ಒಳಗೆ ಅರುಣ್ ಸಿಂಗ್ ರಾಯಭಾರ; ಹೊರಗೆ ರಾಜ್ಯವನ್ನು ಬೆಚ್ಚಿಬೀಳಿಸಿದ ಟೆಂಡರ್ ಲೆಕ್ಕಾಚಾರ
ಬೆಂಗಳೂರು: ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರವ ಜಗಳ ಒಂದೆಡೆಯಾದರೆ, ಹೆಚ್.ವಿಶ್ವನಾಥ್ ಸಿಡಿಸಿರುವ ʼನೀರಾವರಿ ಟೆಂಡರ್ ಬಾಂಬ್ʼ ಇನ್ನೊಂದೆಡೆ ರಾಜ್ಯವನ್ನು ಬೆಚ್ಚಿ ಬೀಳೀಸಿದೆ.
ಗುರುವಾರವೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಮಾಡಿದ್ದ ಆರೋಪಗಳನ್ನು ಶುಕ್ರವಾರವೂ ಪುನರುಚ್ಛರಿಸಿದ ವಿಶ್ವನಾಥ್, ಕಾವೇರಿ ನೀರಾವರಿ ನಿಗಮ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಹಣಕಾಸು ಇಲಾಖೆ ಕ್ಲಿಯೆರೆನ್ಸ್ ಇಲ್ಲದೆ, ಬೋರ್ಡ್ ಮೀಟಿಂಗ್‌ಗಳನ್ನೂ ನಡೆಸದೇ ವಿಜಯೇಂದ್ರ ಸೂಚನೆ ಮೇರೆಗೆ 20,000 ಕೋಟಿ ರೂ. ಟೆಂಡರ್ ಅಂತಿಮಗೊಳಿಸಲಾಗಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಕಿಕ್‌ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಈ ಟೆಂಡರ್‌ಗಳಿಗೆ ಸಂಬಂಧಿಸಿದ ಕೆಲ ಮಹತ್ತ್ವದ ದಾಖಲೆಗಳನ್ನು ಮಾಧ್ಯಮಗಳ ಮುಂದೆ ವಿಶ್ವನಾಥ್ ಪ್ರದರ್ಶಿಸಿದಸಿ, ʼಇದು ಕಾಂಟ್ರಾಕ್ಸರ್‌ಗಳ ಸರಕಾರʼ (ಗುತ್ತಿಗೆದಾರರ ಸರಕಾರ) ಎಂದು ನೇರವಾಗಿ ಆರೋಪಿಸಿದರು. ಈ ಆರೋಪ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಕಾಂಗ್ರೆಸ್ ಹೇಳಿದ ಹೊಸ ಫಿಗರ್!!
ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷ, ಆ ಟೆಂಡರ್ ಮೊತ್ತ 20,000 ಕೋಟಿ ರೂ.ಗಳಲ್ಲ, 21,764 ಕೋಟಿ ರೂ. ಟೆಂಡರ್ ಅದು ಎಂದಿದೆ. ಅಂದರೆ, ವಿಶ್ವನಾಥ್ ಹೇಳಿದ್ದಕ್ಕಿಂತ 1,764 ಕೋಟಿ ರೂ. ಹೆಚ್ಚು ಎಂದು ಹೊಸ ಅಂಕಿ-ಅಂಶ ನೀಡಿದೆ. ವಿಶ್ವನಾಥ್ ದೂರಿರುವಂತೆ 10% ಕಮೀಷನ್ ಎಂದರೂ 2,100 ಕೋಟಿ ರೂ.ಗಳಿಗೂ ಹೆಚ್ಚು ಬರೀ ಕಮೀಷನ್ ಲೆಕ್ಕವೇ ಆಗುತ್ತದೆ ಎಂದು ಕೈ ಪಾಳೆಯ ಆರೋಪ ಮಾಡಿದೆ. ಬಿಜೆಪಿಗೆ ಇದೊಂದು ದೊಡ್ಡ ಆಘಾತ ಮಾತ್ರವಲ್ಲದೆ, ಈ ಕಿಕ್‌ಬ್ಯಾಕ್ ಪಾಲು ಹೈಕಮಾಂಡ್‌ಗೂ ಹೋಗುತ್ತಿದೆ ಎಂದು ಕೆಲವರು ಬಿಜೆಪಿಗರೇ ಹೇಳಿಕೊಂಡು ಓಡಾಡುತ್ತಿದ್ದಾರೆಂದು ವಿಶ್ವನಾಥ್ ಮಾಡಿರುವ ಆಪಾದನೆಯನ್ನು ಕಾಂಗ್ರೆಸ್ ಬೊಟ್ಟು ಮಾಡಿ ತೋರಿಸಿದೆ.
