Lead photo from @ckphotographihi / ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್‌ನ ಸಂಜೆ ನೋಟ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯನ್ನು ಕಟ್ಟಿಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ರಾಜ್ಯ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿದೆ.
ಈ ಸಂಬಂಧ ಹೊಸ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಹಾಗೂ ರಾಜ್ಯಪಾಲ ವಜೂಭಾಯ್ ವಾಲ ಅವರ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರಗಳನ್ನು ಕೈಗೊಂಡಿದೆ. ಮಂಗಳವಾರ ಬೆಳಗ್ಗೆಯಿಂದ ಲಾಕ್‌ಡೌನ್ ಬಗ್ಗೆಯೇ ಯೋಚಿಸುತ್ತಿದ್ದ ಸರಕಾರ ರಾತ್ರಿ ಪ್ರಧಾನಿ ಭಾಷಣದ ನಂತರ ಬಿಗಿ ಕ್ರಮಗಳತ್ತ ಹೊರಳಿತು.
ಸರ್ವಪಕ್ಷ ಮುಖಂಡರು, ಬೆಂಗಳೂರು ನಗರದ ಎಲ್ಲ ಶಾಸಕರು ಹಾಗೂ ತಜ್ಞರ ಸಮಿತಿಯ ವರದಿ ಪಡೆದ ನಂತರ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆಯಲ್ಲಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ನೂತನ ಮಾರ್ಗಸೂಚಿಯ ಮಾಹಿತಿ ನೀಡಿದರು. ಈ ಮಾರ್ಗಸೂಚಿ ನಾಳೆ, ಅಂದರೆ; ಬುಧವಾರ ರಾತ್ರಿ 9 ಗಂಟೆಯಿಂದಲೇ ಜಾರಿಯಾಗಲಿದೆ.
ಹಾಗಾದರೆ, ಮುಂದಿನ 14 ದಿನ ರಾಜ್ಯದಲ್ಲಿ ಜಾರಿಯಲ್ಲಿರುವ ಈ ಮಾರ್ಗಸೂಚಿಯಲ್ಲಿ ಏನಿದೆ?
- ಮುಂದಿನ 14 ದಿನಗಳವರೆಗೆ, ಅಂದರೆ; ಮೇ 4ರವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿ ಇರುತ್ತದೆ.
- ರಾತ್ರಿ 9 ಗಂಟೆಯಿಂದ ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತದೆ.
- ವೀಕೆಂಡ್‌ನಲ್ಲಿ, ಅಂದರೆ; ಶನಿವಾರ & ಭಾನುವಾರ ಇಡೀ ರಾಜ್ಯದಲ್ಲಿ ಸಂಪೂರ್ಣವಾಗಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ.
- ಸಿನಿಮಾ ಪ್ರದರ್ಶನ ಸಂಪೂರ್ಣ ಬಂದ್.
- ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳಗಳಿಗೂ ಅವಕಾಶ ಇಲ್ಲ.
- ಸ್ವಿಮಿಂಗ್ ಫೆಡರೇಶನ್ ಪ್ರಾಕ್ಟೀಸ್ ಇದೆ ಅವರಿಗೆ ಮಾತ್ರ ಅವಕಾಶ
- ಎಲ್ಲೆಡೆ ದೇವಸ್ಥಾನಗಳು ತೆರೆದಿರುತ್ತವೆ, ಆದರೆ ಪ್ರವೇಶ ಅರ್ಚಕರಿಗೆ ಮಾತ್ರ. ಚರ್ಚ್, ಮಸೀದಿ ಸೇರಿ ಎಲ್ಲಾ ಧಾರ್ಮಿಕ ಸ್ಥಳಗಳು ಬಂದ್
- ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೂತು ತಿನ್ನಲು ಅವಕಾಶ ಇಲ್ಲ. ಕೇವಲ ಪಾರ್ಸೆಲ್ಗೆ ಮಾತ್ರ ಅವಕಾಶ.
- ಶಾಪಿಂಗ್ ಮಾಲ್‌ಗಳು ಸಂಪೂರ್ಣ ಬಂದ್.
