ಲಾಕ್ಡೌನ್ ನಡುವೆಯೂ ಆಶಾದಾಯಕ ಸುದ್ದಿ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳು, 1,126 ಗ್ರಾಮಗಳು ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲಿನ 6 ಸ್ಥಳೀಯ ಸಂಸ್ಥೆಗಳ 39 ವಾರ್ಡ್ʼಗಳು ಕೊರೊನಾ ಮುಕ್ತವಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಘೋಷಣೆ ಮಾಡಿದ್ದಾರೆ..
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಚಿಂತಾಮಣಿ ತಾಲೂಕಿನ ಕಡದಲಮರಿ ಗ್ರಾಮ ಪಂಚಾಯತಿಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದು, ಈಗಾಗಲೇ ʼಕೊರೊನಾ ಮುಕ್ತ ಗ್ರಾಮ ಪಂಚಾಯಿತಿʼಯಾಗಿದೆ. ಈಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮುದಲೋಡು ಗ್ರಾಮ ಪಂಚಾಯ್ತಿಯು ಈ ಪಟ್ಟಿಗೆ ಸೇರ್ಪಡೆಯಾಗಿದ್ದು ಕೊರೋನಾ ಮುಕ್ತ ಗ್ರಾಮ ಪಂಚಾಯ್ತಿಯಾಗಿದೆ.
ಚಿಕ್ಕಬಳ್ಳಾಪುರ-23, ಚಿಂತಾಮಣಿ-35, ಶಿಡ್ಲಘಟ್ಟ-28, ಬಾಗೇಪಲ್ಲಿ-25, ಗುಡಿಬಂಡೆ-8, ಗೌರಿಬಿದನೂರು-38 ಗ್ರಾಮಗಳು ಸೇರಿ ಒಟ್ಟಾರೆ ಈ ತಾಲೂಕುಗಳ 1,126 ಗ್ರಾಮಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಅಲ್ಲದೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆ ಹಾಗೂ ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಟ್ಟು 39 ವಾರ್ಡ್ ಗಳು ಕೊರೊನಾ ಮುಕ್ತ ವಾರ್ಡ್ʼಗಳಾಗಿವೆ ಎಂದರು.
ಶಿಡ್ಲಘಟ್ಟದಲ್ಲಿ 19 ವಾರ್ಡ್ ಕೊರೊನಾ ಮುಕ್ತ
ಜಿಲ್ಲೆಯ ಪೈಕಿ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ʼಗಳಿದ್ದು, ಈ ಪೈಕಿ 1, 5, 6, 7, 8, 9, 10, 12, 13, 14, 16, 17, 18, 19, 21, 22, 24, 28, 29 ಒಳಗೊಂಡಂತೆ 19 ವಾರ್ಡ್ʼಗಳು ಕೊರೊನಾ ಮುಕ್ತ ವಾರ್ಡ್ʼಗಳಾಗಿವೆ. ಅದೇ ರೀತಿ ಗೌರಿಬಿದನೂರು ನಗರಸಭೆ (4, 9, 10, 16, 27) ಮತ್ತು ಬಾಗೇಪಲ್ಲಿ ಪುರಸಭೆ (4, 10, 12, 17, 19) ಯಲ್ಲಿ ತಲಾ 5 ವಾರ್ಡ್ʼಗಳು ಕೊರೊನಾ ಮುಕ್ತವಾಗಿವೆ, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 4 (3, 16, 19, 28) ವಾರ್ಡ್ʼಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿವೆ. ಉಳಿದಂತೆ ಚಿಂತಾಮಣಿ ನಗರಸಭೆ (18, 26, 29) ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿ (4, 6, 10)ಯ ತಲಾ 3 ವಾರ್ಡ್ʼಗಳು ಕೊರೊನಾ ಮುಕ್ತ ವಾರ್ಡ್ ಗಳಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಲಾಕ್ಡೌನ್ ಅಂತ್ಯದೊಳಗೆ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲಾ ಗ್ರಾಪಂಗಳು ಮತ್ತು ನಗರ ಪ್ರದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳನ್ನು ಕೊರೊನಾ ಮುಕ್ತ ಮಾಡಲು ಶ್ರಮಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.