ಬೆಂಗಳೂರು: ಕೆಲವರಿಗೆ ಮಂತ್ರಿಗಳಾಗುವ ಛಲದಿಂದ ವರಿಷ್ಠರಿಗೆ ಪ್ರದಕ್ಷಿಣಿ ಹಾಕುತ್ತಿದ್ದಾರೆ. ಇನ್ನು, ಸಚಿವರಾದವರು ಪ್ರಬಲ ಖಾತೆಗಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಇದರ ಮಧ್ಯೆ ಸರಕಾರದಲ್ಲಿ ಕೆಲಸಗಳೇ ಆಗದ ಆಡಳಿತ ಪಕ್ಷದ ಶಾಸಕರೊಬ್ಬರು ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ತಣ್ಣಗೆ ಕೂತಿರುವ ಮಹಾತ್ಮ ಗಾಂಧೀಜಿ ಮೊರೆ ಹೋಗುತ್ತಿದ್ದಾರೆ!
ಇದೇನೆಂದು ಅಚ್ಚರಿಯೇ? ಹೌದು ಅಂಥ ಅಚ್ಚರಿಯ ಸುದ್ದಿ ಬಂದಿದೆ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರು ಅತಿವೃಷ್ಠಿಯಿಂದ ತತ್ತರಸಿರುವ ತಮ್ಮ ಮತಕ್ಷೇತ್ರದ ನೆರವಿಗೆ ಸರಕಾರ ಬರುತ್ತಿಲ್ಲ ಎಂದು ದೂರಿ ಎರಡೂ ಶಕ್ತಿಸೌಧಗಳ ನಡುವೆ ಇರುವ ಗಾಂಧೀಜಿ ಪ್ರತಿಮೆ ಮುಂದೆ ಒಬ್ಬಂಟಿಯಾಗಿ ಧರಣಿ ನಡೆಸಿದರು.
ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಯಲ್ಲಿ ಕೈಬಿಟ್ಟಿರುವುದಕ್ಕೆ ರಾಜ್ಯ ಸರಕಾರದ ವಿರುದ್ಧ ಸ್ವತಃ ಆಡಳಿತ ಪಕ್ಷದ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಭಟನೆ ಮಾಡಲು ಮುಂದಾಗಿದ್ದು, ಎರಡೂ ಸೌಧಗಳಲ್ಲಿ ಕೂತಿದ್ದ ಸಚಿವರು, ಪಕ್ಷದ ನಾಯಕರಿಗೆ ಕೋಮಚ ಇರಿಸುಮುರಿಸೇ ಉಂಟಾಯಿತು.
ರಾಜಕೀಯ ಕಾರಣಕ್ಕೆ ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಯಲ್ಲಿ ಕೈಬಿಡಲಾಗಿದೆ. ಅತಿವೃಷ್ಟಿ ತಾಲೂಕು ಘೋಷಣೆ ಮಾಡುವಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು. ವಿಷಯ ಗೊತ್ತಾಗುತ್ತಿದ್ದಂತೆಯೇ ತರಾತುರುಯಲ್ಲಿ ಓಡಿಬಂದ ಕಂದಾಯ ಸಚಿವ ಆರ್.ಅಶೋಕ್, ಶಾಸಕ ಕುಮಾರಸ್ವಾಮಿಗೆ ಸಮಾಧಾನ ಹೇಳಿ ಅಲ್ಲಿಂದ ಎಬ್ಬಿಸಿ ಕರೆದುಕೊಂಡು ಹೋದರು. ಜತೆಯಲ್ಲಿ ಮಾಜಿ ಶಾಸಕ ಜೀವರಾಜ್ ಕೂಡ ಇದ್ದು ಕುಮಾರಸ್ವಾಮಿಗೆ ಸಮಾಧಾನ ಹೇಳಿದರು.
ಹಾಗೆ ನೋಡಿದರೆ, ಎಂ.ಪಿ.ಕುಮಾರಸ್ವಾಮಿ ಅವರು ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಭಾರೀ ಕಸರತ್ತು ನಡೆಸಿದ್ದರು. ವರಿಷ್ಠರ ಕದವನ್ನೂ ತಟ್ಟಿ ಎರಡು ದಿನ ದಿಲ್ಲಿಯಲ್ಲೇ ಮೊಕ್ಕಾಂ ಹೂಡಿದ್ದರು. ಜತೆಗೆ; ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೇಳಿಕೊಂಡಿದ್ದರು. ಆದರೂ ಅವರಿಗೆ ಸಚಿವಗಿರಿ ಸಿಗಲೇ ಇಲ್ಲ.