ಅಂಗಡಿ ಕಟ್ಟುವ ಪಟ್ಟಣ ಪಂಚಾಯಿತಿ ಸ್ಪೀಡಿಗೆ ಶಾಸಕರ ಬ್ರೇಕ್; ಇದು ಸಿಕೆನ್ಯೂಸ್ ನೌ ಇಂಪ್ಯಾಕ್ಟ್
by GS Bharath Gudibande
ಗುಡಿಬಂಡೆ: ತಾಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ನಿರ್ಮಿಸಿಕೊಡುವ ನೆಪದಲ್ಲಿ ಒತ್ತುವರಿಗೆ ಮುಂದಾಗಿದ್ದ ಪಟ್ಟಣ ಪಂಚಾಯಿತಿ ಕೊನೆಗೂ ಹಿಂದಕ್ಕೆ ಸರಿದಿದೆ.
ಈ ಬಗ್ಗೆ ಸಿಕೆನ್ಯೂಸ್ ನೌ ವಿವರವಾದ ವರದಿ ಮಾಡಿತ್ತು. ಈಗ ಆ ವರದಿಯ ಇಂಪ್ಯಾಕ್ಟ್ʼನಿಂದ ಎಚ್ಚೆತ್ತುಕೊಂಡ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪಪಂ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕು ಕಚೇರಿ ಮುಂಭಾಗದಲ್ಲಿರುವ ಹಳೇ ನ್ಯಾಯಾಲಯದ ಮುಂದೆ ಬೀದಿಬದಿ ವ್ಯಾಪಾರಿಗಳಿಗೆ 22 ಲಕ್ಷ ರೂ. ವೆಚ್ಚದಲ್ಲಿ 40 ಮೀಟರ್ ಜಾಗದಲ್ಲಿ ಶೆಲ್ಟರ್ ನಿರ್ಮಾಣ ಮಾಡಲು ಮುಂದಾಗಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಡುವೆ ಕೆಲ ಸಮಯ ವಾಗ್ವಾದವೇ ನಡೆಯಿತು. ಇದಕ್ಕೆ ಎರಡೂ ಕಡೆಯ ಜನಪ್ರತಿನಿಧಿಗಳು ಕೂಡ ಸಾಥ್ ನೀಡಿದರು.
ಜಾಗಕ್ಕಾಗಿ ವಾಗ್ವಾದಕ್ಕೆ ನಿಂತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು.
ಪಟ್ಟಣ ಪಂಚಾಯಿತಿ ಪರವಾಗಿ ಸದಸ್ಯರು ದನಿಯೆತ್ತಿದರೆ, ತಾಲೂಕು ಪಂಚಾಯಿತಿ ಪರವಾಗಿ ಮಾಜಿ ಸದಸ್ಯರು ಮಾತನಾಡಿದರು. ಕೊನೆಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಮಧ್ಯ ಪ್ರವೇಶಿಸಿ ತಾತ್ಕಾಲಿಕವಾಗಿ ಅಂಗಡಿ ನಿರ್ಮಾಣಕ್ಕೆ ಬ್ರೇಕ್ ಹಾಕಿದ್ದಾರೆ.
ನ್ಯಾಯಾಲಯದ ಇತಿಹಾಸ
ಗುಡಿಬಂಡೆ ಹಳೇ ನ್ಯಾಯಾಲಯದ ಕಟ್ಟಡಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವೇ ಇದ್ದು, ಪಟ್ಟಣದಲ್ಲಿ ಲಾ ಪ್ರಾಕ್ಟೀಸ್ ಮಾಡುತ್ತಿದ್ದ ಅನೇಕ ಹಿರಿಯ ವಕೀಲರಿಗೆ, ತಾಲೂಕಿನಲ್ಲಿ ಕೆಲಸ ಮಾಡಿದ್ದ ಹಿಂದಿನ ಅಧಿಕಾರಿಗಳಿಗೆ ಈ ಕಟ್ಟಡವೆಂದರೆ ಅಭಿಮಾನ. ಈಗಲೂ ಈ ಕಟ್ಟಡವೆಂದರೆ ಪಟ್ಟಣದ ಜನರಿಗೆ ಗೌರವ ಭಾವ ಇದೆ.
1925ರಲ್ಲಿ ಅಂದಿನ ಅವಿಭಜಿತ ಕೋಲಾರ ಜಿಲ್ಲ್ಲಾ ಮಂಡಳಿಯ ಆಧ್ಯಕ್ಷರಾಗಿದ್ದ ಗೋಪಾಲ್ ರಾವ್ (ಇಎಸ್‌ಕ್ಯೂ) ಅವರು ಈ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಬಳಿಕ ಅದು ಬಹಳ ವರ್ಷಗಳ ಕಾಲ ಪಟ್ಟಣದ ಪ್ರವಾಸಿ ಮಂದಿರವಾಗಿತ್ತು. ಬಳಿಕ ಬೇರೊಂದು ಜಾಗದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾದ ಮೇಲೆ ಖಾಲಿ ಬಿದ್ದಿದ್ದ ಈ ಕಟ್ಟಡವನ್ನು 1998ರಲ್ಲಿ ಆರಂಭವಾದ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ನೀಡಲಾಯಿತು.
