ಬೆಂಗಳೂರು: ರಾಜ್ಯಕ್ಕೆ ಪ್ರತಿ ದಿನ 1,500 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಪಡಿಸಿ ಪೂರೈಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರಕಾರಕ್ಕೆ ಕೋರಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದ ಕೋವಿಡ್ ಸ್ಥಿತಿಗತಿ ಹಾಗೂ ರಾಜ್ಯ ಸರಕಾರದಿಂದ ಕೈಗೊಂಡ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು; ನಾನು ಕೂಡ ಮನವಿ ಮಾಡಿದ್ದೇನೆ. ಕೇಂದ್ರವು ಸ್ಪಂದಿಸಲಿದೆ ಎಂದರು.
ರಾಜ್ಯಕ್ಕೆ ದಿನಕ್ಕೆ 300 ಟನ್ ಆಕ್ಸಿಜನ್ ನಿಗದಿಪಡಿಸಲಾಗಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಈ ತಿಂಗಳ ಕೊನೆಗೆ 500-600 ಟನ್ ಆಕ್ಸಿಜನ್ ಬೇಕಾಗುತ್ತದೆ. ಮುಂದಿನ ತಿಂಗಳ ಕೊನೆಗೆ 1,500 ಟನ್ ಆಕ್ಸಿಜನ್ ಬೇಕಾಗುತ್ತದೆ. ಇಷ್ಟು ಪ್ರಮಾಣದ ಆಕ್ಸಿಜನ್ ನೀಡಬೇಕೆಂದು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಮನವಿ ಮಾಡಿದ್ದಾರೆ ಎಂದರು ಅವರು.
ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ
ಕೊರೊನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗುವ ಮಟ್ಟಿಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಶೇ.90 ರಷ್ಟು ರೋಗಿಗಳಿಗೆ ಆಸ್ಪತ್ರೆ ಅಗತ್ಯವಿಲ್ಲ. ಮನೆಯಲ್ಲೇ ಇದ್ದು ಚಿಕಿತ್ಸೆ ಮಾಡಿಕೊಳ್ಳಬಹುದು. ನಮ್ಮ ವೈದ್ಯರು ಮನೆಗೆ ಭೇಟಿ ನೀಡುವ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತಾರೆ. ಯಾವುದನ್ನು ಮಾಡಬೇಕು ಹಾಗೂ ಮಾಡಬಾರದು ಎಂಬ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುವುದು ಎಂದರು ಡಾ.ಸುಧಾಕರ್.
ಕಡಿಮೆ ರೋಗ ಲಕ್ಷಣವಿದ್ದರೆ ಹೋಟೆಲ್ʼಗಳಲ್ಲಿ ರೂಪಿಸಿದ ಪರ್ಯಾಯ ಆಸ್ಪತ್ರೆಗೆ ಸೇರಬಹುದು. ಸಣ್ಣ ಲಕ್ಷಣವಿರುವವರು ಆಸ್ಪತ್ರೆಗೆ ದಾಖಲಾದರೆ, ಚಿಕಿತ್ಸೆ ಅಗತ್ಯವಿರುವ ರೋಗಿಯ ಹಾಸಿಗೆ ಕಿತ್ತುಕೊಂಡಂತಾಗುತ್ತದೆ. ಅಂತಹ ತೀವ್ರ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್ ದೊರೆಯುವಂತೆ ಮಾಡಬೇಕಿದೆ. ವೈದ್ಯರು ರೋಗಿಯನ್ನು ಪರೀಕ್ಷಿಸಿ ಅಗತ್ಯವಿದ್ದರೆ ಮಾತ್ರ ದಾಖಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ನಾಲ್ಕು ಸಾವಿರ ಹಾಸಿಗೆ ಮೀಸಲು
ಬೆಂಗಳೂರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು 4,೦೦೦ ಹಾಸಿಗೆಗಳನ್ನು ಕೋವಿಡ್ʼಗೆ ನೀಡಿವೆ. ಸರಕಾರಿ ಮೆಡಿಕಲ್ ಕಾಲೇಜುಗಳು 1 ಸಾವಿರ ಹಾಸಿಗೆ, ಸರ್ಕಾರಿ ಆಸ್ಪತ್ರೆಗಳು 1,409 ಹಾಗೂ ಖಾಸಗಿ ಆಸ್ಪತ್ರೆಗಳು 7,442 ಹಾಸಿಗೆಯನ್ನು ಕೋವಿಡ್ʼಗೆ ಮೀಸಲಿಟ್ಟಿವೆ. ಈ ಕುರಿತು ವೆಬ್ ಪೋರ್ಟಲ್ ನಲ್ಲೇ ಮಾಹಿತಿ ಲಭ್ಯವಿದೆ. ಈ ವ್ಯವಸ್ಥೆಯನ್ನು ರಾಜ್ಯದ ಮಟ್ಟದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಯುವಜನರು ತಮ್ಮ ಕುಟುಂಬದ ಹಿರಿಯರಿಗೆ ಲಸಿಕೆ ನೀಡಿ ಜವಾಬ್ದಾರಿ ಮೆರೆಯಬೇಕು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು ಎಂದ ಅವರು, ದೇಶದಲ್ಲಿ 12.7 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಈ ಪೈಕಿ 99.96% ಜನರಿಗೆ ಕೊರೊನಾ ಸೋಂಕು ಬಂದಿಲ್ಲ. ಸಾವಿನ ಪ್ರಮಾಣದ ಬಗ್ಗೆ ಆತಂಕ ಬೇಡ. ವೆಂಟಿಲೇಟರ್ʼಗಳನ್ನು ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದರು.