ಡಾ.ಗೌತಮ್ ಗಂಗಿರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಅವರ ಸೋದರಳಿಯ
ಬೆಂಗಳೂರು: ವಿದೇಶಗಳ ಬೇಡಿಕೆಗೆ ಅನುಗುಣವಾಗಿ ಕುಶಲ ಮಾನವ ಸಂಪನ್ಮೂಲವನ್ನು ಒದಗಿಸುವ ಮೊದಲ ಹೆಜ್ಜೆಯಾಗಿ ರಾಜ್ಯದ ಯುವ ತಜ್ಞ ವೈದ್ಯರೊಬ್ಬರಿಗೆ ಅಬುಧಾಬಿಯಲ್ಲಿ ಅತ್ಯುತ್ತಮ ಆಫರ್ ಸಿಕ್ಕಿದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಹೊಸಗಾಗಿ ಸ್ಥಾಪನೆ ಮಾಡಿರುವ ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಶ್ವಾಸಕೋಶ ತಜ್ಞರಾದ ಡಾ.ಗೌತಮ್ ಗಂಗಿರೆಡ್ಡಿ ಅವರಿಗೆ ಯುಎಇಯಲ್ಲಿರುವ ಪ್ರತಿಷ್ಠಿತ ರೆಸ್ಪಾನ್ಸ್ ಪ್ಲಸ್ ಮೆಡಿಕಲ್ ಆಸ್ಪತ್ರೆ (Response Plus Medical-RPM) ಯಲ್ಲಿ ವಿಶೇಷ ತಜ್ಞವೈದ್ಯರ ಹುದ್ದೆಗೆ ನೇಮಕವಾಗಿದ್ದು, ಅವರಿಗೆ ವಾರ್ಷಿಕ 1 ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದದವರು ಎಂದು ಡಿಸಿಎಂ ಮಾಹಿತಿ ನೀಡಿದರು.
ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಬೆಂಗಳೂರಿನಲ್ಲಿ ಗುರುವಾರದಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರಿಂದ ಡಾ.ಗೌತಮ್ ಗಂಗಿರೆಡ್ಡಿ ಅವರು ಪಡೆದುಕೊಂಡಿದ್ದಾರೆ. ಗೌತಮ್ ಅವರಿಂದ ವೀಸಾ, ವಿಮಾನ ಪ್ರಯಾಣ, ವಿಮೆ, ವಸತಿ ಇತ್ಯಾದಿಗಳ ಯಾವುದೇ ಸೇವಾ ಶುಲ್ಕವನ್ನು ಪಡೆಯದೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ ಡಾ.ಗಂಗಿರೆಡ್ಡಿ ಅವರಿಗೆ ಅಭಿನಂದನೆಗಳು. ಅವರ ಉತ್ತಮ ಕಾರ್ಯನಿರ್ವಹಣೆಯಿಂದ ರಾಜ್ಯದ ಇನ್ನಷ್ಟು ವೈದ್ಯರಿಗೆ ಆ ದೇಶಗಳಲ್ಲಿ ಉದ್ಯೋಗ ಸಿಗಲಿ ಎಂದು ಡಾ.ಅಶ್ವತ್ಥನಾರಾಯಣ ಹಾರೈಸಿದರು.
ಈಗಷ್ಟೇ ಕೋವಿಡ್-19 ಎರಡನೇ ಅಲೆಯ ಲಾಕ್‌ಡೌನ್ ಮುಗಿದಿದ್ದು, ವಿದೇಶಗಳಿಗೆ ರಾಜ್ಯದ ಕುಶಲ ಮಾನವ ಸಂಪನ್ಮೂಲನವನ್ನು ಒದಗಿಸುವ ಪ್ರಕ್ರಿಯೆಯನ್ನು ಪುನಾ ಆರಂಭಿಸಲಾಗಿದೆ. ಬೇಡಿಕೆಗೆ ತಕ್ಕಂತೆ ವೈದ್ಯರು, ನರ್ಸುಗಳು ಸೇರಿದಂತೆ ಇತರೆ ಯಾವುದೇ ಕ್ಷೇತ್ರಕ್ಕೆ ಸಿಬ್ಬಂದಿ ಇದ್ದರೂ ಕೌಶಲ್ಯಾಭಿವೃದ್ಧಿ ನಿಗಮದ ಅಡಿಯಲ್ಲಿ ಸ್ಥಾಪಿಸಲಾಗಿರುವ ವಲಸೆ ಕೇಂದ್ರದ ಮೂಲಕ ಕಳಿಸಲಾಗುವುದು. ಯಾವುದೇ ಖಾಸಗಿ ಏಜೆನ್ಸಿಗಳನ್ನು ನಂಬಿಕೊಂಡು ಯಾರೂ ಮೋಸ ಹೋಗುವುದು ಬೇಡ ಎಂದು ಡಿಸಿಎಂ ಹೇಳಿದರು.
ಡಾ.ಗೌತಮ್ ಗಂಗಿರೆಡ್ಡಿ ಸಂತಸ
ಅಬುಧಾಬಿ ಆಸ್ಪತ್ರೆಯಲ್ಲಿ ತಮಗೆ ಸಿಕ್ಕಿರುವ ಉದ್ಯೋಗಾವಕಾಶ ಮತ್ತು ಆಕರ್ಷಕ ಪ್ಯಾಕೇಜ್ ಬಗ್ಗೆ ಡಾ.ಗೌತಮ್ ಗಂಗಿರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸರಕಾರ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದೆ. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಆಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಯಾರು ಈ ಡಾ.ಗೌತಮ್ ಗಂಗಿರೆಡ್ಡಿ?
ಡಾ.ಗೌತಮ್ ಗಂಗಿರೆಡ್ಡಿ ಅವರು ಅವಿಭಜಿತ ಕೋಲಾರ ಜಿಲ್ಲೆ ಹಿರಿಯ ರಾಜಕಾರಣಿ, ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಟಿ.ಕೆ.ಗಂಗಿರೆಡ್ಡಿ ಅವರ ಮೊಮ್ಮಗ. ಚಿಂತಾಮಣಿಯ ಮಾಜಿ ಶಾಸಕ ಹಾಗೂ ಮಾಜಿ ಸಚಿವರೂ ಆದ ಕೆ.ಎಂ.ಕೃಷ್ಣಾರೆಡ್ಡಿ ಅವರ ಸೋದರಳಿಯ. ಇವರ ತಂದೆ ಕುರ್ಲಾರೆಡ್ಡಿ ಅವರು. ಕೆ.ಎಂ.ಕೃಷ್ಣಾರೆಡ್ಡಿ ಅವರ ಗರಡಿಯಲ್ಲೇ ಬೆಳೆದ ಗೌತಮ್ ಮೊದಲಿನಿಂದಲೂ ಚುರುಕಿನ ವಿದ್ಯಾರ್ಥಿ ಹಾಗೂ ಸಮಾಜಮುಖಿಯೂ ಹೌದು. ಈಗ ಅವರು ಅಬುಧಾಬಿಯ ಖ್ಯಾತ ಆಸ್ಪತ್ರೆಗೆ ತಜ್ಞವೈದ್ಯರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಅವರು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.