ಓವರ್’ಟೇಕ್ ಮಾಡುವ ರಭಸದಲ್ಲಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರು
ದೇವನಹಳ್ಳಿ: ಗ್ಯಾಸ್ ಲಾರಿಗೆ ರೇಂಜ್ ರೋವರ್ ಡಿಕ್ಕಿ ಪರಿಣಾಮ ಮಾಲೂರು ತಾಲೂಕಿನ ಬಿಜೆಪಿ ಮುಖಂಡ ಶಿವಕುಮಾರ್ ದುರ್ಮರಣಕ್ಕೆ ತುತ್ತಾಗಿದ್ದಾರೆ.
ಡಿಕ್ಕಿಯ ರಭಸಕ್ಕೆ ರೇಂಜ್ ರೋವರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗದಿಂದ ಮಾಲೂರಿಗೆ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹೊಸಕೋಟೆ-ದಾಬಸ್ಪೇಟೆಯ ರಿಂಗ್ ರಸ್ತೆಯ ಹೆದ್ದಾರಿಯಲ್ಲಿ ಓವರ್ಟೇಕ್ ಮಾಡುವ ರಭಸದಲ್ಲಿ ಎದುರಿಗೆ ನಿಲ್ಲಿಸಿದ್ದ ಗ್ಯಾಸ್ ಲಾರಿಗೆ ರೇಂಜ್ ರೋವರ್ ಕಾರು ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಕ್ಕಿ ರಭಸಕ್ಕೆ ರೇಂಜ್ ರೋವರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಬಿಜೆಪಿ ಮುಖಂಡರಾಗಿದ್ದ 50 ವರ್ಷದ ಶಿವಕುಮಾರ್ ಅವರು, ಮುಂಬರುವ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ಪಡೆಯುವ ಆಕಾಂಕ್ಷೆ ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ. ಅಲ್ಲದೆ ಇವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಡೆವಲಪರ್ ಆಗಿಯೂ ಹೆಸರು ಮಾಡಿದ್ದರು. ಮಂಗಳವಾರ ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಲೂರಿಗೆ ವಾಪಸ್ ಬರುತ್ತಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸಂಜೆ 4:30 ಗಂಟೆಗೆ ತಮ್ಮ ಸಹಾಯಕರಾದ ಚಂದನ್, ವಿನೋದ್ ಕುಮಾರ್ ಮತ್ತು ಚಾಲಕ ಪ್ರದೀಪ ಅವರೊಂದಿಗೆ ಚಿತ್ರದುರ್ಗದಿಂದ ಹೊರಟ ಶಿವಕುಮಾರ್ ಅವರು, ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು.
ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಹೊಸಕೋಟೆ – ಡಾಬಸ್ ಪೇಟೆ ನಡುವಿನ ಮುತ್ತಪ್ಪ ರೈ ಲೇಔಟ್ ಸಮೀಪ ರಾತ್ರಿ 7.48ರ ಸುಮಾರಿಗೆ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಕ್ಕೆ ಹಾಕಲು ವೇಗವಾಗಿ ಮುನ್ನುಗ್ಗಿದ ಲ್ಯಾಂಡ್ ರೋವರ್ ಎದುರಿಗೆ ಎಡಬದಿಯಲ್ಲಿ ನಿಂತಿದ್ದ ಗ್ಯಾಸ್ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಮುಂದೆ ಕೂತಿದ್ದ ಶಿವಕುಮಾರ್ ಅವರ ಎದೆ, ಮುಖ, ತಲೆ ಮತ್ತು ಕುತ್ತಿಗೆ ಭಾಗಕ್ಕೆ ತೀವ್ರವಾದ ಗಾಯಗಳಾದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
















