ಬೆಂಗಳೂರು: ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕೊರೊನಾ ರೂಪಾಂತರಿ ಹೆಚ್ಚಳ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರು ಸೋಮವಾರ ಸಂಜೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ತ್ವದ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ರಾತ್ರಿ ಕರ್ಫ್ಯೂ ಕೂಡ ಜಾರಿಗೊಳಿಸುವುದಿಲ್ಲ. ಆದರೆ ಮಾರ್ಚ್ 30ರಿಂದ 15 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಪ್ರತಿಭಟನೆ, ಸತ್ಯಾಗ್ರಹಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.
ಲಾಕ್‌ಡೌನ್ ಬದಲಿಗೆ ರಾಜ್ಯದಲ್ಲಿ ಕೋವಿಡ್ ನಿರ್ಬಂಧಿಸಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಅಪಾರ್ಟ್ʼಮೆಂಟ್ʼಗಳಲ್ಲಿ ಪಾರ್ಟಿ, ಜಿಮ್ ಮತ್ತು ಈಜುಕೊಳಗಳನ್ನು ನಿಷೇಧಿಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಚಿವರಾದ ಎಸ್.ಸುರೇಶ್ ಕುಮಾರ್, ಡಾ.ಕೆ.ಸುಧಾಕರ್. ಕೆ.ಗೋಪಾಲಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.