ಬೊಮ್ಮಾಯಿ ಬ್ರಿಗೇಡ್‌ನಲ್ಲಿ ಮೂಲನಿವಾಸಿಗಳಿಗೆ ಬಂಪರ್; ವಲಸಿಗರಿಗೆ ನಿರಾಶೆ ಇಲ್ಲ; ಹಳಬರಿಗೂ ಬೇಸರವಿಲ್ಲ
ಬೆಂಗಳೂರು: ಜಲ ಸಂಪನ್ಮೂಲ ಖಾತೆ ಕಾರಣಕ್ಕೆ ಜಟಿಲವಾಗಿದ್ದ ಖಾತೆ ಹಂಚಿಕೆ ಸಿಕ್ಕು ಬಗೆಹರಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಶನಿವಾರ ಮಧ್ಯಾಹ್ನಕ್ಕೆ ಮುನ್ನವೇ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
ಜಲ ಸಂಪನ್ಮೂಲ, ಲೋಕೋಪಯೋಗಿ ಸೇರಿ ಬಂಪರ್ ಖಾತೆಗಳನ್ನು ತಮ್ಮ ಕಟ್ಟಾ ಬೆಂಬಲಿಗರಿಗೆ ಕೊಡಿಸುವಲ್ಲಿ ಬಿಜೆಪಿ ʼಸೂಪರ್‌ಪವರ್ʼ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದು, ಅದೇ ರೀತಿ ಪ್ರಬಲ ಖಾತೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಂಘ ಪರಿವಾರವೂ ಸಕ್ಸಸ್ ಆಗಿದೆ.
ಖಾತೆಗಳ ಹಂಚಿಕೆಯಲ್ಲಿ ಹೈಕಮಾಂಡ್, ಸಂಘ ಪರಿವಾರ ಮತ್ತು ಸೂಪರ್ ಪವರ್ ಜತೆ ಹಗ್ಗಜಗ್ಗಾಟಕ್ಕೆ ಇಳಿಯದೇ ಜಾಣ್ಮೆಯಿಂದ ಬ್ಯಾಲೆನ್ಸ್ ಮಾಡಿರುವ ಬೊಮ್ಮಾಯಿ ಅವರು, ಎಲ್ಲ ಸಚಿವರಿಗೂ ʼಸಹಜ ಖಾತೆ ನ್ಯಾಯʼ ಮಾಡಿದ್ದಾರೆ. ಆದರೆ, ಪಕ್ಷದ ಹೊಸಬರಿಗೆ ಹೋಗಿರುವ ಪ್ರಬಲ ಖಾತೆಗಳ ಬಗ್ಗೆ ಕೆಲ ಸೀನಿಯರುಗಳಲ್ಲಿ ಅಪಸ್ವರ ಕೇಳಿಬರುತ್ತಿದೆ. ಇದಕ್ಕೆ ಕಿಮ್ಮತ್ತು ಸಿಗುವ ಸಾಧ್ಯತೆ ಕಡಿಮೆ.
ಇನ್ನು ಸಂಪುಟಕ್ಕೆ ಸೇರುವುದರಿಂದ ಮೊದಲುಗೊಂಡು ಬೇಕಾದ ಖಾತೆಗಳನ್ನೇ ಪಡೆಯುವ ತನಕ ಒತ್ತಡ ತಂತ್ರವನ್ನು ಅನುಸರಿಸಿದ್ದ ವಲಸಿಗರು, ಕೊನೆಗೂ ತಮ್ಮ ಪಟ್ಟು ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿದ್ದವರಿಗೆ ಬಹತೇಕ ಅದೇ ಖಾತೆಗಳನ್ನು ನೀಡಿದ್ದರೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದವರಿಗೆ ಭರ್ಜರಿ ಲಾಟರಿ ಹೊಡೆದಿದೆ.
ಇದರಲ್ಲಿ ಪ್ರಮುಖವಾಗಿ ಕಾರ್ಕಳದ ವಿ.ಸುನೀಲ್ ಕುಮಾರ್ ಅವರಿಗೆ ಪ್ರಬಲವಾದ ಇಂಧನ ಖಾತೆಯ ಜತೆಗೆ ಕನ್ನಡ ಸಂಸ್ಕೃತಿಯನ್ನೂ ಕೊಡಲಾಗಿದೆ. ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ನಂ. 2 ಸ್ಥಾನದ ಖಾತೆಯಾದ ಗೃಹ ವಹಿಸಲಾಗಿದೆ. ಅಂದರೆ, ಸೀನಿಯರ್‌ಗಳನ್ನು ಬದಿಗಿಟ್ಟು ಹೊಸಬರಿಗೆ ಶಕ್ತಿ ತುಂಬಲಾಗಿದೆ.
