನಗರ ಜಿಲ್ಲೆಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎ.ಸಿ.ರಾಮಾಂಜನೇಯ ಎಂದು ಗುರುತಿಸಲಾಗಿದ್ದು, ಈ ಹಿಂದೆ ಅವರು ಅರೂರು, ಪೆರೇಸಂದ್ರ, ಬಾಗೇಪಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಿದ್ದರು. ಸದ್ಯಕ್ಕೆ ಬೆಂಗಳೂರು ನಗರ ಜಿಲ್ಲೆಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾಗಿ ಹಾಲಿ ಕೆಲಸ ಮಾಡುತ್ತಿದ್ದರು.
ರಜೆ ಕಳೆಯಲು ಬಂದಿದ್ದರು
ರಜೆ ಇದ್ದ ಕಾರಣಕ್ಕೆ ತಮ್ಮ ಸ್ವಂತ ಗ್ರಾಮ ಆವುಲನಾಗೇನಹಳ್ಳಿಗೆ ಬಂದಿದ್ದ ಅವರು ಸೋಮವಾರ ಸಂಜೆ ರಾಮಾಂಜನೇಯ ಮತ್ತು ಪತ್ನಿ ಮಂಜುಳಮ್ಮ ಜಮೀನು ಬಳಿಗೆ ಹೋಗಿದ್ದರು. ಆಗ ಗಲಾಟೆ ನಡೆದಿದ್ದು ಒಂದು ಗುಂಪು ಮಚ್ಚಿನಿಂದ ರಾಮಾಂಜನೇಯ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ದಾಳಿಯಿಂದ ತೀವ್ರ ಗಾಯಗೊಂಡ ಅವರಿಬ್ಬರನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆಯೇ ರಾಮಾಂಜನೇಯ ಮೃತಪಟ್ಟಿದ್ದಾರೆ. ಆದರೆ, ಅವರ ಪತ್ನಿ ಮಂಜುಳಾ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಕಾರಣಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಅವುಲನಾಗೇನಹಳ್ಳಿ ಗ್ರಾಮದಲ್ಲಿ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Lead Photo by kat wilcox from Pexels