- ಕೈಗಾರಿಕೆಗಳನ್ನು ತೆರೆಯಲು ನಿರ್ಬಂಧ ಇಲ್ಲ. ಕೈಗಾರಿಕೆಗಳ ರಾತ್ರಿಪಾಳಿಗೂ ಅವಕಾಶ.
- ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ.
- ದಿನಸಿ, ತರಕಾರಿ ಅಂಗಡಿ, ಮಾರುಕಟ್ಟೆ ಅವಕಾಶ. ಮಾರುಕಟ್ಟೆಗಳನ್ನು ಏ.23ರಿಂದ ತೆರೆದ ಪ್ರದೇಶಕ್ಕೆ ಶಿಫ್ಟ್.
- ಕಟ್ಟಡ ಮತ್ತು ಇನ್ನಿತರೆ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ.
- ಲಿಕ್ಕರ್ ಶಾಪ್, ಬಾರ್ʼಗಳಲ್ಲಿ ಕೂತು ಕುಡಯಲು ಅವಕಾಶ ಇಲ್ಲ. ಅಲ್ಲೂ ಪಾರ್ಸೆಲ್‌ಗಷ್ಟೇ ಚಾನ್ಸ್.
- ಇ-ಕಾಮರ್ಸ್ ಚಟುವಿಟಕೆಗಳಿಗೆ ನಿರ್ಬಂಧವಿಲ್ಲ. ಐಟಿ-ಬಿಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್.
- ಸರಕಾರಿ ಕಚೇರಿಗಳ ಹಾಜರಾತಿ 50%ಗೆ ಅವಕಾಶ.
- ಅಂತಾರಾಜ್ಯ ಸಂಚಾರಕ್ಕೆ ಸಮಸ್ಯೆ ಇಲ್ಲ.
- ಪ್ರಯಾಣಿಕರ ಸಾರಿಗೆ ಬಸ್ಸುಗಳಲ್ಲಿ 50% ಜನರಿಗೆ ಮಾತ್ರ ಅವಕಾಶ.
- ಮದುವೆಗಳಲ್ಲಿ 50 ಜನರಿಗೆ ಮಾತ್ರ ಅವಕಾಶ.
- ಶವ ಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಪಾಲ್ಗೊಳ್ಳುವಂತಿಲ್ಲ.
- ಸೆಕ್ಷನ್ 144 ಇಡೀ ರಾಜ್ಯದಲ್ಲಿ ಜಾರಿ
- ದೂರ ಪ್ರಯಾಣ ಮಾಡುವವರು ಟಿಕೆಟ್ ತೋರಿಸಿ ಹೋಗುವುದು ಕಡ್ಡಾಯ.
ಶ್ರೀರಾಮನವಮಿ ಅಬಾಧಿತ
ಅಲ್ಲಿಗೆ ಎರಡು ವಾರ ರಾಜ್ಯ ಲಾಕ್‌ಡೌನ್ ಆಗುತ್ತದೆ ಎಂಬ ಆತಂಕ ದೂರವಾಗಿದೆ. ಉತ್ಸಾಹದಲ್ಲಿ ಯುಗಾದಿ ಹಬ್ಬ ಆಚರಿಸಿದ್ದ ಜನ ಬುಧವಾರ ನಿಶ್ಚಿಂತೆಯಿಂದ ಶ್ರೀರಾಮನವಮಿ ಆಚರಿಸಬಹುದು. ಆದರೆ, ಹೊರಗೆಲ್ಲೂ ಶ್ರೀರಾಮ ದೇವಾಲಯಕ್ಕೆ ಹೋಗುವ ಬದಲು ಮನೆಯಲ್ಲೇ ಶ್ರೀರಾಮನಿಗೆ ನಮಿಸಿದರೆ ಉತ್ತಮ. ಕೋವಿಡ್ ವೈರಸ್ ಗಾಳಿಯಲ್ಲೇ ತೇಲಾಡುತ್ತಿದೆ ಎಂಬ ಭೀತಿ ಇದ್ದು, ಜನರು ದೇವಾಲಯಗಳಿಗೆ ಹೋಗುವುದು ಬೇಡ ಎಂದು ತಜ್ಞರು ಮನವಿ ಮಾಡಿದ್ದಾರೆ.