ಹೆಚ್.ವಿಶ್ವನಾಥ್
ವಿಶ್ವನಾಥ್ ಹೇಳಿದ್ದೇನು?
“ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಕುಟುಂಬ, ಮಕ್ಕಳ ಕಾರಣದಿಂದ ಜೈಲಿಗೆ ಹೋಗಿದ್ದರು. ಈಗ ಮತ್ತೆ ಅದೇ ಪುನರಾವರ್ತನೆ ಆಗಬಾರದು ಎಂಬ ಸದುದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ” ಎಂದು ವಿಶ್ವನಾಥ್ ಮಾಧ್ಯಮಗಳ ಮುಂದೆ ಹೇಳಿಕೊಂಡರು.
“ಪಕ್ಷದಲ್ಲಿರುವ ನಿಯಮದಂತೆ 75 ವರ್ಷ ವಯಸ್ಸು ಮೀರಿದವರು ಅಧಿಕಾರ ತ್ಯಜಿಸಬೇಕು. ಯಡಿಯೂರಪ್ಪ ಅವರಿಗೆ ಮಾತ್ರ ಎರಡು ವರ್ಷ ವಿನಾಯಿತಿ ನೀಡಲಾಗಿತ್ತು. ಆದರೆ, ಅವರಿಗೆ ಈಗ ವಯಸ್ಸು ಆಗಿರುವುದರ ಜತೆಗೆ, ತೀರಾ ಬಳಕೆ, ಅನಾರೋಗ್ಯ ಕಾಡುತ್ತಿದೆ. ಕೋವಿಡ್ ಸೇರಿ ರಾಜ್ಯವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಹೀಗಾಗಿ ಯಡಿಯೂರಪ್ಪ ಜಾಗಕ್ಕೆ ಅದೇ ಸಮುದಾಯದ ಇನ್ನೊಬ್ಬರನ್ನು ವರಿಷ್ಠರು ತರಲಿ ಎಂದಷ್ಟೇ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? 80% ಶಾಸಕರು ಯಡಿಯೂರಪ್ಪ ಬದಲಾಗಬೇಕು ಎಂದು ಅರುಣ್ ಸಿಂಗ್ ಮುಂದೆ ಹೇಳಿದ್ದಾರೆ. ಆದರೆ ಅವರು ಹೊರಗೆ ಹಾಗೆ ಹೇಳಲು ಅವರಿಗೆ ಧೈರ್ಯವಿಲ್ಲʼ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಪಕ್ಷದ ಇನ್ನಿಬ್ಬರು ಬಿಜೆಪಿ ಶಾಸಕರು ವಿಶ್ವನಾಥ್ ವಿರುದ್ಧ ಬೀದಿಜಗಳಕ್ಕೆ ನಿಂತಿದ್ದರಿಂದ ಬಿಜೆಪಿ ಪ್ರತಿಷ್ಠೆ ಬೀದಿ ಪಾಲಾಗಿದೆ. ವಿಚಿತ್ರವೆಂದರೆ, ಅರುಣ್ ಸಿಂಗ್ ಬಂದ ಮೇಲೆ ಪಕ್ಷದ ಬಿಕ್ಕಟ್ಟು ಶಮನವಾಗುವುದರ ಬದಲು ಮತ್ತೂ ಬಿಗಡಾಯಿಸಿದೆ.
ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಕೂತು ಅರುಣ್ ಸಿಂಗ್ ಅವರು ಶುಕ್ರವಾರವೂ ನಾಯಕರ ಜತೆ ಮಾತುಕತೆ ನಡೆಸಿ ಬಿಕ್ಕಟ್ಟಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದರೆ, ಹೊರಗೆ ವಿಶ್ವನಾಥ್ ಇಷ್ಟೆಲ್ಲ ಬಾಂಬ್‌ಗಳನ್ನು ಸಿಡಿಸಿದರು. ಶಾಸಕರಾದ ರೇಣುಕಾಚಾರ್ಯ, ಹರತಾಳು ಹಾಲಪ್ಪ ಮುಂತಾದವರು ಅಡಗೂರು ವಿರುದ್ಧ ಮಾತಿನ ಯುದ್ಧಕ್ಕೆ ನಿಂತರು.