ಇನ್ನು, ಒಟ್ಟು 29 ಸಚಿವರ ಪೈಕಿ 15 ಸಚಿವರಿಗೆ ಹಿಂದಿನ ಸಂಪುಟದಲ್ಲಿ ನಿರ್ವಹಿಸಿದ್ದ ಖಾತೆಗಳನ್ನೇ ನೀಡಲಾಗಿದ್ದು, 7 ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ, ಅರಗ ಜ್ಞಾನೇಂದ್ರ ಮತ್ತು ಸುನೀಲ್ ಕುಮಾರ್ ಅವರಿಬ್ಬರಿಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಎಲ್ಲಡೆ ಅಚ್ಚರಿಯಾಗಿದ್ದು, ಅದರಲ್ಲೂ ಗೃಹ ಖಾತೆಯನ್ನು ಹಿರಿಯ, ಅನುಭವಿಗಳನ್ನು ಪಕ್ಕಕ್ಕಿಟ್ಟು ಅರಗ ಜ್ಞಾನೇಂದ್ರಗೆ ನೀಡಲಾಗಿದೆ.
ಉಳಿದಂತೆ ಸಂಪುಟದಲ್ಲಿ ವಲಸಿಗರಿಗೆ ಹಿಂದಿನ ಸಂಪುಟದಲ್ಲಿದ್ದ ಖಾತೆಗಳನ್ನೇ ನೀಡಲಾಗಿದೆ. ಅವರ ಮನವಿಯಂತೆ ಹಳೆಯ ಖಾತೆಗಳನ್ನೇ ಕೊಡಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಮತ್ತು ಗೃಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆರ್.ಅಶೋಕ್ ಅವರಿಗೆ ಹಿಂದಿನ ಸಂಪುಟದಲ್ಲಿ ಹೊಂದಿದ್ದ ಕಂದಾಯ ಇಲಾಖೆಯನ್ನೇ ನೀಡಲಾಗಿದೆ.
ಇದ್ಲದೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದ ಶಂಕರ ಮುನೇನಕೊಪ್ಪ, ಹಾಲಪ್ಪ ಆಚಾರ್, ಬಿ.ಸಿ.ನಾಗೇಶ್ ಅವರಿಗೂ ಮಹತ್ವದ ಖಾತೆಗಳನ್ನೇ ಹಂಚಿಕೆ ಮಾಡಲಾಗಿದೆ.
ಅಲ್ಲದೆ, ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಜಲ ಸಂಪನ್ಮೂಲ ಖಾತೆಯನ್ನು ಹಿರಿಯರಾದ ಗೋವಿಂದ ಕಾರಜೋಳ ಅವರಿಗೇ ನೀಡಲಾಗಿದೆ. ಅವರು ಬಿಎಸ್‌ವೈ ಸಂಪುಟದಲ್ಲಿ ಲೊಕೋಪಯೋಗಿ ಇಲಾಖೆ ಹೊಂದಿದ್ದರು. ಇನ್ನು, ಹಿಂದಿನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆಗಳನ್ನೇ ಈ ಸಂಪುಟದಲ್ಲೂ ಮುಂದುವರಿಸಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಭಾರೀ ಡಿಮಾಂಡ್ ಇತ್ತು. ಅದಕ್ಕಾಗಿ ಬೆಂಗಳೂರು ಮೂಲದ ಸಚಿವರು ಭಾರೀ ಪೈಪೋಟಿ ನಡೆಸಿದ್ದರು. ರಗಳೆ ಬೇಡವೆಂಬ ನಿರ್ಧಾರಕ್ಕೆ ಬಂದ ಅವರು ಆ ಖಾತೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.
