178 ವಿದ್ಯಾರ್ಥಿಗಳಿಗೆ ಸಿಕ್ಕಿದ ಟ್ಯಾಬ್ಲೆಟ್ ಪಿಸಿಗಳು: ಡಿಜಿಟಲ್ ವೇದಿಕೆಯಲ್ಲಿ ಕಲಿಕೆ
by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣ ಹೊರವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ʼವಿದ್ಯಾಸಿರಿʼ ಯೋಜನೆಯಡಿ 178 ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಟ್ಯಾಬ್‌ಲೆಟ್ ಪಿಸಿಗಳನ್ನು ವಿತರಣೆ ಮಾಡಲಾಯಿತು.
ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸಾಂಕೇತಿಕವಾಗಿ 10 ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಣೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ವಿದ್ಯಾರ್ಥಿಗಳು ಎಷ್ಟೇ ವಿದ್ಯಾಭ್ಯಾಸ ಮಾಡಿದರೂ ತಾಂತ್ರಿಕ ಜ್ಞಾನ ಅತಿ ಮುಖ್ಯ. ಇದರ ಸಲುವಾಗಿ ಸರಕಾರದ ವತಿಯಿಂದ ʼವಿದ್ಯಾಸಿರಿʼ ಯೋಜನೆಯಡಿ ಉಚಿತ ಟ್ಯಾಬ್‌ಲೆಟ್ ಪಿಸಿಗಳನ್ನು ನೀಡಲಾಗುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪದವಿ ವಿಧ್ಯಾರ್ಥಿಗಳು ಕೇಂದ್ರ-ರಾಜ್ಯ ಸರಕಾರಗಳು ನೀಡುವ ಪ್ರತಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಿ.ಎ.ದಿವಾಕರ್, ಕೆ.ಡಿ.ಪಿ ಸದಸ್ಯ ಅಮರನಾಥ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ (ಬೂರುಗಮಡುಗು) ಲಕ್ಷ್ಮೀ ನರಸಿಂಹಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಪ್ರಾಂಶುಪಾಲ ನಾರಾಯಣಪ್ಪ, ಪ್ರಾಧ್ಯಾಪಕ ಡಾ.ನಯಾಜ್ ಅಹಮದ್, ಗ್ರಂಥಪಾಲಕ ವೆಂಕಟರಾಮರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್
ರಾಜ್ಯ ಸರಕಾರದ ಉನ್ನತ ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್ ಹಾಗೂ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಉಚಿತವಾಗಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಚಾಲನೆ ನೀಡಿದರು. ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ನಗರ- ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಿಸುವುದು, ಅವರ ನಡುವೆ ಡಿಜಿಟಲ್ ಅಂತರವನ್ನು ಅಳಿಸಿಹಾಕುವ ಮತ್ತೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸರಕಾರ ಜಾರಿಗೆ ತಂದಿದೆ.
ಟ್ಯಾಬ್ಲೆಟ್ ಮೂಲಕ ಕಲಿಕೆ
ಈಗಾಗಲೇ ಕಲಿಕಾ ನಿರ್ವಹಣಾ ವ್ಯವಸ್ಥೆ ಅನುಷ್ಟಾನಕ್ಕೆ ಬಂದಿದ್ದು, ಆ ಮೂಲಕ ವಿದ್ಯಾರ್ಥಿಗಳು ತಮ್ಮ ತಮ್ಮ ಕೋರ್ಸುಗಳನ್ನು ವ್ಯಾಸಂಗ ಮಾಡಲಿದ್ದಾರೆ. ಶಾಸಕರಿಂದ ಟ್ಯಾಬ್‌ಗಳನ್ನು ಸ್ವೀಕರಿಸಿದ ಎಲ್ಲ ವಿದ್ಯಾರ್ಥಿಗಳು ತಮ್ಮ ಸಂತಸ ವ್ಯಕ್ತಪಡಿಸಿದರಲ್ಲದೆ, ಕೋವಿಡ್ ಕಾಲದಲ್ಲೂ ತಮ್ಮ ಕಲಿಕೆ ನಿರಾತಂಕವಾಗಿ ಸಾಗಲಿದೆ ಎಂದರು.