ನಕಲಿ ದಾಖಲೆ ಸೃಷ್ಟಿಸಿ 10 ಲಾರಿಗಳಿಗೆ 1,35,53,000 ರೂ. ಸಾಲ ಪಡೆದು ವಂಚನೆ
ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆಯುತ್ತಿದ್ದ 15 ಮಂದಿ ಖದೀಮರು ಮೈಸೂರು ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚೋಳಮಂಡಲಂ ಫೈನಾನ್ಸ್ಗೆ ವಂಚನೆ ಮಾಡಿದ್ದ 15 ಮಂದಿಯನ್ನು ಮೈಸೂರು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳಿಂದ 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್ಟಾಪ್ ಸೇರಿ ಅನೇಕ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
10 ಲಾರಿಗಳಿಗೆ ಒಟ್ಟು 1,35,53,000 ರೂ. ವಾಹನ ಸಾಲ ಪಡೆದಿದ್ದ ಖದೀಮರು, ಹಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ನಂತರ ಸಾಲದ ಕಂತು ಕಟ್ಟುವುದನ್ನು ನಿಲ್ಲಿಸಿದ್ದರು. ಈ ವೇಳೆ ಲಾರಿ ವಶಕ್ಕೆ ಪಡೆಯಲು ಫೈನಾನ್ಸ್ ಕಂಪನಿ ಮುಂದಾಗಿದ್ದು, ಈ ಸಂದರ್ಭದಲ್ಲಿ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಕಿಲಾಡಿ ಆರೋಪಿಗಳು ಲಾರಿಗಳ ಎಂಜಿನ್ ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್ ವಿಜಯ್ ಎಂಬುವವರು ಮೈಸೂರಿನ ದೇವರಾಜ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿ, ಆರೋಪಿಗಳು ಲಾರಿ ಇಲ್ಲದೆಯೇ ಆಂಧ್ರ ಪ್ರದೇಶದ ವಿವಿಧ ಆರ್ಟಿಒ ಕಚೇರಿಯಲ್ಲಿ ಆರ್ಸಿ, ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೊಂದಣಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸ್ಥಳೀಯ ನಕಲಿ ವಿಳಾಸದ ದಾಖಲೆ ನೀಡಿದ್ದರೆಂದು ಗೊತ್ತಾಗಿದೆ.
ಲಾರಿ ಪರಿಶೀಲನೆಗೆ ಹಾಜರುಪಡಿಸದೆ ಖದೀಮರು ಆರ್ಸಿ ಪಡೆಯುತ್ತಿದ್ದರು. ಬರೋಬ್ಬರಿ 200 ಆರ್ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದೇ ರೀತಿ ಹಲವು ಫೈನಾನ್ಸ್ ಕಂಪನಿಗಳಿಗೆ ನಕಲಿ ದಾಖಲೆ ನೀಡಿ ಆರೋಪಿಗಳು ಮೋಸ ಮಾಡಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆಂಧ್ರದಲ್ಲಿ ಆರ್ಟಿಒ ನೆಟ್ವರ್ಕ್ ಹೊಂದಿರುವ ವಂಚಕರು ಗಡಿ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಏನಾದರೂ ವ್ಯವಹಾರ ನಡೆಸಿದ್ದಾರಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.