ಇನ್ನು, ಮುಖ್ಯಮಂತ್ರಿಯೇ ಹಣಕಾಸು ಇಲಾಖೆಯನ್ನು ಇಟ್ಟುಕೊಳ್ಳುವ ಕೆಟ್ಟ ಪರಂಪರೆ ಈ ಸಂಪುಟದಲ್ಲೂ ಮುಂದುವರಿದಿದೆ. ಎಸ್.ಎಂ.ಕೃಷ್ಣ ನಂತರದ ಕಾಲದಲ್ಲಿ ಹಣಕಾಸು ಇಲಾಖೆ ಸ್ವತಂತ್ರ ಸಚಿವರನ್ನು ನೋಡಿಲ್ಲ.ಇನ್ನು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಂದಿದ್ದ ಸಾರಿಗೆ ಇಲಾಖೆಯನ್ನು ಈ ಬಾರಿ ಬಿ.ಶ್ರೀರಾಮುಲು ಅವರಿಗೆ ಕೊಡಲಾಗಿದೆ. ಭಾರೀ ಅನುದಾನವಿದ್ದ, ಅವರಿಗೆ ಬಹಳ ಇಷ್ಟವಾದ ಸಮಾಜ ಕಲ್ಯಾಣವನ್ನು ಕಿತ್ತುಕೊಳ್ಳಲಾಗಿದೆ.
ಖಾತೆಗಳ ಹಂಚಿಕೆಯಲ್ಲಿ ಸಂಘ ಪರಿವಾರ, ಯಡಿಯೂರಪ್ಪ, ವಲಸಿಗರು, ವರಿಷ್ಠರು ಸೇರಿ ಎಲ್ಲ ಅಂಶಗಳನ್ನು ಬ್ಯಾಲೆನ್ಸ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು ಜಾಣ ನಡೆ ಅನುಸರಿಸಿದ್ದಾರೆ ಎನ್ನಬಹುದು.
ಜಲ ಸಂಪನ್ಮೂಲ; ಹಲವು ಅನುಮಾನ
ಭಾರೀ ಅನುದಾನವುಳ್ಳ ಜಲ ಸಂಪನ್ಮೂಲ ಖಾತೆ ಹಿಂದಿನ ಸಂಪುಟದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿಯೇ ಇತ್ತು. ಕಾವೇರಿ ನೀರಾವರಿ ನಿಗಮ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಹಣಕಾಸು ಇಲಾಖೆಯ ಕ್ಲಿಯೆರೆನ್ಸ್ ಇಲ್ಲದೆ, ಬೋರ್ಡ್ ಮೀಟಿಂಗ್‌ಗಳನ್ನೂ ನಡೆಸದೇ ವಿಜಯೇಂದ್ರ ಸೂಚನೆ ಮೇರೆಗೆ 20,000 ಕೋಟಿ ರೂ. ಟೆಂಡರ್ ಅಂತಿಮಗೊಳಿಸಲಾಗಿದ್ದು, ಇದರಲ್ಲಿ ಸಾವಿರಾರು ಕೋಟಿ ರೂ. ಕಿಕ್‌ಬ್ಯಾಕ್ ವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಹೆಚ್.ವಿಶ್ವನಾಥ್ ಆರೋಪಿಸಿದ್ದರು.
ಈಗ ಈ ಖಾತೆ ಯಡಿಯೂರಪ್ಪ ಅವರ ನಿಷ್ಠರಾದ ಗೋವಿಂದ ಕಾರಜೋಳ ಅವರಿಗೆ ನೀಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ನಿರಾವರಿ ಟೆಂಡರ್‌ಗಳ ಬಗ್ಗೆ ವಿಶ್ವನಾಥ್ ಅವರು ದಾಖಲೆಗಳ ಸಮೇತ ಆರೋಪ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್ ಕೂಡ ಆರೋಪಿಸಿ, ಆ ಟೆಂಡರ್ ಮೊತ್ತ 20,000 ಕೋಟಿ ರೂ.ಗಳಲ್ಲ, 21,764 ಕೋಟಿ ರೂ. ಟೆಂಡರ್ ಎಂದಿತ್ತು. ಅಂದರೆ, ವಿಶ್ವನಾಥ್ ಹೇಳಿದ್ದಕ್ಕಿಂತ 1,764 ಕೋಟಿ ರೂ. ಹೆಚ್ಚು ಎಂದು ಹೊಸ ಅಂಕಿ-ಅಂಶ ನೀಡಿತ್ತು.