ಗುಡಿಬಂಡೆ ನ್ಯಾಯಾಲಯದ ಹಳೇ ಕಟ್ಟಡದ ದುಃಸ್ಥಿತಿ ಹೇಳುವ ಚಿತ್ರಗಳು.
1998 ಅಕ್ಟೋಬರ್ 30ರಂದು ರಾಜ್ಯ ಹೈಕೋರ್ಟ್‌ನ ಅಂದಿನ ಮುಖ್ಯನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ಆರ್.ಪಿ ಸೇಥಿ ಅವರು ಈ ಕಟ್ಟಡದಲ್ಲಿಯೇ ಆರಂಭವಾದ ನ್ಯಾಯಾಲಯಬನ್ನು ಲೋಕಾರ್ಪಣೆ ಮಾಡಿದ್ದರು. ಆಗ ಬಾಗೇಪಲ್ಲಿ ಕ್ಷೇತ್ರಕ್ಕೆ ಜಿ.ವಿ.ಶ್ರೀರಾಮ ರೆಡ್ಡಿ ಶಾಸಕರಾಗಿದ್ದರು.
ಜಸ್ಟೀಸ್ ಆರ್.ಪಿ ಸೇಥಿ
ಅಂದಿನ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ಕುಮಾರ ರಾಜರತ್ನಂ ಅವರು ಭಾಗವಹಿಸಿ ಅಧ್ಯಕ್ಷತೆಯನ್ನು ವಹಿಸಿದ್ದರು. ಹೈಕೋರ್ಟ್ʼನ ಅಂದಿನ ನ್ಯಾಯಮೂರ್ತಿಗಳಾಗಿದ್ದ, ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರುವ ಜಸ್ಟೀಸ್ ವಿ.ಗೋಪಾಲ ಗೌಡರು ಹಾಗೂ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ಕಟ್ಟಡದ ಪಾವಿತ್ರ್ಯತೆಯನ್ನೇ ಕಡೆಗಣಿಸಿರುವ ತಾಲೂಕು ಆಡಳಿತ ನಿರ್ಲಕ್ಷ್ಯ ನೀತಿ ತಾಳಿರುವುದು ಒಂದೆಡೆಯಾದರೆ, ಎರಡು ಇಲಾಖೆಗಳು ಜಿದ್ದಿಗೆ ಬಿದ್ದು ಈ ಅಪರೂಪದ ಕಟ್ಟಡವನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳಿವೆ. 96 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ಇನ್ನು ನಾಲ್ಕೇ ವರ್ಷಗಳಲ್ಲಿ ಶತಮಾನೋತ್ಸವ ಕಾಣಲಿರುವ ಈ ಕಟ್ಟಡವನ್ನು ಪಾರಂಪರಿಕ ಆಸ್ತಿಯಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ. ಆ ನಿಟ್ಟಿನಲ್ಲಿ ಯಾರೂ ಆಲೋಚನೆಯನ್ನೇ ಮಾಡುತ್ತಿಲ್ಲ.
ತಾಲೂಕು ಪಂಚಾಯಿತಿ ಹೇಳುವುದೇನು?
ಈ ಕಟ್ಟಡ ಬ್ರಿಟೀಷರ ಕಾಲದಿಂದ ತಾಲೂಕು ಪಂಚಾಯಿತಿಗೆ ಸೇರಿದೆ. ಇಲ್ಲಿ ನ್ಯಾಯಾಲಯ ಕಟ್ಟಡಕ್ಕೂ ಮುನ್ನ ಸರಕಾರಿ ಐಬಿ (ಪ್ರವಾಸಿ ಮಂದಿರ) ಇತ್ತು. ನಂತರದ ದಿನಗಳಲ್ಲಿ ಬಾಡಿಗೆ ಆಧಾರದ ಮೆರೆಗೆ ನ್ಯಾಯಾಲಯಕ್ಕೆ ಕಟ್ಟಡ ನಿರ್ಮಾಣ ಮಾಡಿ ಕೊಡಲಾಗುತ್ತಿತ್ತು. ಆಗ ತಾಲೂಕು ಪಂಚಾಯಿತಿಗೆ ಬಾಡಿಗೆ ಬರುತ್ತಿತ್ತು. ಆದರೆ ಇಂದು ಏಕಪಕ್ಷೀಯವಾಗಿ ಪಟ್ಟಣ ಪಂಚಾಯಿತಿ ಅನಧಿಕೃತವಾಗಿ ಜಾಗ ಒತ್ತುವರಿಗೆ ಮುಂದಾಗಿರುವುದು ತಪ್ಪು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಸಿ.ಮಂಜುನಾಥ್ ಹೇಳುತ್ತಾರೆ.