ಯಾರೂ ಬಹಿರಂಗ ಹೇಳಿಕೆ ನೀಡಬಾರದು, ನಾಯಕತ್ವದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಪಕ್ಷ ಸ್ಪಷ್ಟ ಸೂಚನೆ ನೀಡಿದ್ದರೂ ಇವರಾರೂ ಈ ಸೂಚನೆಗೆ ಮೂರು ಕಾಸಿನ ಕಿಮ್ಮತ್ತೂ ನೀಡಲಿಲ್ಲ.
ತಾರಕಕ್ಕೇರಿದ ಮಾತಿನ ಜಗಳ
ವಿಶ್ವನಾಥ್ ವಿರುದ್ಧ ಪ್ರತಿದಾಳಿಗಿಳಿದ ಸಿಎಂ ನಿಷ್ಠ ಶಾಸಕ ರೇಣುಕಾಚಾರ್ಯ, “ವಿಶ್ವನಾಥ್ ಇನ್ನಾದರೂ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಅವರು ನಮ್ಮ ಬಗ್ಗೆ, ಮುಖ್ಯಮಂತ್ರಿ ಕುಟುಂಬದ ಬಗ್ಗೆ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಮ್ಮಲ್ಲಿರುವ ಅವರ ಆಡಿಯೋ ವಿಡಿಯೋಗಳನ್ನು ಲೀಕ್ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದರು. ನೀರಾವರಿ ಇಲಾಖೆಯಲ್ಲಿ ಟೆಂಡರ್ ಫೈನಲ್ ಆಗಿದೆ ಎಂಬ ವಿಶ್ವನಾಥ್ ಅವರ ಆರೋಪ ಸತ್ಯಕ್ಕೆ ದೂರ ಎಂದರು ಅವರು.
ಶಾಸಕ ಹರತಾಳು ಹಾಲಪ್ಪ ಕೂಡ ವಿಶ್ವನಾಥ್ ವಿರುದ್ಧ ದಾಳಿ ನಡೆಸಿದರು. ಅವರು ಇನ್ನೊಬ್ಬರ ವೈಯಕ್ತಿಕ ವಿಚಾರಗಳನ್ನು ಮಾತಾಡುವುದು ಬಿಡಬೇಕು. ಇಲ್ಲವಾದರೆ ಅವರ ಬಗ್ಗೆ ನಾವು ಮಾತನಾಡಬೇಕಾಗುತ್ತದೆ ಎಂದರು..
ಇದೆಲ್ಲದರ ನಡುವೆ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಹೆಚ್.ವಿಶ್ವನಾಥ್ ಇವತ್ತು ಹರಿಹಾಯ್ದರು. ಈಶ್ವರಪ್ಪ ಕೂಡ ಕುಟುಂಬ ರಾಜಕಾರಣದ ಗಿರಾಕಿ ಎಂದು ಛೇಡಿಸಿದರು.
20,000 ಕೋಟಿ ಅಲ್ಲ, 21,764 ಕೋಟಿ ಟೆಂಡರ್: ಕಾಂಗ್ರೆಸ್
ಹೆಚ್.ವಿಶ್ವನಾಥ್ ಆರೋಪದ ಹಿನ್ನೆಲೆಯಲ್ಲೇ ಟೆಂಡರ್ ವಿಷಯಕ್ಕೆ ಹೊಸ ತಿರುವು ನೀಡಿದ ಕಾಂಗ್ರೆಸ್, ನೀರಾವರಿ ಇಲಾಖೆಯಲ್ಲಿ ಟೆಂಡರ್ ಅಂತಿಮ ಮಾಡಿರುವ ಮೊತ್ತ 20,000 ಕೋಟಿ ರೂ. ಅಲ್ಲ, 21,764 ಕೋಟಿ ರೂ. ಎಂದು ತಿಳಿಸಿದೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ವಿಶ್ವನಾಥ್ ಆರೋಪ ನೂರಕ್ಕೆ ನೂರು ಸತ್ಯ ಇದೆ. ಇದರಲ್ಲಿ ಕೇಂದ್ರದ ಪಾಲು ಇದೆ. ಈ ಬಗ್ಗೆ ಹೈಕೋರ್ಟ್, ಇಡಿ, ಸಿಬಿಐಗೆ ದೂರು ಕೊಡ್ತೇವೆ. ನಮ್ಮಲ್ಲೂ ಈ ಟೆಂಡರ್ ಬಗ್ಗೆ ದಾಖಲೆಗಳಿವೆ. ಕೆಲ ಅಧಿಕಾರಿಗಳು ನಮಗೂ ಮಾಹಿತಿ ನೀಡಿದ್ದಾರೆ ಎಂಬ ಅಂಶವನ್ನು ಬಹಿರಂಗಪಡಿಸಿದರು.