ಇಡೀ ಟೆಂಡರ್‌ನಲ್ಲಿ 10% ಕಮೀಷನ್ ವ್ಯವಹಾರ ನಡೆದಿದೆ ಎಂದು ವಿಶ್ವನಾಥ್ ದೂರಿದ್ದರೆ, 2,100 ಕೋಟಿ ರೂ. ಬರೀ ಕಮೀಷನ್ ವ್ಯವಹಾರವೇ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು
ಇದೇ ವೇಳೆ ತಮಗೆ ಸಿಕ್ಕಿರುವ ಖಾತೆಗಳ ಬಗ್ಗೆ ಸಚಿವರಾದ ಗೋವಿಂದ ಕಾರಜೋಳ, ಸಿಸಿ ಪಾಟೀಲ್, ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ.
- ಜಲ ಸಂಪನ್ಮೂಲ ಜಟಿಲತೆ ಏನು? ವಿಶ್ವನಾಥ್ ಹೇಳಿದ್ದೇನು? ಓದಲು ಈ ಲಿಂಕ್ ಕ್ಲಿಕ್ ಮಾಡಿ..
ಯಾರಿಗೆ ಯಾವ ಖಾತೆ?
1.ಬಸವರಾಜ ಬೊಮ್ಮಾಯಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಯಾರಿಗೂ ಹಂಚದಿರುವ ಎಲ್ಲ ಖಾತೆಗಳು
2.ಗೋವಿಂದ ಕಾರಜೋಳ: ಜಲ ಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
3.ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
4.ಆರ್.ಅಶೋಕ್: ಕಂದಾಯ
5.ಬಿ.ಶ್ರೀರಾಮುಲು: ಸಾರಿಗೆ
6.ವಿ.ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ
7.ಉಮೇಶ ಕತ್ತಿ: ಅರಣ್ಯ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ
8.ಎಸ್.ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
9.ಜೆ.ಸಿ.ಮಾಧುಸ್ವಾಮಿ: ಸಣ್ಣ ನೀರಾವರಿ ಮತ್ತು ಕಾನೂನು-ಸಂಸದೀಯ ವ್ಯವಹಾರ
10.ಅರಗ ಜ್ಞಾನೇಂದ್ರ: ಗೃಹ
11.ಡಾ.ಸಿ.ಎನ್.ಅಶ್ವತ್ಥನಾರಾಯಣ: ಉನ್ನತ ಶೀಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ
12.ಸಿ.ಸಿ.ಪಾಟೀಲ್: ಲೋಕೋಪಯೋಗಿ
13.ಆನಂದ್ ಸಿಂಗ್: ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ
14.ಕೋಟಾ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ
15.ಪ್ರಭು ಚೌಹಾಣ್: ಪಶು ಸಂಗೋಪನೆ
16.ಮುರುಗೇಶ್ ನಿರಾಣಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
17.ಶಿವರಾಮ್ ಹೆಬ್ಬಾರ್: ಕಾರ್ಮಿಕ
18.ಎಸ್.ಟಿ.ಸೋಮಶೇಖರ್: ಸಹಕಾರ
19.ಬಿ.ಸಿ.ಪಾಟೀಲ್: ಕೃಷಿ
20.ಭೈರತಿ ಬಸವರಾಜ್: ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)
21.ಡಾ.ಕೆ.ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
22.ಕೆ.ಗೋಪಾಲಯ್ಯ: ಅಬಕಾರಿ
23.ಶಶಿಕಲಾ ಜೊಲ್ಲೆ: ಮುಜಾರಾಯಿ, ಹಜ್-ವಕ್ಫ್
24.ಎಂಟಿಬಿ ನಾಗರಾಜು: ಪೌರಾಡಳಿತ ಮತ್ತು ಸಣ್ಣ-ಸಾರ್ವಜನಿಕ ವಲಯದ ಕೈಗಾರಿಕೆ
25.ಡಾ.ಕೆ.ಸಿ.ನಾರಾಯಣ ಗೌಡ: ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡೆ
26.ಬಿ.ಸಿ.ನಾಗೇಶ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ & ಸಕಾಲ
27.ವಿ.ಸುನೀಲ್ ಕುಮಾರ್: ಇಂಧನ & ಕನ್ನಡ-ಸಂಸ್ಕೃತಿ
28.ಹಾಲಪ್ಪ ಆಚಾರ್: ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ
29.ಶಂಕರ ಪಾಟೀಲ್ ಮುನೇನಕೊಪ್ಪ: ಜವಳಿ,
30.ಮುನಿರತ್ನ: ತೋಟಗಾರಿಕೆ, ಯೋಜನೆ & ಸಾಂಖಿಕ