ಇಬ್ಬರ ಜಗಳ, ಗುತ್ತಿಗೆದಾರನ ಅಳಲು
ತಾಪಂ ಹಾಗೂ ಪಪಂ ಅಧಿಕಾರಿಗಳ ಸ್ಥಳ ನಮ್ಮದು ಎಂಬ ವಾಗ್ವಾದದಿಂದ ಈಗಾಗಲೇ 2-3 ಭಾರಿ ಸ್ಥಳ ಬದಲಾವಣೆ ಮಾಡಲಾಗಿದೆ. ಕಾಮಗಾರಿ ಆರಂಭವಾಗಿ ಇನ್ನೇನು 4-5 ದಿನಗಳಲ್ಲಿ ಮುಗಿಸಬೇಕು ಎನ್ನುವಷ್ಟರಲ್ಲಿ ಆರೋಪ- ಪ್ರತ್ಯಾರೋಪಗಳಿಂದ ಕಾಮಗಾರಿ ಸ್ಥಗಿತವಾಗಿದೆ. ಈಗಾಗಲೇ ಕಾರ್ಯಾದೇಶ ಪಡೆದು ಕೆಲಸ ಮಾಡಿಸಿರುವ ಗುತ್ತಿಗೆದಾರನ ಪರಿಸ್ಥಿತಿ ಆಯೋಮಯವಾಗಿದೆ. ಈವರೆಗೂ ಆಗಿರುವ ವೆಚ್ಚದ ಹಣವನ್ನು ಯಾರು ನೀಡುತ್ತಾರೆ ಎಂದು ಕಾಂಟ್ರಾಕ್ಟರ್ ಅಳಲು ತೋಡಿಕೊಂಡರು.
ಹಾಳು ಕೊಂಪೆಯಾದ ಕಟ್ಟಡ
ಗುಡಿಬಂಡೆ ಹೃದಯ ಭಾಗದಲ್ಲಿರುವ ಹಳೇ ನ್ಯಾಯಾಲಯದ ಕಟ್ಟಡ ಈಗ ಯಾರಿಗೂ ಬೇಡವಾಗಿದೆ. ಕತ್ತಲಾದರೆ ಕುಡುಕರ ಅಡ್ಡೆಯಾಗುತ್ತಿದೆ. ಬಲಿಷ್ಠ ಗೋಡೆ, ಹೆಂಚು, ಅತ್ಯುತ್ತಮ ಗುಣಮಟ್ಟದ ಮರದಿಂದ ನಿರ್ಮಾಣವಾಗಿರುವ ಕಟ್ಟಡ ಗತಕಾಲದ ವೈಭವಕ್ಕೆ ಮೂಕಸಾಕ್ಷಿಯಾಗಿದೆ. ಕಟ್ಟಡದ ಸುತ್ತ ಗಿಡಗಂಟೆಗಳು ಬೆಳೆದು, ವಿಷಕ್ರಿಮಿಗಳು ಸೇರಿಕೊಂಡಿವೆ. ಕಸದ ರಾಶಿ ತುಂಬಿಕೊಂಡು ಪಟ್ಟಣದ ಏಕೈಕ ಮುಖ್ಯರಸ್ತೆಯಲ್ಲಿ ಸಂಚರಿಸುವ ಜನರ ಪಾಲಿಗೆ ಅಳಿದುಹೋದ ಆಸ್ಮಿತೆಯಾಗಿದೆ. ಎದುರಿಗೇ ತಾಲೂಕು ಕಚೇರಿ ಇದ್ದರೂ ಯಾರಿಗೆ ಬೇಡದ ಅನಾಥ ಶಿಶುವಿನಂತೆ ರೋಧಿಸುತ್ತಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ಕಟ್ಟಿಕೊಡಲು ಪಟ್ಟಣ ಪಂಚಾಯಿತಿ ಮುಂದಾಗಿದ್ದು, ಸರಕಾರಿ ಪ್ರೌಢಶಾಲೆ ಪಕ್ಕದ ಈ ಜಾಗ ತಾಲೂಕು ಪಂಚಾಯಿತಿಗೆ ಸೇರಿದದ್ದು ಎಂಬದು ತಿಳಿದು ಬಂದಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಸೂಚಿಸುವೆ.
ಎಸ್.ಎನ್.ಸುಬ್ಬಾರೆಡ್ಡಿ. ಶಾಸಕರು, ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ
ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 40 ಮೀಟರ್ ಜಾಗದಲ್ಲಿ ಶೇಲ್ಟರ್ ನಿರ್ಮಾಣ ಮಾಡಲು 22 ಲಕ್ಷ ಹಣ ಮಂಜೂರಾಗಿದ್ದು, ಶಾಸಕರ ಸಮ್ಮುಖದಲ್ಲಿ ಜಾಗದ ಸಮಸ್ಯೆ ಬಗೆಹರಿಸಿ ಕಾಮಗಾರಿ ಆರಂಭಿಸಲಾಗುವುದು.
ರಾಜಶೇಖರ್, ಮುಖ್ಯಾಧಿಕಾರಿ, ಪಪಂ, ಗುಡಿಬಂಡೆ