ನೀರಾವರಿ ಇಲಾಖೆ ಎಲ್ಲ ಇಲಾಖೆಗಳ ಅಣ್ಣ ಇದ್ದಂತೆ. ರಮೇಶ್ ಜಾರಕಿಹೊಳಿ ಅವರ ಬಳಿ ಈ ಇಲಾಖೆ ಇತ್ತು. ಈಗ ಸಿಎಂ ಬಳಿ ಇದೆ. ನೀರಾವರಿ ಇಲಾಖೆಯಲ್ಲಿ ಸರಿಯಾಗಿ ಟೆಂಡರ್ ಕರೆಯದೆ ಟೆಂಡರ್ ಫೈನಲ್ ಆಗಿದೆ. 21,764 ಕೋಟಿ ರೂ. ಹಣ ದುರುಪಯೋಗ ಆಗಿದೆ. 100 ಕೋಟಿಗೂ ಹೆಚ್ಚಿನ ಯೋಜನೆ ಇದ್ದರೆ ಟೆಂಡರ್ ಕರೆಯಬೇಕು. ಇದಕ್ಕೆ ಆದ ಸರಿಯಾದ ಮಾರ್ಗಸೂಚಿ ಇದೆ. ಅದೆಲ್ಲವನ್ನು ಬಿಟ್ಟು ನೇರವಾಗಿ ರಾಜ್ಯ ಸರಕಾರ ಟೆಂಡರ್ ಕೊಟ್ಟಿದೆ. ಈಗಾಗಲೇ ಇದರಲ್ಲಿ 4,000 ಕೋಟಿ ರೂ.ಗಳನ್ನು ಟೆಂಡರ್‌ದಾರನಿಗೆ ಕೊಟ್ಟಿದ್ದಾರೆ. ಇದನ್ನು ಆಂಧ್ರ ಪ್ರದೇಶ, ಗುಜರಾತ್ ರಾಜ್ಯಗಳ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. 10% ಕಮೀಷನ್ ಕೊಟ್ಟಿದ್ದಾರೆಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ ಎಂದು ಲಕ್ಷ್ಮಣ್ ದೂರಿದರು.
ಇಡೀ ಟೆಂಡರ್‌ನಲ್ಲಿ 10% ಕಮೀಷನ್ ವ್ಯವಹಾರ ನಡೆದಿದೆ ಎಂದು ವಿಶ್ವನಾಥ್ ದೂರಿದ್ದಾರೆ. ಅಂದರೆ, 2,100 ಕೋಟಿ ರೂ. ಬರೀ ಕಮೀಷನ್ ವ್ಯವಹಾರವೇ ನಡೆದಿದೆ ಎಂದು ಲಕ್ಷ್ಮಣ್ ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರಕಾರಗಳನ್ನು 10% ಸರಕಾರಗಳೆಂದು ಟೀಕೆ ಮಾಡಿದ್ದರು. ಈಗ ಯಡಿಯೂರಪ್ಪ ಸರಕಾರ ಏನು? ಅದು ಎಷ್ಟು ಪರ್ಸೆಂಟ್ ಸರಕಾರ? ನಿಮಗೆಷ್ಟು ಪರ್ಸೆಂಟ್ ಸಿಕ್ಕಿದೆ? ಎಂದು ಅವರು ಮೋದಿ ಅವರನ್ನು ಪ್ರಶ್ನಿಸಿದರು.
Comments 1